< ಅರಸುಗಳು - ಪ್ರಥಮ ಭಾಗ 8 >
1 ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಅರಸನಾದ ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.
2 ಯಥನಿಮ ತಿಂಗಳಲ್ಲಿ ಹಬ್ಬವಿದ್ದಾಗ, ಇಸ್ರಾಯೇಲಿನ ಸಮಸ್ತ ಜನರು ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು.
3 ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ ಯಾಜಕರು ಯೆಹೋವ ದೇವರ ಮಂಜೂಷವನ್ನು ಎತ್ತಿಕೊಂಡು,
4 ದೇವದರ್ಶನದ ಗುಡಾರವನ್ನೂ, ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಲಕರಣೆಗಳನ್ನೂ ತಂದರು. ಇವುಗಳನ್ನು ಯಾಜಕರೂ, ಲೇವಿಯರೂ ಹೊತ್ತುಕೊಂಡು ಬಂದರು.
5 ಆಗ ಅರಸನಾದ ಸೊಲೊಮೋನನೂ, ಅವನ ಬಳಿಯಲ್ಲಿ ಕೂಡಿದ ಇಸ್ರಾಯೇಲ್ ಜನರೆಲ್ಲರೂ ಮಂಜೂಷದ ಮುಂದೆ ನಿಂತು ಎಣಿಸಲಾಗದಷ್ಟು ಕುರಿಗಳನ್ನೂ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
6 ಯಾಜಕರು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳದಲ್ಲಿ ಇಟ್ಟರು.
7 ಕೆರೂಬಿಗಳು ಮಂಜೂಷವಿದ್ದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ, ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿದ್ದವು.
8 ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗುಡಿಯ ಮುಂಭಾಗದಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು, ಆದರೆ ಅವು ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲಿಯೇ ಇವೆ.
9 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಬಂದ ನಂತರ ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿದಾಗ, ಮೋಶೆಯು ಹೋರೇಬ್ ಬೆಟ್ಟದ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.
10 ಯಾಜಕರು ಪರಿಶುದ್ಧ ಸ್ಥಳದಿಂದ ಬಂದಾಗ, ಮೇಘವು ಯೆಹೋವ ದೇವರ ಮಂದಿರವನ್ನು ತುಂಬಿತ್ತು.
11 ಯೆಹೋವ ದೇವರ ತೇಜಸ್ಸಿನಿಂದ ವ್ಯಾಪಿಸಿದ್ದ ಆ ಮೋಡವು ದೇವಾಲಯದಲ್ಲಿ ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.
12 ಆಗ ಸೊಲೊಮೋನನು, “ಯೆಹೋವ ದೇವರೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀರಿ.
13 ಆದರೆ ನಾನು ನಿಮಗೋಸ್ಕರ ಭವ್ಯವಾದ ಮಂದಿರವನ್ನು ಕಟ್ಟಿಸಿದ್ದೇನೆ, ಅದು ನಿಮಗೆ ಶಾಶ್ವತವಾದ ವಾಸಸ್ಥಳವಾಗಿರಲಿ,” ಎಂದು ಹೇಳಿದನು.
14 ಅರಸನು ಜನರ ಕಡೆ ತಿರುಗಿಕೊಂಡು, ಎದ್ದುನಿಂತಿದ್ದ ಇಸ್ರಾಯೇಲ್ ಜನರನ್ನೆಲ್ಲಾ ಆಶೀರ್ವದಿಸಿದನು.
15 ನಂತರ ರಾಜನು ಹೀಗೆ ಹೇಳಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ, ಅವರು ನನ್ನ ತಂದೆಯಾದ ದಾವೀದನಿಗೆ ತಮ್ಮ ಬಾಯಿಂದ ವಾಗ್ದಾನ ಮಾಡಿದ್ದನ್ನು, ತಮ್ಮ ಕೈಗಳಿಂದಲೇ ನೆರವೇರಿಸಿದರು. ಅವರು ಹೇಳಿದ್ದೇನೆಂದರೆ,
16 ‘ನನ್ನ ಜನರಾದ ಇಸ್ರಾಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ದಿನ ಮೊದಲುಗೊಂಡು, ನನ್ನ ನಾಮವು ಅದರಲ್ಲಿರುವ ಹಾಗೆ, ಆಲಯವನ್ನು ಕಟ್ಟುವುದಕ್ಕೆ ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ನಾನು ಆಯ್ದುಕೊಳ್ಳದೆ, ನನ್ನ ಜನರಾದ ಇಸ್ರಾಯೇಲರನ್ನು ಆಳುವುದಕ್ಕೆ ನಾನು ದಾವೀದನನ್ನು ಆಯ್ದುಕೊಂಡೆನು,’ ಎಂಬುದು.
17 “ನನ್ನ ತಂದೆ ದಾವೀದನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದಾಗ,
18 ಯೆಹೋವ ದೇವರು ಆತನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಆಲಯವನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೇ ಸರಿ.
19 ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನಿಂದ ಹುಟ್ಟುವ ಮಗನೇ, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕು,’ ಎಂದು ಹೇಳಿದರು.
20 “ಈಗ ಯೆಹೋವ ದೇವರು ತಾವು ಹೇಳಿದ ವಾಗ್ದಾನವನ್ನು ನೆರವೇರಿಸಿದ್ದಾರೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಯೆಹೋವ ದೇವರು ಮಾತುಕೊಟ್ಟ ಪ್ರಕಾರ, ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿಸಿದ್ದೇನೆ.
21 ಇದಲ್ಲದೆ ಯೆಹೋವ ದೇವರು ನಮ್ಮ ಪಿತೃಗಳನ್ನು ಈಜಿಪ್ಟ್ ದೇಶದಿಂದ ಬರಮಾಡಿದಾಗ, ಅವರ ಸಂಗಡ ಮಾಡಿದ ಒಡಂಬಡಿಕೆಯು ಇರುವ ಮಂಜೂಷಕ್ಕೋಸ್ಕರ ಸ್ಥಳವನ್ನು ಪ್ರತ್ಯೇಕಿಸಿ ಅಲ್ಲಿ ಅದನ್ನು ಇಟ್ಟೆನು,” ಎಂದನು.
22 ಆಗ ಸೊಲೊಮೋನನು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಯೆಹೋವ ದೇವರ ಬಲಿಪೀಠದ ಮುಂದೆ ನಿಂತು, ಆಕಾಶದೆಡೆಗೆ ತನ್ನ ಕೈಗಳನ್ನು ಚಾಚಿ,
23 ಹೀಗೆ ಪ್ರಾರ್ಥಿಸಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಮೇಲಿರುವ ಆಕಾಶದಲ್ಲಾದರೂ, ಕೆಳಗಿರುವ ಭೂಮಿಯಲ್ಲಾದರೂ ನಿಮ್ಮ ಹಾಗೆ ದೇವರು ಯಾರೂ ಇಲ್ಲ. ಸಂಪೂರ್ಣ ಹೃದಯದಿಂದ ನಿಮಗೆ ನಡೆದುಕೊಳ್ಳುವಂಥ ಸೇವಕರ ಬಗ್ಗೆ ನೀವು ನಿಮ್ಮ ಒಡಂಬಡಿಕೆಯನ್ನು ನೆರವೇರಿಸಿ ಕೃಪೆಯನ್ನು ತೋರಿಸುವವರೇ,
24 ನಿಮ್ಮ ಸೇವಕನಾದಂಥ ನನ್ನ ತಂದೆಯಾದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿ, ನೀವು ನಿಮ್ಮ ಬಾಯಿಂದ ಹೇಳಿದ್ದನ್ನು ಇಂದು ಈಡೇರಿಸಿದ್ದೀರಿ.
25 “ಆದಕಾರಣ, ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ‘ನಿನ್ನ ಸಂತಾನದವರು ನಿನ್ನಂತೆ ಜಾಗ್ರತೆಯಾಗಿದ್ದು, ನನ್ನ ಮಾರ್ಗದಲ್ಲೇ ನಡೆದುಕೊಳ್ಳುವದಾದರೆ, ಅವರು ತಪ್ಪದೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊಳ್ಳುವರು,’ ಎಂದು ನೀವು ನನ್ನ ತಂದೆಯಾದ ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸಿರಿ.
26 ಈಗ ಇಸ್ರಾಯೇಲಿನ ದೇವರೇ, ನೀವು ನನ್ನ ತಂದೆಯೂ ನಿಮ್ಮ ಸೇವಕನೂ ಆದ ದಾವೀದನಿಗೆ ಹೇಳಿದ ವಾಕ್ಯವು ನೆರವೇರಲಿ.
27 “ಆದರೆ ದೇವರು ನಿಜವಾಗಿ ಭೂಮಿಯ ಮೇಲೆ ವಾಸವಾಗಿರುವರೋ? ಇಗೋ, ಆಕಾಶವೂ ಉನ್ನತೋನ್ನತ ಆಕಾಶವೂ ನಿಮಗೆ ಸಾಲದು. ಹಾಗಾದರೆ, ನಾನು ಕಟ್ಟಿಸಿದ ಈ ಆಲಯವು ನಿಮಗೆ ಸಾಲುವುದು ಹೇಗೆ?
28 ಆದರೂ ನನ್ನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನ ಪ್ರಾರ್ಥನೆಗೂ, ಅವನ ವಿಜ್ಞಾಪನೆಗೂ ತಿರುಗಿಕೊಂಡು, ಇಂದು ನಿಮ್ಮ ಸೇವಕನು ನಿಮ್ಮ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನು ಕೇಳಿರಿ.
29 ನಿಮ್ಮ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀವು ಕೇಳುವ ಹಾಗೆ, ‘ಇಲ್ಲಿ ನನ್ನ ನಾಮಪ್ರಭಾವ ಇರುವುದು,’ ಎಂದು ನೀವು ಹೇಳಿದ ಈ ಆಲಯದ ಮೇಲೆ ರಾತ್ರಿ ಹಗಲೂ ನಿಮ್ಮ ಕಟಾಕ್ಷವಿರಲಿ.
30 ನಿಮ್ಮ ಜನರಾದ ಇಸ್ರಾಯೇಲರ ಮತ್ತು ನಿಮ್ಮ ಸೇವಕನ ವಿಜ್ಞಾಪನೆಯನ್ನೂ ಕೇಳಿರಿ. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ, ನೀವು ವಾಸಮಾಡುವ ಸ್ಥಳವಾದ ಪರಲೋಕದಿಂದ ಕೇಳಿ, ಕ್ಷಮೆಯನ್ನು ದಯಪಾಲಿಸಿರಿ.
31 “ತನ್ನ ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಒಬ್ಬ ವ್ಯಕ್ತಿ, ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ, ಅಂಥವನು ಈ ಆಲಯಕ್ಕೆ ಬಂದು, ನಿಮ್ಮ ಪೀಠದ ಮುಂದೆ ನಿಂತು ಪ್ರಮಾಣಮಾಡಿದರೆ,
32 ನೀವೇ ಆ ಅಪರಾಧಿಯನ್ನು ಖಂಡಿಸಿ ಅವನ ತಪ್ಪನ್ನು ಅವನ ತಲೆಯ ಮೇಲೆಯೇ ಹೊರಿಸಿ, ಅವನು ಅಪರಾಧಿಯೆಂದು ತೋರಿಸಿಕೊಡಿರಿ. ನಿರ್ದೋಷಿಯಾಗಿದ್ದರೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡುವ ಹಾಗೆ ಪರಲೋಕದಲ್ಲಿರುವ ನೀವು ಅದನ್ನು ಕೇಳಿ, ನಿಮ್ಮ ಸೇವಕರ ನ್ಯಾಯವನ್ನು ತೀರಿಸಿರಿ.
33 “ನಿಮ್ಮ ಜನರಾದ ಇಸ್ರಾಯೇಲರು ನಿಮಗೆ ವಿರೋಧವಾಗಿ ಪಾಪಮಾಡಿದ್ದರಿಂದ, ತಮ್ಮ ಶತ್ರುವಿನ ಮುಂದೆ ಪರಾಭವಗೊಂಡು, ನಿಮ್ಮ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ, ಈ ಆಲಯದಲ್ಲಿ ನಿಮಗೆ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡಿದರೆ,
34 ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಜನರಾದ ಇಸ್ರಾಯೇಲರ ಪಾಪವನ್ನು ಮನ್ನಿಸಿ, ನೀವು ಅವರ ತಂದೆಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡಿರಿ.
35 “ಅವರು ನಿಮಗೆ ವಿರೋಧವಾಗಿ ಪಾಪವನ್ನು ಮಾಡಿದ್ದರಿಂದ, ನೀವು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ ಅವರನ್ನು ಕುಂದಿಸಿದಾಗ ಅವರು ತಮ್ಮ ಪಾಪವನ್ನು ಬಿಟ್ಟು ಈ ಸ್ಥಳದ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ ಪ್ರಾರ್ಥಿಸಿದರೆ,
36 ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸಿ, ನಿಮ್ಮ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡಿರಿ.
37 “ದೇಶದಲ್ಲಿ ಬರಗಾಲ, ಘೋರವ್ಯಾಧಿ, ಉರಿಗಾಳಿ, ಬೆಳೆಗಳ ಮೇಲೆ ಮಿಡತೆ, ಕಂಬಳಿಹುಳು ಇವುಗಳು ಇದ್ದರೆ, ಅಥವಾ ಅವರ ಶತ್ರುಗಳು ತಮ್ಮ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ, ಯಾವ ಬಾಧೆ ಯಾವ ಬೇನೆ ಇದ್ದರೂ,
38 ನಿಮ್ಮ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಒಬ್ಬ ಮನುಷ್ಯನಾದರೂ ತನ್ನ ಹೃದಯದ ವೇದನೆಯಿಂದ, ಈ ಮಂದಿರದ ಕಡೆಗೆ ತನ್ನ ಕೈಗಳನ್ನು ಚಾಚಿ, ಯಾವ ಪ್ರಾರ್ಥನೆಯನ್ನಾದರೂ, ವಿಜ್ಞಾಪನೆಯನ್ನಾದರೂ ಮಾಡಿದರೆ,
39 ನೀವು ವಾಸಮಾಡುವ ಪರಲೋಕದಿಂದ ಕೇಳಿ, ಮನ್ನಿಸಿ, ನಡೆಸಿರಿ. ಮನುಷ್ಯನ ಹೃದಯವನ್ನು ತಿಳಿದಿರುವ ನೀವು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರ ಪ್ರತಿಫಲಕೊಡಿರಿ. ಏಕೆಂದರೆ ನೀವೊಬ್ಬರೇ ಸಮಸ್ತ ಜನರ ಹೃದಯಗಳನ್ನು ತಿಳಿದವರಾಗಿದ್ದೀರಿ.
40 ಆಗ ನೀವು ನಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿರುವರು.
41 “ನಿಮ್ಮ ಜನರಾದ ಇಸ್ರಾಯೇಲಿನವನಲ್ಲದೆ ನಿಮ್ಮ ನಾಮದ ನಿಮಿತ್ತ ದೂರದೇಶದಿಂದ ಬಂದ ಪರದೇಶಿಯ ವಿಷಯದಲ್ಲಿ ಬೇಡಿಕೊಳ್ಳುತ್ತೇನೆ.
42 ಜನರು ನಿಮ್ಮ ಮಹಾನಾಮವನ್ನೂ, ನಿಮ್ಮ ಬಲವಾದ ಕೈ, ನಿಮ್ಮ ಚಾಚಿದ ತೋಳು ಇವುಗಳ ಕುರಿತು ಕೇಳಿ, ಅವರು ಈ ಆಲಯದ ಕಡೆಗೆ ಬಂದು ಪ್ರಾರ್ಥನೆಮಾಡಿದರೆ,
43 ನೀವು ವಾಸಮಾಡುವ ಪರಲೋಕದಿಂದ ಕೇಳಿ, ಪರದೇಶಿಯು ಕೇಳಿದ್ದೆಲ್ಲವನ್ನು ನೆರವೇರಿಸಿರಿ. ಆಗ ಭೂಲೋಕದ ಎಲ್ಲಾ ಜನರೂ ನಿಮ್ಮ ನಾಮವನ್ನು ತಿಳಿದು, ನಿಮ್ಮ ಜನರಾದ ಇಸ್ರಾಯೇಲರಂತೆ ನಿಮಗೆ ಭಯಭಕ್ತಿಯುಳ್ಳವರಾಗಿ, ನಾನು ಕಟ್ಟಿಸಿದ ಈ ಆಲಯವು ನಿಮ್ಮ ಹೆಸರಿನಿಂದ ಕರೆಯಲಾಗಿದೆ ಎಂದು ತಿಳಿದುಕೊಳ್ಳುವರು.
44 “ನೀವು ನಿಮ್ಮ ಜನರನ್ನು ತಮ್ಮ ಶತ್ರುಗಳ ಸಂಗಡ ಯುದ್ಧಮಾಡುವದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ, ಅವರು ಅಲ್ಲಿಂದ ನೀವು ಆಯ್ದುಕೊಂಡ ಪಟ್ಟಣದ ಕಡೆಗೂ, ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ಯೆಹೋವ ದೇವರಾದ ನಿಮಗೆ ಪ್ರಾರ್ಥನೆ ಮಾಡಿದಾಗ,
45 ನೀವು ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ, ಅವರಿಗೆ ನ್ಯಾಯವನ್ನು ತೀರಿಸಿರಿ.
46 “ಪಾಪ ಮಾಡದವನು ಯಾವನೂ ಇಲ್ಲವಲ್ಲಾ. ಆದ್ದರಿಂದ ಅವರು ನಿಮಗೆ ವಿರೋಧವಾಗಿ ಪಾಪಮಾಡಲು, ನೀವು ಅವರ ಮೇಲೆ ಕೋಪಿಸಿಕೊಂಡು ದೂರವಾದರೂ, ಸಮೀಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆಯಾಗಿ ಹೋಗುವಂತೆ ನೀವು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿದರೆ,
47 ಅವರು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಮಾನಸಾಂತರಪಟ್ಟು, ‘ನಾವು ಪಾಪಮಾಡಿದ್ದೇವೆ, ತಪ್ಪುಮಾಡಿ ದುಷ್ಟರಾಗಿ ನಡೆದಿದ್ದೇವೆ,’ ಎಂದು ಅವರನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿಮಗೆ ಪ್ರಾರ್ಥನೆಮಾಡಿದರೆ,
48 ಅವರನ್ನು ಸೆರೆಹಿಡಿದ ಶತ್ರುಗಳ ದೇಶದಲ್ಲಿ ತಮ್ಮ ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ಕಡೆಗೆ ತಿರುಗಿಕೊಂಡು, ನೀವು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಕಡೆಗೂ, ನೀವು ಆಯ್ದುಕೊಂಡ ಪಟ್ಟಣದ ಕಡೆಗೂ ನಿಮ್ಮ ನಾಮಕ್ಕೋಸ್ಕರ ನಾನು ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ಅವರು ನಿಮಗೆ ಪ್ರಾರ್ಥನೆಮಾಡಿದರೆ,
49 ಆಗ ನೀವು ವಾಸಮಾಡುವ ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿರಿ.
50 ನಿಮ್ಮ ಜನರು ನಿಮಗೆ ವಿರೋಧವಾಗಿ ಮಾಡಿದ ಪಾಪಗಳನ್ನೂ, ಅವರ ಸಮಸ್ತ ದ್ರೋಹಗಳನ್ನೂ ಕ್ಷಮಿಸಿರಿ; ಅವರನ್ನು ಸೆರೆಯಾಗಿ ಒಯ್ಯುವವರು ಅವರನ್ನು ಕರುಣಿಸುವಂತೆ ನೀವು ಸಹ ಅವರನ್ನು ಕರುಣಿಸಿರಿ.
51 ಏಕೆಂದರೆ ಅವರು ಈಜಿಪ್ಟಿನಿಂದಲೂ, ಕಬ್ಬಿಣದ ಒಲೆಯ ಮಧ್ಯದಿಂದಲೂ, ನೀವು ಬರಮಾಡಿದ ನಿಮ್ಮ ಜನರಾಗಿಯೂ, ನಿಮ್ಮ ಬಾಧ್ಯತೆಯೂ ಆಗಿದ್ದಾರೆ. ಹೀಗೆ ಅವರು ನಿಮಗೆ ಮೊರೆಯಿಡುವ ಎಲ್ಲಾದರಲ್ಲಿ ನೀವು ಅವರ ವ್ಯಾಜ್ಯವನ್ನು ಆಲಿಸಿರಿ.
52 “ನಿಮ್ಮ ಸೇವಕನ ವಿಜ್ಞಾಪನೆಗೂ, ನಿಮ್ಮ ಜನರಾದ ಇಸ್ರಾಯೇಲರ ವಿಜ್ಞಾಪನೆಗೂ ನಿಮ್ಮ ಕಣ್ಣುಗಳು ತೆರೆದಿರಲಿ. ಅವರು ನಿಮ್ಮನ್ನು ಬೇಡಿಕೊಳ್ಳುವಾಗಲೆಲ್ಲಾ ಅವರ ವಿಜ್ಞಾಪನೆಗಳಿಗೆ ಕಿವಿಗೊಡಿರಿ.
53 ನೀವು ಈಜಿಪ್ಟಿನಿಂದ ನಮ್ಮ ಪಿತೃಗಳನ್ನು ಹೊರಗೆ ತಂದಾಗ ನಿಮ್ಮ ಸೇವಕನಾದ ಮೋಶೆಯ ಮುಖಾಂತರವಾಗಿ ಹೇಳಿದ ಹಾಗೆಯೇ ಸಾರ್ವಭೌಮ ಯೆಹೋವ ದೇವರೇ, ಅವರನ್ನು ನಿಮ್ಮ ಬಾಧ್ಯತೆಯಾಗಿ ಭೂಮಿಯ ಸಮಸ್ತ ಜನರೊಳಗಿಂದ ಪ್ರತ್ಯೇಕಿಸಿರಿ,” ಎಂದನು.
54 ಸೊಲೊಮೋನನು ಈ ಸಮಸ್ತ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ ಯೆಹೋವ ದೇವರಿಗೆ ಮಾಡಿ ತೀರಿಸಿದ ತರುವಾಯ, ಅವನು ಯೆಹೋವ ದೇವರ ಬಲಿಪೀಠದ ಮುಂದೆ ಮೊಣಕಾಲೂರಿ, ತನ್ನ ಕೈಗಳನ್ನು ಆಕಾಶಕ್ಕೆ ಚಾಚಿದವನಾಗಿ ಎದ್ದು ನಿಂತನು.
55 ಅವನು ನಿಂತುಕೊಂಡು ಮಹಾಶಬ್ದದಿಂದ ಇಸ್ರಾಯೇಲಿನ ಸಮಸ್ತ ಸಮೂಹವನ್ನು ಆಶೀರ್ವದಿಸಿದನು.
56 “ತಮ್ಮ ಜನರಾದ ಇಸ್ರಾಯೇಲರಿಗೆ ತಾವು ಮಾತುಕೊಟ್ಟ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಅವರು ತಮ್ಮ ಸೇವಕನಾದ ಮೋಶೆಯ ಮುಖಾಂತರ ಹೇಳಿದ ಎಲ್ಲಾ ಉತ್ತಮವಾದ ವಾಗ್ದಾನಗಳಲ್ಲಿ ಒಂದು ವಾಗ್ದಾನವಾದರೂ ಬಿದ್ದು ಹೋಗಲಿಲ್ಲ.
57 ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ಕೈಬಿಡದೆ, ನಮ್ಮನ್ನು ತ್ಯಜಿಸದೆ, ನಮ್ಮ ಪಿತೃಗಳ ಸಂಗಡ ಹೇಗೆ ಇದ್ದರೋ ಹಾಗೆಯೇ ನಮ್ಮ ಸಂಗಡ ಇರಲಿ.
58 ನಮ್ಮ ಪಿತೃಗಳಿಗೆ ಕೊಟ್ಟ ಆಜ್ಞೆಗಳನ್ನು, ಅಪ್ಪಣೆಗಳನ್ನು, ನಿಯಮಗಳನ್ನು ಕೈಗೊಂಡು ಅವರ ಎಲ್ಲಾ ಮಾರ್ಗಗಳಲ್ಲಿ ನಡೆಯಲು ಅವರು ನಮ್ಮ ಹೃದಯಗಳನ್ನು ಅವರ ಕಡೆಗೆ ತಿರುಗಿಸಲಿ.
59 ಇದಲ್ಲದೆ ಯೆಹೋವ ದೇವರು ತಾವೇ ದೇವರಾಗಿದ್ದಾರೆ. ಅವರ ಹೊರತು ಬೇರೊಬ್ಬರಿಲ್ಲವೆಂದು ಭೂಲೋಕದ ಜನರೆಲ್ಲರೂ ತಿಳಿಯುವ ಹಾಗೆ, ಕಾರ್ಯಕ್ಕೆ ತಕ್ಕದ್ದಾಗಿ ಸಕಲ ಕಾಲಗಳಲ್ಲಿ ತಮ್ಮ ಸೇವಕನ ನ್ಯಾಯವನ್ನೂ, ತಮ್ಮ ಜನರಾದ ಇಸ್ರಾಯೇಲಿನ ನ್ಯಾಯವನ್ನೂ ತೀರಿಸುವ ಹಾಗೆ, ನಾನು ಯೆಹೋವ ದೇವರ ಮುಂದೆ ವಿಜ್ಞಾಪನೆ ಮಾಡಿದ ಈ ನನ್ನ ಮಾತುಗಳು, ರಾತ್ರಿ ಹಗಲು ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಇರಲಿ.
60
61 ಇಂದಿನ ಹಾಗೆಯೇ ಅವರ ಕಟ್ಟಳೆಗಳಲ್ಲಿ ನಡೆಯಲೂ, ಅವರ ಆಜ್ಞೆಗಳನ್ನು ಕೈಗೊಳ್ಳಲೂ, ನಮ್ಮ ದೇವರಾದ ಯೆಹೋವ ದೇವರಿಗೆ ನಿಮ್ಮ ಹೃದಯಗಳು ಪೂರ್ಣವಾಗಿ ಒಪ್ಪಿಸಿಕೊಟ್ಟದ್ದಾಗಿರಲಿ,” ಎಂದನು.
62 ಆಗ ಅರಸನೂ, ಅವನ ಸಂಗಡ ಇಸ್ರಾಯೇಲರೆಲ್ಲರೂ ಯೆಹೋವ ದೇವರ ಮುಂದೆ ಬಲಿಗಳನ್ನು ಅರ್ಪಿಸಿದರು.
63 ಸೊಲೊಮೋನನು ಯೆಹೋವ ದೇವರಿಗೆ ಸಮಾಧಾನದ ಬಲಿಗಳಾಗಿ 22,000 ಹೋರಿಗಳನ್ನೂ, 1,20,000 ಕುರಿಗಳನ್ನೂ ಅರ್ಪಿಸಿದನು. ಹೀಗೆಯೇ ಅರಸನೂ, ಇಸ್ರಾಯೇಲಿನ ಸಮಸ್ತ ಜನರೂ ಯೆಹೋವ ದೇವರ ಆಲಯವನ್ನು ಪ್ರತಿಷ್ಠೆ ಮಾಡಿದರು.
64 ಆ ದಿನ ಅರಸನು ಯೆಹೋವ ದೇವರ ಆಲಯದ ಮುಂದಿರುವ ಮಧ್ಯದ ಅಂಗಳವನ್ನು ಪ್ರತಿಷ್ಠೆ ಮಾಡಿದನು. ಯೆಹೋವ ದೇವರ ಮುಂದಿರುವ ಕಂಚಿನ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಧಾನ್ಯ ಸಮರ್ಪಣೆಗಳನ್ನೂ, ಸಮಾಧಾನದ ಬಲಿಗಳ ಕೊಬ್ಬನ್ನೂ ಇಡುವುದಕ್ಕೆ ಸ್ಥಳ ಸಾಲದೆ ಇದ್ದುದರಿಂದ, ಅಲ್ಲಿ ಅವನು ದಹನಬಲಿಗಳನ್ನೂ, ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
65 ಅದೇ ಕಾಲದಲ್ಲಿ ಸೊಲೊಮೋನನೂ, ಅವನ ಸಂಗಡ ಲೆಬೊ ಹಮಾತಿನ ಪ್ರದೇಶ ಮೊದಲುಗೊಂಡು ಈಜಿಪ್ಟಿನ ನದಿಯವರೆಗೆ ಇರುವ ಮಹಾ ಜನಾಂಗವಾಗಿ ಕೂಡಿಬಂದಿದ್ದ ಸಮಸ್ತ ಇಸ್ರಾಯೇಲರೂ ತಮ್ಮ ದೇವರಾದ ಯೆಹೋವ ದೇವರ ಮುಂದೆ ಏಳೇಳು ದಿನಗಳು ಅಂದರೆ ಹದಿನಾಲ್ಕು ದಿವಸ ಹಬ್ಬವನ್ನು ಆಚರಿಸಿದರು.
66 ಎಂಟನೆಯ ದಿನದಲ್ಲಿ ಅವನು ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡಲು, ಆಗ ಅವರು ಅರಸನನ್ನು ಆಶೀರ್ವದಿಸಿ ಯೆಹೋವ ದೇವರು ತಮ್ಮ ಸೇವಕನಾದ ದಾವೀದನಿಗೂ, ತನ್ನ ಜನರಾದ ಇಸ್ರಾಯೇಲರಿಗೂ ಮಾಡಿದ ಸಮಸ್ತ ಉಪಕಾರದ ನಿಮಿತ್ತ ಅವರು ಹೃದಯದಲ್ಲಿ ಆನಂದಭರಿತರಾಗಿ ಸಂತೋಷಪಡುತ್ತಾ ಅವರವರ ಡೇರೆಗಳಿಗೆ ಹೋದರು.