< ಅರಸುಗಳು - ಪ್ರಥಮ ಭಾಗ 18 >
1 ಅನೇಕ ದಿವಸಗಳಾದ ತರುವಾಯ, ಮೂರನೆಯ ವರ್ಷದಲ್ಲಿ, ಯೆಹೋವ ದೇವರ ವಾಕ್ಯವು ಎಲೀಯನಿಗೆ ಬಂದಿತು, “ನೀನು ಹೋಗಿ ಅಹಾಬನಿಗೆ ನಿನ್ನನ್ನು ಪ್ರಕಟಿಸಿಕೋ. ಆಗ ನಾನು ಭೂಮಿಯ ಮೇಲೆ ಮಳೆಯನ್ನು ಕಳುಹಿಸುವೆನು,” ಎಂದು ಹೇಳಿದರು.
2 ಎಲೀಯನು ಅಹಾಬನಿಗೆ ತನ್ನನ್ನು ಪ್ರಕಟಿಸಿಕೊಳ್ಳಲು ಹೋದನು. ಆದರೆ ಸಮಾರ್ಯದಲ್ಲಿ ಬರವು ಘೋರವಾಗಿತ್ತು.
3 ಅಹಾಬನು ತನ್ನ ಮನೆಯ ಉಗ್ರಾಣಿಕನಾದ ಓಬದ್ಯನನ್ನು ಕರೆದನು. ಓಬದ್ಯನು ಯೆಹೋವ ದೇವರಿಗೆ ಬಹಳ ಭಯಭಕ್ತಿವುಳ್ಳವನಾಗಿದ್ದನು.
4 ಈಜೆಬೆಲಳು ಯೆಹೋವ ದೇವರ ಪ್ರವಾದಿಗಳನ್ನು ಕೊಲ್ಲುತ್ತಿದ್ದಾಗ, ಓಬದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು, ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು, ಅವರಿಗೆ ಆಹಾರವನ್ನೂ, ನೀರನ್ನೂ ಕೊಟ್ಟು, ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು.
5 ಅಹಾಬನು ಓಬದ್ಯನಿಗೆ, “ನೀನು ದೇಶದಲ್ಲಿರುವ ಎಲ್ಲಾ ನೀರಿನ ಬುಗ್ಗೆಗಳ ಬಳಿಗೂ, ಎಲ್ಲಾ ಹಳ್ಳಗಳ ಬಳಿಗೂ ಹೋಗು. ನಾವು ಸಮಸ್ತ ಪಶುಗಳನ್ನು ಕಳೆದುಕೊಳ್ಳದ ಹಾಗೆ ಕುದುರೆಗಳನ್ನೂ, ಹೇಸರಗತ್ತೆಗಳನ್ನೂ ಜೀವದಿಂದ ಇರಿಸುವುದಕ್ಕೆ ನಮಗೆ ಒಂದು ವೇಳೆ ಹುಲ್ಲು ದೊರಕಬಹುದು. ಆಗ ನಾವು ಅವುಗಳನ್ನು ಕೊಲ್ಲುವ ಅವಶ್ಯಕತೆ ಇರುವುದಿಲ್ಲ,” ಎಂದನು.
6 ಅವರು ದೇಶವನ್ನು ಹಾದು ಹೋಗಲು, ಅದನ್ನು ವಿಭಾಗ ಮಾಡಿಕೊಂಡು ಅಹಾಬನು ಒಂದು ಮಾರ್ಗದಲ್ಲಿಯೂ, ಓಬದ್ಯನು ಮತ್ತೊಂದು ಮಾರ್ಗದಲ್ಲಿಯೂ ಪ್ರತ್ಯೇಕವಾಗಿ ಹೋದರು.
7 ಓಬದ್ಯನು ಮಾರ್ಗದಲ್ಲಿ ಹೋಗುತ್ತಿರುವಾಗ, ಎಲೀಯನು ಅವನನ್ನು ಸಂಧಿಸಿದನು. ಓಬದ್ಯನು ಅವನನ್ನು ಗುರುತಿಸಿ ಸಾಷ್ಟಾಂಗ ನಮಸ್ಕಾರಮಾಡಿ, “ನೀನು ನನ್ನ ಒಡೆಯನಾದ ಎಲೀಯನಲ್ಲವೋ?” ಎಂದನು.
8 ಎಲೀಯನು ಅವನಿಗೆ, “ನಾನೇ, ನೀನು ಹೋಗಿ, ‘ಎಲೀಯನು ಇಲ್ಲಿದ್ದಾನೆ’ ಎಂದು ನಿನ್ನ ಯಜಮಾನನಿಗೆ ಹೇಳು,” ಎಂದನು.
9 ಅದಕ್ಕವನು, “ಅಹಾಬನು ನನ್ನನ್ನು ಕೊಂದುಹಾಕುವ ಹಾಗೆ ನೀನು ನಿನ್ನ ಸೇವಕನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲು ನಾನೇನು ಪಾಪಮಾಡಿದೆನು?
10 ನಿನ್ನ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಯಜಮಾನನು ನಿನ್ನನ್ನು ಹುಡುಕಲು ಕಳುಹಿಸದ ಜನಾಂಗವೂ, ರಾಜ್ಯವೂ ಒಂದೂ ಇಲ್ಲ. ಅವರು, ‘ಎಲೀಯನು ನಮ್ಮಲ್ಲಿ ಇಲ್ಲ,’ ಎಂದು ಹೇಳಿದಾಗ, ಅಹಾಬನು ಆ ರಾಜ್ಯಕ್ಕೂ, ಜನಾಂಗಕ್ಕೂ ಆಣೆ ಇಡಿಸಿಕೊಂಡನು.
11 ಈಗ ನೀನು, ‘ಇಗೋ, ಎಲೀಯನು ಇಲ್ಲಿದ್ದಾನೆಂದು ನಿನ್ನ ಯಜಮಾನನಿಗೆ ತಿಳಿಸು,’ ಎಂದು ಹೇಳುತ್ತೀ.
12 ನಾನು ನಿನ್ನನ್ನು ಬಿಟ್ಟು ಹೋಗುವಾಗ, ಯೆಹೋವ ದೇವರ ಆತ್ಮರು ನಾನರಿಯದ ಸ್ಥಳಕ್ಕೆ ನಿನ್ನನ್ನು ಒಯ್ಯುವರು. ನಾನು ಬಂದು ಅಹಾಬನಿಗೆ ತಿಳಿಸಿದಾಗ, ಅವನು ನಿನ್ನನ್ನು ಕಾಣದೆ ಹೋದರೆ ನನ್ನನ್ನು ಕೊಂದುಹಾಕುವನು. ಆದರೆ ನಿನ್ನ ಸೇವಕನಾದ ನಾನು ನನ್ನ ಚಿಕ್ಕಂದಿನಿಂದ ಯೆಹೋವ ದೇವರನ್ನು ಆರಾಧಿಸುತ್ತೇನೆ.
13 ಈಜೆಬೆಲಳು ಪ್ರವಾದಿಗಳನ್ನು ಕೊಲ್ಲುತ್ತಿದ್ದ ಸಮಯದಲ್ಲಿ ಯೆಹೋವ ದೇವರ ಪ್ರವಾದಿಗಳನ್ನು ನೂರು ಮಂದಿಯನ್ನು, ಐವತ್ತು ಐವತ್ತು ಮಂದಿಯಾಗಿ ಗವಿಯಲ್ಲಿ ಬಚ್ಚಿಟ್ಟು, ಅವರಿಗೆ ಆಹಾರವನ್ನೂ, ನೀರನ್ನೂ ಕೊಟ್ಟು ಸಂರಕ್ಷಿಸಿದ್ದು ನನ್ನ ಯಜಮಾನನಾದ ನೀನು ಕೇಳಿಸಿಕೊಳ್ಳಲಿಲ್ಲವೇ?
14 ಆದರೆ ಈಗ ನನ್ನ ಯಜಮಾನನು ನನ್ನನ್ನು ಕೊಂದುಹಾಕುವ ಹಾಗೆ, ‘ಎಲೀಯನು ಇದ್ದಾನೆ ಎಂದು ನೀನು ಹೋಗಿ ಅವನಿಗೆ ಹೇಳು,’ ಎಂಬುದಾಗಿ ನೀನು ಹೇಳುತ್ತೀ,” ಎಂದನು.
15 ಅದಕ್ಕೆ ಎಲೀಯನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸೇನಾಧೀಶ್ವರ ಯೆಹೋವ ದೇವರಾಣೆ, ಇಂದು ನನ್ನನ್ನು ಅವನಿಗೆ ತೋರಿಸಿಕೊಳ್ಳುವೆನು,” ಎಂದನು.
16 ಹೀಗೆ ಓಬದ್ಯನು ಅಹಾಬನೆದುರಿಗೆ ಹೋಗಿ ತಿಳಿಸಿದ್ದರಿಂದ ಅಹಾಬನು ಎಲೀಯನನ್ನು ಎದುರುಗೊಳ್ಳಲು ಹೋದನು.
17 ಅಹಾಬನು ಎಲೀಯನನ್ನು ಕಂಡಾಗ ಅವನಿಗೆ, “ಇಸ್ರಾಯೇಲನ್ನು ಕಷ್ಟಕ್ಕೆ ಒಳಪಡಿಸುವವನು ನೀನಲ್ಲವೋ?” ಎಂದನು.
18 ಅದಕ್ಕೆ ಅವನು, “ನಾನು ಇಸ್ರಾಯೇಲನ್ನು ಕಳವಳಪಡಿಸುವುದಿಲ್ಲ. ಆದರೆ ನೀನೂ, ನಿನ್ನ ತಂದೆಯ ಕುಟುಂಬದವರೂ ಯೆಹೋವ ದೇವರ ಆಜ್ಞೆಯನ್ನು ತೊರೆದುಬಿಟ್ಟು, ಬಾಳನನ್ನು ಹಿಂಬಾಲಿಸುವ ನೀವೇ ಕಳವಳಪಡಿಸುವವರು.
19 ಆದ್ದರಿಂದ ನೀನು ಕರ್ಮೆಲು ಬೆಟ್ಟದ ಬಳಿಯಲ್ಲಿ ಸಮಸ್ತ ಇಸ್ರಾಯೇಲನ್ನೂ, ಬಾಳನ ನಾನೂರ ಐವತ್ತು ಮಂದಿ ಪ್ರವಾದಿಗಳನ್ನೂ, ಈಜೆಬೆಲಳ ಮೇಜಿನ ಹತ್ತಿರ ಭೋಜನಮಾಡುವ ಅಶೇರನ ನಾನೂರು ಮಂದಿ ಪ್ರವಾದಿಗಳನ್ನೂ ನನ್ನ ಬಳಿಗೆ ಕೂಡಿಸು,” ಎಂದನು.
20 ಹೀಗೆ ಅಹಾಬನು ಇಸ್ರಾಯೇಲರೆಲ್ಲರನ್ನೂ ಕರೆಯಿಸಿ, ಕರ್ಮೆಲು ಬೆಟ್ಟದ ಬಳಿಯಲ್ಲಿ ಪ್ರವಾದಿಗಳನ್ನು ಕೂಡಿಸಿದನು.
21 ಆಗ ಎಲೀಯನು ಸಕಲ ಜನರ ಬಳಿಗೆ ಬಂದು, “ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರವರೆಗೂ ನಿಂತುಕೊಂಡಿರುವಿರಿ? ಯೆಹೋವ ದೇವರು ದೇವರಾಗಿದ್ದರೆ, ಅವರನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ, ಅವನನ್ನೇ ಹಿಂಬಾಲಿಸಿರಿ,” ಎಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ.
22 ಆಗ ಎಲೀಯನು ಜನರಿಗೆ, “ಯೆಹೋವ ದೇವರ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ. ಆದರೆ ಬಾಳನ ಪ್ರವಾದಿಗಳು ನಾನೂರ ಐವತ್ತು ಮಂದಿಯಿದ್ದಾರೆ.
23 ಈಗ ಎರಡು ಹೋರಿಗಳನ್ನು ಅವರು ನಮಗೆ ಕೊಡಲಿ. ಒಂದು ಹೋರಿಯನ್ನು ಅವರು ಆಯ್ದುಕೊಂಡು, ಅದನ್ನು ತುಂಡುತುಂಡಾಗಿ ಕಡಿದು, ಬೆಂಕಿ ಹಾಕದೆ, ಕಟ್ಟಿಗೆಗಳ ಮೇಲೆ ಇಡಲಿ. ನಾನು ಇನ್ನೊಂದು ಹೋರಿಯನ್ನು ಹಾಗೆ ಮಾಡಿ, ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡುವೆನು.
24 ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಅನಂತರ ನಾನು ಯೆಹೋವ ದೇವರ ಹೆಸರು ಹೇಳಿ ಪ್ರಾರ್ಥಿಸುವೆನು. ಅವರಿಬ್ಬರಲ್ಲಿ ಯಾರು ಆಲಿಸಿ, ಬೆಂಕಿಯನ್ನು ಕಳುಹಿಸುವರೋ, ಅವರೇ ದೇವರೆಂದು ನಿಶ್ಚಯಿಸೋಣ,” ಎಂದನು. ಅದಕ್ಕೆ ಜನರೆಲ್ಲರು ಉತ್ತರವಾಗಿ, “ಈ ಮಾತು ಸರಿ,” ಎಂದರು.
25 ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ನೀವು ಅನೇಕರಾಗಿರುವುದರಿಂದ ಒಂದು ಹೋರಿಯನ್ನು ಆಯ್ದುಕೊಂಡು, ಅದನ್ನು ಮೊದಲು ಸಿದ್ಧಮಾಡಿ, ನಿಮ್ಮ ದೇವರುಗಳ ಹೆಸರನ್ನು ಕರೆಯಿರಿ. ಆದರೆ ಬೆಂಕಿಯನ್ನು ಹೊತ್ತಿಸಬೇಡಿರಿ,” ಎಂದನು.
26 ಅವರು ತಮಗೆ ಕೊಟ್ಟ ಹೋರಿಯನ್ನು ತೆಗೆದುಕೊಂಡು ಸಿದ್ಧಪಡಿಸಿದರು. “ಬಾಳನೇ, ನಮಗೆ ಕಿವಿಗೊಡು,” ಎಂದು ಉದಯದಿಂದ ಮಧ್ಯಾಹ್ನದವರೆಗೂ ಬಾಳನ ಹೆಸರನ್ನು ಕರೆಯುತ್ತಿದ್ದರು. ಆದರೆ ಒಂದು ಶಬ್ದವಾಗಲಿ, ಉತ್ತರ ಕೊಡುವವನಾಗಲಿ ಇರಲಿಲ್ಲ. ಅವರು ಮಾಡಿದ ಬಲಿಪೀಠದ ಹತ್ತಿರ ಕುಣಿದಾಡಿದರು.
27 ಮಧ್ಯಾಹ್ನದಲ್ಲಿ ಎಲೀಯನು ಅವರನ್ನು ಗೇಲಿಮಾಡಿ ಅವರಿಗೆ, “ದೊಡ್ಡ ಶಬ್ದದಿಂದ ಕೂಗಿರಿ, ಏಕೆಂದರೆ ಅವನು ಒಬ್ಬ ದೇವರಲ್ಲವೇ? ಒಂದು ವೇಳೆ ಅವನು ಧ್ಯಾನದಲ್ಲಿರಬಹುದು; ಇಲ್ಲವೆ ಯಾವುದೋ ಕೆಲಸದಲ್ಲಿರಬಹುದು; ಇಲ್ಲವೆ ಪ್ರಯಾಣದಲ್ಲಿದ್ದಾನೆ; ಇಲ್ಲವೆ ಅವನು ನಿದ್ದೆಯಲ್ಲಿದ್ದಾನೆ; ಈಗ ಅವನು ಎಚ್ಚರವಾಗಬೇಕು,” ಎಂದನು.
28 ಅವರು ದೊಡ್ಡ ಶಬ್ದದಿಂದ ಕೂಗಿ, ತಮ್ಮ ಕ್ರಮದ ಪ್ರಕಾರವೇ ರಕ್ತವು ತಮ್ಮ ಮೇಲೆ ಸೋರುವ ಮಟ್ಟಿಗೂ ಖಡ್ಗಗಳಿಂದಲೂ, ಚೂರಿಗಳಿಂದಲೂ ತಮ್ಮನ್ನು ಕೊಯ್ದುಕೊಂಡರು.
29 ಮಧ್ಯಾಹ್ನವಾದ ತರುವಾಯ ಸಾಯಂಕಾಲದ ಬಲಿ ಅರ್ಪಿಸುವ ವೇಳೆಯವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೆ ಶಬ್ದವಾದರೂ, ಉತ್ತರ ಕೊಡುವವನಾದರೂ, ಲಕ್ಷಿಸುವವನಾದರೂ ಇರಲಿಲ್ಲ.
30 ಆಗ ಎಲೀಯನು ಸಮಸ್ತ ಜನರಿಗೂ, “ನನ್ನ ಬಳಿಗೆ ಬನ್ನಿರಿ,” ಎಂದನು. ಜನರೆಲ್ಲರು ಅವನ ಬಳಿಗೆ ಬಂದರು. ಕಿತ್ತು ಹಾಕಿದ ಯೆಹೋವ ದೇವರ ಬಲಿಪೀಠವನ್ನು ಅವನು ದುರಸ್ತಿ ಮಾಡಿದನು.
31 “ನಿನಗೆ ಇಸ್ರಾಯೇಲನೆಂಬ ಹೆಸರುಂಟಾಗಿರುವುದು,” ಎಂದು ಯೆಹೋವ ದೇವರ ವಾಕ್ಯವು ಬಂದ ಯಾಕೋಬನ ಮಕ್ಕಳ ಗೋತ್ರಗಳ ಲೆಕ್ಕದ ಪ್ರಕಾರ, ಎಲೀಯನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು,
32 ಆ ಕಲ್ಲುಗಳಿಂದ ಯೆಹೋವ ದೇವರ ಹೆಸರಿಗೆ ಬಲಿಪೀಠವನ್ನು ಕಟ್ಟಿ, ಆ ಬಲಿಪೀಠದ ಸುತ್ತಲೂ ಇಪ್ಪತ್ತು ಸೇರು ಬೀಜವರೀ ನೆಲವನ್ನು ಅಗೆಸಿ, ಒಂದು ಕಾಲುವೆಯನ್ನು ಮಾಡಿದನು.
33 ತರುವಾಯ ಅವನು ಕಟ್ಟಿಗೆಗಳನ್ನು ಪೀಠದ ಮೇಲೆ ಇಟ್ಟು, ಹೋರಿಯನ್ನು ತುಂಡುತುಂಡಾಗಿ ಕಡಿದು, ಕಟ್ಟಿಗೆಗಳ ಮೇಲೆ ಇಟ್ಟು, “ನೀವು ನಾಲ್ಕು ಕೊಡ ನೀರು ತುಂಬಿಕೊಂಡು ದಹನಬಲಿಯ ಮೇಲೆಯೂ, ಕಟ್ಟಿಗೆಗಳ ಮೇಲೆಯೂ ಹೊಯ್ಯಿರಿ,” ಎಂದನು.
34 ಅವರು ಅವನು ಹೇಳಿದಂತೆ ಮಾಡಿದರು. ಆಗ ಎಲೀಯನು, “ಎರಡನೆಯ ಸಾರಿ ಹೊಯ್ಯಿರಿ,” ಎಂದನು. ಅವರು ಎರಡನೆಯ ಸಾರಿಯೂ ಹೊಯ್ದರು. ಮೂರನೆಯ ಸಾರಿ, “ಹೊಯ್ಯಿರಿ,” ಎಂದನು. ಮೂರನೆಯ ಸಾರಿಯೂ ಹೊಯ್ದರು.
35 ಆದ್ದರಿಂದ ನೀರು ಬಲಿಪೀಠದ ಸುತ್ತಲೂ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು.
36 ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆಯಲ್ಲಿ ಪ್ರವಾದಿಯಾದ ಎಲೀಯನು ಬಲಿಪೀಠದ ಸಮೀಪಕ್ಕೆ ಬಂದು, “ಅಬ್ರಹಾಮನಿಗೂ, ಇಸಾಕನಿಗೂ, ಇಸ್ರಾಯೇಲಿಗೂ ದೇವರಾದ ಯೆಹೋವ ದೇವರೇ, ಇಸ್ರಾಯೇಲಿನಲ್ಲಿ ನೀವೇ ದೇವರೆಂದೂ, ನಾನು ನಿಮ್ಮ ಸೇವಕನೆಂದೂ, ನಾನು ಈ ಕಾರ್ಯಗಳನ್ನೆಲ್ಲಾ ನಿಮ್ಮ ಮಾತಿನ ಹಾಗೆಯೇ ಮಾಡಿದ್ದೇನೆಂದೂ ಇಂದು ತೋರಿಸಿಕೊಡಿರಿ.
37 ನೀವು ದೇವರಾದ ಯೆಹೋವ ದೇವರೆಂದೂ, ನೀವು ಅವರ ಹೃದಯವನ್ನು ತಿರುಗಿಸಿದ್ದೀರೆಂದೂ ಈ ಜನರು ತಿಳಿಯುವ ಹಾಗೆ ನನಗೆ ಉತ್ತರಕೊಡಿರಿ. ಯೆಹೋವ ದೇವರೇ, ನನಗೆ ಉತ್ತರಕೊಡಿರಿ” ಎಂದು ಬೇಡಿದನು.
38 ಕೂಡಲೇ ಯೆಹೋವ ದೇವರ ಬೆಂಕಿಯು ಇಳಿದುಬಂದು, ದಹನಬಲಿಯನ್ನೂ, ಕಟ್ಟಿಗೆಗಳನ್ನೂ, ಕಲ್ಲುಗಳನ್ನೂ, ಮಣ್ಣನ್ನೂ ಸುಟ್ಟುಬಿಟ್ಟು, ಕಾಲುವೆಯಲ್ಲಿದ್ದ ನೀರನ್ನು ಹೀರಿಬಿಟ್ಟಿತು.
39 ಜನರೆಲ್ಲರು ಇದನ್ನು ಕಂಡಾಗ ಬೋರಲು ಬಿದ್ದು, “ಯೆಹೋವ ದೇವರೇ ದೇವರು! ಯೆಹೋವ ದೇವರೇ ದೇವರು!” ಎಂದರು.
40 ಆಗ ಎಲೀಯನು ಅವರಿಗೆ, “ನೀವು ಬಾಳನ ಪ್ರವಾದಿಗಳನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳದೆ ಇರಲಿ,” ಎಂದನು. ಇವರು ಅವರನ್ನು ಹಿಡಿದರು. ಎಲೀಯನು ಅವರನ್ನು ಕೀಷೋನು ಹಳ್ಳದ ಬಳಿಗೆ ತೆಗೆದುಕೊಂಡುಹೋಗಿ ಅಲ್ಲಿ ಅವರನ್ನು ಕೊಂದುಹಾಕಿದನು.
41 ಅನಂತರ ಎಲೀಯನು ಅಹಾಬನಿಗೆ, “ನೀನು ಹೋಗಿ ತಿಂದು, ಕುಡಿ. ಏಕೆಂದರೆ ದೊಡ್ಡಮಳೆಯ ಶಬ್ದವು ಕೇಳಿಸುತ್ತದೆ,” ಎಂದನು.
42 ಅಹಾಬನು ತಿಂದು, ಕುಡಿಯುವುದಕ್ಕೆ ಹೋದನು. ಎಲೀಯನು ಕರ್ಮೆಲಿನ ಶಿಖರವನ್ನು ಏರಿ, ನೆಲದ ಮೇಲೆ ಬಿದ್ದು, ತನ್ನ ಮೊಣಕಾಲಿನ ಮಧ್ಯೆ ತಲೆಯನ್ನಿಟ್ಟನು.
43 ತನ್ನ ಸೇವಕನಿಗೆ, “ನೀನು ಹೋಗಿ ಸಮುದ್ರದ ಕಡೆಗೆ ನೋಡು,” ಎಂದನು. ಅವನು ಹೋಗಿ ನೋಡಿ, “ಏನೂ ಇಲ್ಲ,” ಎಂದನು. ಅವನು, “ಏಳು ಸಾರಿ ತಿರುಗಿ ಹೋಗಿ ನೋಡು,” ಎಂದನು.
44 ಏಳನೆಯ ಸಾರಿ ಇವನು ಹೋಗಿ ನೋಡಿದಾಗ, “ಇಗೋ, ಸಮುದ್ರದಿಂದ ಒಂದು ಮನುಷ್ಯನ ಅಂಗೈಯಷ್ಟು ಚಿಕ್ಕ ಮೇಘವು ಏಳುತ್ತಿದೆ,” ಎಂದನು. ಆಗ, “ನೀನು ಹೋಗಿ ಅಹಾಬನಿಗೆ ಬೇಗನೇ ರಥವನ್ನು ತೆಗೆದುಕೊಂಡು ಮಳೆಯು ನಿನ್ನನ್ನು ತಡೆಯದಂತೆ ಇಳಿದುಹೋಗೆಂದು ಹೇಳು,” ಎಂದನು.
45 ಆಗ ಇದ್ದಕ್ಕಿದ್ದ ಹಾಗೆ ಆಕಾಶವು ಮೇಘಗಳಿಂದಲೂ, ಗಾಳಿಯಿಂದಲೂ ಕಪ್ಪಾಗಿ ದೊಡ್ಡಮಳೆಯು ಉಂಟಾಯಿತು. ಅಹಾಬನು ರಥದಲ್ಲಿ ಏರಿ ಇಜ್ರೆಯೇಲ್ ಪಟ್ಟಣಕ್ಕೆ ಹೋದನು.
46 ಯೆಹೋವ ದೇವರ ಕೈ ಎಲೀಯನ ಮೇಲೆ ಇದ್ದುದರಿಂದ ಅವನು ತನ್ನ ಸಡಿಲವಾದ ಬಟ್ಟೆಗಳನ್ನು ನಡುಕಟ್ಟಿಕೊಂಡು ಇಜ್ರೆಯೇಲ್ ಪಟ್ಟಣದವರೆಗೂ ಅಹಾಬನಿಗೆ ಮುಂದಾಗಿ ಓಡಿದನು.