< ಕೀರ್ತನೆಗಳು 84 >

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಗಿತ್ತೀಯ ರಾಗದಿಂದ ಹಾಡತಕ್ಕದ್ದು; ಕೋರಹೀಯರ ಕೀರ್ತನೆ. ಸೇನಾಧೀಶ್ವರನಾದ ಯೆಹೋವನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ!
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಗಿತ್ತೀ ರಾಗದಿಂದ ಹಾಡತಕ್ಕದ್ದು. ಕೋರಹೀಯರ ಕೀರ್ತನೆ. ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ!
2 ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು, ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು. ಆದರೆ ಈಗ ಚೈತನ್ಯಸ್ವರೂಪನಾದ ದೇವರಿಗೆ ನನ್ನ ತನುಮನಗಳಿಂದ ಹರ್ಷಧ್ವನಿಮಾಡುತ್ತೇನೆ.
ಯೆಹೋವ ದೇವರ ಅಂಗಳಗಳಲ್ಲಿ ಸೇರಲು ನನ್ನ ಪ್ರಾಣವು ಬಯಸಿ ಕುಂದುತ್ತದೆ. ನನ್ನ ಹೃದಯವೂ, ನನ್ನ ಶರೀರವೂ ಜೀವವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ.
3 ಆಹಾ, ಸೇನಾಧೀಶ್ವರನಾದ ಯೆಹೋವ ದೇವರೇ, ನನ್ನ ಅರಸನೇ, ನಿನ್ನ ಯಜ್ಞವೇದಿಗಳ ಸಮೀಪದಲ್ಲಿಯೇ ಗುಬ್ಬಿಗೆ ಮನೆಯೂ, ಪಾರಿವಾಳಕ್ಕೆ ಮರಿಮಾಡುವ ಗೂಡೂ ದೊರಕಿತಲ್ಲಾ!
ಓ ಸೇನಾಧೀಶ್ವರ ಯೆಹೋವ ದೇವರೇ, ನನ್ನ ಅರಸರಾಗಿರುವವರೇ, ನನ್ನ ದೇವರೇ, ಗುಬ್ಬಿಯು ಮನೆಯನ್ನೂ, ಬಾನಕ್ಕಿಯು ತನ್ನ ಮರಿಗಳನ್ನಿಡುವ ಗೂಡನ್ನೂ ನಿಮ್ಮ ಬಲಿಪೀಠಗಳ ಬಳಿಯಲ್ಲಿ ದೊರಕಿತಲ್ಲಾ.
4 ನಿನ್ನ ಮಂದಿರದಲ್ಲಿ ವಾಸಿಸುವವರು ಧನ್ಯರು. ಅವರು ನಿತ್ಯವೂ ನಿನ್ನನ್ನು ಕೀರ್ತಿಸುತ್ತಾ ಇರುತ್ತಾರೆ. (ಸೆಲಾ)
ನಿಮ್ಮ ಆಲಯದಲ್ಲಿ ವಾಸವಾಗಿರುವವರು ಧನ್ಯರು; ನಿಮ್ಮನ್ನು ಅವರು ಯಾವಾಗಲೂ ಸ್ತುತಿಸುವರು.
5 ನಿನ್ನಲ್ಲೇ ಬಲವನ್ನು ಹೊಂದುವ ಮನುಷ್ಯರು ಧನ್ಯರು. ಅವರು ಯಾತ್ರಿಕರಾಗಿ,
ನಿಮ್ಮಲ್ಲಿ ಯಾರು ಬಲಹೊಂದಿರುವರೋ, ಯಾರು ಯಾತ್ರಿಗಳಾಗಿದ್ದಾರೋ ಅವರು ಧನ್ಯರು.
6 ಕಣ್ಣೀರಿನ ತಗ್ಗನ್ನು ದಾಟುವಾಗ, ಅಲ್ಲಿ ಒರತೆಗಳನ್ನು ತೋಡಿ ನೀರಿನ ಸ್ಥಳವಾಗ ಮಾಡುತ್ತಾರೆ. ಮುಂಗಾರು ಮಳೆಯು ಅದನ್ನು ಸಮೃದ್ಧಿಗೊಳಿಸುತ್ತದೆ.
ಬಾಕಾ ತಗ್ಗನ್ನು ದಾಟುವಾಗ ಅವರು ಅದನ್ನು ಬುಗ್ಗೆಯಾಗಿ ಮಾಡುತ್ತಾರೆ. ಮುಂಗಾರು ಮಳೆಯು ಕೊಳಗಳನ್ನು ತುಂಬುತ್ತದೆ.
7 ಅವರು ಹೆಚ್ಚು ಹೆಚ್ಚಾಗಿ ಬಲಹೊಂದಿ, ಚೀಯೋನ್ ಗಿರಿಯಲ್ಲಿ ದೇವರ ಸನ್ನಿಧಿಯನ್ನು ಸೇರಿ,
ಅವರು ಬಲದಿಂದ ಬಲಕ್ಕೆ ಸಾಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.
8 “ಸೇನಾಧೀಶ್ವರನಾದ ಯೆಹೋವ ದೇವರೇ, ನನ್ನ ಮೊರೆಯನ್ನು ಕೇಳು; ಯಾಕೋಬ್ಯರ ದೇವರೇ, ಕಿವಿಗೊಡು” ಅನ್ನುತ್ತಾರೆ. (ಸೆಲಾ)
ಸರ್ವಶಕ್ತರಾದ ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ. ಯಾಕೋಬನ ದೇವರೇ, ಕಿವಿಗೊಡಿರಿ.
9 ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು; ನಿನ್ನ ಅಭಿಷಿಕ್ತನ ಮುಖವನ್ನು ಕಟಾಕ್ಷಿಸು.
ನಮ್ಮ ಗುರಾಣಿಯಾಗಿರುವ ದೇವರೇ, ನೋಡಿರಿ. ನಿಮ್ಮ ಅಭಿಷಿಕ್ತನ ಮುಖವನ್ನು ದೃಷ್ಟಿಸಿ ನೋಡಿರಿ.
10 ೧೦ ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು, ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಹೊಸ್ತಿಲಲ್ಲಿ ಬಿದ್ದುಕೊಂಡಿರುವುದೇ ಲೇಸು.
ಏಕೆಂದರೆ ನಿಮ್ಮ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರ ದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಬಾಗಿಲು ಕಾಯುವವನಾಗಿರುವುದೇ ಲೇಸು.
11 ೧೧ ಯೆಹೋವ ದೇವರು ಸೂರ್ಯನೂ, ಗುರಾಣಿಯೂ ಆಗಿದ್ದಾನಲ್ಲಾ. ಯೆಹೋವನು ಕೃಪೆಯನ್ನೂ, ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನೋ?
ಯೆಹೋವ ದೇವರು ಸೂರ್ಯನಂತೆ ಪ್ರಕಾಶಿಸುವವವರೂ ಗುರಾಣಿಯೂ ಆಗಿದ್ದಾರೆ. ಯೆಹೋವ ದೇವರು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾರೆ. ನಿಷ್ಕಳಂಕವಾಗಿ ನಡೆದುಕೊಳ್ಳುವವರಿಗೆ ಅವರು ಒಳ್ಳೆಯದನ್ನು ಮಾಡಲು ಹಿಂದೆಗೆಯುವುದಿಲ್ಲ.
12 ೧೨ ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮಲ್ಲಿ ಭರವಸವಿಡುವವನೇ ಭಾಗ್ಯವಂತನು.

< ಕೀರ್ತನೆಗಳು 84 >