< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 21 >
1 ಸೈತಾನನು ಇಸ್ರಾಯೇಲಿಗೆ ವಿರೋಧವಾಗಿ ಎದ್ದು, ಇಸ್ರಾಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದನು.
2 ಆದ್ದರಿಂದ ದಾವೀದನು ಯೋವಾಬನನ್ನೂ ಜನರ ಪ್ರಧಾನರನ್ನೂ ಕರೆದು ಅವರಿಗೆ, “ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ, ನೀವು ಹೋಗಿ ಬೇರ್ಷೆಬವು ಮೊದಲುಗೊಂಡು, ದಾನ್ ಊರಿನವರೆಗೆ ಇಸ್ರಾಯೇಲರನ್ನು ಲೆಕ್ಕಿಸಿ, ಅವರ ಲೆಕ್ಕವನ್ನು ನನಗೆ ತೆಗೆದುಕೊಂಡು ಬನ್ನಿರಿ,” ಎಂದನು.
3 ಆಗ ಯೋವಾಬನು, “ಯೆಹೋವ ದೇವರು ತಮ್ಮ ಜನರನ್ನು ಈಗ ಇರುವುದಕ್ಕಿಂತ ನೂರರಷ್ಟಾಗಿ ಹೆಚ್ಚಿಸಲಿ. ಆದರೆ ನನ್ನ ಒಡೆಯನಾದ ಅರಸನೇ, ಅವರೆಲ್ಲರೂ ನನ್ನ ಒಡೆಯನ ಸೇವಕರಲ್ಲವೋ, ನನ್ನ ಒಡೆಯನು ಈ ಕಾರ್ಯವನ್ನು ಅಪೇಕ್ಷಿಸುವುದು ಏಕೆ? ಇದು ಇಸ್ರಾಯೇಲಿನಲ್ಲಿ ಅಪರಾಧಕ್ಕೆ ಕಾರಣವಾಗುವುದು,” ಎಂದನು.
4 ಆದರೆ ಅರಸನ ಮಾತೇ ಯೋವಾಬನಿಗೆ ವಿರೋಧವಾಗಿ ಗೆದ್ದಿತು. ಆಗ ಅವನು ಹೊರಟು, ಇಸ್ರಾಯೇಲಿನ ಸಮಸ್ತ ಪ್ರಾಂತಗಳಿಗೆ ಹೋಗಿ, ಯೆರೂಸಲೇಮಿಗೆ ತಿರುಗಿಬಂದನು.
5 ಯೋವಾಬನು ದಾವೀದನಿಗೆ ಕೊಟ್ಟ ಜನರ ಒಟ್ಟು ಲೆಕ್ಕವೇನೆಂದರೆ: ಸಮಸ್ತ ಇಸ್ರಾಯೇಲರಲ್ಲಿ ಖಡ್ಗ ಹಿಡಿಯತಕ್ಕ ಪರಾಕ್ರಮವುಳ್ಳ ಹನ್ನೊಂದು ಲಕ್ಷಮಂದಿ ಇದ್ದರು. ಯೆಹೂದದ ಜನರು ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಇದ್ದರು.
6 ಆದರೆ ಲೇವಿಯರನ್ನೂ, ಬೆನ್ಯಾಮೀನರನ್ನೂ ಅವರಲ್ಲಿ ಎಣಿಸಲಿಲ್ಲ. ಏಕೆಂದರೆ ಅರಸನ ಮಾತು ಯೋವಾಬನಿಗೆ ಅಸಹ್ಯಕರವಾಗಿತ್ತು.
7 ಇದಲ್ಲದೆ ಈ ಕಾರ್ಯವು ದೇವರ ಸಮ್ಮುಖದಲ್ಲಿ ಕೆಟ್ಟದ್ದಾದದ್ದರಿಂದ, ದೇವರು ಇಸ್ರಾಯೇಲನ್ನು ಶಿಕ್ಷಿಸಿದರು.
8 ದಾವೀದನು ದೇವರಿಗೆ, “ನಾನು ಈ ಕಾರ್ಯವನ್ನು ಮಾಡಿದ್ದರಿಂದ, ಮಹಾಪಾಪ ಮಾಡಿದೆನು. ನೀವು ದಯಮಾಡಿ ನಿಮ್ಮ ಸೇವಕನ ಅಕ್ರಮವನ್ನು ಪರಿಹರಿಸಿರಿ. ಏಕೆಂದರೆ ನಾನು ಇದರಲ್ಲಿ ಬಹಳ ಬುದ್ಧಿಹೀನನಾಗಿ ನಡೆದೆನು,” ಎಂದನು.
9 ಆಗ ಯೆಹೋವ ದೇವರು ದಾವೀದನ ದರ್ಶಿಯಾದ ಗಾದನಿಗೆ,
10 “ನೀನು ದಾವೀದನ ಬಳಿಗೆ ಹೋಗಿ, ಅವನ ಸಂಗಡ ಮಾತಾಡಿ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನಗೆ ವಿರೋಧವಾಗಿ ಬರಮಾಡಬೇಕೋ ಅದನ್ನು ಆಯ್ದುಕೋ,’ ಎಂದು ಹೇಳು,” ಎಂದರು.
11 ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನೇ ಆಯ್ದುಕೋ,
12 ನಿನ್ನ ದೇಶದಲ್ಲಿ ಮೂರು ವರುಷ ಕ್ಷಾಮ ಉಂಟಾಗಬೇಕೋ? ಇಲ್ಲವೆ ಮೂರು ತಿಂಗಳವರೆಗೆ ನಿನ್ನ ಶತ್ರುಗಳ ಹಿಂಸೆಗೆ ಬಲಿಯಾಗುವುದು ಬೇಕೋ? ಇಲ್ಲವೆ ಯೆಹೋವ ದೇವರ ದೂತನು ಇಸ್ರಾಯೇಲಿನ ಸಮಸ್ತ ಪ್ರಾಂತಗಳಲ್ಲಿ ಯೆಹೋವ ದೇವರ ಖಡ್ಗದಿಂದ ಮೂರು ದಿವಸಗಳವರೆಗೆ ಘೋರವ್ಯಾಧಿ ಉಂಟಾಗಬೇಕೋ? ನೀನು ಆರಿಸಿಕೋ. ಈಗ ನನ್ನನ್ನು ಕಳುಹಿಸಿದವರಿಗೆ ನಾನು ಏನು ಉತ್ತರ ತೆಗೆದುಕೊಂಡು ಹೋಗಬೇಕು? ಯೋಚಿಸಿನೋಡು,” ಎಂದನು.
13 ಆಗ ದಾವೀದನು ಗಾದನಿಗೆ, “ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಯೆಹೋವ ದೇವರ ಕೈಯಲ್ಲಿಯೇ ಬೀಳುತ್ತೇನೆ. ಏಕೆಂದರೆ ಅವರ ಕರುಣೆಯು ದೊಡ್ಡದು, ಆದರೆ ಮನುಷ್ಯರ ಕೈಯಲ್ಲಿ ಬೀಳಲಾರೆನು,” ಎಂದನು.
14 ಆದಕಾರಣ ಯೆಹೋವ ದೇವರು ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಕಳುಹಿಸಿದರು. ಆಗ ಇಸ್ರಾಯೇಲರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.
15 ಇದಲ್ಲದೆ ಯೆರೂಸಲೇಮನ್ನು ನಾಶಮಾಡುವುದಕ್ಕೆ ದೇವರು ದೂತನನ್ನು ಕಳುಹಿಸಿದರು. ಅವನು ನಾಶಮಾಡುವುದನ್ನು ಯೆಹೋವ ದೇವರು ನೋಡಿ, ಆ ದಂಡನೆಗೋಸ್ಕರ ದುಃಖಪಟ್ಟು, ಜನರನ್ನು ನಾಶಮಾಡುವ ದೂತನಿಗೆ, “ಸಾಕು, ನಿನ್ನ ಕೈಯನ್ನು ಹಿಂದೆಗೆ,” ಎಂದರು. ಆಗ ಯೆಹೋವ ದೇವರ ದೂತನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ನಿಂತಿದ್ದನು.
16 ಆಗ ದಾವೀದನು ತನ್ನ ಕಣ್ಣೆತ್ತಿ ಭೂಮಿಗೂ, ಆಕಾಶಕ್ಕೂ ಮಧ್ಯದಲ್ಲಿ ನಿಂತಿರುವ ಯೆಹೋವ ದೇವರ ದೂತನನ್ನು ಕಂಡನು. ಅವನ ಕೈಯಲ್ಲಿ ಯೆರೂಸಲೇಮಿನ ಮೇಲೆ ಚಾಚಿದ್ದ ಹಿರಿದ ಖಡ್ಗ ಇತ್ತು. ಆಗ ದಾವೀದನೂ, ಇಸ್ರಾಯೇಲಿನ ಹಿರಿಯರೂ ಗೋಣಿತಟ್ಟುಗಳನ್ನು ಹೊದ್ದುಕೊಂಡು ಬೋರಲಾಗಿ ಬಿದ್ದರು.
17 ದಾವೀದನು ದೇವರಿಗೆ, “ಜನರಲ್ಲಿ ಯುದ್ಧ ವೀರರನ್ನು ಲೆಕ್ಕಮಾಡಲು ಆಜ್ಞಾಪಿಸಿದವನು ನಾನಲ್ಲವೋ? ನಾನೇ ಪಾಪಮಾಡಿದೆನು. ಕುರುಬನಂತಿರುವ ನಾನೇ ಈ ಕೆಟ್ಟದ್ದನ್ನು ಮಾಡಿದೆನು, ಆದರೆ ಕುರಿಗಳಂತಿರುವ ಇವರು ಮಾಡಿದ್ದೇನು? ನನ್ನ ಯೆಹೋವ ದೇವರೇ, ನಿಮ್ಮ ಹಸ್ತವು ನಿಮ್ಮ ಜನರನ್ನು ಬಾಧಿಸದೆ, ನನಗೆ ವಿರೋಧವಾಗಿಯೂ ನನ್ನ ಕುಟುಂಬದ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ,” ಎಂದನು.
18 ಆಗ ಯೆಹೋವ ದೇವರ ದೂತನು ಗಾದನಿಗೆ, “ದಾವೀದನು ಹೋಗಿ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟುವ ಹಾಗೆ ದಾವೀದನಿಗೆ ಹೇಳು,” ಎಂದನು.
19 ಗಾದನು ಯೆಹೋವ ದೇವರ ಹೆಸರಿನಲ್ಲಿ ಹೇಳಿದ ಮಾತಿನ ಪ್ರಕಾರ ದಾವೀದನು ಹೋದನು.
20 ಒರ್ನಾನನು ಗೋಧಿಯನ್ನು ತುಳಿಸುತ್ತಿರುವಾಗ, ಹಿಂದಕ್ಕೆ ತಿರುಗಿ ದೂತನನ್ನು ಕಂಡದ್ದರಿಂದ ಅವನೂ, ಅವನ ಸಂಗಡ ಇದ್ದ ಅವನ ನಾಲ್ಕು ಮಂದಿ ಪುತ್ರರೂ ಅಡಗಿಕೊಂಡಿದ್ದರು.
21 ಆದರೆ ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡನು, ಆಗ ಅವನು ಕಣದಿಂದ ಹೊರಟು, ದಾವೀದನ ಮುಂದೆ ಮುಖ ಕೆಳಗೆಮಾಡಿ ಅಡ್ಡಬಿದ್ದನು.
22 ಆಗ ದಾವೀದನು ಒರ್ನಾನನಿಗೆ, “ಈ ವ್ಯಾಧಿಯು, ಜನರನ್ನು ಬಿಟ್ಟುಹೋಗುವಂತೆ ನಾನು ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿಸುವುದಕ್ಕೆ, ಈ ಕಣದ ಸ್ಥಳವನ್ನು ನನಗೆ ಕೊಡು. ಅದನ್ನು ಪೂರ್ಣ ಕ್ರಯಕ್ಕೆ ನನಗೆ ಕೊಡು,” ಎಂದನು.
23 ಒರ್ನಾನನು ದಾವೀದನಿಗೆ, “ನಿನಗಾಗಿ ತೆಗೆದುಕೋ, ಅರಸನಾದ ನನ್ನ ಒಡೆಯನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ. ದಹನಬಲಿಗೋಸ್ಕರ ಎತ್ತುಗಳೂ, ಸೌದೆಗೆ ಹಂತೀಕುಂಟೆ, ಧಾನ್ಯ ಸಮರ್ಪಣೆಗೋಸ್ಕರ ಗೋಧಿ ಕೊಡುವುದಲ್ಲದೆ, ಸಮಸ್ತವನ್ನೂ ಕೊಡುವೆನು,” ಎಂದನು.
24 ಅರಸ ದಾವೀದನು ಒರ್ನಾನನಿಗೆ, “ಹಾಗಲ್ಲ, ನಾನು ನಿನ್ನಿಂದ ಪೂರ್ಣ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನಿನ್ನದನ್ನು ಕ್ರಯವಿಲ್ಲದೆ ತೆಗೆದುಕೊಂಡು, ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಲು ನನಗೆ ಇಷ್ಟವಿಲ್ಲ,” ಎಂದು ಹೇಳಿದನು.
25 ಅಂತೆಯೇ ಆ ಭೂಮಿಗಾಗಿ ಒರ್ನಾನನಿಗೆ ಏಳು ಕಿಲೋಗ್ರಾಂ ಬಂಗಾರವನ್ನು ಕೊಟ್ಟು,
26 ದಾವೀದನು ಯೆಹೋವ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ, ಅದರ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ ಯೆಹೋವ ದೇವರನ್ನು ಪ್ರಾರ್ಥಿಸಿದನು. ಆಗ ಅವರು ಆಕಾಶದಿಂದ ದಹನಬಲಿಪೀಠದ ಮೇಲೆ ಅಗ್ನಿಯಿಂದ ಅವನಿಗೆ ಉತ್ತರಕೊಟ್ಟರು.
27 ಯೆಹೋವ ದೇವರು ದೂತನಿಗೆ ಹೇಳಿದ್ದರಿಂದ, ಅವನು ತನ್ನ ಖಡ್ಗವನ್ನು ಒರೆಗೆ ತಿರುಗಿ ಸೇರಿಸಿದನು.
28 ಯೆಹೋವ ದೇವರು ಯೆಬೂಸಿಯನಾದ ಒರ್ನಾನನ ಕಣದಲ್ಲಿ ತನಗೆ ಉತ್ತರ ಕೊಟ್ಟರೆಂದು ದಾವೀದನು ಕಂಡಾಗ, ಅವನು ಅಲ್ಲಿ ಬಲಿಗಳನ್ನು ಅರ್ಪಿಸಿದನು.
29 ಮರುಭೂಮಿಯಲ್ಲಿ ಮೋಶೆಯು ಮಾಡಿದ ಯೆಹೋವ ದೇವರ ಗುಡಾರವೂ, ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು.
30 ದಾವೀದನು ದೇವರ ಹತ್ತಿರ ವಿಚಾರಿಸಲು, ಅದರ ಬಳಿಗೆ ಹೋಗಲಾರದೆ ಇದ್ದನು. ಏಕೆಂದರೆ ಅವನು ಯೆಹೋವ ದೇವರ ದೂತನ ಖಡ್ಗದ ನಿಮಿತ್ತ ಹೆದರಿದ್ದನು.