< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 26 >

1 ದ್ವಾರಪಾಲಕರ ವರ್ಗಗಳು: ಕೋರಹಿಯರೊಳಗೆ: ಆಸಾಫನ ಪುತ್ರರಲ್ಲಿ ಒಬ್ಬನಾಗಿರುವ ಕೋರೆಯ ಮಗನಾದ ಮೆಷೆಲೆಮ್ಯನು.
ದೇವಾಲಯದ ದ್ವಾರಪಾಲಕ ವರ್ಗಗಳ ವಿಷಯ: ಕೋರಹೀಯನಾದ ಮೆಷೆಲೆಮ್ಯ ಎಂಬವನು, ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ.
2 ಮೆಷೆಲೆಮ್ಯನ ಪುತ್ರರು: ಚೊಚ್ಚಲ ಮಗನು ಜೆಕರ್ಯನು; ಎರಡನೆಯವನು ಯೆದೀಯಯೇಲನು; ಮೂರನೆಯವನು ಜೆಬದ್ಯನು; ನಾಲ್ಕನೆಯವನು ಯತ್ನಿಯೇಲನು;
ಮೆಷೆಲೆಮ್ಯನ ಮಕ್ಕಳಲ್ಲಿ ಜೆಕೆರ್ಯನು ಚೊಚ್ಚಲ ಮಗ, ಎದೀಯಯೇಲನು ಎರಡನೆಯವನು, ಜೆಬೆದ್ಯನು ಮೂರನೆಯವನು, ಯೆತ್ನಿಯೇಲನು ನಾಲ್ಕನೆಯವನು.
3 ಐದನೆಯವನು ಏಲಾಮನು; ಆರನೆಯವನು ಯೆಹೋಹಾನಾನನು; ಏಳನೆಯವನು ಎಲಿಹೋಯೇನೈನು.
ಏಲಾಮನು ಐದನೆಯವನು, ಯೆಹೋಹಾನಾನನು ಆರನೆಯವನು, ಎಲ್ಯೆಹೋಯೇನೈ ಏಳನೆಯವನು.
4 ಓಬೇದ್ ಏದೋಮನ ಪುತ್ರರು: ಚೊಚ್ಚಲ ಮಗನು ಶೆಮಾಯ; ಎರಡನೆಯವನು ಯೆಹೋಜಾಬಾದ್; ಮೂರನೆಯವನು ಯೋವಾಹ; ನಾಲ್ಕನೆಯವನು ಸಾಕಾರ; ಐದನೆಯವನು ನೆತನೆಯೇಲ್;
ಓಬೇದೆದೋಮನ ಮಕ್ಕಳಲ್ಲಿ ಶೆಮಾಯನು ಚೊಚ್ಚಲನು, ಯೆಹೋಜಾಬಾದನು ಎರಡನೆಯವನು. ಯೋವಾಹನು ಮೂರನೆಯವನು, ಸಾಕಾರನು ನಾಲ್ಕನೆಯವನು, ನೆತನೇಲನು ಐದನೆಯವನು,
5 ಆರನೆಯವನು ಅಮ್ಮಿಯೇಲ್; ಏಳನೆಯವನು ಇಸ್ಸಾಕಾರ್ ಮತ್ತು ಎಂಟನೆಯವನು ಪೆಯುಲ್ಲೆತೈ. ಓಬೇದ್ ಎದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನು.
ಅಮ್ಮೀಯೇಲನು ಆರನೆಯವನು, ಇಸ್ಸಾಕಾರನು ಏಳನೆಯವನು, ಪೆಯುಲ್ಲೆತೈಯು ಎಂಟನೆಯವನು. ಓಬೇದೆದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನಷ್ಟೆ.
6 ಇದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಪುತ್ರರು ಹುಟ್ಟಿದರು, ಅವರು ಪರಾಕ್ರಮಶಾಲಿಗಳಾಗಿದ್ದರು.
ಅವನ ಮಗನಾದ ಶೆಮಾಯನ ಮಕ್ಕಳು ಗೋತ್ರಪ್ರಧಾನರೂ ಮಹಾಸಮರ್ಥರೂ ಆಗಿದ್ದರು.
7 ಶೆಮಾಯನ ಪುತ್ರರು ಯಾರೆಂದರೆ: ಒತ್ನಿಯು, ರೆಫಾಯೇಲನು, ಓಬೇದನು, ಎಲ್ಜಾಬಾದನು; ಇವರ ಸಹೋದರರಾದ ಪರಾಕ್ರಮವುಳ್ಳ ಎಲೀಹುವು, ಸೆಮಕ್ಯನು.
ಅವರು ಯಾರೆಂದರೆ: ಒತ್ನೀ, ರೆಫಾಯೇಲ್, ಓಬೇದ್ ಮತ್ತು ಎಲ್ಜಾಬಾದ್. ಇವರೂ ಬಹುಸಮರ್ಥರಾದ ಎಲೀಹು, ಸೆಮಕ್ಯ ಎಂಬುವವರು ಇವರ ಸಹೋದರರು.
8 ಇವರೆಲ್ಲರು ಓಬೇದ್ ಏದೋಮನ ಪುತ್ರರು; ಇವರೂ, ತಮ್ಮ ಪುತ್ರರೂ, ತಮ್ಮ ಸಹೋದರರೂ ಸೇವೆಗೆ ಶಕ್ತಿಯುಳ್ಳ ಸ್ಥಿತಿವಂತರು; ಒಬೆದೆದೋಮನವರು ಅರವತ್ತೆರಡು ಮಂದಿಯಾಗಿದ್ದರು.
ಇವರೆಲ್ಲರೂ ಓಬೇದೆದೋಮನ ಸಂತಾನದವರು. ಇವರು, ಇವರ ಮಕ್ಕಳು ಸಮರ್ಥರೂ, ಸೇವೆಯಲ್ಲಿ ಗಟ್ಟಿಗರೂ ಆಗಿದ್ದವರೂ. ಇವರೂ ಇವರ ಸಹೋದರರೂ ಕೂಡಿ ಅರವತ್ತೆರಡು ಜನರು.
9 ಮೆಷೆಲೆಮ್ಯನಿಗೆ ಬಲವುಳ್ಳ ಪುತ್ರರೂ, ಸಹೋದರರೂ ಹದಿನೆಂಟು ಮಂದಿಯಾಗಿದ್ದರು.
ಮೆಷೆಲೆಮ್ಯನ ಮಕ್ಕಳೂ ಮತ್ತು ಸಹೋದರರೂ ಹದಿನೆಂಟು ಜನರು. ಇವರೂ ಸಮರ್ಥರಾಗಿದ್ದರು.
10 ಇದಲ್ಲದೆ ಮೆರಾರೀಯ ಮಕ್ಕಳಲ್ಲಿರುವ ಹೋಸ ಎಂಬವನಿಗೆ ಮಕ್ಕಳಿದ್ದರು. ಮೊದಲನೆಯವನು ಶಿಮ್ರಿಯು; ಅವನು ಚೊಚ್ಚಲ ಮಗನಲ್ಲ; ಆದರೆ ಅವನ ತಂದೆ ಅವನನ್ನು ಮುಖ್ಯಸ್ಥನನ್ನಾಗಿ ಮಾಡಿದನು;
೧೦ಮೆರಾರೀಯನಾದ ಹೋಸನಿಗೂ ಮಕ್ಕಳಿದ್ದರು; ಅವರಲ್ಲಿ ಶಿಮ್ರಿ ಎಂಬುವವನು ಪ್ರಧಾನನಾಗಿದ್ದನು. ಇವನು ಚೊಚ್ಚಲ ಮಗನಲ್ಲದಿದ್ದರೂ ಅವನ ತಂದೆಯು ಅವನನ್ನೇ ಪ್ರಧಾನನನ್ನಾಗಿ ನೇಮಿಸಿದನು.
11 ಎರಡನೆಯವನು ಹಿಲ್ಕೀಯನು; ಮೂರನೆಯವನು ಟೆಬಲ್ಯನು; ನಾಲ್ಕನೆಯವನು ಜಕರೀಯನು. ಹೋಸನ ಸಮಸ್ತ ಪುತ್ರರು ಮತ್ತು ಸಹೋದರರೂ ಹದಿಮೂರು ಮಂದಿಯಾಗಿದ್ದರು.
೧೧ಹಿಲ್ಕೀಯನು ಎರಡನೆಯವನು, ಟೆಬಲ್ಯನು ಮೂರನೆಯವನು, ಜೆಕರ್ಯನು ನಾಲ್ಕನೆಯವನು. ಹೋಸನ ಮಕ್ಕಳು ಸಹೋದರರೂ ಒಟ್ಟಿಗೆ ಹದಿಮೂರು ಜನರು.
12 ಇದರಲ್ಲಿ ದ್ವಾರಪಾಲಕರ ವರ್ಗಗಳು ಯೆಹೋವ ದೇವರ ಆಲಯದಲ್ಲಿ ಸೇವೆ ಮಾಡುವುದಕ್ಕೆ ವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲಾಗಿದ್ದವು.
೧೨ಈ ದ್ವಾರಪಾಲಕರ ವರ್ಗಗಳು ಪ್ರಧಾನಪುರುಷರು ತಮ್ಮ ಕುಲಬಂಧುಗಳಂತೆ ಯೆಹೋವನ ಆಲಯದಲ್ಲಿ ಸೇವೆಮಾಡುವವರಾಗಿದ್ದರು.
13 ಅವರು ಕಿರಿಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಿಲಿಂದ ಬಾಗಿಲಿಗೂ ಚೀಟುಗಳನ್ನು ಹಾಕಿದರು.
೧೩ಅವರು ಕನಿಷ್ಠ ಕುಟುಂಬವೆಂದೂ, ಶ್ರೇಷ್ಠ ಕುಟುಂಬವೆಂದೂ ವ್ಯತ್ಯಾಸ ಮಾಡದೆ ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಂಡರು.
14 ಪೂರ್ವದಿಕ್ಕಿನ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗ ಬುದ್ಧಿಯುಳ್ಳ ಆಲೋಚನೆಯವನಾಗಿರುವ ಜೆಕರ್ಯನಿಗೋಸ್ಕರ ಹಾಕಿದ ಚೀಟು ಉತ್ತರ ಭಾಗಕ್ಕೆ ಇತ್ತು.
೧೪ಪೂರ್ವ ದಿಕ್ಕಿನ ಕಾವಲಿಗೆ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತು. ಬಹು ವಿವೇಕವುಳ್ಳ ಸಲಹೆಗಾರನಾಗಿರುವ ಅವನ ಮಗನಾದ ಜೆಕೆರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತು.
15 ಓಬೇದ್ ಏದೋಮನಿಗೆ ದಕ್ಷಿಣ ಭಾಗ ಬಂತು. ಅವನ ಪುತ್ರರಿಗೆ ಉಗ್ರಾಣ ಮನೆ ಬಂತು.
೧೫ಓಬೇದೆದೋಮನಿಗೆ ದಕ್ಷಿಣದ ಬಾಗಿಲು, ಅವನ ಮಕ್ಕಳಿಗೆ ಉಗ್ರಾಣ ಮಂದಿರವೂ,
16 ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮದಲ್ಲಿರುವ ಶೆಲ್ಲೆಕೆತ್ ಎಂಬ ಬಾಗಿಲು ಬಂತು. ಅವು ಮೇಲಕ್ಕೆ ಹೋಗುವ ರಾಜಮಾರ್ಗದ ಬಳಿಯಲ್ಲಿ ಒಂದಕ್ಕೊಂದು ಎದುರಾಗಿ ವರ್ಗಗಳಿದ್ದವು.
೧೬ಶುಪ್ಪೀಮ್ ಮತ್ತು ಹೋಸ ಎಂಬುವರಿಗೆ ಪಶ್ಚಿಮದ ಬಾಗಿಲೂ ಅದರ ಸಮೀಪದಲ್ಲಿರುವ ಶಲ್ಲೆಕೆತ್ ಎಂಬ ಬಾಗಿಲು ಚೀಟಿನಿಂದ ನೇಮಕವಾದವು. ಶೆಲ್ಲೆಕೆತ್ ಬಾಗಿಲು ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.
17 ಪೂರ್ವ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ, ದಕ್ಷಿಣ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಉಗ್ರಾಣ ಮಂದಿರದ ಬಳಿಯಲ್ಲಿ ಇಬ್ಬರಿಬ್ಬರಾಗಿಯೂ,
೧೭ಲೇವಿಯರಲ್ಲಿ ಪ್ರತಿದಿನವೂ ಪೂರ್ವದಿಕ್ಕಿನ ಬಾಗಿಲನ್ನು ಆರು ಜನರು, ದಕ್ಷಿಣ ಬಾಗಿಲನ್ನು ನಾಲ್ಕು ಜನರು, ಉಗ್ರಾಣ ಮಂದಿರದ ಎರಡು ಬಾಗಿಲನ್ನು ಇಬ್ಬಿಬ್ಬರು,
18 ಪಶ್ಚಿಮ ಭಾಗವಾದ ದೇವಾಲಯದ ಅಂಗಳಕ್ಕೆ ಹೋಗುವ ರಾಜಮಾರ್ಗದಲ್ಲಿ ನಾಲ್ಕು ಮಂದಿಯೂ, ದೇವಾಲಯದ ಅಂಗಳ ಬಳಿಯಲ್ಲಿ ಇಬ್ಬರೂ ಇದ್ದರು.
೧೮ಪರ್ಬರೆಂಬ ಕಟ್ಟಡವಿರುವ ಪಶ್ಚಿಮ ದಿಕ್ಕಿನ ದಾರಿ ಬಾಗಿಲನ್ನು ನಾಲ್ಕು ಜನರು, ಪರ್ಬರನ್ನು ಇಬ್ಬರು ಕಾಯುತ್ತಿದ್ದರು.
19 ಕೋರಹೀಯರ ಪುತ್ರರಲ್ಲಿಯೂ, ಮೆರಾರೀಯ ಪುತ್ರರಲ್ಲಿಯೂ ವಿಭಾಗಿಸಿದ ದ್ವಾರಪಾಲಕರ ವರ್ಗಗಳು ಇವೆ.
೧೯ಕೋರಹೀಯರ ಮತ್ತು ಮೆರಾರೀಯರ ದ್ವಾರಪಾಲಕರ ವರ್ಗಗಳು ಇವೇ.
20 ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಆಲಯದ ಬೊಕ್ಕಸದ ಮೇಲೆಯೂ, ಪ್ರತಿಷ್ಠಿತವಾದವುಗಳ ಬೊಕ್ಕಸಗಳ ಮೇಲೆಯೂ ಅಧಿಕಾರಿಯಾಗಿದ್ದನು.
೨೦ಲೇವಿಯನಾದ ಅಹೀಯನು ಮೇಲೆ ಹೇಳಿರುವವರ ಕುಲಬಂಧುಗಳೂ, ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುತ್ತಿದ್ದರು.
21 ಲದ್ದಾನನ ವಂಶಜರು: ಗೇರ್ಷೋನ್ಯನಾದ ಲದ್ದಾನನ ಪುತ್ರರು ಕುಟುಂಬಗಳ ಮುಖ್ಯಸ್ಥರಾಗಿದ್ದರು. ಈ ಗೇರ್ಷೋನ್ಯನಾದ ಲಡಾನನ ಮಗನು ಯೆಹೀಯೇಲನು.
೨೧ಗೇರ್ಷೋಮನಿಗೆ ಹುಟ್ಟಿದ ಲದ್ದಾನ ಸಂತಾನದವರಾದ ಲದ್ದಾನ್ಯ ಕುಟುಂಬಗಳ ಪ್ರಧಾನರಲ್ಲಿ ಯೆಹೀಯೇಲೀ ಮತ್ತು ಅವನ ಮಕ್ಕಳು,
22 ಯೆಹೀಯೇಲನ ಪುತ್ರರು ಜೇತಾಮನು, ಅವನ ಸಹೋದರನಾದ ಯೋಯೇಲನು; ಇವರು ಯೆಹೋವ ದೇವರ ಆಲಯದ ಬೊಕ್ಕಸಗಳ ಮೇಲೆ ಇದ್ದರು.
೨೨ಯೆಹೀಯೇಲ್ಯರಾದ ಜೇತಾಮನೂ ಮತ್ತು ಅವನ ತಮ್ಮನಾದ ಯೋವೇಲನು ಯೆಹೋವನ ಆಲಯದ ಭಂಡಾರಗಳನ್ನು ಕಾಯುವವರಾಗಿದ್ದರು.
23 ಅಮ್ರಾಮಿಯರಲ್ಲಿಯೂ ಇಚ್ಹಾರರಲ್ಲಿಯೂ ಹೆಬ್ರೋನಿಯರಲ್ಲಿಯೂ ಉಜ್ಜೀಯೇಲರಲ್ಲಿಯೂ ಇವರ ಸಂತಾನದವರಲ್ಲಿ:
೨೩ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್,
24 ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆಗಿರುವ ಶೆಬೂಯೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿದ್ದನು.
೨೪ಇವರ ಸಂತಾನದವರಲ್ಲಿ ಗೇರ್ಷೋಮನ ಮಗನೂ ಮೋಶೆಯ ಮೊಮ್ಮಗನೂ ಆಗಿರುವ ಶೆಬೂವೇಲನು ಭಂಡಾರಗಳನ್ನು ಕಾಯುವವರ ಮುಖ್ಯಸ್ಥನಾಗಿದ್ದನು.
25 ಇವನ ಸಹೋದರರು, ಎಲೀಯೆಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮ, ಇವನ ಮಗನು ಜಿಕ್ರಿಯು, ಇವನ ಮಗನು ಶೆಲೋಮೋತನು.
೨೫ಎಲೀಯೆಜೆರನ ಮಗ ರೆಹಬ್ಯ, ರೆಹಬ್ಯನ ಮಗ ಯೆಶಾಯ ಯೆಶಾಯನ ಮಗ ಯೋರಾಮ ಯೋರಾಮನ ಮಗ ಜಿಕ್ರೀ ಜಿಕ್ರೀಯನ ಮಗ ಶೆಲೋಮೋತನು.
26 ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು.
೨೬ಶೆಲೋಮೋತನು ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು. ಇವರು ಶೆಬೂವೇಲನ ಗೋತ್ರಬಂಧುಗಳು. ಈ ವಸ್ತುಗಳನ್ನು ಅರಸನಾದ ದಾವೀದನೂ, ಗೋತ್ರ ಪ್ರಧಾನರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಸೇನಾಧಿಪತಿಗಳೂ ಪ್ರತಿಷ್ಠಿಸಿದ್ದರು.
27 ಅವರು ಯೆಹೋವ ದೇವರ ಆಲಯವನ್ನು ದುರಸ್ತಿಪಡಿಸುವುದಕ್ಕೆ ಯುದ್ಧಗಳಿಂದಲೂ, ಕೊಳ್ಳೆಯಿಂದಲೂ ಸಂಪಾದಿಸಿದವುಗಳನ್ನು ಪ್ರತಿಷ್ಠೆ ಮಾಡಿದರು.
೨೭ಇವರು ಯೆಹೋವನ ಆಲಯದ ವೃದ್ಧಿಗೋಸ್ಕರ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಯೆಹೋವನಿಗೆಂದು ಮುಡುಪಾಗಿ ಇಟ್ಟರು.
28 ಇದಲ್ಲದೆ ದರ್ಶಿಯಾದ ಸಮುಯೇಲನೂ, ಕೀಷನ ಮಗ ಸೌಲನೂ, ನೇರನ ಮಗ ಅಬ್ನೇರನೂ, ಚೆರೂಯಳ ಮಗ ಯೋವಾಬನೂ ಪ್ರತಿಷ್ಠೆ ಮಾಡಿದ್ದೆಲ್ಲವೂ ಮತ್ತು ಯಾರು ಪ್ರತಿಷ್ಠೆ ಮಾಡಿದ್ದರೋ, ಅದೆಲ್ಲವೂ ಶೆಲೋಮೋತನ ಕೈಕೆಳಗೂ, ಅವನ ಸಹೋದರರ ಕೈಕೆಳಗೂ ಇತ್ತು.
೨೮ಇದಲ್ಲದೆ ದೇವ ದರ್ಶಿಯಾದ ಸಮುವೇಲನೂ, ಕೀಷನ ಮಗನಾದ ಸೌಲನೂ, ನೇರನ ಮಗನಾದ ಅಬ್ನೇರನೂ, ಚೆರೂಯಳ ಮಗನಾದ ಯೋವಾಬನೂ ಹಾಗೆಯೇ ಮಾಡಿದರು. ಈ ಪ್ರಕಾರ ಪ್ರತಿಷ್ಠಿತವಾದದ್ದೆಲ್ಲವೂ ಶೆಲೋಮೋತನ ಮತ್ತು ಅವನ ಸಹೋದರರ ವಶದಲ್ಲಿತ್ತು.
29 ಇಚ್ಹಾರರಲ್ಲಿ ಕೆನನ್ಯನನ್ನು, ಅವನ ಪುತ್ರರನ್ನು ಪಾರುಪತ್ಯಗಾರರಿಗೋಸ್ಕರವೂ, ನ್ಯಾಯಾಧಿಪತಿಗಳಿಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ನೇಮಿಸಲಾಗಿತ್ತು.
೨೯ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಮಕ್ಕಳು ಲೌಕೀಕೋದ್ಯೋಗದಲ್ಲಿದ್ದರು. ಅವರು ಇಸ್ರಾಯೇಲರ ಅಧಿಕಾರಿಗಳೂ ಮತ್ತು ನ್ಯಾಯಾಧಿಪತಿಗಳೂ ಆಗಿದ್ದರು.
30 ಹೆಬ್ರೋನಿಯರಲ್ಲಿ ಬಲವುಳ್ಳವರಾದ ಹಷಬ್ಯನೂ, ಅವನ ಸಹೋದರರೂ ಯೆಹೋವ ದೇವರ ಸಮಸ್ತ ಕಾರ್ಯಗಳಲ್ಲಿಯೂ, ಅರಸನ ಸೇವೆಯಲ್ಲಿಯೂ ಸಾವಿರದ ಏಳು ನೂರು ಮಂದಿ ಪಶ್ಚಿಮವಾಗಿ ಯೊರ್ದನ್ ನದಿ ಈಚೆಯಲ್ಲಿ ಇಸ್ರಾಯೇಲರೊಳಗೆ ಅಧಿಪತಿಗಳಾಗಿದ್ದರು.
೩೦ಹೆಬ್ರೋನ್ಯರಲ್ಲಿ ಹಷಬ್ಯನೂ ಅವನ ಸಹೋದರರೂ ಯೊರ್ದನ್ ಹೊಳೆಯ ಪಶ್ಚಿಮ ಪ್ರಾಂತ್ಯಗಳಲ್ಲಿದ್ದ ಇಸ್ರಾಯೇಲ್ಯರೊಳಗೆ ಯೆಹೋವನ ಸೇವೆಯ ಎಲ್ಲಾ ಕಾರ್ಯಗಳನ್ನೂ ಮತ್ತು ರಾಜಕೀಯ ಕಾರ್ಯಗಳನ್ನೂ ನಡೆಸುತ್ತಿದ್ದರು. ಸಮರ್ಥರಾದ ಅವರು ಸಾವಿರದ ಏಳುನೂರು ಜನರು.
31 ಹೆಬ್ರೋನಿಯರಲ್ಲಿ ಯೆರೀಯನು ತನ್ನ ಪಿತೃಗಳ ಸಂತತಿಗಳ ಪ್ರಕಾರ ಹೆಬ್ರೋನ್ಯರಲ್ಲಿ ಮುಖ್ಯಸ್ಥನಾಗಿದ್ದನು. ಇವರು ದಾವೀದನ ಆಳಿಕೆಯ ನಲ್ವತ್ತನೆಯ ವರ್ಷದಲ್ಲಿ ಆಯ್ಕೆಯಾಗಿದ್ದರು. ಆಗ ಗಿಲ್ಯಾದಿನ ಯಜ್ಜೇರಿನಲ್ಲಿ ಅವರೊಳಗೆ ಬಲವುಳ್ಳ ಪರಾಕ್ರಮಶಾಲಿಗಳು ಸಿಕ್ಕಿದರು.
೩೧ದಾವೀದನ ಆಳ್ವಿಕೆಯ ನಲವತ್ತನೆಯ ವರ್ಷದಲ್ಲಿ ಹೆಬ್ರೋನ್ಯರಿಗೆ ಸೇರಿದವರು ಯಾರಾರೆಂದು ವಿಚಾರಣೆ ನಡೆಸಿದಾಗ ಗಿಲ್ಯಾದಿನ ಯಾಜೇರಿನ ಶ್ರೀಮಂತರಿಗೆ ಅನೇಕರು ಅವರ ಗೋತ್ರದವರಾಗಿರುತ್ತಾರೆಂದು ಗೊತ್ತಾಯಿತು. ಈ ಹೆಬ್ರೋನ್ಯರಲ್ಲಿ ಯೆರೀಯನು ಪ್ರಧಾನನು.
32 ಇದಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಕುಟುಂಬಗಳ ಮುಖ್ಯಸ್ಥರಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ರೂಬೇನ್ಯರ ಮೇಲೆಯೂ, ಗಾದ್ಯರ ಮೇಲೆಯೂ, ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳಾಗಿ ಮಾಡಿದನು.
೩೨ಶ್ರೀಮಂತರೂ ಕುಟುಂಬ ಪ್ರಧಾನರೂ ಆದ ಅವನ ಗೋತ್ರಬಂಧುಗಳು ಎರಡು ಸಾವಿರದ ಏಳುನೂರು ಜನರು. ಅರಸನಾದ ದಾವೀದನು ರೂಬೇನ್, ಗಾದ್ ಅರ್ಧಮನಸ್ಸೆ ಕುಲಗಳವರ ಮೇಲೆ ಇವರನ್ನೇ ದೈವಿಕ ಕಾರ್ಯಗಳಲ್ಲಿಯೂ, ರಾಜಕೀಯ ಕಾರ್ಯಗಳಲ್ಲಿಯೂ ಅಧಿಕಾರಿಗಳನ್ನಾಗಿ ನೇಮಿಸಿದನು.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 26 >