< ಕೀರ್ತನೆಗಳು 71 >
1 ೧ ಯೆಹೋವನೇ, ನಿನ್ನನ್ನು ಮೊರೆಹೊಕ್ಕಿದ್ದೇನೆ; ಎಂದಿಗೂ ಅವಮಾನಕ್ಕೆ ಗುರಿಮಾಡಬೇಡ.
ಯೆಹೋವ ದೇವರೇ, ನಿಮ್ಮಲ್ಲಿಯೇ ನಾನು ನನ್ನ ಭರವಸೆಯನ್ನಿಟ್ಟಿದ್ದೇನೆ. ನನಗೆ ಎಂದೂ ಆಶಾಭಂಗವಾಗದಿರಲಿ.
2 ೨ ನಿನ್ನ ನೀತಿಗನುಸಾರವಾಗಿ ನನ್ನನ್ನು ಬಿಡಿಸಿ ಪಾರುಮಾಡು; ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಉದ್ಧರಿಸು.
ನಿಮ್ಮ ನೀತಿಯಿಂದ ನನ್ನನ್ನು ಬಿಡಿಸಿ, ನನ್ನನ್ನು ಪಾರುಮಾಡಿರಿ. ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ, ನನ್ನನ್ನು ರಕ್ಷಿಸಿರಿ.
3 ೩ ನಾನು ಯಾವಾಗಲೂ ಮರೆಹೋಗುವ ಆಶ್ರಯಗಿರಿಯಾಗಿರು; ನನ್ನ ರಕ್ಷಣೆಗೋಸ್ಕರ ಆಜ್ಞಾಪಿಸಿದ್ದೀಯಲ್ಲವೇ. ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ.
ನಾನು ಯಾವಾಗಲೂ ಆಶ್ರಯಿಸಿಕೊಳ್ಳುವ ಬಂಡೆಯಾಗಿರಿ. ನನ್ನನ್ನು ರಕ್ಷಿಸುವುದಕ್ಕೆ ಆಜ್ಞಾಪಿಸಿರಿ. ನನ್ನ ಬಂಡೆಯೂ ನನ್ನ ಕೋಟೆಯೂ ನೀವೇ ಆಗಿದ್ದೀರಿ.
4 ೪ ದೇವರೇ, ನನ್ನನ್ನು ದುಷ್ಟನ ಕೈಯಿಂದಲೂ, ಅನ್ಯಾಯ ಮತ್ತು ಹಿಂಸಕನ ವಶದಿಂದಲೂ ತಪ್ಪಿಸು.
ನನ್ನ ದೇವರೇ, ದುಷ್ಟನ ಕೈಗೂ ಅನ್ಯಾಯ ಮಾಡುವವನ ಮತ್ತು ಕ್ರೂರನ ಕೈಗೂ ನನ್ನನ್ನು ಸಿಕ್ಕಿಸದಿರಿ.
5 ೫ ಕರ್ತನಾದ ಯೆಹೋವನೇ, ಬಾಲ್ಯದಿಂದ ನನ್ನ ನಿರೀಕ್ಷೆಯೂ, ಭರವಸವೂ ನೀನಲ್ಲವೋ?
ಸಾರ್ವಭೌಮ ಯೆಹೋವ ದೇವರೇ, ನೀವು ನನ್ನ ನಿರೀಕ್ಷೆ ಆಗಿದ್ದೀರಿ. ನನ್ನ ಯೌವನದಿಂದ ನನ್ನ ಭರವಸೆಯೂ ಆಗಿದ್ದೀರಿ.
6 ೬ ನಾನು ಹುಟ್ಟಿದಂದಿನಿಂದ ನಿನ್ನನ್ನೇ ಅವಲಂಬಿಸಿಕೊಂಡಿದ್ದೇನೆ. ತಾಯಿ ಹೆತ್ತಂದಿನಿಂದ ನನ್ನ ಉದ್ಧಾರಕನು ನೀನೇ. ನಾನು ಯಾವಾಗಲೂ ಹಿಗ್ಗುತ್ತಿರುವುದು ನಿನ್ನಲ್ಲಿಯೇ.
ಹುಟ್ಟಿನಿಂದ ನೀವೇ ನನ್ನ ಭರವಸೆ. ತಾಯಿಯ ಗರ್ಭದಿಂದ ನೀವೇ ನನ್ನನ್ನು ಹೊರಗೆ ತಂದಿದ್ದೀರಿ. ನಾನು ಯಾವಾಗಲೂ ನಿಮ್ಮನ್ನು ಸ್ತುತಿಸುತ್ತಿರುವೆನು.
7 ೭ ನನ್ನ ದುಸ್ಥಿತಿಯು ಅನೇಕರಿಗೆ ಒಂದು ಗುರುತಾಗಿದೆ; ಆದರೂ ನೀನು ನನಗೆ ಬಲವಾದ ಆಶ್ರಯಸ್ಥಾನವಾಗಿರುತ್ತೀ.
ಅನೇಕರು ನನ್ನ ಸ್ಥಿತಿಯನ್ನು ಕಂಡು ಆಶ್ಚರ್ಯ ಪಡುತ್ತಾರೆ. ಆದರೆ ನೀವು ನನ್ನ ಬಲವಾದ ಆಶ್ರಯವಾಗಿದ್ದೀರಿ.
8 ೮ ನನ್ನ ಬಾಯಲ್ಲಿ ನಿನ್ನ ಸ್ತೋತ್ರವಲ್ಲದೆ ಮತ್ತೊಂದಿಲ್ಲ; ದಿನವೆಲ್ಲಾ ನಿನ್ನ ಘನತೆಯನ್ನು ವರ್ಣಿಸುತ್ತಿರುವೆನು.
ನನ್ನ ಬಾಯಿ ನಿಮ್ಮ ಸ್ತೋತ್ರದಿಂದ ತುಂಬಿರಲಿ. ನಾನು ದಿನವೆಲ್ಲಾ ನಿಮ್ಮ ವೈಭವವನ್ನೇ ಸಾರುತ್ತಿರುವೆ.
9 ೯ ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ.
ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡಿರಿ. ನನ್ನ ಶಕ್ತಿಯು ಕುಂದುತ್ತಿರುವಾಗ ನನ್ನನ್ನು ಕೈಬಿಡಬೇಡಿರಿ.
10 ೧೦ ನನ್ನ ಜೀವಕ್ಕೆ ಹೊಂಚುಹಾಕುವ ವೈರಿಗಳು ಒಟ್ಟಾಗಿ ಆಲೋಚಿಸುತ್ತಾ,
ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಒಳಸಂಚು ಮಾಡುವವರು ಕೂಡಿಕೊಂಡು ದುರಾಲೋಚನೆ ಮಾಡುತ್ತಾರೆ.
11 ೧೧ “ದೇವರು ಅವನನ್ನು ಕೈಬಿಟ್ಟಿದ್ದಾನೆ; ಬೆನ್ನಟ್ಟಿ ಹಿಡಿಯಿರಿ; ಬಿಡಿಸುವವರು ಯಾರೂ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ.
ಅದೇನೆಂದರೆ, “ದೇವರು ಅವನನ್ನು ಕೈಬಿಟ್ಟಿದ್ದಾನೆ. ಅವನನ್ನು ಬೆನ್ನಟ್ಟಿ ಹಿಡಿಯಿರಿ, ಅವನನ್ನು ಬಿಡಿಸುವವರು ಯಾರೂ ಇಲ್ಲ,” ಎನ್ನುತ್ತಾರೆ.
12 ೧೨ ದೇವರೇ, ದೂರವಾಗಿರಬೇಡ. ನನ್ನ ದೇವರೇ, ಬೇಗ ಸಹಾಯಮಾಡು.
ದೇವರೇ, ನನ್ನಿಂದ ದೂರವಾಗಿರಬೇಡಿರಿ. ದೇವರೇ, ಬೇಗ ಬಂದು ನನಗೆ ಸಹಾಯಮಾಡಿರಿ.
13 ೧೩ ನನ್ನ ಪ್ರಾಣಕ್ಕೆ ಹೊಂಚು ಹಾಕುವವರು ಅಪಮಾನ ಹೊಂದಿ ನಾಶವಾಗಲಿ; ನನಗೆ ಕೇಡುಬಗೆಯುವವರನ್ನು ನಿಂದೆ, ಅಪಮಾನಗಳು ಕವಿಯಲಿ.
ನನ್ನನ್ನು ಆರೋಪಿಸುವವರು, ನಾಚಿಕೆಪಟ್ಟು ನಾಶವಾಗಲಿ. ನನ್ನ ಕೇಡಿಗಾಗಿ ಹುಡುಕುವವರನ್ನು ನಿಂದಾಪಮಾನಗಳು ಕವಿಯಲಿ.
14 ೧೪ ನಾನಂತೂ ನಿರೀಕ್ಷಿಸಿಕೊಂಡೇ ಇರುವೆನು; ನಿನ್ನನ್ನು ಅಧಿಕಾಧಿಕವಾಗಿ ಹೊಗಳುತ್ತಿರುವೆನು.
ಆದರೆ ನಾನು ಎಂದೆಂದೂ ನಿಮ್ಮನ್ನು ನಿರೀಕ್ಷಿಸುತ್ತಾ, ನಿಮ್ಮನ್ನು ಇನ್ನೂ ಹೆಚ್ಚೆಚ್ಚಾಗಿ ಸ್ತುತಿಸುವೆನು.
15 ೧೫ ನನ್ನ ಬಾಯಿ ನಿನ್ನ ನೀತಿಯನ್ನು, ರಕ್ಷಣೆಯನ್ನು ಹಗಲೆಲ್ಲಾ ವರ್ಣಿಸುತ್ತಿರುವುದು; ಆದರೂ ಅವುಗಳ ವಿವರಣೆ ನನಗೆ ಅಸಾಧ್ಯ.
ನನ್ನ ಬಾಯಿ ದಿನವೆಲ್ಲಾ ನಿಮ್ಮ ನೀತಿಯನ್ನೂ ನಿಮ್ಮ ರಕ್ಷಣೆಯನ್ನೂ ಪ್ರಕಟಿಸುವುದು. ಅವುಗಳನ್ನು ವಿವರಿಸಲು ನನಗೆ ತಿಳಿಯದು.
16 ೧೬ ಕರ್ತನಾದ ಯೆಹೋವನೇ, ನಾನು ನಿನ್ನ ಮಹತ್ತರವಾದ ಕೃತ್ಯಗಳನ್ನು ಸ್ಮರಿಸುವವನಾಗಿ ನಿನ್ನೊಬ್ಬನ ನೀತಿಯನ್ನೇ ಪ್ರಕಟಪಡಿಸುವೆನು.
ಸಾರ್ವಭೌಮ ಯೆಹೋವ ದೇವರೇ ನಾನು ನಿಮ್ಮ ಮಹಾಕೃತ್ಯಗಳನ್ನು ಸಾರುವೆನು. ನಿಮ್ಮ ನೀತಿ ಕೃತ್ಯಗಳನ್ನು ಪ್ರಕಟಪಡಿಸುವೆನು.
17 ೧೭ ದೇವರೇ, ನೀನು ಬಾಲ್ಯದಿಂದಲೂ ನನ್ನನ್ನು ಉಪದೇಶಿಸುತ್ತಾ ಬಂದಿದ್ದಿ. ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ.
ದೇವರೇ, ನನ್ನ ಯೌವನದಿಂದ ನನಗೆ ನೀವು ಕಲಿಸಿದ್ದೀರಿ. ಈವರೆಗೂ ನಿಮ್ಮ ಅದ್ಭುತಕಾರ್ಯಗಳನ್ನು ಘೋಷಿಸುತ್ತಿದ್ದೇನೆ.
18 ೧೮ ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.
ದೇವರೇ, ನಾನು ಮುಪ್ಪಿನವನೂ, ನೆರೆಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿಮ್ಮ ಶಕ್ತಿಯನ್ನೂ, ಮುಂದಿನ ಪೀಳಿಗೆಗೆ ನಿಮ್ಮ ಪರಾಕ್ರಮವನ್ನೂ ತಿಳಿಸುವವರೆಗೂ ನನ್ನನ್ನು ಕೈಬಿಡಬೇಡಿರಿ.
19 ೧೯ ದೇವರೇ, ನಿನ್ನ ನೀತಿಯು ಆಕಾಶವನ್ನು ನಿಲುಕುವಷ್ಟು ಮಹೋನ್ನತವಾಗಿದೆ. ಮಹತ್ತರವಾದ ಕೃತ್ಯಗಳನ್ನು ನಡೆಸಿದ ದೇವರೇ, ನಿನಗೆ ಸಮಾನರು ಯಾರು?
ದೇವರೇ, ನಿಮ್ಮ ನೀತಿಯು ಆಕಾಶವನ್ನು ಮುಟ್ಟುತ್ತದೆ. ಮಹತ್ಕಾರ್ಯಗಳನ್ನು ಮಾಡಿದ ದೇವರೇ, ನಿಮ್ಮ ಹಾಗೆ ಯಾರಿದ್ದಾರೆ?
20 ೨೦ ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು; ನಮ್ಮನ್ನು ಭೂಮಿಯ ಅಧೋಭಾಗದಿಂದ ಮೇಲೆತ್ತು.
ಅನೇಕ ಕಠಿಣವಾದ ಇಕ್ಕಟ್ಟುಗಳನ್ನು ನೋಡ ಮಾಡಿದ ನನ್ನನ್ನು ನೀವು ತಿರುಗಿ ಬದುಕಿಸಿದ್ದೀರಿ. ಭೂಮಿಯ ಅಧೋಭಾಗದಿಂದ ಪುನಃ ನನ್ನನ್ನು ಮೇಲಕ್ಕೆ ಎತ್ತುವಿರಿ.
21 ೨೧ ನನ್ನ ಗೌರವವನ್ನು ಹೆಚ್ಚಿಸು; ನನಗೆ ಅಭಿಮುಖನಾಗಿ ಸಂತೈಸು.
ನೀವು ನನ್ನ ಗೌರವವನ್ನು ಹೆಚ್ಚಿಸಿ ನನ್ನನ್ನು ಮತ್ತೊಮ್ಮೆ ಆದರಿಸಿರಿ.
22 ೨೨ ನನ್ನ ದೇವರೇ, ನಿನ್ನ ಸತ್ಯತೆಯನ್ನು ಸ್ಮರಿಸುವೆನು; ಸ್ವರಮಂಡಲದಿಂದ ನಿನ್ನನ್ನು ಸಂಕೀರ್ತಿಸುವೆನು. ಇಸ್ರಾಯೇಲರ ಪರಿಶುದ್ಧ ದೇವರು, ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಭಜಿಸುವೆನು.
ನನ್ನ ದೇವರೇ, ನಾನು ನಿಮ್ಮನ್ನು ಸ್ತುತಿಸುವೆನು. ನಿಮ್ಮ ನಂಬಿಗಸ್ತಿಕೆಗಾಗಿ ವೀಣೆಯಿಂದ ಕೊಂಡಾಡುವೆನು. ಇಸ್ರಾಯೇಲರ ಪರಿಶುದ್ಧರೇ, ಕಿನ್ನರಿಯಿಂದ ನಿಮ್ಮನ್ನು ಸ್ತುತಿಸುವೆನು.
23 ೨೩ ನನ್ನ ತುಟಿಗಳೂ ಮತ್ತು ನೀನು ರಕ್ಷಿಸಿದ ನನ್ನ ಪ್ರಾಣವೂ ನಿನ್ನನ್ನು ಹಾಡಿಹರಸುವವು.
ನೀವು ನನ್ನನ್ನು ಬಿಡಿಸಿದ್ದಕ್ಕಾಗಿ ನನ್ನ ತುಟಿಗಳು ಆನಂದದಿಂದ ಹಾಡಿ ಸ್ತುತಿಸುತ್ತವೆ.
24 ೨೪ ನನ್ನ ಕೇಡಿಗೆ ಪ್ರಯತ್ನಿಸಿದವರು ಆಶಾಭಂಗಪಟ್ಟು ಅಪಮಾನ ಹೊಂದಿದ್ದಾರೆ. ಆದುದರಿಂದ ನನ್ನ ನಾಲಿಗೆಯು ದಿನವೆಲ್ಲಾ ನಿನ್ನ ನೀತಿಸಾಧನೆಯನ್ನು ವರ್ಣಿಸುತ್ತಿರುವುದು.
ನನ್ನ ನಾಲಿಗೆಯು ಸಹ ದಿನವೆಲ್ಲಾ ನಿಮ್ಮ ನೀತಿಯನ್ನು ಮಾತನಾಡುವುದು, ಏಕೆಂದರೆ ನನಗೆ ಕೇಡು ಬಗೆಯುವವರು ನಾಚಿಕೊಂಡು ತಲೆ ತಗ್ಗಿಸಿದ್ದಾರೆ.