< ಮತ್ತಾಯನು 5 >
1 ೧ ಯೇಸು ದೊಡ್ಡ ಗುಂಪನ್ನು ಕಂಡು ಬೆಟ್ಟದ ಮೇಲೇರಿ ಕುಳಿತ ತರುವಾಯ ಆತನ ಶಿಷ್ಯರು ಆತನ ಬಳಿಗೆ ಬಂದರು.
2 ೨ ಆತನು ಅವರಿಗೆ ಉಪದೇಶ ಮಾಡಿ ಹೇಳಿದ್ದೇನೆಂದರೆ,
3 ೩ “ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕ ರಾಜ್ಯವು ಅವರದು.
4 ೪ ದುಃಖಪಡುವವರು ಧನ್ಯರು; ಅವರು ದೇವರಿಂದ ಸಮಾಧಾನ ಹೊಂದುವರು.
5 ೫ ವಿನಯವುಳ್ಳವರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.
6 ೬ ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರು ತೃಪ್ತರಾಗುವರು.
7 ೭ ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು.
8 ೮ ಶುದ್ಧ ಹೃದಯದವರು ಧನ್ಯರು; ಅವರು ದೇವರನ್ನು ನೋಡುವರು.
9 ೯ ಶಾಂತಿಗಾಗಿ ಶ್ರಮಿಸುವವರು ಧನ್ಯರು; ಅವರು ದೇವರ ಮಕ್ಕಳು ಎಂದೆನಿಸಿಕೊಳ್ಳುವರು.
10 ೧೦ ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಪರಲೋಕ ರಾಜ್ಯವು ಅವರದು.
11 ೧೧ “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.
12 ೧೨ ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಅವರು ಹೀಗೆಯೇ ಹಿಂಸೆಪಡಿಸಿದರಲ್ಲಾ.
13 ೧೩ “ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ ಅದಕ್ಕೆ ಬೇರೆ ಯಾವುದರಿಂದ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯ? ಜನರು ಅದನ್ನು ಹೊರಗೆಹಾಕಿ ದಾರಿಹೋಕರು ತುಳಿಯುವುದಕ್ಕೆ ಅದು ಯೋಗ್ಯವೇ ಹೊರತು ಮತ್ತ್ಯಾವ ಕೆಲಸಕ್ಕೂ ಬರುವುದಿಲ್ಲ.
14 ೧೪ ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಕಟ್ಟಲ್ಪಟ್ಟಿರುವ ಊರು ಮರೆಯಾಗಿರಲಾರದು.
15 ೧೫ ಮತ್ತು ಯಾರೂ ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆಯೇ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವುದು.
16 ೧೬ ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.
17 ೧೭ “ಮೋಶೆಯ ಧರ್ಮನಿಯಮವನ್ನಾಗಲಿ ಪ್ರವಾದಿಗಳ ಪ್ರವಾದನೆಗಳನ್ನಾಗಲಿ ನಿರರ್ಥಕಪಡಿಸುವುದಕ್ಕೆ ನಾನು ಬಂದೆನೆಂದು ನೆನಸಬೇಡಿರಿ; ನಿರರ್ಥಕಪಡಿಸಲು ಬಂದಿಲ್ಲ; ಬದಲಾಗಿ ನೆರವೇರಿಸುವುದಕ್ಕೆ ಬಂದಿದ್ದೇನೆ.
18 ೧೮ ನಿಮಗೆ ಸತ್ಯವಾಗಿ ಹೇಳುತ್ತೇನೆ, ಆಕಾಶವೂ ಭೂಮಿಯೂ ಅಳಿದುಹೋಗುವ ತನಕ ಧರ್ಮನಿಯಮವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಚುಕ್ಕೆಯಾಗಲಿ, ಒಂದು ಅಕ್ಷರವಾಗಲಿ ಅಳಿದುಹೋಗುವುದಿಲ್ಲ.
19 ೧೯ ಆದುದರಿಂದ ಈ ಸಣ್ಣ ಆಜ್ಞೆಗಳಲ್ಲಿ ಒಂದನ್ನು ಮೀರಿ ನಡೆದು ಜನರಿಗೂ ಹಾಗೆ ಮಾಡುವುದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಕನಿಷ್ಠನೆನ್ನಿಸಿಕೊಳ್ಳುವನು; ಆದರೆ ತಾನೇ ಸ್ವತಃ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋಧಿಸುವವನು ಪರಲೋಕ ರಾಜ್ಯದಲ್ಲಿ ಶ್ರೇಷ್ಠನೆನಿಸಿಕೊಳ್ಳುವನು.
20 ೨೦ ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಉತ್ತಮವಾಗಿರದಿದ್ದರೆ ನೀವು ಪರಲೋಕ ರಾಜ್ಯಕ್ಕೆ ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ.
21 ೨೧ “‘ನರಹತ್ಯ ಮಾಡಬಾರದು; ನರಹತ್ಯ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನೆಂದು’ ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಿ.
22 ೨೨ ಆದರೆ ನಾನು ನಿಮಗೆ ಹೇಳುವುದೇನಂದರೆ, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿಯೊಬ್ಬ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ, ‘ಎಲೈ ಮೂರ್ಖನೇ’ ಎಂದು ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ‘ಎಲೈ ನೀಚನೇ’ ಎಂದು ಅನ್ನುವವನು, ಅಗ್ನಿ ನರಕಕ್ಕೆ ಗುರಿಯಾಗುವನು. (Geenna )
23 ೨೩ ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ,
24 ೨೪ ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟು ಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.
25 ೨೫ “ಇನ್ನೂ ದಾರಿಯಲ್ಲಿರುವಾಗಲೇ ನಿನ್ನ ಪ್ರತಿವಾದಿಯೊಂದಿಗೆ ಬೇಗ ಸಂಧಾನ ಮಾಡಿಕೋ; ಇಲ್ಲದಿದ್ದರೆ ಆ ಆಪಾದಕನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು ನ್ಯಾಯಾಧಿಪತಿಯು ನಿನ್ನನ್ನು ಸೆರೆಮನೆ ಅಧಿಕಾರಿಯ ಕೈಗೆ ಒಪ್ಪಿಸಿಕೊಟ್ಟಾನು. ಆಗ ನೀನು ಸೆರೆಯಲ್ಲಿ ಎಸೆಯಲ್ಪಡುವಿ.
26 ೨೬ ನೀನು ಒಂದು ಕಾಸನ್ನಾದರೂ ಉಳಿಸಿಕೊಳ್ಳದೆ ಎಲ್ಲವನ್ನು ಸಲ್ಲಿಸುವ ತನಕ ಅಲ್ಲಿಂದ ಬರುವುದಕ್ಕಾಗುವುದೇ ಇಲ್ಲ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ.
27 ೨೭ “‘ವ್ಯಭಿಚಾರ ಮಾಡಬಾರದೆಂದು’ ಹೇಳಿಯದೆ ಎಂಬುದಾಗಿ ನೀವು ಕೇಳಿದ್ದೀರಿ.
28 ೨೮ ಆದರೆ ನಾನು ನಿಮಗೆ ಹೇಳುವುದೇನಂದರೆ, ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿಯೊಬ್ಬ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾಗಿದ್ದಾನೆ.
29 ೨೯ ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಿತ್ತು ಎಸೆದುಬಿಡು, ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವುದಕ್ಕಿಂತ ದೇಹದ ಭಾಗಗಳಲ್ಲಿ ಒಂದು ಹೋಗುವುದು ನಿನಗೆ ಹಿತವಲ್ಲವೇ. (Geenna )
30 ೩೦ ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದು ಎಸೆದುಬಿಡು, ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವುದಕ್ಕಿಂತ ದೇಹದ ಭಾಗಗಳಲ್ಲಿ ಒಂದು ಹೋಗುವುದು ನಿನಗೆ ಹಿತವಲ್ಲವೇ. (Geenna )
31 ೩೧ ಇದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಗೆ ವಿಚ್ಛೇದನ ಪತ್ರವನ್ನು ಕೊಡತಕ್ಕದ್ದೆಂದು ಹೇಳಿಯದೆಯಷ್ಟೆ.
32 ೩೨ ಆದರೆ ನಾನು ನಿಮಗೆ ಹೇಳುವುದೇನಂದರೆ, ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡುವವನಾಗಿದ್ದಾನೆ.
33 ೩೩ “ಮತ್ತು, ನೀನು ಸುಳ್ಳಾಣೆಯಿಡಬಾರದು; ‘ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರ ಕಾಲದಲ್ಲಿ’ ಹೇಳಿದೆ ಎಂದು ಕೇಳಿದ್ದೀರಷ್ಟೆ.
34 ೩೪ ಆದರೆ ನಾನು ನಿಮಗೆ ಹೇಳುವುದೇನಂದರೆ, ಆಣೆಯನ್ನೇ ಇಡಬೇಡಿರಿ. ಆಕಾಶದ ಮೇಲೆ ಆಣೆ ಇಡಬೇಡಿರಿ; ಅದು ದೇವರ ಸಿಂಹಾಸನವು.
35 ೩೫ ಭೂಮಿಯ ಮೇಲೆ ಆಣೆ ಇಡಬೇಡಿ ಅದು ಆತನ ಪಾದಪೀಠ. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿ; ಅದು ಆ ಮಹಾ ರಾಜನ ಪಟ್ಟಣವಾಗಿದೆ.
36 ೩೬ ನಿನ್ನ ತಲೆಯ ಮೇಲೆ ಕೂಡ ಆಣೆ ಇಡಬೇಡ; ನೀನು ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲಾರೆ.
37 ೩೭ ಆದರೆ ನಿಮ್ಮ ಮಾತು ‘ಹೌದಾದರೆ ಹೌದು ಅಲ್ಲವಾದರೆ ಅಲ್ಲ’ ಎಂದಿರಲಿ. ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬರುವಂತಹದ್ದಾಗಿದೆ.
38 ೩೮ “‘ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗೆಯಿಸು’ ಎಂದು ಹೇಳಿರುವುದು ಕೇಳಿದ್ದೀರಷ್ಟೆ.
39 ೩೯ ಆದರೆ ನಾನು ನಿಮಗೆ ಹೇಳುವುದೇನಂದರೆ, ಕೆಡುಕನನ್ನು ವಿರೋಧಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ನಿನ್ನ ಮತ್ತೊಂದು ಕೆನ್ನೆಯನ್ನು ಸಹ ತಿರುಗಿಸು.
40 ೪೦ ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತೆಗೆದುಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಟ್ಟುಕೊಡು.
41 ೪೧ ಒಬ್ಬನು ಒಂದು ಮೈಲು ದೂರ ಬಾ ಎಂದು ನಿನ್ನನ್ನು ಒತ್ತಾಯಿಸಿದರೆ ಅವನ ಸಂಗಡ ಎರಡು ಮೈಲು ದೂರ ಹೋಗು.
42 ೪೨ ನಿನ್ನನ್ನು ಕೇಳುವವನಿಗೆ ಕೊಡು; ನಿನ್ನಲ್ಲಿ ಬೇಡಲು ಬಂದವನಿಗೆ ಮುಖ ತಿರುಗಿಸಿಕೊಳ್ಳಬೇಡ.
43 ೪೩ “‘ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕೆಂದು’ ಹೇಳಿಯದೆ ಎಂಬುದಾಗಿ ಕೇಳಿದ್ದೀರಷ್ಟೆ.
44 ೪೪ ಆದರೆ ನಾನು ನಿಮಗೆ ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೊಸ್ಕರ ದೇವರನ್ನು ಪ್ರಾರ್ಥಿಸಿರಿ.
45 ೪೫ ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ. ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.
46 ೪೬ ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಸುಂಕದವರು ಹಾಗೆ ಮಾಡುವುದಿಲ್ಲವೇ.
47 ೪೭ ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆ ಕೊಟ್ಟರೆ ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನರು ಸಹ ಹಾಗೆ ಮಾಡುತ್ತಾರಲ್ಲವೇ.
48 ೪೮ ಆದುದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವ ಹಾಗೆಯೇ ನೀವೂ ಪರಿಪೂರ್ಣರಾಗಿರಿ.