< ಸಮುವೇಲನು - ಪ್ರಥಮ ಭಾಗ 11 >
1 ಅಮ್ಮೋನಿಯನಾದ ನಾಹಾಷನು ದಂಡೆತ್ತಿ ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ಮುತ್ತಿಗೆಹಾಕಿದನು. ಆಗ ಯಾಬೇಷಿನ ಜನರೆಲ್ಲರು ನಾಹಾಷನಿಗೆ, “ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿದರೆ, ನಾವು ನಿನಗೆ ಅಧೀನರಾಗಿರುವೆವು,” ಎಂದರು.
2 ಅಮ್ಮೋನ್ಯನಾದ ನಾಹಾಷನು ಅವರಿಗೆ, “ಇಸ್ರಾಯೇಲರಿಗೆ ಅವಮಾನಪಡಿಸುವುದಕ್ಕಾಗಿ ನಿಮ್ಮೆಲ್ಲರ ಬಲಗಣ್ಣುಗಳನ್ನು ಕಿತ್ತು ಹಾಕುವ ಒಂದೇ ನಿಬಂಧನೆಯಿಂದ, ನಿಮ್ಮ ಸಂಗಡ ಒಡಂಬಡಿಕೆ ಮಾಡುತ್ತೇನೆ,” ಎಂದನು.
3 ಅದಕ್ಕೆ ಯಾಬೇಷಿನ ಹಿರಿಯರು ಅವನಿಗೆ, “ನಾವು ಇಸ್ರಾಯೇಲಿನ ಸಮಸ್ತ ಮೇರೆಗಳಿಗೆ ದೂತರನ್ನು ಕಳುಹಿಸುವ ಹಾಗೆ ನಮಗೆ ಏಳು ದಿವಸಗಳ ಅವಕಾಶವನ್ನು ಕೊಡು. ನಮ್ಮನ್ನು ರಕ್ಷಿಸುವವರು ಯಾರೂ ಇಲ್ಲದೆ ಹೋದರೆ, ಆಗ ನಾವು ನಿನ್ನ ಬಳಿಗೆ ಹೊರಟು ಬರುವೆವು,” ಎಂದರು.
4 ದೂತರು ಸೌಲನು ಇರುವ ಗಿಬೆಯಕ್ಕೆ ಬಂದು ಜನರಿಗೆ ಆ ಮಾತುಗಳನ್ನು ಹೇಳಿದರು. ಆಗ ಜನರೆಲ್ಲರೂ ಸ್ವರವನ್ನೆತ್ತಿ ಅತ್ತರು.
5 ಸೌಲನು ಪಶುಗಳ ಹಿಂದೆ ಹೊಲದಿಂದ ಬಂದು, “ಜನರು ಅಳುವುದೇಕೆ?” ಎಂದು ಕೇಳಿದನು. ಅವರು ಅವನಿಗೆ ಯಾಬೇಷಿನ ಜನರ ಮಾತುಗಳನ್ನು ವಿವರಿಸಿದರು.
6 ಸೌಲನು ಈ ಮಾತುಗಳನ್ನು ಕೇಳಿದಾಗ, ದೇವರ ಆತ್ಮವು ಬಹಳ ಸಾಮರ್ಥ್ಯದಿಂದ ಅವನ ಮೇಲೆ ಬಂದು, ಅವನು ಬಹು ಕೋಪೋದ್ರೇಕಗೊಂಡನು. ಅನಂತರ ಅವನು ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು,
7 ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ, ದೂತರ ಕೈಯಿಂದ ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿ, “ಯಾರು ಸೌಲ ಮತ್ತು ಸಮುಯೇಲರನ್ನು ಹಿಂಬಾಲಿಸುವುದಿಲ್ಲವೋ ಅವರ ಎತ್ತುಗಳಿಗೆ ಈ ಪ್ರಕಾರ ಮಾಡಲಾಗುವುದು,” ಎಂದು ಹೇಳಿದನು. ಯೆಹೋವ ದೇವರಿಂದ ಉಂಟಾದ ಭಯ ಜನರ ಮೇಲೆ ಬಿದ್ದದ್ದರಿಂದ, ಅವರು ಒಬ್ಬ ಮನುಷ್ಯನಂತೆ ಹೊರಟು ಬಂದರು.
8 ಅವನು ಅವರನ್ನು ಬೆಜೆಕಿನಲ್ಲಿ ಎಣಿಸಿದಾಗ, ಇಸ್ರಾಯೇಲರು ಮೂರು ಲಕ್ಷ ಜನರೂ, ಯೆಹೂದ್ಯರಲ್ಲಿ ಮೂವತ್ತು ಸಾವಿರ ಜನರೂ ಆಗಿದ್ದರು.
9 ಆಗ ಅವರು ಬಂದ ದೂತರಿಗೆ, “ನೀವು ಗಿಲ್ಯಾದಿನಲ್ಲಿರುವ ಯಾಬೇಷಿನ ಜನರಿಗೆ, ‘ನಾಳೆ ಬಿಸಿಲೇರಿದಾಗ ನಿಮಗೆ ಸಹಾಯ ಉಂಟಾಗುವುದು,’ ಎಂದು ಹೇಳಿರಿ,” ಎಂದರು. ಹಾಗೆಯೇ ದೂತರು ಬಂದು ಯಾಬೇಷಿನ ಜನರಿಗೆ ಅದನ್ನು ತಿಳಿಸಿದಾಗ, ಅವರು ಸಂತೋಷಪಟ್ಟರು.
10 ತರುವಾಯ ಯಾಬೇಷಿನ ಜನರು ನಹಾಷನಿಗೆ, “ನಾಳೆ ನಿನ್ನ ಬಳಿಗೆ ಹೊರಟು ಬರುವೆವು; ಆಗ ನೀನು ನಿನಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ನಮಗೆ ಮಾಡು,” ಎಂದರು.
11 ಮಾರನೆಯ ದಿವಸದಲ್ಲಿ ಸೌಲನು ಜನರನ್ನು ಮೂರು ಗುಂಪಾಗಿ ಇರಿಸಿ, ಬೆಳಗಿನ ಜಾವದಲ್ಲಿ ಪಾಳೆಯದಲ್ಲಿ ಬಂದು, ಬಿಸಿಲೇರುವವರೆಗೆ ಅಮ್ಮೋನಿಯರನ್ನು ಸಂಹರಿಸಿದನು. ಉಳಿದವರು ಚದರಿಹೋದರು. ಅವರಲ್ಲಿ ಒಬ್ಬರು ಕೂಡ ಇರಲಿಲ್ಲ.
12 ಆಗ ಜನರು ಸಮುಯೇಲನಿಗೆ, “ಸೌಲನು ನಮ್ಮ ಮೇಲೆ ಆಳುವನೋ ಎಂದು ಹೇಳಿದವರ್ಯಾರು? ಆ ಮನುಷ್ಯರನ್ನು ನಮಗೆ ಒಪ್ಪಿಸಿರಿ, ಅವರನ್ನು ಕೊಂದು ಹಾಕುತ್ತೇವೆ,” ಎಂದರು.
13 ಆಗ ಸೌಲನು, “ಯೆಹೋವ ದೇವರು ಈ ದಿವಸ ಇಸ್ರಾಯೇಲಿನಲ್ಲಿ ರಕ್ಷಣೆಯನ್ನು ಉಂಟುಮಾಡಿದ್ದರಿಂದ, ಈ ಹೊತ್ತು ಯಾರನ್ನೂ ಕೊಲ್ಲಬಾರದು,” ಎಂದನು.
14 ಆಗ ಸಮುಯೇಲನು ಜನರಿಗೆ, “ನಾವು ಗಿಲ್ಗಾಲಿಗೆ ಹೋಗಿ, ಅಲ್ಲಿ ರಾಜ್ಯತ್ವವನ್ನು ದೃಢೀಕರಿಸೋಣ ಬನ್ನಿರಿ,” ಎಂದನು.
15 ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ, ಆ ಸ್ಥಳದಲ್ಲಿ ಯೆಹೋವ ದೇವರ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ, ಯೆಹೋವ ದೇವರಿಗೆ ಸಮಾಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲರೂ ಬಹಳವಾಗಿ ಸಂತೋಷಪಟ್ಟರು.