< ರೋಮಾಪುರದವರಿಗೆ 3 >
1 ೧ ಹಾಗಾದರೆ ಯೆಹೂದ್ಯರ ವೈಶಿಷ್ಟ್ಯವೇನು? ಸುನ್ನತಿ ಮಾಡಿಸಿಕೊಂಡದರಿಂದ ಲಾಭವೇನು?
2 ೨ ಎಲ್ಲಾ ವಿಷಯಗಳನ್ನು ಕುರಿತು ಹೇಳಲು ಬಹಳ ಉಂಟು. ಮೊದಲನೇಯದಾಗಿ ದೈವೋಕ್ತಿಗಳು ಅವರ ವಶಕ್ಕೆ ಸಮರ್ಪಿಸಿ ಒಪ್ಪಿಸಲ್ಪಟ್ಟಿವೆ.
3 ೩ ಅವರಲ್ಲಿ ಕೆಲವರಿಗೆ ನಂಬಿಕೆ ಇರಲಿಲ್ಲವಾದರೂ? ಅವರ ಅಪನಂಬಿಕೆಯಿಂದ ದೇವರು ನಂಬಿಕೆಗೆ ತಪ್ಪುವವನಾದಾನೋ? ಎಂದಿಗೂ ಇಲ್ಲ.
4 ೪ ಬದಲಾಗಿ, “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.” ಎಂದು ಗ್ರಂಥಗಳಲ್ಲಿ ಬರೆದಿರುವ ಹಾಗೆಯೇ, ಎಲ್ಲಾ ಮಾನವರು ಸುಳ್ಳುಗಾರರಾದರೂ, ದೇವರು ಮಾತ್ರ ಸತ್ಯವಂತನೇ.
5 ೫ ಆದರೆ ನಮ್ಮ ಅನ್ಯಾಯದ ನಡವಳಿಕೆಯಿಂದ ದೇವರು ನೀತಿವಂತನೆಂದು ಪ್ರಸಿದ್ಧಿಗೆ ಬರುವುದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ. ಈ ಮಾತನ್ನು ಮನುಷ್ಯನ ರೀತಿಯಲ್ಲಿ ಆಡುತ್ತಿದ್ದೇನೆ.
6 ೬ ದೇವರು ಅನ್ಯಾಯಗಾರನಾಗಿದ್ದರೆ ಲೋಕಕ್ಕೆ ನ್ಯಾಯ ತೀರ್ಪಾಗುವುದಾದರೂ ಹೇಗೆ?
7 ೭ ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾಗುವುದಾದರೆ ಇನ್ನು ನನ್ನನ್ನು ಪಾಪಿಯೆಂದು ಪರಿಗಣಿಸುವುದು ಯಾಕೆ?
8 ೮ “ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು.
9 ೯ ಹಾಗಾದರೆ ಏನು ಹೇಳಬೇಕು? ನಾವು ಅನ್ಯರಿಗಿಂತ ಶ್ರೇಷ್ಠರೋ? ಎಷ್ಟು ಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಗಾಗಿ ಅಪರಾಧಿಗಳಾಗಿದ್ದಾರೆಂದು ಮೊದಲೇ ತೋರಿಸಿಕೊಟ್ಟಿದ್ದೇವಲ್ಲಾ.
10 ೧೦ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;
11 ೧೧ ತಿಳಿವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ.
12 ೧೨ ಎಲ್ಲರೂ ದಾರಿತಪ್ಪಿ ನಡೆಯುತ್ತಾ, ಕೆಟ್ಟುಹೋಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.
13 ೧೩ ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ನಾಲಿಗೆಯಿಂದ ವಂಚನೆಯ ಮಾತುಗಳನ್ನಾಡುತ್ತಾರೆ. ಅವರ ತುಟಿಯ ಹಿಂದೆ ಹಾವಿನ ವಿಷವಿದೆ.
14 ೧೪ ಅವರ ಬಾಯಿ ಶಾಪದಿಂದಲೂ ಕ್ರೋಧದ ಮಾತುಗಳಿಂದಲೂ, ತುಂಬಿದೆ.
15 ೧೫ ಅವರ ಕಾಲುಗಳು ರಕ್ತವನ್ನು ಸುರಿಸಲು ಆತುರಪಡುತ್ತವೆ.
16 ೧೬ ಅವರು ಹೋದ ದಾರಿಗಳಲ್ಲಿ ನಾಶಸಂಕಟಗಳು ಪೀಡೆಗಳು ಉಂಟಾಗುತ್ತವೆ.
17 ೧೭ ಸಮಾಧಾನದ ಮಾರ್ಗವನ್ನೇ ಅರಿಯರು.
18 ೧೮ ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ” ಎಂದು ಹೀಗೆ ಬರೆದಿದೆಯಲ್ಲಾ.
19 ೧೯ ಧರ್ಮಶಾಸ್ತ್ರದ ನುಡಿಗಳೆಲ್ಲವು ಆ ಶಾಸ್ತ್ರಕ್ಕೆ ಒಳಗಾದವರಿಗೆ ಹೇಳಿವೆಯೆಂದು ಬಲ್ಲೆವಷ್ಟೆ. ಹೀಗೆ ಎಲ್ಲರ ಬಾಯಿ ಕಟ್ಟಿಹೋಗುವುದು. ಲೋಕವೆಲ್ಲಾ ದೇವರ ಮುಂದೆ ಅಪರಾಧಿಯಾಗಿ ನಿಲ್ಲುವುದು.
20 ೨೦ ಯಾಕೆಂದರೆ ಯಾವ ಮನುಷ್ಯನಾದರೂ ನೇಮನಿಷ್ಠೆಗಳನ್ನು ಅನುಸರಿಸಿ ದೇವರ ಸನ್ನಿಧಿಯಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. ಧರ್ಮಶಾಸ್ತ್ರದಿಂದ ಪಾಪದ ಅರಿವು ಉಂಟಾಗುತ್ತದಷ್ಟೆ.
21 ೨೧ ಈಗಲಾದರೋ ದೇವರಿಂದ ದೊರಕುವ ನೀತಿಯು ನಂಬುವವರೆಲ್ಲರಿಗೆ ಧರ್ಮಶಾಸ್ತ್ರ ನಿಯಮಗಳಿಲ್ಲದೆ ಪ್ರಕಟವಾಗಿದೆ. ಅದು ಮೋಶೆಯ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತವೆ.
22 ೨೨ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರಿಗೆ ದೇವರ ನೀತಿಯು ಉಂಟಾಗುತ್ತದೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ.
23 ೨೩ ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೇ ಹೋಗಿದ್ದಾರೆ.
24 ೨೪ ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಅದು ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವುದು.
25 ೨೫ ಪೂರ್ವ ಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ನಂಬಿಕೆಯುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತನನ್ನು ರಕ್ತಧಾರೆ ಎರೆಯುವಂತೆ ಮಾಡಿದನು.
26 ೨೬ ಯೇಸುಕ್ರಿಸ್ತನಲ್ಲಿ ನಂಬಿಕೆ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯು ತಾನು ಸತ್ಯಸ್ವರೂಪನೂ, ನೀತಿವಂತನೂ ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಹೀಗೆ ಮಾಡಿದರು.
27 ೨೭ ಹಾಗಾದರೆ ನಮ್ಮನ್ನು ನಾವು ಹೊಗಳಿಕೊಳ್ಳುವುದಕ್ಕೆ ಅವಕಾಶವೆಲ್ಲಿ? ಅದು ಇಲ್ಲದೆ ಹೋಯಿತು. ಯಾವ ಆಧಾರದಿಂದ? ಕರ್ಮಮಾರ್ಗವನ್ನು ಅನುಸರಿಸುವುದರಿಂದಲೋ? ಅಲ್ಲ. ನಂಬಿಕೆಮಾರ್ಗವನ್ನು ಅನುಸರಿಸುವುದರಿಂದಲೇ.
28 ೨೮ ಧರ್ಮಶಾಸ್ತ್ರ ಸಂಬಂಧವಾದ ಕರ್ಮಗಳಿಲ್ಲದೆ ನಂಬಿಕೆಯಿಂದಲೇ ಮನುಷ್ಯರು ನೀತಿವಂತರೆಂದು ನಿರ್ಣಯಿಸಲ್ಪಡುವರೆಂಬುದಾಗಿ ನಿಶ್ಚಯಮಾಡಿಕೊಂಡಿದ್ದೇವಲ್ಲಾ
29 ೨೯ ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಹೌದು ದೇವರು ಒಬ್ಬನೇ ಹೀಗಿರಲಾಗಿ ಆತನು ಅನ್ಯಜನರಿಗೂ ಸಹ ದೇವರಾಗಿದ್ದಾನೆ.
30 ೩೦ ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕೆ ಅವರ ನಂಬಿಕೆಯೇ ಆಧಾರ. ಹಾಗೆಯೇ ಸುನ್ನತಿಯಿಲ್ಲದವರನ್ನು ನಿರ್ಣಯಿಸುವುದಕ್ಕೂ ನಂಬಿಕೆಯೇ ಕಾರಣ.
31 ೩೧ ಹಾಗಾದರೆ ನಂಬಿಕೆಯಿಂದ ಧರ್ಮಶಾಸ್ತ್ರವನ್ನು ತೆಗೆದು ಹಾಕುತ್ತೇವೋ? ಎಂದಿಗೂ ಇಲ್ಲ. ಧರ್ಮಶಾಸ್ತ್ರವನ್ನು ಸ್ಥಿರಪಡಿಸುತ್ತೇವಷ್ಟೇ.