< ಜ್ಞಾನೋಕ್ತಿಗಳು 8 >
1 ೧ ಜ್ಞಾನವೆಂಬಾಕೆಯು ಕರೆಯುತ್ತಾಳಲ್ಲವೇ? ವಿವೇಕವೆಂಬ ಆಕೆಯು ಧ್ವನಿಗೈಯುತ್ತಾಳಲ್ಲವೇ?
2 ೨ ಆಕೆಯು ರಾಜಮಾರ್ಗಗಳ ಮುಖ್ಯಸ್ಥಾನದಲ್ಲಿ, ದಾರಿಯ ಪಕ್ಕದಲ್ಲಿ, ನಡುಬೀದಿಯಲ್ಲಿ ನಿಂತುಕೊಳ್ಳುತ್ತಾಳೆ.
3 ೩ ಆಕೆ ಪಟ್ಟಣದ ಪ್ರವೇಶ ದ್ವಾರದಲ್ಲಿ, ಬಾಗಿಲುಗಳೊಳಗೆ ಜನಸೇರುವ ಸ್ಥಳದಲ್ಲಿ ಹೀಗೆ ಕೂಗುತ್ತಾಳೆ,
4 ೪ “ಜನರೇ, ನಿಮ್ಮನ್ನೇ ಕರೆಯುತ್ತೇನೆ, ಮಾನವರಿಗಾಗಿಯೇ ಧ್ವನಿಗೈಯುತ್ತೇನೆ.
5 ೫ ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ, ಜ್ಞಾನಹೀನರೇ, ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.
6 ೬ ಕೇಳಿರಿ, ನಾನು ಶ್ರೇಷ್ಠವಾದ ಸಂಗತಿಗಳನ್ನು ಹೇಳುವೆನು, ಯಥಾರ್ಥಕ್ಕಾಗಿಯೇ ತುಟಿಗಳನ್ನು ತೆರೆಯುವೆನು,
7 ೭ ನನ್ನ ಬಾಯಿ ಸತ್ಯವನ್ನೇ ಆಡುವುದು, ದುಷ್ಟತನವು ನನ್ನ ತುಟಿಗಳಿಗೆ ಅಸಹ್ಯವಾಗಿದೆ.
8 ೮ ನನ್ನ ಮಾತುಗಳೆಲ್ಲಾ ನೀತಿಭರಿತವಾಗಿವೆ, ಅವುಗಳಲ್ಲಿ ಕಪಟವೂ, ವಕ್ರತೆಯೂ ಇಲ್ಲ.
9 ೯ ಅವೆಲ್ಲಾ ಗ್ರಹಿಕೆಯುಳ್ಳವನಿಗೆ ನ್ಯಾಯವಾಗಿಯೂ, ತಿಳಿವಳಿಕೆಯನ್ನು ಪಡೆದವರಿಗೆ ಯಥಾರ್ಥವಾಗಿಯೂ ತೋರುವವು.
10 ೧೦ ನನ್ನ ಬೋಧನೆಯನ್ನು ಬೆಳ್ಳಿಗಿಂತಲೂ ಮತ್ತು ಜ್ಞಾನೋಪದೇಶವನ್ನು ಅಪರಂಜಿಗಿಂತಲೂ ಉತ್ತಮವೆಂದು ಹೊಂದಿಕೊಳ್ಳಿರಿ.
11 ೧೧ ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ, ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.
12 ೧೨ ಜ್ಞಾನವೆಂಬ ನನಗೆ ಜಾಣ್ಮೆಯೇ ನಿವಾಸ, ಯುಕ್ತಿಗಳ ತಿಳಿವಳಿಕೆಯನ್ನು ಹೊಂದಿದ್ದೇನೆ.
13 ೧೩ ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.
14 ೧೪ ಸದ್ಯೋಚನೆಯೂ, ಸುಜ್ಞಾನವೂ, ಸಾಮರ್ಥ್ಯವೂ ನನ್ನಲ್ಲಿವೆ, ವಿವೇಕವೂ ನಾನೇ.
15 ೧೫ ನನ್ನ ಸಹಾಯದಿಂದ ರಾಜರು ಆಳುವರು, ಅಧಿಪತಿಗಳು ಸಹ ನ್ಯಾಯತೀರಿಸುವರು.
16 ೧೬ ನನ್ನ ಮೂಲಕ ಪ್ರಭುಗಳು, ನಾಯಕರು ಅಂತು ಭೂಪತಿಗಳೆಲ್ಲರೂ ದೊರೆತನ ಮಾಡುವರು.
17 ೧೭ ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18 ೧೮ ನನ್ನಲ್ಲಿ ಧನ, ಘನತೆ, ಶ್ರೇಷ್ಠಸಂಪತ್ತೂ, ನೀತಿಯೂ ಇರುತ್ತವೆ.
19 ೧೯ ನನ್ನಿಂದಾಗುವ ಫಲವು ಬಂಗಾರಕ್ಕಿಂತಲೂ ಹೌದು ಅಪರಂಜಿಗಿಂತಲೂ ಉತ್ತಮ. ನನ್ನ ಮೂಲಕವಾದ ಆದಾಯವು ಚೊಕ್ಕ ಬೆಳ್ಳಿಗಿಂತಲೂ ಅಮೂಲ್ಯವಾಗಿದೆ.
20 ೨೦ ನಾನು ಹಿಡಿದಿರುವ ದಾರಿಯು ನೀತಿಯೇ, ನ್ಯಾಯಮಾರ್ಗಗಳಲ್ಲಿ ನಡೆಯುತ್ತೇನೆ.
21 ೨೧ ಹೀಗಿರಲು ನನ್ನನ್ನು ಪ್ರೀತಿಸುವವರಿಗೆ ಧನದ ಬಾಧ್ಯತೆಯನ್ನು ಅನುಗ್ರಹಿಸಿ, ಅವರ ಬೊಕ್ಕಸಗಳನ್ನು ತುಂಬಿಸುವೆನು.
22 ೨೨ ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ.
23 ೨೩ ಪ್ರಾರಂಭದಲ್ಲಿ, ಭೂಮಿಯು ಹುಟ್ಟುವುದಕ್ಕಿಂತ ಮುಂಚೆ, ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು.
24 ೨೪ ಜಲನಿಧಿಗಳಾಗಲಿ, ನೀರು ತುಂಬಿದ ಬುಗ್ಗೆಗಳಾಗಲಿ ಇಲ್ಲದಿರುವಾಗ ನಾನು ಹುಟ್ಟಿದೆನು.
25 ೨೫ ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮುಂಚೆ ಆತನು ಭೂಲೋಕವನ್ನಾಗಲಿ, ಬಯಲನ್ನಾಗಲಿ,
26 ೨೬ ಭೂಮಿಯ ಮೊದಲನೆಯ ಅಣುರೇಣನ್ನಾಗಲಿ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು.
27 ೨೭ ಆತನು ಸಾಗರದ ಮೇಲೆ ಚಕ್ರಾಕಾರವಾದ ಗೆರೆಯನ್ನು ಎಳೆದು, ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು.
28 ೨೮ ಆತನು ಗಗನವನ್ನು ಮೇಲೆ ಸ್ಥಿರಪಡಿಸಿ, ಸಾಗರದ ಬುಗ್ಗೆಗಳನ್ನು ನೆಲೆಗೊಳಿಸಿದನು.
29 ೨೯ ಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಆತನು ಸಮುದ್ರಕ್ಕೆ ಮೇರೆಯನ್ನು ನೇಮಿಸಿ, ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ,
30 ೩೦ ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ, ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ,
31 ೩೧ ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ, ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.
32 ೩೨ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೇ ಸರಿ.
33 ೩೩ ನನ್ನ ಉಪದೇಶವನ್ನು ಕೇಳಿರಿ, ಅದನ್ನು ಬಿಡದೆ ಜ್ಞಾನವಂತರಾಗಿರಿ.
34 ೩೪ ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನವೂ ಕಾಯುತ್ತಾ ಬಾಗಿಲಿನ ನಿಲವುಗಳ ಹತ್ತಿರವಿದ್ದು, ಜಾಗರೂಕನಾಗಿ ನನ್ನ ಮಾತುಗಳನ್ನು ಕೇಳುವವನು ಭಾಗ್ಯವಂತನು.
35 ೩೫ ಯಾವನು ನನ್ನನ್ನು ಹೊಂದುತ್ತಾನೋ ಅವನು ಜೀವವನ್ನು ಹೊಂದುತ್ತಾನೆ; ಅವನು ಯೆಹೋವನ ದಯೆಗೆ ಗುರಿಯಾಗುವನು.
36 ೩೬ ಯಾವನು ನನಗೆ ತಪ್ಪುಮಾಡುತ್ತಾನೋ ಅವನು ತನ್ನ ಆತ್ಮಕ್ಕೆ ಕೇಡುಮಾಡಿಕೊಳ್ಳುತ್ತಾನೆ; ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”