< ಕೀರ್ತನೆಗಳು 35 >
1 ೧ ದಾವೀದನ ಕೀರ್ತನೆ. ಯೆಹೋವನೇ, ನನ್ನ ಸಂಗಡ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯಮಾಡು; ನನ್ನ ಮೇಲೆ ಯುದ್ಧ ಮಾಡುವವರ ಸಂಗಡ ಯುದ್ಧ ಮಾಡು.
2 ೨ ಖೇಡ್ಯ ಮತ್ತು ಗುರಾಣಿಯನ್ನು ಹಿಡಿದುಕೊಂಡು, ನನಗೆ ಸಹಾಯಕನಾಗಿ ನಿಲ್ಲು.
3 ೩ ನೀನು ಭರ್ಜಿಯನ್ನೂ ಹಾಗೂ ಯುದ್ಧದ ಕೊಡಲಿಯನ್ನೂ ಹಿಡಿದು, ನನ್ನನ್ನು ಹಿಂದಟ್ಟುವ ವೈರಿಗಳನ್ನು ಎದುರಿಸು; “ನಾನೇ ನಿನ್ನ ರಕ್ಷಣೆ” ಎಂದು ಅಭಯಕೊಡು.
4 ೪ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವರು ಆಶಾಭಂಗಪಟ್ಟು ಅವಮಾನಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಕಳವಳದಿಂದ ಹಿಂದಿರುಗಿ ಓಡಲಿ.
5 ೫ ಅವರು ಗಾಳಿ ಹಾರಿಸುವ ಹೊಟ್ಟಿನಂತಾಗಲಿ; ಯೆಹೋವನ ದೂತನು ಅವರನ್ನು ಅಟ್ಟಿಬಿಡಲಿ.
6 ೬ ಕತ್ತಲೆಯೂ, ಜಾರಿಕೆಯೂ ಇರುವ ದಾರಿಯಲ್ಲಿ ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
7 ೭ ಅವರು ನಿಷ್ಕಾರಣವಾಗಿ ನನಗೆ ಬಲೆಯೊಡ್ಡಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣವನ್ನು ತೆಗೆಯಬೇಕೆಂದು ಗುಂಡಿಯನ್ನು ತೋಡಿದ್ದಾರೆ.
8 ೮ ಅವನಿಗೆ ನಾಶನವು ಆಕಸ್ಮಾತ್ತಾಗಿ ಬರಲಿ; ತಾನು ಹಾಸಿದ ಬಲೆಯಲ್ಲಿ ತಾನೇ ಸಿಕ್ಕಿಬೀಳಲಿ. ತಾನು ತೋಡಿದ ಕುಣಿಯಲ್ಲಿ ತಾನೇ ಬಿದ್ದುಹೋಗಲಿ.
9 ೯ ಆಗ ನನ್ನ ಮನಸ್ಸಿಗೆ ಯೆಹೋವನ ದೆಸೆಯಿಂದ ಹರ್ಷವುಂಟಾಗುವುದು; ಆತನಿಂದಾದ ರಕ್ಷಣೆಯ ನಿಮಿತ್ತ ಆನಂದಪಡುವೆನು.
10 ೧೦ ಯೆಹೋವನೇ, ಕುಗ್ಗಿದವನನ್ನು ಬಲಾತ್ಕಾರಿಯಿಂದಲೂ, ದಿಕ್ಕಿಲ್ಲದ ಬಡವನನ್ನು ಸೂರೆಮಾಡುವವನಿಂದಲೂ ತಪ್ಪಿಸಿ ರಕ್ಷಿಸುವಾತನೇ, “ನಿನಗೆ ಸಮಾನರು ಯಾರಿದ್ದಾರೆ?” ಎಂದು ನನ್ನ ಎಲುಬುಗಳೆಲ್ಲಾ ಹೇಳುವವು.
11 ೧೧ ನ್ಯಾಯವಿರುದ್ಧ ಸಾಕ್ಷಿಗಳು ನನಗೆ ವಿರುದ್ಧವಾಗಿ ಎದ್ದಿದ್ದಾರೆ; ನಾನರಿಯದ ಸಂಗತಿಗಳ ವಿಷಯದಲ್ಲಿ ನನ್ನನ್ನು ವಿಚಾರಿಸುತ್ತಾರೆ.
12 ೧೨ ಅವರು ಉಪಕಾರಕ್ಕೆ ಅಪಕಾರವನ್ನೇ ಮಾಡುತ್ತಾರೆ; ನಾನು ದಿಕ್ಕಿಲ್ಲದವನಾದೆನು.
13 ೧೩ ನಾನಾದರೋ ಅವರ ಅಸ್ವಸ್ಥಕಾಲದಲ್ಲಿ ಗೋಣಿ ತಟ್ಟನ್ನೇ ಕಟ್ಟಿಕೊಂಡಿದ್ದೆನು; ಉಪವಾಸದಿಂದ ನನ್ನ ಆತ್ಮವನ್ನು ನೋಯಿಸಿದೆನು. ನನ್ನ ಪ್ರಾರ್ಥನೆಯು ಕೇಳಲ್ಪಡಲಿಲ್ಲ.
14 ೧೪ ಅಸ್ವಸ್ಥನಾದವನನ್ನು ಸ್ನೇಹಿತನೋ, ಅಣ್ಣನೋ ಎಂದು ಭಾವಿಸಿ ನಡೆದುಕೊಂಡೆನು; ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅಳುತ್ತಿದ್ದೆನು.
15 ೧೫ ಆದರೂ ನನಗೆ ಆಪತ್ತು ಬಂದಾಗ, ಅವರು ಸಂತೋಷಿಸುತ್ತಾ ಕೂಡಿಕೊಂಡರು; ನಿರಾಕಾರಣವಾಗಿ ಈ ಭ್ರಷ್ಟರು ನನಗೆ ವಿರುದ್ಧವಾಗಿ ಕೂಡಿ ಕೊಂಡಾಡಿದರು, ಸೂರೆ ಮಾಡುವುದನ್ನು ಬಿಡಲೇ ಇಲ್ಲ.
16 ೧೬ ಆಹಾರಕ್ಕೋಸ್ಕರ ಪರಿಹಾಸ್ಯಮಾಡುವ ಮೂರ್ಖರ ಸಂಗಡ, ನನ್ನ ಮೇಲೆ ಹಲ್ಲುಕಡಿಯುತ್ತಾರೆ.
17 ೧೭ ಕರ್ತನೇ, ಇನ್ನೆಷ್ಟರ ವರೆಗೆ ಸುಮ್ಮನೆ ನೋಡುತ್ತಾ ಇರುವಿ? ಅವರ ಅಪಾಯದಿಂದ ನನ್ನ ಪ್ರಾಣವನ್ನು ಬಿಡಿಸು; ನನ್ನ ಪರಮಪ್ರಿಯ ಪ್ರಾಣವನ್ನು ಆ ಸಿಂಹಗಳ ಬಾಯಿಗೆ ಸಿಕ್ಕದಂತೆ ತಪ್ಪಿಸು.
18 ೧೮ ಆಗ ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು.
19 ೧೯ ಅವಶ್ಯವಿಲ್ಲದ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಅವಕಾಶಕೊಡಬೇಡ; ನಿಷ್ಕಾರಣ ವೈರಿಗಳ ಕಣ್ಣುಸನ್ನೆಗೆ ಆಸ್ಪದಕೊಡಬೇಡ.
20 ೨೦ ಅವರ ಮಾತುಗಳು ಸಮಾಧಾನಕರವಾದವುಗಳಲ್ಲ; ದೇಶದ ಸಾಧುಜನರನ್ನು ಕೆಡಿಸುವುದಕ್ಕೆ ಮೋಸವನ್ನು ಕಲ್ಪಿಸುತ್ತಾರೆ.
21 ೨೧ ಅವರು ನನ್ನನ್ನು ನೋಡಿ ಬಾಯಿಕಿಸಿದು, “ಆಹಾ, ಆಹಾ, ನಮ್ಮ ಕಣ್ಣು ಕಂಡಿತಲ್ಲಾ” ಎಂದು ಅನ್ನುತ್ತಾರೆ.
22 ೨೨ ಯೆಹೋವನೇ, ನೀನೇ ನೋಡಿದಿಯಲ್ಲವೇ; ಸುಮ್ಮನಿರಬೇಡ; ನನ್ನ ಒಡೆಯನೇ, ನನ್ನಿಂದ ದೂರವಾಗಿರುವುದೇಕೆ?
23 ೨೩ ನನ್ನ ದೇವರೇ, ಎದ್ದು ನನಗಾಗಿ ನ್ಯಾಯವನ್ನು ನಿರ್ಣಯಿಸು; ನನ್ನ ಕರ್ತನೇ, ಎಚ್ಚೆತ್ತು ನನ್ನ ವಿವಾದವನ್ನು ವಿಚಾರಿಸು.
24 ೨೪ ಯೆಹೋವನೇ, ನನ್ನ ದೇವರೇ, ನಿನ್ನ ನೀತಿಗನುಸಾರವಾಗಿ ನನಗೆ ತೀರ್ಪುಕೊಡು; ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಶತ್ರುಗಳಿಗೆ ಆಸ್ಪದವಿರಬಾರದು.
25 ೨೫ ಆಹಾ, ನಮ್ಮ ಆಶೆ ನೆರವೇರಿತು ಅಂದುಕೊಳ್ಳುವುದಕ್ಕೆ ಅವರಿಗೆ ಅವಕಾಶವಿರಬಾರದು; ಅವನನ್ನು ಸಂಪೂರ್ಣವಾಗಿ ನಾಶಮಾಡಿಬಿಟ್ಟಿದ್ದೇವೆಂದು ಅವರು ಕೊಚ್ಚಿಕೊಳ್ಳಬಾರದು.
26 ೨೬ ನನ್ನ ಕೇಡಿನಲ್ಲಿ ಹಿಗ್ಗುವವರೆಲ್ಲರು ಆಶಾಭಂಗಪಟ್ಟು ಅವಮಾನಹೊಂದಲಿ; ನನ್ನನ್ನು ಹೀಯಾಳಿಸಿ ಆತ್ಮಸ್ತುತಿಮಾಡಿಕೊಳ್ಳುವವರು, ಅವಮಾನವನ್ನೂ, ಅಪಕೀರ್ತಿಯನ್ನೂ ಹೊಂದಲಿ.
27 ೨೭ ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು ಆನಂದದೊಡನೆ ಜಯಧ್ವನಿಮಾಡಲಿ; ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ.
28 ೨೮ ನನ್ನ ನಾಲಿಗೆಯು ನಿನ್ನ ನೀತಿಯನ್ನೂ ಮಹಿಮೆಯನ್ನೂ ದಿನವೆಲ್ಲಾ ವರ್ಣಿಸುವುದು.