< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 10 >
1 ಪ್ರಿಯರೇ, ನಮ್ಮ ಪಿತೃಗಳೆಲ್ಲರೂ ಮೇಘದ ನೆರಳಿನಲ್ಲಿದ್ದರು, ಅವರೆಲ್ಲರೂ ಸಮುದ್ರವನ್ನು ಹಾದುಹೋದರು ಎಂಬ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬಾರದೆಂದು ಅಪೇಕ್ಷಿಸುತ್ತೇನೆ.
2 ಅವರೆಲ್ಲರೂ ಮೋಶೆಯಲ್ಲಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಸ್ನಾನವನ್ನು ಹೊಂದಿದರು.
3 ಅವರೆಲ್ಲರೂ ಒಂದೇ ಆತ್ಮಿಕವಾದ ಆಹಾರವನ್ನು ಉಂಡರು.
4 ಅವರೆಲ್ಲರೂ ಒಂದೇ ಆತ್ಮಿಕವಾದ ಪಾನವನ್ನು ಕುಡಿದರು. ಅವರು ತಮ್ಮೊಂದಿಗೆ ಬಂದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿದರು. ಕ್ರಿಸ್ತ ಯೇಸುವೇ ಆ ಬಂಡೆ.
5 ಆದರೆ ಅವರೊಳಗೆ ಬಹುಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಅರಣ್ಯದಲ್ಲಿ ಸಂಹಾರವಾದರು.
6 ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವೂ ಆಶಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ಈಗ ನಮಗೆ ನಿದರ್ಶನಗಳಾಗಿವೆ.
7 “ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿ ಉಣ್ಣುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು, ಕುಣಿದಾಡುವುದಕ್ಕೆ ಎದ್ದರು,” ಎಂದು ಬರೆದಿರುವಂತೆ ನೀವೂ ವಿಗ್ರಹಾರಾಧಕರಾಗಬೇಡಿರಿ.
8 ಅವರಲ್ಲಿ ಕೆಲವರು ಜಾರತ್ವ ಮಾಡಿ, ಒಂದೇ ದಿನದಲ್ಲಿ ಇಪ್ಪತ್ಮೂರು ಸಾವಿರ ಮಂದಿ ಸತ್ತರು. ನಾವು ಜಾರತ್ವ ಮಾಡದೆ ಇರೋಣ.
9 ಅವರಲ್ಲಿ ಕೆಲವರು ಕರ್ತದೇವರನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ, ನಾವೂ ಪರೀಕ್ಷಿಸದೆ ಇರೋಣ.
10 ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕನ ಕೈಯಿಂದ ಸಂಹಾರವಾದಂತೆ ನೀವೂ ಗೊಣಗುಟ್ಟಬೇಡಿರಿ.
11 ಆ ಮನುಷ್ಯರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನಗಳಾಗಿವೆ, ಯುಗಾಂತ್ಯಕ್ಕೆ ಬಂದಿರುವ ನಮಗೆ ಎಚ್ಚರಿಕೆಯ ಮಾತುಗಳಾಗಿವೆ. (aiōn )
12 ಆದಕಾರಣ ದೃಢವಾಗಿ ನಿಂತಿದ್ದೇವೆಂದು ಭಾವಿಸುವ ನೀವು ಬೀಳದಿರುವಂತೆ ನೋಡಿಕೊಳ್ಳಿರಿ.
13 ಮನುಷ್ಯರಿಗಾಗುವ ಶೋಧನೆಯೇ ಹೊರತು, ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲ. ಆದರೆ ದೇವರು ನಂಬಿಗಸ್ತರು. ನಿಮ್ಮ ಶಕ್ತಿಗೆ ಮೀರಿದ ಶೋಧನೆಗಳನ್ನು ಅವರು ನಿಮ್ಮ ಮೇಲೆ ಬರುವಂತೆ ಮಾಡುವುದಿಲ್ಲ. ಆದರೆ ನಿಮಗೆ ಶೋಧನೆಗಳು ಬಂದಾಗ, ಅವುಗಳನ್ನು ಜಯಿಸುವುದಕ್ಕೆ ಶಕ್ತರಾಗುವಂತೆ, ಅವುಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಮಾಡುವರು.
14 ಆದ್ದರಿಂದ ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಾರಾಧನೆಯನ್ನು ಬಿಟ್ಟು ಓಡಿಹೋಗಿರಿ.
15 ವಿವೇಕಿಗಳಿಗೆ ಹೇಳಿದಂತೆ, ನಾನು ಹೇಳುವುದನ್ನು ನೀವು ವಿವೇಚಿಸಿರಿ.
16 ನಾವು ಸ್ತೋತ್ರಮಾಡಿ ಕುಡಿಯುವ ಸ್ತೋತ್ರದ ಪಾತ್ರೆಯು ಕ್ರಿಸ್ತ ಯೇಸುವಿನ ರಕ್ತದ ಅನ್ಯೋನ್ಯತೆಯಲ್ಲವೇ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದಲ್ಲಿಯ ಅನ್ಯೋನ್ಯತೆಯಲ್ಲವೇ?
17 ರೊಟ್ಟಿ ಒಂದೇ, ಆದ್ದರಿಂದ ನಾವು ಅನೇಕರಿದ್ದರೂ, ಒಂದೇ ದೇಹವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.
18 ನೀವು ಇಸ್ರಾಯೇಲ್ ಜನರ ಕುರಿತು ಆಲೋಚಿಸಿರಿ: ಯಜ್ಞಾರ್ಪಿತವಾದದ್ದನ್ನು ತಿನ್ನುವವರು ಬಲಿಪೀಠದೊಡನೆ ಭಾಗಿಗಳಾಗಿದ್ದಾರಲ್ಲವೇ?
19 ಹಾಗಾದರೆ ನಾನು ಹೇಳುವುದೇನು? ವಿಗ್ರಹಕ್ಕೆ ಅರ್ಪಿಸಿದ್ದು ಅಥವಾ ವಿಗ್ರಹಕ್ಕೆ ಏನಾದರೂ ಮಹತ್ವವಿರುತ್ತದೆಯೋ? ನಿಶ್ಚಯವಾಗಿಯೂ ಇಲ್ಲ.
20 ಆದರೆ ಯೆಹೂದ್ಯರಲ್ಲದವರು ಅರ್ಪಿಸುವ ಯಜ್ಞ ದೇವರಿಗಲ್ಲ, ದೆವ್ವಗಳಿಗೆ ಅರ್ಪಿಸುವಂತದ್ದಾಗಿದೆ. ನೀವು ದೆವ್ವಗಳೊಂದಿಗೆ ಭಾಗಿಗಳಾಗಿರಬೇಕೆಂಬುದು ನನ್ನ ಇಷ್ಟವಲ್ಲ.
21 ನೀವು ಕರ್ತದೇವರ ಪಾತ್ರೆಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯಲಾರಿರಿ. ನೀವು ಕರ್ತದೇವರ ಪಂಕ್ತಿಯಲ್ಲಿಯೂ ದೆವ್ವಗಳ ಪಂಕ್ತಿಯಲ್ಲಿಯೂ ಭಾಗಿಗಳಾಗಿರಲಾರಿರಿ.
22 ನಾವು ಹೀಗೆ ದೇವರನ್ನು ಅಸೂಯೆಗೆಬ್ಬಿಸಬಹುದೇ? ನಾವು ದೇವರಿಗಿಂತಲೂ ಬಲಿಷ್ಠರಾಗಿದ್ದೇವೆಯೋ?
23 ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯವಿದೆ. ಆದರೆ ಎಲ್ಲಾ ಕಾರ್ಯಗಳೂ ಪ್ರಯೋಜನಕರವಾಗಿರುವುದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯವಿದೆ ಆದರೆ, ಎಲ್ಲಾ ಕಾರ್ಯಗಳೂ ಭಕ್ತಿವೃದ್ಧಿಯನ್ನುಂಟುಮಾಡುವುದಿಲ್ಲ.
24 ಪ್ರತಿಯೊಬ್ಬನೂ ತನ್ನ ಹಿತವನ್ನು ಮಾತ್ರ ನೋಡಿಕೊಳ್ಳದೆ, ಪರಹಿತವನ್ನೂ ನೋಡಲಿ.
25 ಮಾಂಸದ ಅಂಗಡಿಯಲ್ಲಿ ಮಾರುವುದು ಏನಿದ್ದರೂ ಮನಸ್ಸಾಕ್ಷಿಯನ್ನು ಪ್ರಶ್ನಿಸದೇ ತಿನ್ನಿರಿ.
26 ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತ ದೇವರದಾಗಿದೆ.”
27 ಅವಿಶ್ವಾಸಿಗಳಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆದಾಗ ನೀವು ಹೋಗಬಯಸಿದರೆ, ನಿಮ್ಮ ಮುಂದೆ ಬಡಿಸಿದ ಪ್ರತಿಯೊಂದನ್ನು ಮನಸ್ಸಾಕ್ಷಿ ನಿಮಿತ್ತ ಏನನ್ನೂ ಪ್ರಶ್ನಿಸದೆ ತಿನ್ನಿರಿ.
28 ಆದರೆ ಯಾರಾದರೂ ನಿಮಗೆ, “ಇದು ನೈವೇದ್ಯ ಮಾಡಿದ್ದು,” ಎಂದು ಹೇಳಿದರೆ, ತಿಳಿಸಿದ ವ್ಯಕ್ತಿಯ ನಿಮಿತ್ತವೂ ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತವೂ ತಿನ್ನಬೇಡಿರಿ.
29 ನಾನು ನಿಮ್ಮ ಮನಸ್ಸಾಕ್ಷಿಯ ಬಗ್ಗೆ ಅಲ್ಲ, ಇತರರ ಮನಸ್ಸಾಕ್ಷಿಯ ಬಗ್ಗೆ ಸೂಚಿಸುತ್ತಿದ್ದೇನೆ. ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಏಕೆ ಅಡ್ಡಿಯಾಗಬೇಕು?
30 ನಾನು ಕೃತಜ್ಞತೆ ಸಲ್ಲಿಸಿ ಆ ಊಟವನ್ನು ಮಾಡಿದರೆ, ಹಾಗೆ ದೇವರಿಗೆ ಕೃತಜ್ಞತೆ ಸಲ್ಲಿಸಿ ಮಾಡಿದ ಊಟಕ್ಕಾಗಿ ನನ್ನ ಮೇಲೆ ತಪ್ಪುಹೊರಿಸುವುದೇಕೆ?
31 ಆದ್ದರಿಂದ ನೀವು ಊಟಮಾಡಿದರೂ ಪಾನೀಯ ಸೇವಿಸಿದರೂ ಯಾವುದನ್ನೇ ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ.
32 ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ.
33 ನಾನಂತೂ ಎಲ್ಲರನ್ನೂ, ಎಲ್ಲದರಲ್ಲೂ ಮೆಚ್ಚಿಸಲು ಶ್ರಮಿಸುವವನಾಗಿದ್ದೇನೆ. ಏಕೆಂದರೆ, ನಾನು ನನ್ನ ಸ್ವಂತ ಹಿತವನ್ನೇ ಹುಡುಕದೆ, ಅನೇಕರು ರಕ್ಷಣೆ ಹೊಂದಬೇಕೆಂದು ಇತರರ ಹಿತಕ್ಕಾಗಿ ಶ್ರಮಿಸುವವನಾಗಿದ್ದೇನೆ.