< ಸಮುವೇಲನು - ಪ್ರಥಮ ಭಾಗ 24 >
1 ಆಗ ಸೌಲನು ಫಿಲಿಷ್ಟಿಯರನ್ನು ಹಿಂದಟ್ಟಿ ತಿರುಗಿ ಬಂದಾಗ, “ದಾವೀದನು ಏನ್ಗೆದಿ ಮರುಭೂಮಿಯಲ್ಲಿ ಇದ್ದಾನೆ,” ಎಂದು ಅವನಿಗೆ ತಿಳಿದುಬಂದಿತು.
೧ಸೌಲನು ಫಿಲಿಷ್ಟಿಯರನ್ನು ಓಡಿಸಿ ಹಿಂದಿರುಗಿದಾಗ ದಾವೀದನು ಏಂಗೆದಿಯ ಅರಣ್ಯದಲ್ಲಿ ಇದ್ದಾನೆಂದು ಅವನಿಗೆ ತಿಳಿದುಬಂದಿತು.
2 ಆಗ ಸೌಲನು ಸಮಸ್ತ ಇಸ್ರಾಯೇಲಿನಲ್ಲಿ ಶ್ರೇಷ್ಠರಾದ ಮೂರು ಸಾವಿರ ಸೈನಿಕರನ್ನು ತೆಗೆದುಕೊಂಡು ದಾವೀದನನ್ನೂ, ಅವನ ಜನರನ್ನೂ ಹುಡುಕಲು ಕಾಡುಮೇಕೆಗಳಿರುವ ಬಂಡೆಗಳಿಗೆ ಹೋದನು.
೨ಆಗ ಅವನು ಎಲ್ಲಾ ಇಸ್ರಾಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡುಗುರಿಬಂಡೆಗಳಲ್ಲಿದ್ದ ದಾವೀದನನ್ನೂ, ಅವನ ಜನರನ್ನೂ ಹುಡುಕುವುದಕ್ಕೋಸ್ಕರ ಹೊರಟನು.
3 ಸೌಲನು ಮಾರ್ಗದಲ್ಲಿ ಕುರಿಹಟ್ಟಿಗಳು ಇರುವ ಗವಿಯ ಬಳಿಗೆ ಬಂದು, ಅದರಲ್ಲಿ ಅವನು ಶೌಚಕ್ಕಾಗಿ ಹೋದನು. ಆದರೆ ದಾವೀದನೂ, ಅವನ ಜನರೂ ಅದೇ ಗವಿಯ ಹಿಂದೆ ಅಡಗಿಕೊಂಡಿದ್ದರು.
೩ಅವನು ಮಾರ್ಗದಲ್ಲಿ ಕುರಿಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕೋಸ್ಕರ ಅದರೊಳಗೆ ಪ್ರವೇಶಿಸಿದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂಭಾಗದಲ್ಲಿ ಅಡಗಿಕೊಂಡಿದ್ದರು.
4 ಆಗ ದಾವೀದನ ಜನರು ಅವನಿಗೆ, “‘ನಾನು ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು. ಆಗ ನೀನು ನಿನ್ನ ಇಷ್ಟಾನುಸಾರ ಅವನಿಗೆ ಮಾಡಬಹುದು,’ ಎಂದು ಯೆಹೋವ ದೇವರು ನಿನಗೆ ಹೇಳಿದ ದಿನವು ಇದೇ,” ಎಂದರು. ಆಗ ದಾವೀದನು ಎದ್ದು ಹೋಗಿ ರಹಸ್ಯವಾಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು.
೪ಜನರು ದಾವೀದನಿಗೆ “ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು, ಆಗ ನೀನು ಅವನನ್ನು ಮನಸ್ಸಿಗೆ ಬಂದಂತೆ ನಡೆಸಬಹುದು ಎಂದು ಯೆಹೋವನು ನಿನಗೆ ಹೇಳಿದ ಮಾತು ನೆರವೇರುವ ದಿನ ಇದೇ” ಅಂದಾಗ ಅವನೆದ್ದು ಮೆಲ್ಲನೆ ಹೋಗಿ ಸೌಲನ ನಿಲುವಂಗಿಯ ತುದಿಯನ್ನು ಕತ್ತರಿಸಿಕೊಂಡನು.
5 ಆದರೆ ಹಾಗೆ ಮಾಡಿದ ಮೇಲೆ, ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ದಾವೀದನ ಮನಃಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು.
೫ಅನಂತರ ಸೌಲನ ನಿಲುವಂಗಿಯ ತುದಿಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿಯು ಅವನನ್ನು ಚುಚ್ಚತೊಡಗಿತು.
6 ದಾವೀದನು ತನ್ನ ಜನರಿಗೆ, “ಅವನು ಯೆಹೋವ ದೇವರ ಅಭಿಷಿಕ್ತನಾದದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ, ನನ್ನ ಒಡೆಯನಿಗೆ ಈ ಕಾರ್ಯ ಮಾಡುವುದನ್ನು ಯೆಹೋವ ದೇವರು ತಡೆಯಲಿ,” ಎಂದನು.
೬ಅವನು ತನ್ನ ಜನರಿಗೆ, “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ, ನನ್ನ ಒಡೆಯನೂ ಆಗಿದ್ದಾನೆ. ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿ ಮಾಡಲಿ” ಎಂದು ಹೇಳಿದನು
7 ಹೀಗೆಯೇ ದಾವೀದನು ತನ್ನ ಜನರನ್ನು ಸೌಲನ ಮೇಲೆ ಬೀಳಗೊಡದೆ, ಈ ಮಾತುಗಳಿಂದ ಅವರನ್ನು ನಿಲ್ಲಿಸಿದನು. ಸೌಲನು ಎದ್ದು ಗವಿಯನ್ನು ಬಿಟ್ಟು, ಹೊರಗೆ ನಡೆದು ಹೋದನು.
೭ಈ ಮಾತುಗಳಿಂದ ಅವನು ಸೌಲನಿಗೆ ವಿರೋಧವಾಗಿ ಏಳದಂತೆ ತನ್ನ ಜನರನ್ನು ತಡೆದನು. ಸೌಲನು ಗವಿಯಿಂದ ಹೊರಗೆ ಬಂದು ಸ್ವಲ್ಪ ಮುಂದೆ ಹೋದ ಮೇಲೆ
8 ತರುವಾಯ ದಾವೀದನು ಎದ್ದು ಗವಿಯಿಂದ ಹೊರಗೆ ಬಂದು ಸೌಲನಿಗೆ, “ಅರಸನೇ, ನನ್ನ ಒಡೆಯನೇ,” ಎಂದು ಕೂಗಿದನು. ಸೌಲನು ಹಿಂದಿರುಗಿ ನೋಡಿದಾಗ, ದಾವೀದನು ನೆಲದವರೆಗೆ ಬಗ್ಗಿ ವಂದಿಸಿದನು.
೮ದಾವೀದನೂ ಹೊರಗೆ ಬಂದು, “ಅರಸನೇ ನನ್ನ ಒಡೆಯನೇ” ಎಂದು ಅವನನ್ನು ಕೂಗಿದನು. ಸೌಲನು ಹಿಂದಿರುಗಿ ನೋಡಲು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ,
9 ಸೌಲನಿಗೆ ದಾವೀದನು, “ಇಗೋ, ದಾವೀದನು ನಿನಗೆ ಕೇಡು ಮಾಡಲು ಹುಡುಕುತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಏಕೆ ಕೇಳುತ್ತಿದ್ದೀ?
೯“ದಾವೀದನು ನಿನಗೆ ಕೇಡುಮಾಡಬೇಕೆಂದಿರುತ್ತಾನೆಂದು ಹೇಳುವವರ ಮಾತಿಗೆ ನೀನೇಕೆ ಕಿವಿಗೊಡುತ್ತೀ?
10 ಯೆಹೋವ ದೇವರು ಈ ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರೆಂಬುದನ್ನು ಈ ದಿನ ನಿನ್ನ ಕಣ್ಣುಗಳು ಕಂಡವು. ಕೆಲವರು ನಿನ್ನನ್ನು ಕೊಂದುಹಾಕಲು ನನಗೆ ಒತ್ತಾಯಮಾಡಿದರು. ಆದರೆ ನಾನು ಅವರಿಗೆ, ‘ಅರಸನು ಯೆಹೋವ ದೇವರ ಅಭಿಷಿಕ್ತನು. ಆದುದರಿಂದ ನಾನು ನನ್ನ ಒಡೆಯನಿಗೆ ವಿರೋಧವಾಗಿ ಕೈಯೆತ್ತುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆ.
೧೦ಈ ಹೊತ್ತು ಯೆಹೋವನು ಗವಿಯಲ್ಲಿ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾನೆಂಬುದು ಈಗ ನಿನಗೆ ಗೊತ್ತಾಯಿತಲ್ಲವೋ? ನಿನ್ನನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಯೆಹೋವನ ಅಭಿಷಿಕ್ತನಾದ ನನ್ನ ಒಡೆಯನ ಮೇಲೆ ಕೈಹಾಕುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆನು.
11 ಇದಲ್ಲದೆ ನನ್ನ ತಂದೆಯೇ, ಇಲ್ಲಿ ನೋಡು! ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ತುಂಡನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ, ನಿನ್ನ ನಿಲುವಂಗಿಯ ಅಂಚನ್ನು ಮಾತ್ರ ಕತ್ತರಿಸಿಕೊಂಡದ್ದರಿಂದ, ನನ್ನಲ್ಲಿ ಕೆಟ್ಟತನವೂ, ದ್ರೋಹವೂ ಇಲ್ಲವೆಂದು ಇದು ಸೂಚಿಸುತ್ತಿದೆ; ನಾನು ನಿನಗೆ ವಿರೋಧವಾಗಿ ತಪ್ಪುಮಾಡಲಿಲ್ಲವೆಂದು ತಿಳಿದುಕೋ. ಹೀಗಿದ್ದರೂ, ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.
೧೧ನನ್ನ ತಂದೆಯೇ, ಇಗೋ ನೋಡು, ನನ್ನ ಕೈಯಲ್ಲಿ ನಿನ್ನ ನಿಲುವಂಗಿಯ ತುಂಡು ಇದೆ. ನಾನು ನಿನ್ನನ್ನು ಕೊಲ್ಲದೆ, ನಿನ್ನ ನಿಲುವಂಗಿಯ ತುದಿಯನ್ನು ಕತ್ತರಿಸಿಕೊಂಡೆನಷ್ಟೇ ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ. ನಾನು ನಿನಗೆ ವಿರೋಧವಾಗಿ ದ್ರೋಹಮಾಡಲಿಲ್ಲ ಎಂದು ತಿಳಿದುಕೋ. ಆದರೂ ನೀನು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿಯಲ್ಲಾ.
12 ಯೆಹೋವ ದೇವರು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ. ಹೌದು, ಯೆಹೋವ ದೇವರು ತಾವೇ ನನಗೋಸ್ಕರ ನಿನ್ನ ವಿಷಯವಾಗಿ ಮುಯ್ಯಿಗೆ ಮುಯ್ಯಿ ಮಾಡಲಿ. ಆದರೆ ನಾನು ನಿನ್ನ ಮೇಲೆ ನನ್ನ ಕೈಯೆತ್ತುವುದಿಲ್ಲ.
೧೨ಯೆಹೋವನೇ ನಮ್ಮಿಬ್ಬರ ಮಧ್ಯೆ ವ್ಯಾಜ್ಯವನ್ನು ತೀರಿಸಲಿ. ಆತನೇ ನನಗೋಸ್ಕರ ನಿನಗೆ ಮುಯ್ಯಿ ತೀರಿಸಲಿ. ನಾನಂತೂ ನಿನಗೆ ವಿರೋಧವಾಗಿ ಕೈಯೆತ್ತುವುದಿಲ್ಲ.
13 ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ, ‘ದುಷ್ಟರಿಂದ ದುಷ್ಟತ್ವವು ಹುಟ್ಟುವುದು’ ಆದರೂ ನಾನು ನಿನಗೆ ವಿರೋಧವಾಗಿ ನನ್ನ ಕೈ ಮುಟ್ಟುವುದಿಲ್ಲ.
೧೩‘ಕೆಟ್ಟವರಿಂದಲೇ ಕೆಡುಕು’ ಎಂಬುದಾಗಿ ಹಿರಿಯರ ಗಾದೆಯುಂಟಷ್ಟೆ. ನಾನು ನಿನಗೆ ವಿರೋಧವಾಗಿ ಕೈಯೆತ್ತುವುದಿಲ್ಲ.
14 “ಇಸ್ರಾಯೇಲಿನ ಅರಸನು ಯಾರನ್ನು ಹಿಂದಟ್ಟಿ ಹೊರಟನು? ಯಾರನ್ನು ಹಿಂದಟ್ಟುತ್ತೀ? ಸತ್ತ ನಾಯಿಯನ್ನೇ? ಒಂದು ನೊಣವನ್ನೇ?
೧೪ಇಸ್ರಾಯೇಲರ ಅರಸನೇ ಯಾರನ್ನು ಹಿಂಬಾಲಿಸಿ ಹೊರಟಿರುವೇ? ಯಾರನ್ನು ಹಿಡಿಯಬೇಕೆಂದಿರುತ್ತೀ? ಸತ್ತ ನಾಯಿಯನ್ನೋ? ಒಂದು ಬಡ ನೊಣವನ್ನೋ?
15 ಯೆಹೋವ ದೇವರು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ, ನನ್ನ ಪರವಾಗಿ ವಾದಿಸಿ, ನನ್ನನ್ನು ನಿನ್ನ ಕೈಯಿಂದ ತಪ್ಪಿಸಿಬಿಡಲಿ,” ಎಂದನು.
೧೫ಯೆಹೋವನು ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ. ಆತನೇ ನೋಡಿ ನನಗೋಸ್ಕರ ವಾದಿಸಿ ನನ್ನನ್ನು ನಿನ್ನ ಕೈಯಿಂದ ತಪ್ಪಿಸಲಿ” ಎಂದು ಹೇಳಿದನು.
16 ದಾವೀದನ ಮಾತುಗಳು ಮುಗಿದ ನಂತರ, ಸೌಲನು ದಾವೀದನಿಗೆ, “ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ?” ಎಂದು ಗಟ್ಟಿಯಾಗಿ ಅತ್ತನು.
೧೬ದಾವೀದನ ಮಾತುಗಳು ಮುಗಿದ ನಂತರ ಸೌಲನು, “ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ?” ಅಂದು ಗಟ್ಟಿಯಾಗಿ ಅತ್ತನು.
17 ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನು. ನಾನು ನಿನಗೆ ಕೇಡನ್ನು ಮಾಡಿದರೂ, ನೀನು ನನಗೆ ಒಳ್ಳೆಯದನ್ನು ಮಾಡಿದೆ.
೧೭ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನೂ. ನಾನು ನಿನಗೆ ಕೇಡುಮಾಡಿದರೂ ನೀನು ನನಗೆ ಒಳ್ಳೆಯದನ್ನೇ ಮಾಡಿದಿ.
18 ಯೆಹೋವ ದೇವರು ನನ್ನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಾಗ, ನೀನು ನನ್ನನ್ನು ಕೊಂದುಹಾಕದೆ ಇದ್ದುದರಿಂದ, ನೀನು ನನಗೆ ಉಪಕಾರ ಮಾಡಿದ್ದನ್ನು ಈ ಹೊತ್ತು ತೋರಿಸಿದೆ.
೧೮ಯೆಹೋವನು ನನ್ನನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟರೂ ನೀನು ನನ್ನನ್ನು ಕೊಲ್ಲಲಿಲ್ಲ. ಇದರಿಂದ ನೀನು ನನಗೆ ಹಿತವನ್ನೇ ಮಾಡುವಂಥವನೆಂಬುದು ಈ ಹೊತ್ತು ಪ್ರಕಟವಾಯಿತು.
19 ಏಕೆಂದರೆ ಯಾವನಾದರೂ ತನ್ನ ಶತ್ರುವನ್ನು ಹಿಡಿದುಕೊಂಡರೆ, ಅವನನ್ನು ಸುರಕ್ಷಿತನಾಗಿ ಬಿಟ್ಟುಬಿಡುವನೋ? ಈ ಹೊತ್ತು ನೀನು ನನಗೆ ಒಳ್ಳೆಯದನ್ನು ಮಾಡಿದ್ದರಿಂದ ಯೆಹೋವ ದೇವರು ನಿನಗೆ ಒಳ್ಳೆಯದನ್ನು ಮಾಡಲಿ.
೧೯ಯಾವನಾದರೂ ತನ್ನ ಕೈಗೆ ಸಿಕ್ಕಿದ ವೈರಿಯನ್ನು ಸುಕ್ಷೇಮದಿಂದ ಕಳುಹಿಸಿಬಿಡುವನೋ? ನೀನು ಈ ಹೊತ್ತು ನನಗೆ ಉಪಕಾರಮಾಡಿದ್ದಕ್ಕಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ.
20 ಈಗ ಇಗೋ, ನೀನು ನಿಶ್ಚಯವಾಗಿ ಅರಸನಾಗುವೆ ಎಂದೂ, ಇಸ್ರಾಯೇಲಿನ ರಾಜ್ಯವು ನಿನ್ನ ಕೈಯಲ್ಲಿ ಸ್ಥಿರವಾಗುವುದೆಂದೂ ನಾನು ಚೆನ್ನಾಗಿ ಬಲ್ಲೆನು.
೨೦ಕೇಳು, ನೀನು ಹೇಗೂ ಅರಸನಾಗುವಿ ಎಂದೂ ಇಸ್ರಾಯೇಲ್ ರಾಜ್ಯವು ನಿನ್ನಿಂದ ಸ್ಥಿರವಾಗುವುದೆಂದು ಬಲ್ಲೆನು.
21 ಆದ್ದರಿಂದ ನೀನು ನನ್ನ ತರುವಾಯ ನನ್ನ ಸಂತಾನವನ್ನು ಕಡಿದುಬಿಡುವುದಿಲ್ಲವೆಂದೂ, ನನ್ನ ಗೋತ್ರದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ನನಗೆ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣಮಾಡು,” ಎಂದನು.
೨೧ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದಿಲ್ಲವೆಂದೂ, ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡು” ಎಂದು ಬೇಡಿಕೊಂಡ ಹಾಗೆ ದಾವೀದನು ಪ್ರಮಾಣಮಾಡಿದನು.
22 ಹಾಗೆಯೇ ದಾವೀದನು ಸೌಲನಿಗೆ ಪ್ರಮಾಣ ಮಾಡಿದನು. ಆಗ ಸೌಲನು ತನ್ನ ಮನೆಗೆ ಹೋದನು. ಆದರೆ ದಾವೀದನೂ ಅವನ ಮನುಷ್ಯರೂ ಆಶ್ರಯಗಿರಿಗೆ ಏರಿಹೋದರು.
೨೨ಅನಂತರ ಸೌಲನು ತನ್ನ ಮನೆಗೆ ಹೊರಟನು. ದಾವೀದನು ತನ್ನ ಜನರೊಡನೆ ಆಶ್ರಯಗಿರಿಗೆ ಹೋದನು.