< ಕೀರ್ತನೆಗಳು 68 >
1 ೧ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ದಾವೀದನ ಕೀರ್ತನೆ; ಹಾಡು. ದೇವರು ಎದ್ದು ಹೊರಡುವಾಗ, ಆತನ ವೈರಿಗಳು ಚದರಿಹೋಗಲಿ; ಆತನ ಹಗೆಗಾರರು ಆತನ ಎದುರಿನಿಂದ ಓಡಿಹೋಗಲಿ.
2 ೨ ಹೊಗೆಯು ಗಾಳಿಯಿಂದ ಹೇಗೋ, ಹಾಗೆ ಅವರು ಆತನಿಂದ ಹಾರಿಹೋಗಲಿ; ಬೆಂಕಿಯ ಮುಂದೆ ಮೇಣವು ಕರಗಿ ಲಯವಾಗಿ ಹೋಗುವಂತೆ, ದೇವರ ಎದುರಿನಲ್ಲಿ ದುಷ್ಟರು ನಾಶವಾಗಿ ಹೋಗಲಿ.
3 ೩ ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ; ಉಲ್ಲಾಸಿಸಲಿ, ಆನಂದಧ್ವನಿಮಾಡಲಿ.
4 ೪ ದೇವರಿಗೆ ಗಾಯನಮಾಡಿರಿ; ಆತನ ನಾಮವನ್ನು ಭಜಿಸಿರಿ; ಅರಣ್ಯದಲ್ಲಿ ಸವಾರಿಮಾಡುತ್ತಾ ಬರುವಾತನಿಗೆ ರಾಜಮಾರ್ಗವನ್ನು ಸಿದ್ಧಮಾಡಿರಿ. ಆತನ ನಾಮಧೇಯ ಯಾಹು; ಆತನ ಸನ್ನಿಧಿಯಲ್ಲಿ ಉಲ್ಲಾಸಿಸಿರಿ.
5 ೫ ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ ತಂದೆಯೂ, ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ.
6 ೬ ಒಬ್ಬೊಂಟಿಗರನ್ನು ಸಂಸಾರಿಕರಾಗುವಂತೆ ಮಾಡುತ್ತಾನೆ; ಸೆರೆಯಲ್ಲಿರುವವರನ್ನು ಬಿಡಿಸಿ ಸುಖಾವಸ್ಥೆಗೆ ತರುತ್ತಾನೆ. ದ್ರೋಹಿಗಳಾದರೋ ಮರುಭೂಮಿಯಲ್ಲಿ ಉಳಿಯಬೇಕಾಗುವುದು.
7 ೭ ದೇವರೇ, ನೀನು ನಿನ್ನ ಪ್ರಜೆಯ ಮುಂದೆ ಹೊರಟು, ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಾ ಬರುವಾಗ, (ಸೆಲಾ)
8 ೮ ದೇವರು ಪ್ರತ್ಯಕ್ಷನಾಗಿದ್ದಾನೆಂದು ಭೂಮಿಯು ಕಂಪಿಸಿತು; ಮೇಘಮಂಡಲವು ಮಳೆಸುರಿಸಿತು. ಇಸ್ರಾಯೇಲರ ದೇವರು ಪ್ರತ್ಯಕ್ಷನಾಗಿದ್ದಾನೆಂದು, ಆ ಸೀನಾಯ್ ಬೆಟ್ಟವು ಕದಲಿತು.
9 ೯ ದೇವರೇ, ನೀನು ಹೇರಳವಾಗಿ ಮಳೆಸುರಿಸಿ, ಬಾಯ್ದೆರೆದಿದ್ದ ನಿನ್ನ ಸ್ವತ್ತನ್ನು ಶಾಂತಪಡಿಸಿದಿ.
10 ೧೦ ನಿನ್ನ ಪ್ರಜಾಮಂಡಲಿಯು ಅದರಲ್ಲಿ ವಾಸಮಾಡಿತು. ದೇವರೇ, ನೀನು ದಯಾಪರನಾಗಿ ದರಿದ್ರರಿಗೆ ಬೇಕಾದದ್ದೆಲ್ಲವನ್ನು ಒದಗಿಸಿಕೊಟ್ಟಿ.
11 ೧೧ ಕರ್ತನು ಆಜ್ಞಾಪಿಸಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.
12 ೧೨ ಓಡಿ ಹೋಗುತ್ತಾರೆ; ಸೈನ್ಯದೊಡನೆ ಅರಸುಗಳು ಓಡಿ ಹೋಗುತ್ತಾರೆ; ಮನೆಯಲ್ಲಿದ್ದ ಸ್ತ್ರೀಯರು ಕೊಳ್ಳೆಯನ್ನು ಹಂಚುತ್ತಾರೆ.
13 ೧೩ ನೀವು ಕುರಿಹಟ್ಟಿಗಳಲ್ಲಿ ಮಲಗಿಕೊಂಡಿರುವುದೇನು? ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ, ಅದರ ಗರಿಗಳು ಬಂಗಾರದಿಂದಲೂ ಥಳಥಳಿಸುತ್ತವೆ.
14 ೧೪ ಸರ್ವಶಕ್ತನು ಅಲ್ಲಿ ರಾಜರನ್ನು ಚದುರಿಸಿದಾಗ, ಸಲ್ಮೋನಿನ ಮೇಲೆ ಹಿಮವು ಬಿದ್ದಿತು.
15 ೧೫ ಬಾಷಾನಿನ ಪರ್ವತವು ಮಹೋನ್ನತವಾಗಿದೆ; ಆ ಬಾಷಾನ್ ಗಿರಿಯು ಶಿಖರಗಳುಳ್ಳದ್ದೇ.
16 ೧೬ ಎಲೈ, ಶಿಖರೋನ್ನತಪರ್ವತಗಳೇ, ದೇವರು ತನ್ನ ನಿವಾಸಕ್ಕಾಗಿ ಆರಿಸಿಕೊಂಡಿರುವ ಈ ಪರ್ವತವನ್ನು ನೀವು ಓರೆಗಣ್ಣಿನಿಂದ ನೋಡುವುದೇಕೆ? ಯೆಹೋವನು ಸದಾಕಾಲವೂ ಇದರಲ್ಲೇ ವಾಸಿಸುವನು.
17 ೧೭ ದೇವರಿಗೆ ಸಹಸ್ರಾರು ಮಾತ್ರವಲ್ಲ ಲಕ್ಷಾಂತರ ರಥಗಳು ಇವೆ. ಕರ್ತನಾದ ಯೆಹೋವನು ಅವುಗಳ ಸಮೇತವಾಗಿ, ಸೀನಾಯ್ ಬೆಟ್ಟದಿಂದ ಪವಿತ್ರಾಲಯಕ್ಕೆ ಬಂದಿದ್ದಾನೆ.
18 ೧೮ ನೀನು ಜಯಿಸಿದ ಬಹು ಜನರನ್ನು ಸೆರೆಹಿಡಿದುಕೊಂಡು ಹೋಗಿ, ನಿನಗೆ ದ್ರೋಹಿಗಳಾದ ಮನುಷ್ಯರಿಂದಲೇ ಕಪ್ಪಗಳನ್ನು ಸಂಗ್ರಹಿಸಿ, ದೇವನಾದ ಯಾಹುವು ಅಲ್ಲೇ ವಾಸಿಸುವಂತೆ, ಉನ್ನತಸ್ಥಾನಕ್ಕೆ ಏರಿದ್ದೀ.
19 ೧೯ ಅನುದಿನವೂ ನಮ್ಮ ಭಾರವನ್ನು ಹೊರುತ್ತಿರುವ ಕರ್ತನಿಗೆ ಸ್ತೋತ್ರವಾಗಲಿ. ನಮ್ಮನ್ನು ರಕ್ಷಿಸುವ ದೇವರು ಆತನೇ. (ಸೆಲಾ)
20 ೨೦ ನಮ್ಮ ದೇವರು ನಮ್ಮನ್ನು ವಿಮೋಚಿಸುವುದಕ್ಕೋಸ್ಕರ ದೇವರಾಗಿದ್ದಾನೆ; ಕರ್ತನಾದ ಯೆಹೋವನು ಮರಣಕ್ಕೆ ತಪ್ಪಿಸ ಶಕ್ತನಾಗಿದ್ದಾನೆ.
21 ೨೧ ಆಹಾ, ಆತನು ತನ್ನ ವೈರಿಗಳ ಶಿರಸ್ಸುಗಳನ್ನೂ, ಸ್ವೇಚ್ಛೆಯಿಂದ ಪಾಪದಲ್ಲಿ ಪ್ರವರ್ತಿಸುವವರ ತುಂಬುಗೂದಲಿನ ತಲೆಗಳನ್ನೂ ಒಡೆದು ನಿರ್ಮೂಲ ಮಾಡುವನು.
22 ೨೨ ಕರ್ತನು, “ನಾನು ಅವರನ್ನು ಬಾಷಾನಿನಿಂದಲೂ, ಸಮುದ್ರ ತಳದಿಂದಲೂ ಹಿಡಿದು ತರುವೆನು.
23 ೨೩ ಆಗ ನೀನು ನಿನ್ನ ಶತ್ರುಗಳ ರಕ್ತದಲ್ಲಿ ಕಾಲಾಡಿಸುವಿ. ನಿನ್ನ ನಾಯಿಗಳ ನಾಲಿಗೆಗಳಿಗೆ ವೈರಿಗಳ ದೇಹದಲ್ಲಿ ಪಾಲುಸಿಕ್ಕುವುದು” ಎಂದು ನುಡಿದನು.
24 ೨೪ ದೇವರೇ, ನಿನ್ನ ಮೆರವಣಿಗೆ ಶೋಭಿಸುತ್ತದೆ; ನನ್ನ ಅರಸನಾದ ದೇವರು ತನ್ನ ಪರಿಶುದ್ಧಾಲಯಕ್ಕೆ ಮೆರವಣಿಗೆಯಾಗಿ ಪ್ರವೇಶಿಸುತ್ತಾನೆ.
25 ೨೫ ಮುಂಭಾಗದಲ್ಲಿ ಹಾಡುವವರೂ, ಹಿಂಭಾಗದಲ್ಲಿ ವಾದ್ಯಬಾರಿಸುವವರೂ, ಸುತ್ತಲೂ ದಮ್ಮಡಿಬಡಿಯುವ ಸ್ತ್ರೀಯರೂ ಹೋಗುತ್ತಾ,
26 ೨೬ “ಇಸ್ರಾಯೇಲ್ ವಂಶಸ್ಥರೇ, ಸಮೂಹವಾಗಿ ದೇವರಾದ ಕರ್ತನನ್ನು ಕೊಂಡಾಡಿರಿ” ಎಂದು ಹಾಡುತ್ತಾರೆ.
27 ೨೭ ಅಲ್ಲಿ ಎಲ್ಲರಿಗೆ ನಾಯಕರಾಗಿರುವ ಬೆನ್ಯಾಮೀನ್ ಎಂಬ ಸಣ್ಣ ಗೋತ್ರದವರೂ, ಗುಂಪಾಗಿ ಬರುವ ಯೆಹೂದ ಕುಲದ ಪ್ರಭುಗಳೂ, ಜೆಬುಲೂನ್, ನಫ್ತಾಲಿ ಗೋತ್ರಗಳ ಪ್ರಧಾನರೂ ಇದ್ದಾರೆ.
28 ೨೮ ದೇವರೇ, ನಿನ್ನ ಪ್ರತಾಪವನ್ನು ಆಜ್ಞಾಪಿಸು. ನಿನ್ನ ಮಂದಿರದಲ್ಲಿ ಆಸೀನನಾಗಿ ನಮಗೋಸ್ಕರ ಮಹತ್ಕಾರ್ಯಗಳನ್ನು ನಡೆಸಿದ ದೇವರೇ, ನಿನ್ನ ಬಲವನ್ನು ಪ್ರಕಟಿಸು.
29 ೨೯ ಅರಸುಗಳು ಯೆರೂಸಲೇಮ್ ಪಟ್ಟಣಕ್ಕೆ ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ.
30 ೩೦ ಆಪಿನೊಳಗೆ ವಾಸಿಸುವ ನೀರಾನೆ, ಕರುಗಳ ಸಹಿತವಾದ ಹೋರಿಗಳ ಗುಂಪು, ಇವುಗಳಂತಿರುವ ಶತ್ರುಜನಾಂಗಗಳನ್ನು ಬೆದರಿಸು. ಅವು ಬೆಳ್ಳಿಗಟ್ಟಿಗಳನ್ನು ತಂದು ನಿನಗೆ ಅಡ್ಡಬೀಳಲಿ. ಯುದ್ಧಾಸಕ್ತ ಜನಾಂಗಗಳನ್ನು ಚದುರಿಸಿಬಿಡು.
31 ೩೧ ಐಗುಪ್ತ ದೇಶದಿಂದ ರಾಯಭಾರಿಗಳು ಬರುವರು; ಕೂಷ್ ದೇಶದವರ ಕೈಗಳು ದೇವರಿಗೆ ಕಾಣಿಕೆಗಳನ್ನು ನೀಡಲಿಕ್ಕೆ ಅವಸರಪಡುವವು.
32 ೩೨ ಭೂರಾಜ್ಯಗಳೇ, ದೇವರಿಗೆ ಗಾಯನಮಾಡಿರಿ; ಕರ್ತನನ್ನು ಸಂಕೀರ್ತಿಸಿರಿ. (ಸೆಲಾ)
33 ೩೩ ಅನಾದಿಕಾಲದಿಂದಿರುವ ಮಹೋನ್ನತಾಕಾಶದಲ್ಲಿ ವಾಹನಾರೂಢನಾಗಿ ಇರುವಾತನನ್ನು ಸ್ತುತಿಸಿರಿ. ಕೇಳಿರಿ; ಆತನ ಗರ್ಜನೆಯು ಮಹಾಘೋರವಾದದ್ದು.
34 ೩೪ ದೇವರ ಪ್ರತಾಪವನ್ನು ಕೊಂಡಾಡಿರಿ. ಆತನ ಗಾಂಭೀರ್ಯವು ಇಸ್ರಾಯೇಲರ ಆಶ್ರಯವಾಗಿದೆ; ಆತನ ಶಕ್ತಿಯು ಮೇಘಮಾರ್ಗದಲ್ಲೆಲ್ಲಾ ವ್ಯಾಪಿಸಿದೆ.
35 ೩೫ ದೇವರೇ, ಪರಿಶುದ್ಧಾಲಯದಲ್ಲಿರುವ ನೀನು ಮಹಾಭಯಂಕರನು. ಇಸ್ರಾಯೇಲರ ದೇವರು ತನ್ನ ಪ್ರಜೆಗೆ ಬಲಪರಾಕ್ರಮಗಳನ್ನು ದಯಪಾಲಿಸುವನು. ದೇವರಿಗೆ ಸ್ತೋತ್ರ.