< ಸಮುವೇಲನು - ಪ್ರಥಮ ಭಾಗ 22 >
1 ದಾವೀದನು ಆ ಸ್ಥಳದಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಬಂದನು. ಆ ವರ್ತಮಾನವನ್ನು ಅವನ ಸಹೋದರರೂ, ಅವನ ತಂದೆಯ ಮನೆಯವರೆಲ್ಲರೂ ಕೇಳಿ, ಅವನ ಬಳಿಗೆ ಅಲ್ಲಿಗೆ ಬಂದರು.
2 ಇದಲ್ಲದೆ ಶ್ರಮಪಟ್ಟವರೂ, ಸಾಲಗಾರರೂ, ಅಸಂತುಷ್ಟರೂ ಅವನ ಸಂಗಡ ಕೂಡಿಕೊಂಡರು. ಆಗ ದಾವೀದನು ಅವರಿಗೆ ಅಧಿಪತಿಯಾದನು. ಹೆಚ್ಚು ಕಡಿಮೆ ನಾನೂರು ಜನರು ಅವನ ಬಳಿಯಲ್ಲಿ ಇದ್ದರು.
3 ದಾವೀದನು ಅಲ್ಲಿಂದ ಹೊರಟು ಮೋವಾಬ್ ದೇಶದ ಮಿಚ್ಪೆಗೆ ಬಂದು ಮೋವಾಬಿನ ಅರಸನಿಗೆ, “ದೇವರು ನನಗೆ ಏನು ಮಾಡುವರೋ ಎಂದು ನಾನು ತಿಳಿಯುವವರೆಗೂ, ನನ್ನ ತಂದೆತಾಯಿಗಳು ಹೊರಟುಬಂದು ನಿನ್ನ ಬಳಿಯಲ್ಲಿ ವಾಸಿಸಿರಲಿ,” ಎಂದು ಹೇಳಿ, ಅವರನ್ನು ಮೋವಾಬಿನ ಅರಸನ ಬಳಿಗೆ ಕರೆತಂದು ಬಿಟ್ಟನು.
4 ದಾವೀದನು ಗವಿಯಲ್ಲಿ ಇದ್ದ ದಿವಸಗಳೆಲ್ಲಾ, ಅವರು ಆ ಅರಸನ ಬಳಿಯಲ್ಲಿ ವಾಸವಾಗಿದ್ದರು.
5 ಆದರೆ ಗಾದನೆಂಬ ಪ್ರವಾದಿಯು ದಾವೀದನಿಗೆ, “ನೀನು ಗವಿಯಲ್ಲಿರದೆ ಯೆಹೂದ ದೇಶಕ್ಕೆ ಹೊರಟು ಬಾ,” ಎಂದನು. ಆಗ ದಾವೀದನು ಹೊರಟು ಹೆರೆತ್ ಎಂಬ ಅರಣ್ಯಕ್ಕೆ ಬಂದನು.
6 ಒಂದು ದಿನ ದಾವೀದನೂ ಅವನ ಸಂಗಡ ಇದ್ದವರೂ ಅಡಗಿಕೊಂಡಿದ್ದಾರೆ ಎಂಬ ವರ್ತಮಾನವನ್ನು ಸೌಲನು ಕೇಳಿದನು. ಆಗ ಅವನು ಗಿಬೆಯದ ಗುಡ್ಡದಲ್ಲಿ ಒಂದು ಪಿಚುಲ ವೃಕ್ಷದ ಕೆಳಗೆ ತನ್ನ ಈಟಿಯನ್ನು ಕೈಯಲ್ಲಿ ಹಿಡಿದು ಕುಳಿತುಕೊಂಡನು. ಅವನ ಸೇವಕರೆಲ್ಲರು ಸುತ್ತಲೂ ನಿಂತಿದ್ದರು.
7 ಆಗ ಸೌಲನು ಸುತ್ತಲು ನಿಂತಿದ್ದ ಸೇವಕರಿಗೆ, “ಬೆನ್ಯಾಮೀನನ ಮಕ್ಕಳೇ, ಕೇಳಿರಿ. ನೀವೆಲ್ಲರೂ ನನಗೆ ವಿರೋಧವಾಗಿ ಒಳಸಂಚು ನಡೆಸುವಂತೆ ಇಷಯನ ಮಗನು ನಿಮ್ಮೆಲ್ಲರಿಗೆ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ಕೊಡುವನೋ? ನಿಮ್ಮೆಲ್ಲರನ್ನು ಸಾವಿರಕ್ಕೆ ನಾಯಕರಾಗಿಯೂ, ನೂರಕ್ಕೆ ನಾಯಕರಾಗಿಯೂ ಮಾಡುವನೋ?
8 ಇದಲ್ಲದೆ ನಿಮ್ಮಲ್ಲಿ ನನ್ನ ಮಗನು ಇಷಯನ ಮಗನ ಸಂಗಡ ಒಡಂಬಡಿಕೆ ಮಾಡಿಕೊಂಡಿದ್ದನ್ನು ನನಗೆ ಯಾವನೂ ತಿಳಿಸಲಿಲ್ಲ. ನಿಮ್ಮಲ್ಲಿ ಯಾವನಾದರೂ ನನಗೋಸ್ಕರ ಚಿಂತಿಸಿ, ನನ್ನ ಮಗನು ಈ ಹೊತ್ತು ನನ್ನ ನಿಮಿತ್ತ ಅಡಗಿಕೊಂಡಿರುವಂತೆ ನನ್ನ ಸೇವಕನನ್ನು ನನಗೆ ವಿರೋಧವಾಗಿ ಒಳಸಂಚುಮಾಡಿ ಎಬ್ಬಿಸಿದ್ದನ್ನು ಯಾವನೂ ನನಗೆ ತಿಳಿಸಲಿಲ್ಲ,” ಎಂದನು.
9 ಆಗ ಸೌಲನು ಸೇವಕರಿಗೆ ಯಜಮಾನನಾಗಿದ್ದ ಎದೋಮ್ಯನಾದ ದೋಯೇಗನು ಉತ್ತರವಾಗಿ, “ಇಷಯನ ಮಗನು ನೋಬದಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ನಾನು ಕಂಡೆನು.
10 ಇವನು ಅವನಿಗೋಸ್ಕರ ಯೆಹೋವ ದೇವರನ್ನು ಕೇಳಿ ಅವನಿಗೆ ಆಹಾರವನ್ನು ಕೊಟ್ಟು, ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವನ್ನು ಅವನಿಗೆ ಕೊಟ್ಟನು,” ಎಂದನು.
11 ಆದ್ದರಿಂದ ಅರಸನು ಅಹೀಟೂಬನ ಮಗನಾದ ಯಾಜಕನಾಗಿರುವ ಅಹೀಮೆಲೆಕನನ್ನೂ, ನೋಬದಲ್ಲಿರುವ ಯಾಜಕರಾಗಿರುವ ಅವನ ತಂದೆಯ ಮನೆಯವರಾದ ಸಮಸ್ತರನ್ನೂ ಕರೆಯಿಸಿದನು. ಅವರೆಲ್ಲರೂ ಅರಸನ ಬಳಿಗೆ ಬಂದರು.
12 ಆಗ ಸೌಲನು, “ಅಹೀಟೂಬನ ಮಗನೇ, ಕೇಳು,” ಎಂದನು. ಅದಕ್ಕವನು, “ನನ್ನ ಒಡೆಯನೇ, ನಾನು ಇಲ್ಲಿದ್ದೇನೆ,” ಎಂದನು.
13 ಸೌಲನು ಅವನಿಗೆ, “ನೀನೂ, ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋಧವಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಯನ್ನೂ, ಖಡ್ಗವನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು? ಅವನು ಇಂದಿನವರೆಗೂ ನನ್ನನ್ನು ಕೊಲ್ಲುವುದಕ್ಕೆ ಕಾಯುತ್ತಿದ್ದಾನೆ?” ಎಂದು ಕೇಳಿದನು.
14 ಅಹೀಮೆಲೆಕನು ಅರಸನಿಗೆ ಉತ್ತರವಾಗಿ, “ನಿನ್ನ ಸಮಸ್ತ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾರಿದ್ದಾರೆ? ಅವನು ಅರಸನಿಗೆ ಅಳಿಯನೂ ನಿಮ್ಮ ಅಂಗರಕ್ಷಕರ ನಾಯಕನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ.
15 ನಾನು ಅವನಿಗೋಸ್ಕರ ದೇವರನ್ನು ಕೇಳಿಕೊಂಡದ್ದು ಅದೇ ಮೊದಲನೆಯದೋ? ಅಲ್ಲವೇ ಅಲ್ಲ. ಅರಸನು ತನ್ನ ಸೇವಕನ ಮೇಲಾದರೂ ಇಲ್ಲವೆ ಅವನ ಕುಟುಂಬದವರ ಮೇಲಾದರೂ ಇಂಥ ಅಪವಾದವನ್ನು ಹೊರಿಸಬಾರದು, ಏಕೆಂದರೆ ಆ ಕಾರ್ಯದ ಬಗ್ಗೆ ನಮಗೇನೂ ತಿಳಿದಿಲ್ಲ,” ಎಂದನು.
16 ಅದಕ್ಕೆ ಅರಸನು, “ಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯ ಸಮಸ್ತರೂ ನಿಶ್ಚಯವಾಗಿ ಸಾಯಲೇಬೇಕು,” ಎಂದನು.
17 ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆ, “ನೀವು ತಿರುಗಿಕೊಂಡು ಯೆಹೋವ ದೇವರ ಯಾಜಕರನ್ನು ಕೊಂದುಹಾಕಿರಿ. ಏಕೆಂದರೆ ಅವರ ಕೈ ದಾವೀದನಿಗೆ ಸಹಾಯಕವಾಗಿದೆ. ಅವನು ಓಡಿ ಹೋಗುವುದನ್ನು ಅವರು ತಿಳಿದಿದ್ದು, ಅದನ್ನು ನನಗೆ ತಿಳಿಸದೆ ಹೋದರು,” ಎಂದನು. ಆದರೆ ಅರಸನ ಸೇವಕರು ಯೆಹೋವ ದೇವರ ಯಾಜಕರ ಮೇಲೆ ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು.
18 ಆಗ ಅರಸನು ದೋಯೇಗನಿಗೆ, “ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು,” ಎಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು, ನಾರುಬಟ್ಟೆಯ ಏಫೋದನ್ನು ಧರಿಸಿಕೊಳ್ಳುವವರಾದ ಎಂಬತ್ತೈದು ಯಾಜಕರನ್ನು ಆ ದಿನದಲ್ಲಿ ಕೊಂದನು.
19 ಇದಲ್ಲದೆ ಯಾಜಕರ ಪಟ್ಟಣವಾದ ನೋಬಿನಲ್ಲಿ ಇರುವ ಪುರುಷರನ್ನೂ, ಸ್ತ್ರೀಯರನ್ನೂ, ಮಕ್ಕಳನ್ನೂ, ಕೂಸುಗಳನ್ನೂ, ಎತ್ತುಗಳನ್ನೂ, ಕತ್ತೆಗಳನ್ನೂ, ಕುರಿಗಳನ್ನೂ ಖಡ್ಗದಿಂದ ಹೊಡೆದುಬಿಟ್ಟನು.
20 ಆದರೆ ಅಹೀಟೂಬನ ಮಗನಾಗಿರುವ ಅಹೀಮೆಲೆಕನ ಮಕ್ಕಳಲ್ಲಿ ಒಬ್ಬನಾದ ಅಬಿಯಾತರನು ತಪ್ಪಿಸಿಕೊಂಡು ದಾವೀದನ ಬಳಿಗೆ ಓಡಿಹೋದನು.
21 ಸೌಲನು ಯೆಹೋವ ದೇವರ ಯಾಜಕರನ್ನು ಕೊಂದುಹಾಕಿದ ವರ್ತಮಾನವನ್ನು ಅಬಿಯಾತರನು ದಾವೀದನಿಗೆ ತಿಳಿಸಿದನು.
22 ಆಗ ದಾವೀದನು ಅಬಿಯಾತರನಿಗೆ, “ಎದೋಮ್ಯನಾದ ದೋಯೇಗನು ಅಲ್ಲಿ ಇದ್ದುದರಿಂದ ಅವನು ಸೌಲನಿಗೆ ನಿಶ್ಚಯವಾಗಿ ತಿಳಿಸುವನೆಂದು ನಾನು ಆ ದಿನವೇ ನೆನೆಸಿಕೊಂಡೆ. ನಿನ್ನ ತಂದೆಯ ಮನೆಯ ಸಮಸ್ತರ ಪ್ರಾಣಹತ್ಯೆಗೆ ಕಾರಣನಾದವನು ನಾನೇ.
23 ನನ್ನ ಬಳಿಯಲ್ಲಿ ಇರು; ಭಯಪಡಬೇಡ; ಏಕೆಂದರೆ ನನ್ನ ಪ್ರಾಣವನ್ನು ಹುಡುಕುವವನು ನಿನ್ನ ಪ್ರಾಣವನ್ನು ಹುಡುಕುವನು; ನೀನು ನನ್ನ ಸಂಗಡ ಇದ್ದರೆ ಸುರಕ್ಷಿತನಾಗಿರುವಿ,” ಎಂದನು.