< ಜ್ಞಾನೋಕ್ತಿಗಳು 31 >
1 ೧ ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವೋಕ್ತಿಯು,
2 ೨ ಏನು, ಕಂದಾ? ನನ್ನ ಗರ್ಭಪುತ್ರನೇ, ಏನು, ನನ್ನ ಹರಕೆಯ ಮಗುವೇ, ನಾನು ಏನು ಹೇಳಲಿ?
3 ೩ ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸಬೇಡ, ರಾಜರಿಗೆ ವಿನಾಶಕರವಾದ ದಾರಿಗೆ ತಿರುಗಬೇಡ.
4 ೪ ದ್ರಾಕ್ಷಾರಸವನ್ನು ಕುಡಿಯುವುದು ರಾಜರಿಗೆ ಯೋಗ್ಯವಲ್ಲ, ಲೆಮೂವೇಲನೇ, ಅದು ರಾಜರಿಗೆ ಯೋಗ್ಯವಲ್ಲ, “ಮದ್ಯವೆಲ್ಲಿ?” ಎನ್ನುವುದು ಪ್ರಭುಗಳಿಗೆ ವಿಹಿತವಲ್ಲ.
5 ೫ ಕುಡಿದರೆ ಅವರು ಧರ್ಮನಿಯಮಗಳನ್ನು ಮರೆತುಬಿಟ್ಟು, ಬಾಧೆಪಡುವವರೆಲ್ಲರ ನ್ಯಾಯವನ್ನು ವ್ಯತ್ಯಾಸಮಾಡುವರು.
6 ೬ ಮದ್ಯವನ್ನು ಗತಿಯಿಲ್ಲದವನಿಗೂ, ದ್ರಾಕ್ಷಾರಸವನ್ನು ಮನೋವ್ಯಥೆಪಡುವವನಿಗೂ ಕೊಟ್ಟರೆ ಕೊಡು.
7 ೭ ಕುಡಿದು ಬಡತನವನ್ನು ಮರೆತುಬಿಡಲಿ, ಶ್ರಮೆಯನ್ನು ಇನ್ನೂ ಜ್ಞಾಪಕಕ್ಕೆ ತಾರದಿರಲಿ.
8 ೮ ಬಾಯಿಲ್ಲದವರಿಗೂ, ಹಾಳಾಗಿ ಹೋಗುತ್ತಿರುವವರೆಲ್ಲರಿಗೂ, ನ್ಯಾಯವಾಗುವಂತೆ ಬಾಯಿ ತೆರೆ.
9 ೯ ಬಾಯನ್ನು ತೆರೆದು ನ್ಯಾಯವನ್ನು ತೀರಿಸು, ದೀನದರಿದ್ರರ ವ್ಯಾಜ್ಯ ಮಾಡು.
10 ೧೦ ಗುಣವತಿಯಾದ ಸತಿಯು ಎಲ್ಲಿ ಸಿಕ್ಕುವಳು? ಆಕೆಯು ಹವಳಕ್ಕಿಂತಲೂ ಬಹೂ ಅಮೂಲ್ಯಳು.
11 ೧೧ ಪತಿಯ ಹೃದಯವು ಆಕೆಯಲ್ಲಿ ಭರವಸವಿಡುವುದು, ಅವನು ಕೊಳ್ಳೆ ಕೊಳ್ಳೆಯಾಗಿ ಸಂಪಾದಿಸುವನು.
12 ೧೨ ಆಕೆಯು ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ, ಹಿತವನ್ನೇ ಮಾಡುತ್ತಿರುವಳು.
13 ೧೩ ಉಣ್ಣೆಯನ್ನೂ, ಸೆಣಬನ್ನೂ ಹುಡುಕಿ ತಂದು, ಕೈಕೆಲಸವನ್ನು ಆಸಕ್ತಿಯಿಂದ ಮಾಡುವಳು.
14 ೧೪ ವ್ಯಾಪಾರದ ಹಡಗುಗಳಂತೆ, ದೂರದಿಂದ ಬೇಕಾದ ಆಹಾರವನ್ನು ತರುವಳು.
15 ೧೫ ಇನ್ನೂ ಕತ್ತಲಿರುವಾಗಲೇ ಎದ್ದು, ಮನೆಯವರಿಗೆ ಆಹಾರವನ್ನು, ನೀಡುವಳು ದಾಸಿಯರಿಗೆ ದಿನದ ಕೆಲಸಗಳನ್ನು ಹಂಚುವಳು.
16 ೧೬ ಹೊಲವನ್ನು ನೋಡಿ ಯೋಚಿಸಿ ಕೊಂಡುಕೊಳ್ಳುವಳು, ತನ್ನ ಕೈಗೆಲಸದ ಲಾಭದಿಂದ ದ್ರಾಕ್ಷಿತೋಟವನ್ನು ಮಾಡಿಸುವಳು.
17 ೧೭ ನಡುವಿನ ಬಲವೆಂಬ ಪಟ್ಟಿಯನ್ನು ಕಟ್ಟಿಕೊಂಡು, ತೋಳುಗಳನ್ನು ಶಕ್ತಿಗೊಳಿಸುವಳು.
18 ೧೮ ವಿವೇಚಿಸಿ ಬಹುಲಾಭವಾಯಿತೆಂದು ತಿಳುಕೊಳ್ಳುವಳು, ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.
19 ೧೯ ರಾಟೆಯ ಮೇಲೆ ಕೈ ಹಾಕಿ, ಕದರನ್ನು ಹಿಡಿಯುವಳು.
20 ೨೦ ಬಡವರಿಗಾಗಿ ಕೈ ಬಿಚ್ಚಿ, ದಿಕ್ಕಿಲ್ಲದವರಿಗೆ ಕೈ ನೀಡುವಳು.
21 ೨೧ ಮನೆಯವರೆಲ್ಲರಿಗೂ ಸಕಲಾತಿಯನ್ನು ಹೊದಿಸಿರುವುದರಿಂದ, ಅವರ ವಿಷಯವಾಗಿ ಆಕೆಗೆ ಹಿಮದ ಭಯವಿಲ್ಲ.
22 ೨೨ ತನಗಾಗಿ ರತ್ನಗಂಬಳಿಗಳನ್ನು ಮಾಡುವಳು, ಆಕೆಯ ಉಡುಪು ನಾರುಮಡಿ, ರಕ್ತಾಂಬರ.
23 ೨೩ ಆಕೆಯ ಪತಿಯು ನ್ಯಾಯಸ್ಥಾನದಲ್ಲಿ, ದೇಶದ ಹಿರಿಯರ ಮಧ್ಯದಲ್ಲಿ ಕುಳಿತಿರುವಾಗ ಪ್ರಸಿದ್ಧನಾಗಿ ಕಾಣುವನು.
24 ೨೪ ಹಚ್ಚಡಗಳನ್ನು ನೆಯ್ದು ಮಾರಾಟಮಾಡುವಳು, ನಡುಕಟ್ಟುಗಳನ್ನು ವರ್ತಕನಿಗೆ ಒದಗಿಸುವಳು.
25 ೨೫ ಬಲವನ್ನು, ತೇಜಸ್ಸನ್ನು ಹೊದ್ದುಕೊಂಡಿರುವಳು, ಭವಿಷ್ಯತ್ತಿನ ಭಯವಿಲ್ಲದೆ ನಗುತ್ತಿರುವಳು.
26 ೨೬ ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವುದು.
27 ೨೭ ಸೋಮಾರಿತನದ ಅನ್ನವನ್ನು ತಿನ್ನದೆ, ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು.
28 ೨೮ ಮಕ್ಕಳು ಎದ್ದುನಿಂತು ಆಕೆಯನ್ನು “ಧನ್ಯಳು” ಎಂದು ಹೇಳುವರು.
29 ೨೯ ಪತಿಯು ಸಹ, “ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು” ಎಂದು ಆಕೆಯನ್ನು ಕೊಂಡಾಡುವನು.
30 ೩೦ ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ, ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.
31 ೩೧ ಆಕೆಯ ಕೈಕೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ, ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ.