< ಕೀರ್ತನೆಗಳು 9 >
1 ೧ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮೂತ್ಲಬ್ಬೇನೆಂಬ ರಾಗ; ದಾವೀದನ ಕೀರ್ತನೆ. ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಪುತ್ರನ ಮರಣದ” ರಾಗ. ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಾನು ನಿಮ್ಮನ್ನು ಸ್ತುತಿಸುವೆನು; ನಿಮ್ಮ ಅದ್ಭುತ ಕಾರ್ಯಗಳನ್ನೆಲ್ಲಾ ನಾನು ವರ್ಣಿಸುವೆನು.
2 ೨ ಪರಾತ್ಪರನಾದ ದೇವರೇ, ನಾನು ನಿನ್ನಲ್ಲಿ ಸಂತೋಷಿಸಿ ಉತ್ಸಾಹಗೊಳ್ಳುವೆನು; ನಿನ್ನ ಹೆಸರನ್ನು ಕೀರ್ತಿಸುವೆನು.
ನಾನು ನಿಮ್ಮಲ್ಲಿ ಆನಂದಿಸಿ ಉಲ್ಲಾಸಪಡುವೆನು; ಮಹೋನ್ನತರೇ, ನಾನು ನಿಮ್ಮ ಹೆಸರನ್ನು ಕೊಂಡಾಡಿ ಹಾಡುವೆನು.
3 ೩ ನನ್ನ ಹಗೆಗಳು ನಿನ್ನ ಎದುರಿನಿಂದ ಹಿಂದಿರುಗಿ ಎಡವಿಬಿದ್ದು ಹಾಳಾದರಲ್ಲಾ.
ನನ್ನ ಶತ್ರುಗಳು ಹಿಂದಿರುಗಿ ಓಡುವರು; ಅವರು ನಿಮ್ಮ ಮುಂದೆ ಎಡವಿಬಿದ್ದು ನಾಶವಾಗುವರು.
4 ೪ ನನ್ನ ವ್ಯಾಜ್ಯದಲ್ಲಿ ನೀನು ನ್ಯಾಯವನ್ನು ಸ್ಥಾಪಿಸಿದಿ; ನೀನು ಆಸನಾರೂಢನಾಗಿ ನೀತಿಯಿಂದ ನ್ಯಾಯವನ್ನು ನಿರ್ಣಯಿಸುತ್ತಿ.
ನೀವು ನನ್ನ ನ್ಯಾಯವನ್ನೂ ವ್ಯಾಜ್ಯವನ್ನೂ ತೀರಿಸಲು ನೀತಿಯುಳ್ಳ ನ್ಯಾಯಾಧಿಪತಿಯಾಗಿ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೀರಿ.
5 ೫ ನೀನು ಜನಾಂಗಗಳನ್ನು ಹೆದರಿಸಿ ದುಷ್ಟರನ್ನು ನಾಶ ಮಾಡಿದ್ದಿ, ಅವರ ಹೆಸರನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದಿ.
ರಾಷ್ಟ್ರಗಳನ್ನು ಖಂಡಿಸಿ ದುಷ್ಟರನ್ನು ದಂಡಿಸಿದ್ದೀರಿ; ಅವರ ಹೆಸರನ್ನು ಯುಗಯುಗಾಂತರಗಳವರೆಗೂ ಅಳಿಸಿಬಿಟ್ಟಿದ್ದೀರಿ.
6 ೬ ಶತ್ರುಗಳು ನಿಶ್ಶೇಷವಾದರು; ನೀನು ಕೆಡವಿದ ಅವರ ಪಟ್ಟಣಗಳು ಸಂಪೂರ್ಣವಾಗಿ ಹಾಳಾದವು. ಅವರ ಸ್ಮರಣೆಯೇ ಇಲ್ಲವಾಯಿತು.
ವೈರಿಯನ್ನು ವಿನಾಶವು ನಿರಂತರವಾಗಿ ಬೆನ್ನಟ್ಟಿದೆ, ನೀವು ಅವರ ಪಟ್ಟಣಗಳನ್ನು ಕೆಡವಿದ್ದೀರಿ; ಅವರ ಸ್ಮರಣೆಯು ಅವರೊಂದಿಗೇ ನಾಶವಾಯಿತು.
7 ೭ ಯೆಹೋವನಾದರೋ ಯಾವಾಗಲೂ ನೆಲೆಗೊಂಡಿದ್ದು, ನ್ಯಾಯವಿಚಾರಿಸುವುದಕ್ಕಾಗಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ.
ಯೆಹೋವ ದೇವರು ಸದಾ ಆಳುವವರು; ಅವರು ನ್ಯಾಯಕ್ಕಾಗಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ.
8 ೮ ಆತನೇ ನೀತಿಗನುಸಾರವಾಗಿ ಲೋಕಕ್ಕೆ ನ್ಯಾಯ ತೀರಿಸುವವನು; ಆತನು ಜನಾಂಗಗಳಿಗೆ ಸತ್ಯಕ್ಕನುಸಾರವಾಗಿ ತೀರ್ಪುಕೊಡುವನು.
ಅವರು ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವರು; ಪ್ರಜೆಗಳಿಗೆ ಯಥಾರ್ಥವಾದ ತೀರ್ಪು ನೀಡುವರು.
9 ೯ ಯೆಹೋವನು ಕುಗ್ಗಿದವರಿಗೆ ಆಶ್ರಯವೂ, ಆಪತ್ಕಾಲದಲ್ಲಿ ದುರ್ಗವೂ ಆಗಿರುವನು.
ಯೆಹೋವ ದೇವರು ಕುಗ್ಗಿದವರಿಗೆ ಆಶ್ರಯವಾಗಿರುವರು, ಇಕ್ಕಟ್ಟಿನ ದಿವಸಗಳಲ್ಲಿ ಭದ್ರಕೋಟೆಯಾಗಿರುವರು.
10 ೧೦ ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಏಕೆಂದರೆ ನಿನ್ನ ಮೊರೆಹೋಗುವವರನ್ನು ನೀನು ಕೈಬಿಡುವವನಲ್ಲ.
ನಿಮ್ಮ ಹೆಸರನ್ನು ತಿಳಿದವರು ನಿಮ್ಮಲ್ಲಿ ಭರವಸೆ ಇಡುವರು, ಏಕೆಂದರೆ ಯೆಹೋವ ದೇವರೇ, ನಿಮ್ಮನ್ನು ಹುಡುಕುವವರನ್ನು ನೀವು ಎಂದಿಗೂ ತೊರೆದುಬಿಡುವುದಿಲ್ಲ.
11 ೧೧ ಚೀಯೋನಿನಲ್ಲಿ ವಾಸಿಸುವ ಯೆಹೋವನನ್ನು ಕೀರ್ತಿಸಿರಿ; ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
ಚೀಯೋನಿನಲ್ಲಿ ವಾಸಿಸುವ ಯೆಹೋವ ದೇವರಿಗೆ ಸ್ತುತಿಹಾಡಿರಿ; ಅವರ ಕ್ರಿಯೆಗಳನ್ನು ರಾಷ್ಟ್ರಗಳಲ್ಲಿ ಸಾರಿ ಹೇಳಿರಿ.
12 ೧೨ ಆತನು ಕುಗ್ಗಿದವರ ಮೊರೆಯನ್ನು ಮರೆಯದೆ ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವವನಾಗಿ ಅವರನ್ನು ಜ್ಞಾಪಕಮಾಡಿಕೊಳ್ಳುವನು.
ಅವರು ಪ್ರಾಣಹತ್ಯೆ ಮಾಡುವವರನ್ನು ಮುಯ್ಯಿತೀರಿಸಲು ಜ್ಞಾಪಕಮಾಡಿಕೊಳ್ಳುವರು; ಬಾಧೆಗೆ ಒಳಗಾಗಿರುವ ದೀನರ ಕೂಗನ್ನು ಅವರು ಅಲಕ್ಷ್ಯಮಾಡುವುದಿಲ್ಲ.
13 ೧೩ ಯೆಹೋವನೇ, ಮರಣದ್ವಾರದೊಳಗೆ ಸೇರದಂತೆ; ನನ್ನನ್ನು ಉದ್ಧರಿಸುವವನೇ, ಕನಿಕರಿಸು; ಹಗೆಗಳಿಂದ ನನಗುಂಟಾದ ಬಾಧೆಯನ್ನು ಲಕ್ಷ್ಯಕ್ಕೆ ತಂದುಕೋ.
ಯೆಹೋವ ದೇವರೇ, ನನ್ನ ವೈರಿಗಳು ನನ್ನನ್ನು ಹಿಂಸಿಸುವುದನ್ನು ನೋಡಿರಿ. ನನ್ನನ್ನು ಕರುಣಿಸಿ, ಮರಣ ದ್ವಾರದಿಂದ ನನ್ನನ್ನು ಮೇಲಕ್ಕೆತ್ತಿರಿ.
14 ೧೪ ಆಗ ನಾನು ನಿನ್ನ ಸ್ತೋತ್ರವನ್ನು ಪ್ರಸಿದ್ಧಪಡಿಸುವೆನು; ನಿನ್ನಿಂದಾದ ರಕ್ಷಣೆಗಾಗಿ ಚೀಯೋನೆಂಬ ಕುಮಾರಿಯ ಬಾಗಿಲುಗಳಲ್ಲಿ ಹರ್ಷಿಸುವೆನು.
ಆಗ ಚೀಯೋನೆಂಬ ನಗರ ದ್ವಾರಗಳಲ್ಲಿ ನಿಮ್ಮ ಸ್ತುತಿಯನ್ನು ಸಾರುವೆನು. ನಿಮ್ಮ ರಕ್ಷಣೆಯಲ್ಲಿ ಆನಂದಿಸುವೆನು.
15 ೧೫ ಜನಾಂಗಗಳವರು ತಾವು ಮಾಡಿದ ಕುಣಿಯಲ್ಲಿ ತಾವೇ ಬಿದ್ದು ಹೋದರು; ಅವರು ಹಾಸಿದ ಬಲೆಯಲ್ಲಿ ಅವರ ಕಾಲೇ ಸಿಕ್ಕಿಕೊಂಡಿತು.
ರಾಷ್ಟ್ರಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲೇ ಅವರ ಕಾಲುಗಳು ಸಿಕ್ಕಿಕೊಂಡಿವೆ.
16 ೧೬ ಯೆಹೋವನು ನ್ಯಾಯತೀರಿಸುವವನಾಗಿ ತನ್ನನ್ನು ಪ್ರಕಟಿಸಿಕೊಂಡಿದ್ದಾನೆ; ದುಷ್ಟರು ತಾವೇ ಕಲ್ಪಿಸಿದ ಕುಯುಕ್ತಿಯಲ್ಲಿ ಸಿಕ್ಕಿಕೊಂಡಿದ್ದಾರಲ್ಲಾ. ಹಿಗ್ಗಾಯೋನ್ (ಸೆಲಾ)
ಯೆಹೋವ ದೇವರು ತಮ್ಮ ನ್ಯಾಯಕೃತ್ಯಗಳಲ್ಲಿ ಪ್ರಸಿದ್ಧರಾಗಿದ್ದಾರೆ; ದುಷ್ಟರು ತಮ್ಮ ಕೈಕೆಲಸದಲ್ಲಿ ಸಿಕ್ಕಿಕೊಂಡಿದ್ದಾರೆ.
17 ೧೭ ದುಷ್ಟರು ಅಂದರೆ ದೇವರನ್ನು ಅಲಕ್ಷ್ಯಮಾಡುವ ಜನಾಂಗಗಳವರೆಲ್ಲಾ ಪಾತಾಳಕ್ಕೆ ಇಳಿದುಹೋಗುವರು. (Sheol )
ದುಷ್ಟರು ಪಾತಾಳಕ್ಕೆ ತಿರುಗುವರು, ದೇವರನ್ನು ಮರೆಯುವ ರಾಷ್ಟ್ರಗಳ ಅಂತ್ಯವೂ ಹಾಗೇ ಇರುವುದು. (Sheol )
18 ೧೮ ದಿಕ್ಕಿಲ್ಲದವರು ಕಡೆಯವರೆಗೆ ಮರೆಯಲ್ಪಡುವುದಿಲ್ಲ; ದೀನರ ನಿರೀಕ್ಷೆಯು ಕೆಡುವುದೇ ಇಲ್ಲ.
ಆದರೆ ದೇವರು ಬಡವರನ್ನು ಎಂದೆಂದಿಗೂ ಮರೆಯುವುದಿಲ್ಲ; ಕುಗ್ಗಿದವರ ನಿರೀಕ್ಷೆ ಎಂದೆಂದಿಗೂ ನಾಶವಾಗುವುದಿಲ್ಲ.
19 ೧೯ ಯೆಹೋವನೇ, ಏಳು; ಮನುಷ್ಯಮಾತ್ರದವರು ಬಲಗೊಳ್ಳಬಾರದು. ಜನಾಂಗಗಳಿಗೆ ನಿನ್ನ ಸನ್ನಿಧಿಯಲ್ಲಿ ತೀರ್ಪು ಉಂಟಾಗಲಿ.
ಯೆಹೋವ ದೇವರೇ ಎದ್ದೇಳಿರಿ, ಮನುಷ್ಯರು ನನ್ನ ಮೇಲೆ ವಿಜಯ ಸಾಧಿಸದಿರಲಿ; ರಾಷ್ಟ್ರಗಳಿಗೆ ನಿಮ್ಮ ಮುಂದೆಯೇ ನ್ಯಾಯತೀರ್ಪಾಗಲಿ.
20 ೨೦ ಯೆಹೋವನೇ, ಅವರಿಗೆ ಭಯವನ್ನು ಹುಟ್ಟಿಸು; ಜನಾಂಗಗಳು ತಾವು ಮನುಷ್ಯಮಾತ್ರದವರೆಂದು ತಿಳಿದುಕೊಳ್ಳಲಿ. (ಸೆಲಾ)
ಯೆಹೋವ ದೇವರೇ, ಅವರನ್ನು ಭಯದಲ್ಲಿರಿಸಿರಿ; ರಾಷ್ಟ್ರಗಳು ತಾವು ಮನುಷ್ಯರೇ ಎಂದು ತಿಳಿದುಕೊಳ್ಳಲಿ.