< ಕೀರ್ತನೆಗಳು 135 >
1 ೧ ಯೆಹೋವನಿಗೆ ಸ್ತೋತ್ರ! ಯೆಹೋವನ ನಾಮವನ್ನು ಸ್ತುತಿಸಿರಿ. ಯೆಹೋವನ ಸೇವಕರೇ,
ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಹೆಸರನ್ನು ಸ್ತುತಿಸಿರಿ; ಯೆಹೋವ ದೇವರ ಆಲಯದಲ್ಲಿಯೂ,
2 ೨ ಯೆಹೋವನ ಮಂದಿರದಲ್ಲಿಯೂ, ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ, ಆತನನ್ನು ಕೀರ್ತಿಸಿರಿ.
ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವ ಯೆಹೋವ ದೇವರ ಸೇವಕರೇ, ಸ್ತುತಿಸಿರಿ.
3 ೩ ಯೆಹೋವನಿಗೆ ಸ್ತೋತ್ರ! ಯೆಹೋವನು ಒಳ್ಳೆಯವನು. ಆತನ ನಾಮವನ್ನು ಕೊಂಡಾಡಿರಿ; ಆತನು ಕೃಪಾಪೂರ್ಣನು.
ಯೆಹೋವ ದೇವರನ್ನು ಸ್ತುತಿಸಿರಿ, ಯೆಹೋವ ದೇವರು ಒಳ್ಳೆಯವರು; ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ, ಏಕೆಂದರೆ ಅದು ರಮ್ಯವಾದದ್ದು.
4 ೪ ಯೆಹೋವನು ಯಾಕೋಬನ ವಂಶದವರನ್ನು ತನಗಾಗಿಯೂ, ಇಸ್ರಾಯೇಲರನ್ನು ಸ್ವಕೀಯ ಜನರನ್ನಾಗಿಯೂ ಆರಿಸಿಕೊಂಡನಲ್ಲಾ.
ಯೆಹೋವ ದೇವರು ಯಾಕೋಬನನ್ನು ತಮಗೋಸ್ಕರ ಆಯ್ದುಕೊಂಡರು, ಇಸ್ರಾಯೇಲನ್ನು ತಮ್ಮ ಶ್ರೇಷ್ಠ ಸಂಪತ್ತಾಗಿಯೂ ಆಯ್ದುಕೊಂಡಿದ್ದಾರೆ.
5 ೫ ಯೆಹೋವನು ದೊಡ್ಡವನೆಂದೂ, ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ.
ಯೆಹೋವ ದೇವರು ದೊಡ್ಡವರು; ನಮ್ಮ ಯೆಹೋವ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವರೆಂದು ನಾನು ತಿಳಿದಿದ್ದೇನೆ.
6 ೬ ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ, ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ ತನಗೆ ಬೇಕಾದದ್ದನ್ನು ಮಾಡುತ್ತಾನೆ.
ಯೆಹೋವ ದೇವರು ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಸಮುದ್ರದಲ್ಲಿಯೂ, ಎಲ್ಲಾ ಅಗಾಧಗಳಲ್ಲಿಯೂ ತಾವು ಅಪೇಕ್ಷಿಸುವುದನ್ನೆಲ್ಲಾ ಮಾಡುತ್ತಾರೆ.
7 ೭ ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ; ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ; ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.
ಭೂಮಿಯ ಎಲ್ಲಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಯನ್ನೂ ಮಿಂಚನ್ನೂ ಕಳುಹಿಸುತ್ತಾರೆ. ಗಾಳಿಯನ್ನು ತಮ್ಮ ಉಗ್ರಾಣಗಳಿಂದ ಬೀಸುವಂತೆ ಮಾಡುತ್ತಾರೆ.
8 ೮ ಆತನು ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ, ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು.
ದೇವರು ಈಜಿಪ್ಟ್ ಜನರನ್ನು ಮೊದಲುಗೊಂಡು ಪಶುಗಳವರೆಗೂ ಚೊಚ್ಚಲುಗಳನ್ನೆಲ್ಲಾ ದಂಡಿಸಿದರು.
9 ೯ ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ, ಅವನ ಸೇವಕರಿಗೂ ವಿರುದ್ಧವಾಗಿ ಅದ್ಭುತಗಳನ್ನು, ಮಹತ್ಕಾರ್ಯಗಳನ್ನು ನಡೆಸಿದನು.
ಈಜಿಪ್ಟೇ, ನಿಮ್ಮ ಮಧ್ಯದಲ್ಲಿ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ದೇವರು ಫರೋಹನಿಗೂ, ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.
10 ೧೦ ಆತನು ದೊಡ್ಡ ಜನಾಂಗಗಳನ್ನು ನಾಶಮಾಡಿಬಿಟ್ಟನು; ಬಲಿಷ್ಠ ರಾಜರನ್ನು ಕೊಂದುಹಾಕಿದನು.
ದೇವರು ದೊಡ್ಡ ಜನಾಂಗಗಳನ್ನೂ, ಬಲವಾದ ಅರಸರನ್ನೂ ದಂಡಿಸಿದರು.
11 ೧೧ ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ, ಬಾಷಾನಿನ ಅರಸನಾದ ಓಗನೂ ಇದ್ದರು. ಆತನು ಕಾನಾನ್ ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು.
ಅಮೋರಿಯರ ಅರಸನಾದ ಸೀಹೋನನನ್ನು, ಬಾಷಾನಿನ ಅರಸನಾದ ಓಗನನ್ನೂ, ಕಾನಾನಿನ ಎಲ್ಲಾ ಅರಸರನ್ನೂ ದಂಡಿಸಿದರು.
12 ೧೨ ಅವರ ದೇಶವನ್ನು ಇಸ್ರಾಯೇಲರಿಗೆ ಕೊಟ್ಟನು; ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು.
ದೇವರು ದೇಶವನ್ನು ಸೊತ್ತಾಗಿ ತಮ್ಮ ಪ್ರಜೆಯಾದ ಇಸ್ರಾಯೇಲಿಗೆ ಕೊಟ್ಟರು.
13 ೧೩ ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು; ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲು ಯೋಗ್ಯನಾಗಿರುತ್ತೀ.
ಯೆಹೋವ ದೇವರೇ, ನಿಮ್ಮ ನಾಮವೂ, ನಿಮ್ಮ ಪ್ರಭಾವವೂ ತಲತಲಾಂತರಕ್ಕೂ ಸ್ಮರಣೆಯಾಗಿರುವುದು.
14 ೧೪ ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು, ತನ್ನ ಸೇವಕರನ್ನು ಕನಿಕರಿಸುವನು.
ಯೆಹೋವ ದೇವರು ತಮ್ಮ ಜನರಿಗೆ ನ್ಯಾಯವನ್ನು ಸ್ಥಾಪಿಸುವರು, ತಮ್ಮ ಸೇವಕರ ಮೇಲೆ ಅನುಕಂಪವನ್ನೂ ತೋರಿಸುವರು.
15 ೧೫ ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.
ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.
16 ೧೬ ಅವುಗಳಿಗೆ ಬಾಯಿದ್ದರೂ ಮಾತನಾಡುವುದಿಲ್ಲ, ಕಣ್ಣಿದ್ದರೂ ನೋಡುವುದಿಲ್ಲ,
ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.
17 ೧೭ ಕಿವಿಯಿದ್ದರೂ ಕೇಳುವುದಿಲ್ಲ, ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ.
ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಅವುಗಳ ಬಾಯಲ್ಲಿ ಶ್ವಾಸ ಇಲ್ಲ.
18 ೧೮ ಅವುಗಳನ್ನು ಮಾಡುವವರು, ಅವುಗಳಲ್ಲಿ ಭರವಸವಿಡುವವರು ಅವುಗಳಂತೆಯೇ.
ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.
19 ೧೯ ಇಸ್ರಾಯೇಲನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; ಆರೋನನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.
ಇಸ್ರಾಯೇಲ್ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ಆರೋನನ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.
20 ೨೦ ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; ಯೆಹೋವನ ಭಕ್ತರೇ, ಯೆಹೋವನನ್ನು ಕೊಂಡಾಡಿರಿ.
ಲೇವಿಯ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ದೇವರಲ್ಲಿ ಭಯಭಕ್ತಿಯುಳ್ಳವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.
21 ೨೧ ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ದೇವರಿಗೆ, ಕೀರ್ತಿ ಉಂಟಾಗಲಿ, ಯೆಹೋವನಿಗೆ ಸ್ತೋತ್ರ!
ಯೆರೂಸಲೇಮಿನಲ್ಲಿ ವಾಸಿಸುವವ ಯೆಹೋವ ದೇವರನ್ನು ಕೊಂಡಾಡಿ ಸ್ತುತಿಸಿರಿ; ಅವರ ಕೀರ್ತಿಯು ಚೀಯೋನಿನಿಂದ ಹೊರಗೂ ಹಬ್ಬಲಿ. ಯೆಹೋವ ದೇವರಿಗೆ ಸ್ತೋತ್ರ.