< ಕೀರ್ತನೆಗಳು 92 >

1 ಕೀರ್ತನೆ; ಸಬ್ಬತ್ ದಿನದ ಗೀತೆ. ಯೆಹೋವನೇ, ನಿನ್ನನ್ನು ಕೊಂಡಾಡುವುದೂ, ಪರಾತ್ಪರನಾದ ದೇವರೇ, ನಿನ್ನ ನಾಮವನ್ನು ಸಂಕೀರ್ತಿಸುವುದೂ ಯುಕ್ತವಾಗಿದೆ.
ಕೀರ್ತನೆ. ಸಬ್ಬತ್ ದಿನದ ಗೀತೆ. ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವುದು ಒಳ್ಳೆಯದು. ಮಹೋನ್ನತರೇ, ನಿಮ್ಮ ಹೆಸರನ್ನು ಕೀರ್ತಿಸುವುದು ಒಳ್ಳೆಯದು.
2 ವೀಣೆ, ಸ್ವರಮಂಡಲಗಳಿಂದಲೂ, ಕಿನ್ನರಿಯ ಘನಸ್ವರದಿಂದಲೂ,
ಬೆಳಿಗ್ಗೆ ನಿಮ್ಮ ಪ್ರೀತಿ ಕರುಣೆಯನ್ನೂ ಪ್ರತಿ ರಾತ್ರಿ ನಿಮ್ಮ ನಂಬಿಕೆಯನ್ನೂ ಸಾರುವುದು ಒಳ್ಳೆಯದು.
3 ಹೊತ್ತಾರೆಯಲ್ಲಿ ನಿನ್ನ ಪ್ರೇಮವನ್ನೂ, ರಾತ್ರಿಯಲ್ಲಿ ನಿನ್ನ ಸತ್ಯವನ್ನೂ ವರ್ಣಿಸುವುದು ಉಚಿತವಾಗಿದೆ.
ಹತ್ತು ತಂತಿವಾದ್ಯದಿಂದಲೂ ವೀಣೆಯಿಂದಲೂ ಕಿನ್ನರಿಯ ಘನಸ್ವರದಿಂದಲೂ ಬಾರಿಸುವುದು ಒಳ್ಳೆಯದು.
4 ಯೆಹೋವನೇ, ನಿನ್ನ ಕ್ರಿಯೆಗಳಿಂದ ನನ್ನನ್ನು ಸಂತೋಷಪಡಿಸಿದ್ದಿ; ನಿನ್ನ ಕೆಲಸಗಳಿಗಾಗಿ ಉತ್ಸಾಹಧ್ವನಿ ಮಾಡುತ್ತೇನೆ.
ಯೆಹೋವ ದೇವರೇ, ನಿಮ್ಮ ಕ್ರಿಯೆಯಿಂದ ನನ್ನನ್ನು ಸಂತೋಷಪಡಿಸಿದ್ದೀರಿ. ನಿಮ್ಮ ಕೈಕೆಲಸಗಳಲ್ಲಿ ಜಯಧ್ವನಿಗೈಯುತ್ತೇನೆ.
5 ಯೆಹೋವನೇ, ನಿನ್ನ ಕೃತ್ಯಗಳು ಎಷ್ಟೋ ಶ್ರೇಷ್ಠವಾಗಿವೆ; ನಿನ್ನ ಆಲೋಚನೆಗಳು ಅಶೋಧ್ಯವಾಗಿವೆ.
ಯೆಹೋವ ದೇವರೇ, ನಿಮ್ಮ ಕೃತ್ಯಗಳು ಎಷ್ಟೋ ಮಹತ್ತಾದದ್ದು. ನಿಮ್ಮ ಯೋಚನೆಗಳು ಬಹು ಆಳವಾಗಿವೆ.
6 ಪಶುಪ್ರಾಯನು ಅರಿಯನು; ಮೂರ್ಖನು ಇದನ್ನು ಗ್ರಹಿಸಿಕೊಳ್ಳನು.
ಇದನ್ನು ಬುದ್ಧಿಹೀನ ಮನುಷ್ಯನು ತಿಳಿದುಕೊಳ್ಳನು. ಮೂರ್ಖನು ಇದನ್ನು ಗ್ರಹಿಸನು.
7 ದುಷ್ಟರು ಹುಲ್ಲಿನಂತೆ ಬೆಳೆಯುವುದೂ, ಕೆಡುಕರು ಹೂವಿನಂತೆ ಮೆರೆಯುವುದೂ ತೀರಾ ಹಾಳಾಗುವುದಕ್ಕಾಗಿಯೇ.
ದುಷ್ಟರು ಹುಲ್ಲಿನ ಹಾಗೆ ಚಿಗುರಿದರೂ ಅಕ್ರಮ ಮಾಡುವವರೆಲ್ಲರು ವೃದ್ಧಿ ಆದರೂ ಅವರು ನಿತ್ಯ ದಂಡನೆಗೆ ಗುರಿಯಾಗುವರು.
8 ಯೆಹೋವನೇ, ನೀನಾದರೋ ಸದಾ ಉನ್ನತಸ್ಥಾನದಲ್ಲಿರುತ್ತೀ.
ಯೆಹೋವ ದೇವರೇ, ನೀವಾದರೋ ಎಂದೆಂದಿಗೂ ಉನ್ನತರಾಗಿದ್ದೀರಿ.
9 ಯೆಹೋವನೇ, ಇಗೋ ನಿನ್ನ ಶತ್ರುಗಳು! ಅವರೆಲ್ಲಾ ನಾಶವಾಗುತ್ತಿದ್ದಾರೆ. ಅಧರ್ಮಿಗಳೆಲ್ಲಾ ಚದರಿಹೋಗುವರು.
ನಿಜವಾಗಿಯೂ ನಿಮ್ಮ ಶತ್ರುಗಳು ಯೆಹೋವ ದೇವರೇ, ನಿಮ್ಮ ಶತ್ರುಗಳು ನಾಶವಾಗುವರು. ಕೇಡು ಮಾಡುವವರೆಲ್ಲರು ಚದರಿಹೋಗುವರು.
10 ೧೦ ಆದರೆ ನನ್ನ ಕೊಂಬನ್ನು ಕಾಡುಕೋಣದ ಕೊಂಬಿನಂತೆ ಎತ್ತಿದ್ದಿ; ಚೈತನ್ಯತೈಲದಿಂದ ನನ್ನನ್ನು ಅಭಿಷೇಕಿಸಿದ್ದಿ.
ಆದರೆ ನೀವು ನನ್ನ ಬಲವನ್ನು ಕಾಡುಕೋಣದ ಕೊಂಬಿನ ಹಾಗೆ ಬಲಪಡಿಸುವಿರಿ. ನಾನು ನೂತನ ತೈಲದಿಂದ ಅಭಿಷಿಕ್ತನಾಗುವೆನು.
11 ೧೧ ನನ್ನ ಶತ್ರುಗಳಿಗುಂಟಾದ ದುರ್ಗತಿಯನ್ನು ಕಣ್ಣಾರೆ ಕಂಡಿದ್ದೇನೆ; ನನಗೆ ವಿರುದ್ಧವಾಗಿ ಎದ್ದವರ ವಿಪತ್ತನ್ನು ಕಿವಿಯಾರೆ ಕೇಳಿದ್ದೇನೆ.
ನನ್ನ ಕಣ್ಣು ನನ್ನ ವಿರೋಧಿಗಳ ಸೋಲನ್ನು ದೃಷ್ಟಿಸುವುದು. ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳ ವಿಪತ್ತನ್ನು ಕುರಿತು ನಾನು ಕೇಳಿಸಿಕೊಳ್ಳುವೆ.
12 ೧೨ ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು; ಲೆಬನೋನಿನ ದೇವದಾರು ವೃಕ್ಷದ ಹಾಗೆ ವೃದ್ಧಿಯಾಗುವರು.
ನೀತಿವಂತರು ಖರ್ಜೂರ ಮರದ ಹಾಗೆ ವೃದ್ಧಿಯಾಗುವರು. ಅವರು ಲೆಬನೋನಿನಲ್ಲಿರುವ ದೇವದಾರಿನ ಹಾಗೆ ಬೆಳೆಯುವರು.
13 ೧೩ ಯೆಹೋವನ ಆಲಯದಲ್ಲಿ ಸಸಿಗಳಂತೆ ನೆಡಲ್ಪಟ್ಟವರು, ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವರು.
ಅವರು ಯೆಹೋವ ದೇವರ ಆಲಯದಲ್ಲಿ ನೆಟ್ಟ ಸಸಿಗಳಂತಿರುವರು. ನಮ್ಮ ದೇವರ ಅಂಗಳಗಳಲ್ಲಿ ಅವರು ವೃದ್ಧಿ ಆಗುವರು.
14 ೧೪ ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು.
ಮುದಿಪ್ರಾಯದಲ್ಲಿಯೂ ಫಲ ಕೊಡುವರು. ಅವರು ಹಸಿರಾಗಿ ಶೋಭಿಸುವರು.
15 ೧೫ ಹೀಗೆ ಅವರು ಯೆಹೋವನ ಸತ್ಯಸಂಧತೆಗೆ ದೃಷ್ಟಾಂತರಾಗಿರುವರು. ಆತನೇ ನನ್ನ ಬಂಡೆಯು; ಆತನು ನಿರ್ವಂಚಕನು.
“ಯೆಹೋವ ದೇವರು ಯಥಾರ್ಥವಂತರೂ ನನ್ನ ಬಂಡೆಯೂ ಆಗಿದ್ದಾರೆ. ಅವರಲ್ಲಿ ಅನೀತಿ ಇರುವುದಿಲ್ಲ,” ಎಂದು ನೀತಿವಂತರು ಘೋಷಿಸುವರು.

< ಕೀರ್ತನೆಗಳು 92 >