< ಕೀರ್ತನೆಗಳು 57 >
1 ೧ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಅಲ್ತಷ್ಖೇತೆಂಬ ರಾಗ; ದಾವೀದನು ಸೌಲನ ಭೀತಿಯಿಂದ ಓಡಿಹೋಗಿ ಗುಹೆಯಲ್ಲಿ ಅಡಗಿಕೊಂಡಿದ್ದಾಗ ರಚಿಸಿದ ಕಾವ್ಯ. ದೇವರೇ, ಕರುಣಿಸು, ನನ್ನನ್ನು ಕರುಣಿಸು. ನೀನೇ ನನ್ನ ಆಶ್ರಯಸ್ಥಾನವಲ್ಲವೇ! ಆಪತ್ತುಗಳು ಕಳೆದುಹೋಗುವ ತನಕ ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಖೇತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನು ಸೌಲನ ಭಯದಿಂದ ಓಡಿಹೋಗಿ ಗುಹೆಯಲ್ಲಿ ಅಡಗಿಕೊಂಡಿದ್ದಾಗ ರಚಿಸಿದ ಕಾವ್ಯ. ದೇವರೇ ನನ್ನನ್ನು ಕರುಣಿಸಿರಿ, ನನ್ನನ್ನು ಕರುಣಿಸಿರಿ. ನನ್ನ ಪ್ರಾಣವು ನಿಮ್ಮನ್ನು ಆಶ್ರಯಿಸಿಕೊಂಡಿದೆ; ಆಪತ್ತುಗಳು ದಾಟುವವರೆಗೂ ನಿಮ್ಮ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ.
2 ೨ ಪರಾತ್ಪರನಾದ ದೇವರಿಗೆ ಮೊರೆಯಿಡುವೆನು, ನನ್ನ ಕಾರ್ಯವನ್ನು ಸಫಲಮಾಡುವ ದೇವರನ್ನು ಕೂಗಿ ಕರೆಯುವೆನು.
ಮಹೋನ್ನತನಾದ ದೇವರಿಗೆ, ಮೊರೆಯಿಡುತ್ತೇನೆ. ನನಗಾಗಿ ಕಾರ್ಯಗಳಿಗೆ ನ್ಯಾಯ ನೀಡುವ ದೇವರಿಗೆ ಮೊರೆಯಿಡುತ್ತೇನೆ.
3 ೩ ಆತನು ಪರಲೋಕದಿಂದ ಆಲಿಸಿ, ನಿಂದಕರ ಮಾತಿನಿಂದ ನನ್ನನ್ನು ತಪ್ಪಿಸುವನು; (ಸೆಲಾ) ತನ್ನ ಪ್ರೀತಿಯನ್ನು ಮತ್ತು ಸತ್ಯತೆಯನ್ನೂ ತೋರ್ಪಡಿಸುವನು.
ದೇವರು ಪರಲೋಕದಿಂದ ಸಹಾಯ ಕಳುಹಿಸಿ, ನನ್ನನ್ನು ನಿಂದಿಸುವವರನ್ನು ದಂಡಿಸಿ, ನನ್ನನ್ನು ರಕ್ಷಿಸುವರು. ದೇವರು ತಮ್ಮ ಒಡಂಬಡಿಕೆಯ ಪ್ರೀತಿಯನ್ನೂ ತಮ್ಮ ಸತ್ಯವನ್ನೂ ಕಳುಹಿಸುವರು.
4 ೪ ನಾನು ಸಿಂಹಗಳಂತಿರುವ ಶತ್ರುಗಳ ಮಧ್ಯದಲ್ಲಿ ಸಿಕ್ಕಿದ್ದೇನೆ; ದುರಾಶೆಯಿಂದ ಕಬಳಿಸುವಂತಹ ಮನುಷ್ಯರ ನಡುವೆ ಬಿದ್ದಿದ್ದೇನೆ. ಅವರ ಹಲ್ಲುಗಳು ಈಟಿ ಮತ್ತು ಬಾಣಗಳಂತಿವೆ, ನಾಲಿಗೆಗಳು ಹದವಾದ ಕತ್ತಿಗಳೇ.
ನಾನು ಸಿಂಹಗಳಂಥವರ ಮಧ್ಯದಲ್ಲಿದ್ದೇನೆ. ಕ್ರೂರಮೃಗಗಳಂಥವರ ಮಧ್ಯದಲ್ಲಿ ಒತ್ತಾಯವಾಗಿ ವಾಸಮಾಡುತ್ತಿದ್ದೇನೆ. ಅವರ ಹಲ್ಲು, ಭಲ್ಲೆ, ಬಾಣಗಳೂ ಅವರ ನಾಲಿಗೆ ಹದವಾದ ಖಡ್ಗವೂ ಆಗಿವೆ.
5 ೫ ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.
ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.
6 ೬ ನನ್ನ ಕಾಲಿಗೆ ಬಲೆಯನ್ನು ಹಾಸಿದ್ದಾರೆ; ನನ್ನ ಪ್ರಾಣವು ಕುಂದಿಹೋಯಿತು. ನನ್ನ ದಾರಿಯಲ್ಲಿ ಕುಣಿಯನ್ನು ಅಗೆದರು; ತಾವೇ ಅದರಲ್ಲಿ ಬಿದ್ದುಹೋದರು. (ಸೆಲಾ)
ಶತ್ರುಗಳು ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ. ನನ್ನ ದಾರಿಯಲ್ಲಿ ಕುಣಿಯನ್ನು ಅಗೆದಿದ್ದಾರೆ. ಅದರಲ್ಲಿ ತಾವೇ ಬಿದ್ದುಹೋದರು.
7 ೭ ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ. ನಾನು ವಾದ್ಯಗಳನ್ನು ನುಡಿಸುತ್ತಾ ಹಾಡುವೆನು.
ದೇವರೇ, ನನ್ನ ಹೃದಯವು ಸ್ಥಿರವಾಗಿದೆ. ಹೌದು, ನನ್ನ ಹೃದಯವು ಸ್ಥಿರವಾಗಿದೆ. ನಾನು ಸಂಗೀತದೊಡನೆ ಹಾಡುವೆನು.
8 ೮ ನನ್ನ ಮನವೇ, ಚುರುಕಾಗು; ಸ್ವರಮಂಡಲವೇ, ಕಿನ್ನರಿಯೇ, ಎಚ್ಚರವಾಗಿರಿ. ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು.
ಎಚ್ಚರವಾಗು, ನನ್ನ ಪ್ರಾಣವೇ, ವೀಣೆಯೇ, ಕಿನ್ನರಿಯೇ ಎಚ್ಚರವಾಗಿರಿ, ನಾನು ಉದಯಕಾಲವನ್ನು ಎಚ್ಚರಗೊಳಿಸುವೆನು.
9 ೯ ಕರ್ತನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.
ಯೆಹೋವ ದೇವರೇ, ಜನಾಂಗಗಳಲ್ಲಿ ನಾನು ನಿಮ್ಮನ್ನು ಕೊಂಡಾಡುವೆನು. ಜನರ ಮಧ್ಯದಲ್ಲಿ ನಿಮ್ಮನ್ನು ಹಾಡಿ ಕೊಂಡಾಡುವೆನು.
10 ೧೦ ಏಕೆಂದರೆ ನಿನ್ನ ಕೃಪೆಯು ಆಕಾಶವನ್ನೂ, ನಿನ್ನ ಸತ್ಯತೆಯು ಮುಗಿಲನ್ನೂ ಮುಟ್ಟುವಷ್ಟು ದೊಡ್ಡವಾಗಿವೆ.
ಆಕಾಶಕ್ಕಿಂತ ನಿಮ್ಮ ಪ್ರೀತಿ ದೊಡ್ಡದು. ಮೇಘವನ್ನು ನಿಲುಕುವಷ್ಟು ನಿಮ್ಮ ಸತ್ಯವು ಉನ್ನತವಾಗಿವೆ.
11 ೧೧ ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.
ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.