< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 11 >
1 ನಾನು ಕ್ರಿಸ್ತ ಯೇಸುವನ್ನು ಅನುಸರಿಸುವಂತೆಯೇ, ನೀವೂ ನನ್ನನ್ನು ಅನುಸರಿಸಿರಿ.
2 ನೀವು ಎಲ್ಲದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು, ನಾನು ನಿಮಗೆ ಒಪ್ಪಿಸಿಕೊಟ್ಟ ಉಪದೇಶಗಳನ್ನು ಬಿಗಿಯಾಗಿ ಅನುಸರಿಸುತ್ತಿರೆಂದು ನಿಮ್ಮನ್ನು ಹೊಗಳುತ್ತೇನೆ.
3 ಪ್ರತಿ ಪುರುಷನಿಗೂ ಕ್ರಿಸ್ತನು ಶಿರಸ್ಸು, ಸ್ತ್ರೀಗೆ ಪುರುಷನು ಶಿರಸ್ಸು ಮತ್ತು ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾರೆ, ಎಂಬುದನ್ನು ನೀವು ತಿಳಿಯಬೇಕೆಂಬುದು ನನ್ನ ಅಪೇಕ್ಷೆ.
4 ತನ್ನ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆ ಮಾಡುವ ಇಲ್ಲವೆ, ಪ್ರವಾದನೆ ಹೇಳುವ ಪ್ರತಿ ಪುರುಷನೂ ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.
5 ಆದರೆ ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆ ಮಾಡುವ ಇಲ್ಲವೆ ಪ್ರವಾದನೆ ಹೇಳುವ ಪ್ರತಿ ಸ್ತ್ರೀಯು ತನ್ನ ತಲೆಯನ್ನು ಅವಮಾನ ಪಡಿಸುತ್ತಾಳೆ. ಹೀಗೆ ಮಾಡುವ ಸ್ತ್ರೀಯು ತನ್ನ ತಲೆ ಬೋಳಿಸಿಕೊಳ್ಳುವುದಕ್ಕೆ ಸಮಾನವಾಗಿದೆ.
6 ಸ್ತ್ರೀಯು ಮುಸುಕು ಹಾಕಿಕೊಳ್ಳದೆ ಇದ್ದರೆ, ಆಕೆಯು ಕೂದಲನ್ನು ಕತ್ತರಿಸಿಕೊಳ್ಳಲಿ. ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ, ತಲೆ ಬೋಳಿಸಿಕೊಳ್ಳವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ, ಆಕೆಯು ಮುಸುಕನ್ನು ಹಾಕಿಕೊಳ್ಳಬೇಕು.
7 ಪುರುಷನು ದೇವರ ಸ್ವರೂಪವೂ ಮಹಿಮೆಯೂ ಆಗಿರುವುದರಿಂದ, ತನ್ನ ತಲೆಗೆ ಮುಸುಕು ಹಾಕಬೇಕಾಗಿಲ್ಲ. ಆದರೆ ಸ್ತ್ರೀಯು ಪುರುಷನ ಮಹಿಮೆಯಾಗಿದ್ದಾಳೆ.
8 ಏಕೆಂದರೆ, ಪುರುಷನು ಸ್ತ್ರೀಯಿಂದಲ್ಲ, ಆದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.
9 ಪುರುಷನು ಸ್ತ್ರೀಗಾಗಿ ಸೃಷ್ಟಿಯಾಗಲಿಲ್ಲ, ಸ್ತ್ರೀಯು ಪುರುಷನಿಗಾಗಿ ಸೃಷ್ಟಿಯಾದಳು.
10 ಈ ಕಾರಣದಿಂದಲೂ ದೇವದೂತರ ನಿಮಿತ್ತವಾಗಿಯೂ ಸ್ತ್ರೀಯ ತಲೆಯ ಮೇಲೆ ಅಧಿಕಾರದ ಮುಸುಕನ್ನು ಹಾಕಿರಬೇಕು.
11 ಆದರೂ, ಕರ್ತ ದೇವರಲ್ಲಿ ಪುರುಷನಿಲ್ಲದೆ ಸ್ತ್ರೀಯು ಇಲ್ಲ; ಸ್ತ್ರೀಯಿಲ್ಲದ ಪುರುಷನೂ ಇಲ್ಲ.
12 ಏಕೆಂದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಂತೆ, ಪುರುಷನು ಸ್ತ್ರೀಯಿಂದ ಜನಿಸುತ್ತಾನೆ. ಆದರೆ ಸಮಸ್ತವೂ ದೇವರಿಂದಲೇ ಆಗಿರುತ್ತದೆ.
13 ಇದನ್ನು ನೀವೇ ತೀರ್ಮಾನ ಮಾಡಿಕೊಳ್ಳಿರಿ: ಸ್ತ್ರೀಯು ಮುಸುಕಿಲ್ಲದೆ ದೇವರಿಗೆ ಪ್ರಾರ್ಥಿಸುವುದು ಯುಕ್ತವೋ?
14 ಪುರುಷನು ಕೂದಲನ್ನು ಬೆಳೆಸಿಕೊಂಡರೆ, ಅದು ಅವನಿಗೆ ಅವಮಾನಕರವಾಗಿದೆಯೆಂದೂ
15 ಸ್ತ್ರೀಯು ಕೂದಲು ಬೆಳೆಸಿಕೊಂಡರೆ, ಅದು ಅವಳಿಗೆ ಮಹಿಮೆಯಾಗಿದೆಯೆಂದೂ ಪ್ರಕೃತಿಯೇ ಸ್ಪಷ್ಟಪಡಿಸುತ್ತದೆ ಅಲ್ಲವೇ? ಏಕೆಂದರೆ, ಅವಳಿಗೆ ಉದ್ದ ಕೂದಲು ಮುಸುಕಿನಂತೆ ಕೊಡಲಾಗಿದೆ.
16 ಇದರ ಬಗ್ಗೆ ಯಾರಿಗಾದರೂ ವಾಗ್ವಾದ ಮಾಡಬಯಸಿದರೆ, ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ.
17 ನಿಮ್ಮನ್ನು ಹೊಗಳುವುದಕ್ಕಾಗಿ ಈ ಮಾರ್ಗದರ್ಶನಗಳನ್ನು ನಾನು ನಿಮಗೆ ತಿಳಿಸುತ್ತಾಯಿಲ್ಲ. ಏಕೆಂದರೆ, ನಿಮ್ಮ ಕೂಟಗಳಿಂದ ಮೇಲಾಗುವುದಕ್ಕಿಂತ ಹೆಚ್ಚು ಕೇಡಾಗುತ್ತಲಿದೆ.
18 ಹೇಗೆಂದರೆ, ಮೊದಲನೆಯದು: ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮೊಳಗೆ ಭೇದಗಳಿವೆ ಎಂದು ಕೇಳುತ್ತೇನೆ. ಇದನ್ನು ಸ್ವಲ್ಪಮಟ್ಟಿಗೆ ನಂಬುತ್ತೇನೆ.
19 ದೇವರ ಮೆಚ್ಚುಗೆ ನಿಮ್ಮಲ್ಲಿ ಯಾರ ಮೇಲೆ ಇದೆ ಎಂಬುದು ಕಂಡುಬರುವಂತೆ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.
20 ನೀವು ಒಟ್ಟಾಗಿ ಕೂಡಿಬರುವಾಗ, ನೀವು ಮಾಡುವ ಭೋಜನವು ಕರ್ತದೇವರ ಭೋಜನವಲ್ಲ.
21 ಏಕೆಂದರೆ, ಭೋಜನ ಮಾಡುವಾಗ, ಪ್ರತಿಯೊಬ್ಬನು ಇತರರಿಗಾಗಿ ಕಾಯದೇ, ತನ್ನ ಭೋಜನವನ್ನು ಮುಂಚಿತವಾಗಿ ಆರಂಭಿಸುತ್ತಾನೆ. ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದಿರುತ್ತಾನೆ.
22 ಉಣ್ಣುವುದಕ್ಕೂ, ಕುಡಿಯುವುದಕ್ಕೂ ನಿಮಗೆ ಮನೆಗಳಿಲ್ಲವೇ? ಅಥವಾ ದೇವರ ಸಭೆಯನ್ನು ಹೀನೈಸಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ಇದಕ್ಕಾಗಿ ನಾನು ನಿಮ್ಮನ್ನು ಹೊಗಳಬೇಕೆ? ಖಂಡಿತ ಇಲ್ಲ.
23 ನಾನು ಕರ್ತ ದೇವರಿಂದಲೇ ಪಡೆದದ್ದನ್ನು ನಿಮಗೆ ಒಪ್ಪಿಸಿಕೊಟ್ಟಿದ್ದೇನೆ: ಕರ್ತ ಆಗಿರುವ ಯೇಸು ತಮ್ಮನ್ನು ಹಿಡಿದುಕೊಡಲಾದ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು,
24 ಸ್ತೋತ್ರಮಾಡಿ ಮುರಿದು, “ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು.
25 ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ. ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ಜ್ಞಾಪಿಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ,” ಎಂದರು.
26 ನೀವು ಈ ರೊಟ್ಟಿಯನ್ನು ತಿಂದು, ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ, ಕರ್ತದೇವರ ಮರಣವನ್ನು ಅವರು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
27 ಹೀಗಿರುವುದರಿಂದ, ಯಾರಾದರೂ ಅಯೋಗ್ಯವಾಗಿ ಕರ್ತದೇವರ ರೊಟ್ಟಿಯನ್ನು ತಿಂದರೆ, ಇಲ್ಲವೆ ಅವರ ಪಾತ್ರೆಯಲ್ಲಿ ಪಾನ ಮಾಡಿದರೆ, ಅಂಥವರು ಕರ್ತದೇವರ ದೇಹಕ್ಕೂ, ರಕ್ತಕ್ಕೂ ದ್ರೋಹ ಮಾಡಿದವರಾಗಿರುವರು.
28 ಆದರೆ ಪ್ರತಿಯೊಬ್ಬರೂ ತಮ್ಮನ್ನು ಪರೀಕ್ಷಿಸಿಕೊಂಡವರಾಗಿ, ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ.
29 ಏಕೆಂದರೆ, ಯಾರಾದರು ಕ್ರಿಸ್ತನ ದೇಹವೆಂದು ವಿವೇಚಿಸದೆ ತಿಂದು ಕುಡಿದರೆ, ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವರು.
30 ಇದರಿಂದ ನಿಮ್ಮಲ್ಲಿ ಬಹುಮಂದಿ ಬಲಹೀನರೂ, ರೋಗಿಗಳೂ ಆಗಿದ್ದಾರೆ, ಕೆಲವರು ನಿದ್ರೆ ಹೋಗಿದ್ದಾರೆ.
31 ನಮ್ಮನ್ನು ನಾವೇ ತೀರ್ಪುಮಾಡಿಕೊಂಡರೆ, ನಾವು ನ್ಯಾಯವಿಚಾರಣೆಗೆ ಒಳಗಾಗುವುದಿಲ್ಲ.
32 ನಾವು ಲೋಕದವರ ಸಂಗಡ ದಂಡನೆಗೆ ಗುರಿಯಾಗಬಾರದೆಂದು, ದೇವರು ನಮ್ಮನ್ನು ಈಗ ಈ ರೀತಿಯಾಗಿ ಶಿಸ್ತಿನ ನ್ಯಾಯವಿಚಾರಣೆಗೆ ಒಳಪಡಿಸುತ್ತಾರೆ.
33 ಹೀಗಿರುವುದರಿಂದ ನನ್ನ ಪ್ರಿಯರೇ, ನೀವು ಭೋಜನಕ್ಕಾಗಿ ಕೂಡಿಬರುವಾಗ ಎಲ್ಲರಿಗಾಗಿ ಕಾದುಕೊಂಡಿರಿ.
34 ನೀವು ಒಟ್ಟಾಗಿ ಕೂಟಕ್ಕೆ ಸೇರಿಬರುವಾಗ, ನ್ಯಾಯತೀರ್ಪಿಗೆ ಒಳಗಾದಂತೆ, ಹಸಿದವರು ಮನೆಯಲ್ಲೇ ಊಟಮಾಡಲಿ. ಇನ್ನುಳಿದ ವಿಷಯಗಳನ್ನು ನಾನು ಬಂದಾಗ ಕ್ರಮಪಡಿಸುತ್ತೇನೆ.