< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 14 >
1 ಟೈರಿನ ಅರಸನಾದ ಹೀರಾಮನು ದಾವೀದನಿಗೆ ಅರಮನೆಯನ್ನು ಕಟ್ಟುವುದಕ್ಕೋಸ್ಕರ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಮತ್ತು ಕಲ್ಲುಕುಟಿಗರನ್ನು ಕಳುಹಿಸಿದನು.
೧ತೂರಿನ ಅರಸನಾದ ಹೀರಾಮನು ದಾವೀದನಿಗೆ ಅರಮನೆಯನ್ನು ಕಟ್ಟುವುದಕ್ಕೋಸ್ಕರ ದೂತರನ್ನೂ, ದೇವದಾರುಮರಗಳನ್ನೂ, ಶಿಲ್ಪಿಗಳನ್ನೂ ಮತ್ತು ಬಡಗಿಗಳನ್ನು ಅವನ ಬಳಿಗೆ ಕಳುಹಿಸಿದನು.
2 ಆಗ ದಾವೀದನು, ತನ್ನನ್ನು ಯೆಹೋವ ದೇವರು ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದರೆಂದೂ, ತಮ್ಮ ಜನರಾದ ಇಸ್ರಾಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದರೆಂದೂ ತಿಳಿದುಕೊಂಡನು.
೨ಇದರಿಂದ ದಾವೀದನು ದೇವರ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ತನ್ನ ರಾಜ್ಯವು ಉನ್ನತ ಸ್ಥಾನಕ್ಕೆ ಮುಟ್ಟಿದ್ದನ್ನು ನೋಡಿ ಯೆಹೋವನು ತನ್ನನ್ನು ಇಸ್ರಾಯೇಲರಿಗೆ ರಾಜನನ್ನಾಗಿ ಸ್ಥಿರಪಡಿಸಿದನೆಂದು ತಿಳಿದುಕೊಂಡನು.
3 ದಾವೀದನು ಯೆರೂಸಲೇಮಿನಲ್ಲಿ ಸಹ ಕೆಲವು ಸ್ತ್ರೀಯರನ್ನು ಮದುವೆಮಾಡಿಕೊಂಡನು. ಇನ್ನೂ ಹೆಚ್ಚು ಪುತ್ರ, ಪುತ್ರಿಯರನ್ನೂ ಪಡೆದನು.
೩ದಾವೀದನು ಯೆರೂಸಲೇಮಿನಲ್ಲಿಯೂ ಸಹ ಕೆಲವು ಸ್ತ್ರೀಯರನ್ನು ಮದುವೆಮಾಡಿಕೊಂಡು ಇನ್ನೂ ಕೆಲವು ಗಂಡು ಹೆಣ್ಣು ಮಕ್ಕಳನ್ನು ಪಡೆದನು.
4 ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
೪ಅಲ್ಲಿ ಅವನಿಗೆ ಹುಟ್ಟಿದ ಗಂಡು ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
5 ಇಬ್ಹಾರ್, ಎಲೀಷೂವ, ಎಲ್ಪೆಲೆಟ,
೫ಇಬ್ಹಾರ್, ಎಲೀಷೂವ, ಎಲ್ಪೆಲೆಟ್,
7 ಎಲೀಷಾಮ, ಎಲ್ಯಾದ, ಎಲೀಫೆಲೆಟ್.
೭ಎಲೀಷಾಮ್, ಬೇಲ್ಯಾದ ಮತ್ತು ಎಲೀಫೆಲೆಟ್.
8 ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಹೊಂದಿದ್ದಾನೆಂದು ಫಿಲಿಷ್ಟಿಯರು ಕೇಳಿದಾಗ, ಫಿಲಿಷ್ಟಿಯರೆಲ್ಲರೂ ದಾವೀದನನ್ನು ಸೆರೆಹಿಡಿಯಲು ಹೋದರು. ದಾವೀದನು ಅದನ್ನು ಕೇಳಿ ಅವರಿಗೆದುರಾಗಿ ಹೊರಟನು.
೮ಇಸ್ರಾಯೇಲ್ಯರೆಲ್ಲರೂ ದಾವೀದನನ್ನು ಅಭಿಷೇಕಿಸಿ ಅವನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿದಾಗ ಅವರು ಅವನನ್ನು ಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ತಾನೂ ಅವರನ್ನೆದುರಿಸಲು ಹೋದನು.
9 ಆಗ ಫಿಲಿಷ್ಟಿಯರು ಬಂದು ರೆಫಾಯಿಮ್ ತಗ್ಗಿನಲ್ಲಿ ಇಳಿದುಕೊಂಡರು.
೯ಫಿಲಿಷ್ಟಿಯರು ದೇಶದೊಳಗೆ ನುಗ್ಗಿ, ರೆಫಾಯೀಮ್ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು.
10 ಅದಕ್ಕೆ ದಾವೀದನು, “ನಾನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಬಹುದೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವಿರೋ?” ಎಂದು ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು ಅವನಿಗೆ, “ಹೋಗು, ನಾನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದು ಹೇಳಿದರು.
೧೦ದಾವೀದನು ದೇವರಾದ ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಅವರನ್ನು ನಿನ್ನ ಕೈಗೆ ಒಪ್ಪಿಸುವೆನು” ಎಂದು ಉತ್ತರ ಕೊಟ್ಟನು.
11 ಹಾಗೆಯೇ ದಾವೀದನು ಮತ್ತು ಅವನ ಸಂಗಡಿಗರೂ ಬಾಳ್ ಪೆರಾಜಿಮ್ ಎಂಬಲ್ಲಿಗೆ ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಆಗ ದಾವೀದನು, “ಪ್ರವಾಹವು ಕೊಚ್ಚಿಕೊಂಡು ಹೋಗುವಹಾಗೆ, ದೇವರು ನನ್ನ ಕೈಯಿಂದ ನನ್ನ ಶತ್ರುಗಳನ್ನು ನಾಶಮಾಡಿದ್ದಾರೆ,” ಎಂದನು. ಆದಕಾರಣ ಆ ಸ್ಥಳಕ್ಕೆ ಬಾಳ್ ಪೆರಾಜಿಮ್ ಎಂದು ಹೆಸರಿಟ್ಟನು.
೧೧ಅಷ್ಟರಲ್ಲಿ ಬಾಳ್ ಪೆರಾಚೀಮಿಗೆ ಬಂದ ಅವರನ್ನು ದಾವೀದನು ಸೋಲಿಸಿ, “ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ಹೇಳಿದ್ದರಿಂದ ಆ ಯುದ್ಧ ಸ್ಥಳಕ್ಕೆ ಬಾಳ್ ಪೆರಾಚೀಮ್ ಎಂದು ಹೆಸರಾಯಿತು.
12 ಅಲ್ಲಿ ಫಿಲಿಷ್ಟಿಯರು ತಮ್ಮ ದೇವರುಗಳನ್ನು ಬಿಟ್ಟು ಹೋದುದರಿಂದ, ದಾವೀದನು ಅವುಗಳನ್ನು ಸುಟ್ಟುಹಾಕಬೇಕೆಂದು ಅಪ್ಪಣೆಮಾಡಿದನು.
೧೨ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ದೇವರುಗಳನ್ನು ಸುಟ್ಟುಬಿಡುವಂತೆ ದಾವೀದನು ಅಪ್ಪಣೆ ಕೊಟ್ಟನು.
13 ಫಿಲಿಷ್ಟಿಯರು ಮತ್ತೆ ತಿರುಗಿಬಂದು ತಗ್ಗಿನಲ್ಲಿ ಸುಲಿಗೆಮಾಡಲು ಪ್ರಾರಂಭಿಸಿದರು.
೧೩ಫಿಲಿಷ್ಟಿಯರು ಮತ್ತೊಮ್ಮೆ ಬಂದು ಅದೇ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು.
14 ಆದ್ದರಿಂದ ದಾವೀದನು ತಿರುಗಿ ದೇವರನ್ನು ವಿಚಾರಿಸಿದನು. ಆಗ ದೇವರು ಅವನಿಗೆ, “ನೀನು ಅವರ ಹಿಂದೆ ಹೋಗದೆ, ಅವರನ್ನು ಬಿಟ್ಟು ತಿರುಗಿಕೊಂಡು ಹೋಗಿ, ಬಾಕಾಮರಗಳಿಗೆ ಎದುರಾಗಿ ಅವರ ಮೇಲೆ ದಾಳಿಮಾಡು.
೧೪ದಾವೀದನು ಪುನಃ ದೇವರ ಸನ್ನಿಧಿಯಲ್ಲಿ ವಿಚಾರಿಸಿದಾಗ ಯೆಹೋವನು ಅವನಿಗೆ, “ನೀನು ಅವರನ್ನು ಬೆನ್ನಟ್ಟಬೇಡ, ಅವರ ಎದುರುಗಡೆಯಿಂದ ದಾಳಿಮಾಡದೆ ಹಿಂತಿರುಗಿ ಹೋಗಿ ಬಾಕಾಮರಗಳಿರುವ ಕಡೆಯಿಂದ ಅವರ ಮೇಲೆ ದಾಳಿಮಾಡು.
15 ಬಾಕಾಮರಗಳ ತುದಿಗಳಲ್ಲಿ ನಡೆದುಬರುವ ಶಬ್ದವನ್ನು ನೀನು ಕೇಳಿದಾಗಲೇ, ದೇವರು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಟರೆಂದು ತಿಳಿದುಕೊಂಡು ಯುದ್ಧಕ್ಕೆ ಹೊರಡು,” ಎಂದರು.
೧೫ಬಾಕಾಮರಗಳ ತುದಿಯಲ್ಲಿ ಹೆಜ್ಜೆಗಳ ಶಬ್ದವು ಕೇಳಿಸುವಾಗಲೇ ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನನ್ನು ಮುನ್ನಡೆಸುತ್ತಿದ್ದಾನೆ ಎಂದು ತಿಳಿದುಕೊಂಡು ಯುದ್ಧಕ್ಕೆ ಹೊರಡು” ಎಂದನು.
16 ಆಗ ದಾವೀದನು, ದೇವರು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ, ಅವನು ಗಿಬ್ಯೋನಿನಿಂದ ಗೆಜೆರಿನವರೆಗೆ ಫಿಲಿಷ್ಟಿಯರ ದಂಡನ್ನು ಸಂಹರಿಸಿದರು.
೧೬ದಾವೀದನು ದೇವರ ಆಜ್ಞಾನುಸಾರವಾಗಿ ಮಾಡಿದನು. ಇಸ್ರಾಯೇಲರು ಫಿಲಿಷ್ಟಿಯರ ಸೈನ್ಯವನ್ನು ಗಿಬ್ಯೋನಿನಿಂದ ಗೆಜೆರಿನ ವರೆಗೂ ಸಂಹರಿಸುತ್ತಾ ಹೋದರು.
17 ದಾವೀದನ ಕೀರ್ತಿಯು ಸಮಸ್ತ ದೇಶಗಳಿಗೆ ಹರಡಿತು. ಯೆಹೋವ ದೇವರು ಅವನ ಭಯವನ್ನು ಸಮಸ್ತ ಜನಾಂಗಗಳ ಮೇಲೆ ಬರಮಾಡಿದರು.
೧೭ದಾವೀದನ ಕೀರ್ತಿಯು ಎಲ್ಲಾ ದೇಶಗಳಲ್ಲಿ ಹಬ್ಬಿತು. ಯೆಹೋವನು ಅವನಿಗೆ ಎಲ್ಲಾ ಜನಾಂಗಗಳೂ ಹೆದರಿ ನಡೆಯುವಂತೆ ಮಾಡಿದನು.