< ಕೀರ್ತನೆಗಳು 19 >
1 ೧ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಆಕಾಶವು ದೇವರ ಮಹಿಮೆಯನ್ನು ಸಾರುತ್ತದೆ; ಅಂತರಿಕ್ಷವು ಅವರ ಕೈಕೆಲಸವನ್ನು ಘೋಷಿಸುತ್ತದೆ.
2 ೨ ದಿನವು ದಿನಕ್ಕೆ ದೇವರ ಮಹಿಮೆಯನ್ನು ತಿಳಿಸುತ್ತಿರುವುದು; ರಾತ್ರಿಯು ರಾತ್ರಿಗೆ ಜ್ಞಾನವನ್ನು ಪ್ರಕಟಿಸುತ್ತಿರುವುದು.
ಹಗಲೆಲ್ಲಾ ಅವು ಮಾತನಾಡುತ್ತವೆ; ರಾತ್ರಿಯೆಲ್ಲಾ ಅವು ಅರಿವನ್ನು ಪ್ರಕಟಿಸುತ್ತವೆ.
3 ೩ ಶಬ್ದವಿಲ್ಲ, ಮಾತಿಲ್ಲ, ಅವುಗಳ ಸ್ವರ ಕೇಳಿಸುವುದಿಲ್ಲ.
ಅವುಗಳಿಗೆ ಮಾತೂ ಇಲ್ಲ, ಪದವೂ ಇಲ್ಲ, ಅವುಗಳ ಸ್ವರವು ಕೇಳುವುದೂ ಇಲ್ಲ.
4 ೪ ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತವೆ. ಅಲ್ಲಿ ದೇವರು ಸೂರ್ಯನಿಗೋಸ್ಕರ ಗುಡಾರವನ್ನು ಏರ್ಪಡಿಸಿದ್ದಾನೆ.
ಅವುಗಳ ಧ್ವನಿ ಭೂಲೋಕವೆಲ್ಲಾ ಹರಡಿವೆ; ಅವುಗಳ ಮಾತುಗಳೋ ಲೋಕದ ಕಟ್ಟಕಡೆಯವರೆಗೂ ಹೋಗುತ್ತವೆ; ಆಕಾಶದಲ್ಲಿ ದೇವರು ಸೂರ್ಯನಿಗೆ ಗುಡಾರ ಹಾಕಿದ್ದಾರೆ.
5 ೫ ಅವನು ತನ್ನ ಮಂಟಪದೊಳಗಿಂದ ಬರುವ ಮದಲಿಂಗನೋ ಎಂಬಂತೆ ಹೊರಟುಬರುವನು. ಅವನು ಶೂರನಂತೆ ತನಗೆ ನೇಮಕವಾದ ಮಾರ್ಗದಲ್ಲಿ ಓಡುವುದಕ್ಕೆ ಉಲ್ಲಾಸಗೊಂಡಿದ್ದಾನೆ.
ಸೂರ್ಯನು ಮದುಮಗನಂತೆ ತನ್ನ ಕೊಠಡಿಯಿಂದ ಹೊರಟುಬಂದು, ಪಂದ್ಯಕ್ಕೆ ಹರ್ಷದಿಂದ ಓಡುವ ಪರಾಕ್ರಮಶಾಲಿಯಂತೆ ಇದ್ದಾನೆ.
6 ೬ ಆಕಾಶದ ಒಂದು ಕಡೆಯಿಂದ ಹೊರಟು ಮತ್ತೊಂದು ಕಡೆಗೆ ಬರುತ್ತಾನೆ; ಅವನ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.
ಆಕಾಶದ ಒಂದು ಕಡೆಯಿಂದ ಉದಯಿಸಿ ಮತ್ತೊಂದು ಕಡೆಯವರೆಗೆ ಹೊರಟು ಪ್ರಯಾಣಿಸುತ್ತಾನೆ; ಅದರ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.
7 ೭ ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆಗಳು ನಂಬಿಕೆಗೆ ಯೋಗ್ಯವಾದದ್ದು; ಅವು ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.
ಯೆಹೋವ ದೇವರ ನಿಯಮವು ಸಂಪೂರ್ಣವಾಗಿದ್ದು, ಪ್ರಾಣಕ್ಕೆ ಜೀವಕರವಾಗಿದೆ; ಯೆಹೋವ ದೇವರ ಶಾಸನಗಳು ವಿಶ್ವಾಸಪಾತ್ರವಾಗಿದ್ದು, ಮುಗ್ಧನನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ.
8 ೮ ಯೆಹೋವನ ಆಜ್ಞೆಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.
ಯೆಹೋವ ದೇವರ ಸೂತ್ರಗಳು ನೀತಿಯುಳ್ಳವುಗಳಾಗಿದ್ದು ಅವು ಹೃದಯಕ್ಕೆ ಆನಂದಕರವಾಗಿವೆ; ಯೆಹೋವ ದೇವರ ಆಜ್ಞೆಗಳು ಸ್ಪಷ್ಟವಾಗಿದ್ದು, ಕಣ್ಣುಗಳಿಗೆ ಪ್ರಕಾಶಕರವಾಗಿವೆ.
9 ೯ ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ಕಟ್ಟಳೆಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ.
ಯೆಹೋವ ದೇವರ ಭಯವು ಶುದ್ಧವಾಗಿದ್ದು, ಎಂದೆಂದಿಗೂ ಶಾಶ್ವತವಾಗಿದೆ. ಯೆಹೋವ ದೇವರ ತೀರ್ಪುಗಳು ಸತ್ಯವಾಗಿದ್ದು, ಅವೆಲ್ಲವೂ ನೀತಿಯುಳ್ಳದ್ದಾಗಿವೆ.
10 ೧೦ ಅವು ಬಂಗಾರಕ್ಕಿಂತಲೂ, ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು. ಅವು ಜೇನಿಗಿಂತಲೂ, ಶೋಧಿಸಿದ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.
ಅವು ಬಂಗಾರಕ್ಕಿಂತಲೂ, ಅಪರಂಜಿಗಿಂತಲೂ ಅಮೂಲ್ಯವಾಗಿವೆ; ಅವು ಜೇನಿಗಿಂತಲೂ, ಅಪ್ಪಟ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.
11 ೧೧ ಅವುಗಳ ಮೂಲಕ ನಿನ್ನ ದಾಸನಿಗೆ ವಿವೇಚನೆ ಉಂಟಾಗುತ್ತದೆ; ಅವುಗಳನ್ನು ಕೈಕೊಳ್ಳುವುದರಿಂದ ಬಹಳ ಫಲ ದೊರೆಯುತ್ತದೆ.
ನಿಮ್ಮ ಸೇವಕನು ಅವುಗಳಿಂದ ಎಚ್ಚರಿಕೆ ಪಡೆಯುತ್ತಾನೆ; ಅವುಗಳನ್ನು ಕೈಗೊಳ್ಳುವುದರಲ್ಲಿ ದೊಡ್ಡ ಪ್ರತಿಫಲವುಂಟು.
12 ೧೨ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾರು? ಮರೆಯಾದ ದೋಷಗಳಿಂದ ನನ್ನನ್ನು ನಿರ್ಮಲಮಾಡು.
ತಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಯಾರಿಗೆ ಸಾಧ್ಯ? ನನ್ನ ಗುಪ್ತ ಪಾಪಗಳನ್ನು ಕ್ಷಮಿಸು.
13 ೧೩ ಅದಲ್ಲದೆ ಬೇಕೆಂದು ಪಾಪಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂಥ ಪಾಪಗಳು ನನ್ನನ್ನು ಆಳದಿರಲಿ. ಆಗ ನಾನು ತಪ್ಪಿಲ್ಲದವನಾಗಿ ಮಹಾದ್ರೋಹಕ್ಕೆ ಒಳಗಾಗುವುದಿಲ್ಲ.
ಬೇಕುಬೇಕೆಂದು ಪಾಪಮಾಡದಂತೆ ನಿಮ್ಮ ಸೇವಕನನ್ನು ಕಾಪಾಡು; ಅಂಥ ಪಾಪಗಳು ನನ್ನ ಮೇಲೆ ಆಳಿಕೆ ಮಾಡದಿರಲಿ. ಆಗ ನಾನು ತಪ್ಪಿಲ್ಲದವನಾಗಿ, ಮಹಾಪರಾಧದಿಂದ ಬಿಡುಗಡೆಯಾಗಿರುವೆನು.
14 ೧೪ ಯೆಹೋವನೇ ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ಮತ್ತು ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.
ಯೆಹೋವ ದೇವರೇ, ನನ್ನ ಬಂಡೆಯೇ, ನನ್ನ ವಿಮೋಚಕರೇ, ನನ್ನ ಬಾಯಿಯ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿಮ್ಮ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿರಲಿ.