< ಕೀರ್ತನೆಗಳು 130 >
1 ೧ ಯಾತ್ರಾಗೀತೆ. ಯೆಹೋವನೇ, ಪಾತಾಳದಲ್ಲಿದ್ದು ನಿನ್ನನ್ನು ಕೂಗಿಕೊಳ್ಳುತ್ತೇನೆ.
ಯಾತ್ರಾ ಗೀತೆ. ಯೆಹೋವ ದೇವರೇ, ಅಂತರಾಳದಿಂದ ನಿಮಗೆ ಮೊರೆಯಿಡುತ್ತೇನೆ.
2 ೨ ಕರ್ತನೇ, ನನ್ನ ಮೊರೆಯನ್ನು ಕೇಳು; ನನ್ನ ವಿಜ್ಞಾಪನೆಯ ಶಬ್ದಕ್ಕೆ ಕಿವಿದೆರೆ.
ಯೆಹೋವ ದೇವರೇ, ನನ್ನ ಧ್ವನಿಯನ್ನು ಕೇಳಿರಿ. ನನ್ನ ಕೂಗಿಗೆ ಕರುಣೆ ತೋರಿಸಿ, ನಿಮ್ಮ ಕಿವಿಗಳು ನನ್ನ ವಿಜ್ಞಾಪನೆಗಳನ್ನು ಆಲೈಸಲಿ.
3 ೩ ಕರ್ತನೇ, ಯೆಹೋವನೇ, ನೀನು ಪಾಪಗಳನ್ನು ಲೆಕ್ಕಿಸುವುದಾದರೆ ನಿನ್ನ ಮುಂದೆ ಯಾರು ನಿಲ್ಲಲು ಸಾಧ್ಯ?
ಯೆಹೋವ ದೇವರೇ, ನೀವು ಪಾಪಗಳನ್ನು ಎಣಿಸಿದರೆ, ನಿಮ್ಮ ಮುಂದೆ ಯಾರು ನಿಲ್ಲುವರು?
4 ೪ ನೀನು ಪಾಪವನ್ನು ಕ್ಷಮಿಸುವವನಾದುದರಿಂದ, ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.
ಆದರೆ ನಿಮ್ಮಲ್ಲಿ ಕ್ಷಮಾಪಣೆ ಉಂಟು. ನಾವು ನಿಮ್ಮನ್ನು ಭಯಭಕ್ತಿಯಿಂದ ಸೇವೆಮಾಡುವಂತೆ ನಿಮ್ಮ ಕ್ಷಮಾಪಣೆಯಿದೆ.
5 ೫ ನಾನು ಯೆಹೋವನನ್ನು ಎದುರುನೋಡುತ್ತೇನೆ; ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ; ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ.
ಯೆಹೋವ ದೇವರನ್ನು ನಿರೀಕ್ಷಿಸುತ್ತೇನೆ, ನನ್ನ ಅಂತರಾಳವು ಸಹ ನಿರೀಕ್ಷಿಸುತ್ತದೆ; ನಾನು ದೇವರ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.
6 ೬ ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುತ್ತಾರಲ್ಲಾ; ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುವುದಕ್ಕಿಂತ ವಿಶೇಷವಾಗಿ, ನನ್ನ ಅಂತರಾತ್ಮವು ಕರ್ತನನ್ನು ಮುನ್ನೋಡುತ್ತದೆ.
ಉದಯಕ್ಕಾಗಿ ಕಾವಲುಗಾರ ಕಾದಿರುತ್ತಾರೆ. ನಾನು ಆ ಕಾವಲುಗಾರರು ಕಾದಿರುವುದಕ್ಕಿಂತ ಹೆಚ್ಚಾಗಿಯೇ ಯೆಹೋವ ದೇವರಿಗಾಗಿ ನಿರೀಕ್ಷಿಸುತ್ತಿದ್ದೇನೆ.
7 ೭ ಇಸ್ರಾಯೇಲೇ, ಯೆಹೋವನನ್ನು ಎದುರುನೋಡುತ್ತಿರು; ಯೆಹೋವನು ಕೃಪಾಸಂಪನ್ನನು; ಪೂರ್ಣವಿಮೋಚನೆಯು ಆತನಿಂದಲೇ ದೊರಕುವುದು.
ಇಸ್ರಾಯೇಲು ಯೆಹೋವ ದೇವರಲ್ಲಿ ನಿರೀಕ್ಷಿಸಲಿ, ಏಕೆಂದರೆ ಯೆಹೋವ ದೇವರ ಬಳಿಯಲ್ಲಿ ಒಂಡಬಡಿಕೆಯ ಪ್ರೀತಿ ಇರುತ್ತದೆ, ಸಂಪೂರ್ಣ ವಿಮೋಚನೆಯೂ ಇರುತ್ತದೆ.
8 ೮ ಆತನೇ ಇಸ್ರಾಯೇಲನ್ನು ಅದರ ಸಕಲ ಪಾಪಗಳಿಂದ ವಿಮೋಚಿಸುವನು.
ದೇವರು ಇಸ್ರಾಯೇಲನ್ನು ಅವರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವರು.