< ಮತ್ತಾಯನು 21 >
1 ೧ ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಸಮೀಪಿಸಿ ಆಲಿವ್ ಎಣ್ಣೆಯ ಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೆ ಬಂದಾಗ
2 ೨ ಆತನು ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಹೋದಕೂಡಲೆ ಅಲ್ಲಿ ಕಟ್ಟಿರುವ ಕತ್ತೆಯನ್ನೂ ಅದರೊಂದಿಗೆ ಇರುವ ಮರಿಯನ್ನೂ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಹತ್ತಿರಕ್ಕೆ ತನ್ನಿರಿ.
3 ೩ ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ‘ಇವು ನಮ್ಮ ಕರ್ತನಿಗೆ ಬೇಕಾಗಿವೆ’ ಎಂದು ನೀವು ಹೇಳಿರಿ; ಅವನು ಕೂಡಲೆ ಅವುಗಳನ್ನು ಬಿಟ್ಟು ಕೊಡುವನು” ಎಂದು ಹೇಳಿ ಕಳುಹಿಸಿದನು.
4 ೪ ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದಾಯಿತು; ಅದೇನೆಂದರೆ,
5 ೫ “ಚೀಯೋನ್ ಪುತ್ರಿಯೇ, ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಿದ್ದಾನೆ; ಆತನು ಸಾತ್ವಿಕ ಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು” ಹೇಳಿರಿ ಎಂಬುದು.
6 ೬ ಆಗ ಶಿಷ್ಯರು ಹೋಗಿ ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿದರು.
7 ೭ ಕತ್ತೆಯನ್ನೂ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಲು ಯೇಸು ಹತ್ತಿ ಕುಳಿತುಕೊಂಡನು.
8 ೮ ಆಗ ಜನರ ಗುಂಪಿನಲ್ಲಿ ಬಹಳ ಮಂದಿ ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು; ಬೇರೆ ಕೆಲವರು ಮರಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು.
9 ೯ ಆತನ ಹಿಂದೆ ಮುಂದೆ ಗುಂಪಾಗಿ ಹೋಗುತ್ತಿದ್ದ ಜನರು, “ದಾವೀದನ ಕುಮಾರನಿಗೆ ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನು ಧನ್ಯನು! ಮೇಲಣ ಲೋಕಗಳಲ್ಲಿ ಹೊಸನ್ನ!” ಎಂದು ಆರ್ಭಟಿಸಿದರು.
10 ೧೦ ಯೇಸು ಯೆರೂಸಲೇಮನ್ನು ಪ್ರವೇಶಿಸಲು ಪಟ್ಟಣದಲ್ಲೆಲ್ಲಾ ಗದ್ದಲವಾಗಿ, “ಈತನು ಯಾರು?” ಅಂದರು.
11 ೧೧ ಅದಕ್ಕೆ ಆ ಗುಂಪಿನ ಜನರು, “ಈತನು ಗಲಿಲಾಯದ ನಜರೇತಿನ ಪ್ರವಾದಿಯಾದ ಯೇಸು” ಅಂದರು.
12 ೧೨ ಬಳಿಕ ಯೇಸು ದೇವಾಲಯದೊಳಗೆ ಹೋಗಿ ಅದರಲ್ಲಿ ಮಾರುವ ಕೊಳ್ಳುವ ಎಲ್ಲರನ್ನೂ ಹೊರಡಿಸಿಬಿಟ್ಟು ಹಣ ವಿನಿಮಯದಾರರ ಮೇಜುಗಳನ್ನೂ ಪಾರಿವಾಳ ಮಾರುವವರ ಕಾಲ್ಮಣೆಗಳನ್ನೂ ಕೆಡವಿಹಾಕಿದನು.
13 ೧೩ ಆತನು ಅವರಿಗೆ, “‘ನನ್ನ ಮನೆಯು ಪ್ರಾರ್ಥನಾಲಯವಾಗಿದೆ’ ಎಂದು ಬರೆದಿದೆ; ಆದರೆನೀವು ಅದನ್ನು ಕಳ್ಳರ ಗವಿ ಮಾಡುತ್ತಿದ್ದೀರಿ” ಎಂದು ಹೇಳಿದನು.
14 ೧೪ ಆಗ ಅಲ್ಲಿದ್ದ ಕುರುಡರೂ ಕುಂಟರೂ ದೇವಾಲಯದಲ್ಲಿ ಆತನ ಬಳಿಗೆ ಬರಲು ಆತನು ಅವರನ್ನು ಸ್ವಸ್ಥಮಾಡಿದನು.
15 ೧೫ ಆದರೆ ಮುಖ್ಯಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನು ನೋಡಿ ಹಾಗು “ದಾವೀದನ ಕುಮಾರನಿಗೆ ಹೊಸನ್ನ” ಎಂದು ದೇವಾಲಯದಲ್ಲಿ ಹುಡುಗರು ಕೂಗುತ್ತಿರುವುದನ್ನು ಕೇಳಿ ಕೋಪಗೊಂಡರು.
16 ೧೬ ಆತನಿಗೆ, “ಇವರು ಹೇಳುವುದನ್ನು ಕೇಳುತ್ತಿರುವೆಯಾ” ಎಂದು ಹೇಳಲು ಯೇಸು, “ಹೌದು, ಕೇಳುತ್ತಿದ್ದೇನೆ, ಆದರೆ ‘ಸಣ್ಣ ಮಕ್ಕಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿರುವಿ’ ಎಂಬುದನ್ನು ನೀವು ಎಂದಾದರೂ ಓದಲಿಲ್ಲವೋ?” ಎಂದು ಕೇಳಿದನು.
17 ೧೭ ಬಳಿಕ ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಬಂದು ಅಲ್ಲಿ ರಾತ್ರಿ ಮಲಗಿದನು.
18 ೧೮ ಬೆಳಗ್ಗೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಬರುತ್ತಿರುವಾಗ ಹಸಿದಿದ್ದನು.
19 ೧೯ ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಹತ್ತಿರಕ್ಕೆ ಹೋಗಿ ಅದರಲ್ಲಿ ಬರೀ ಎಲೆಗಳು ಮಾತ್ರ ಇರುವುದನ್ನು ಕಂಡು ಅದಕ್ಕೆ, “ಇನ್ನು ಮೇಲೆ ನಿನ್ನಲ್ಲಿ ಎಂದೆಂದಿಗೂ ಫಲವು ಫಲಿಸದೆ ಹೋಗಲಿ” ಎಂದು ಹೇಳಿದನು. ಆ ಕ್ಷಣವೇ ಆ ಅಂಜೂರದ ಮರವು ಒಣಗಿಹೋಯಿತು. (aiōn )
20 ೨೦ ಶಿಷ್ಯರು ಅದನ್ನು ನೋಡಿ ಬೆರಗಾಗಿ, “ಈ ಅಂಜೂರದ ಮರವು ಒಂದು ಕ್ಷಣದಲ್ಲೇ ಒಣಗಿಹೋಯಿತಲ್ಲಾ” ಎಂದು ಆಶ್ಚರ್ಯಗೊಂಡರು.
21 ೨೧ ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯಪಡದೆ ನಂಬಿದರೆ ಈ ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ ಮಾತ್ರವಲ್ಲದೆ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೆ ಅದೂ ಆಗುವುದು.
22 ೨೨ ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ” ಅಂದನು.
23 ೨೩ ತರುವಾಯ ಯೇಸು ದೇವಾಲಯಕ್ಕೆ ಬಂದು ಬೋಧಿಸುತ್ತಿರುವಾಗ ಮುಖ್ಯಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು, “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಕೇಳಿದರು.
24 ೨೪ ಯೇಸು ಅವರಿಗೆ ಹೇಳಿದ್ದೇನೆಂದರೆ, “ನಾನೂ ಸಹ ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ನನಗೆ ಉತ್ತರಿಸಿದರೆ ಆಗ ನಾನು ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.
25 ೨೫ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂದಿತು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ?” ಅಂದನು. ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವು ಅವನನ್ನು ಏಕೆ ನಂಬಲಿಲ್ಲ’ ಎಂದು ನಮಗೆ ಕೇಳಿಯಾನು;
26 ೨೬ ‘ಮನುಷ್ಯರಿಂದ ಬಂದಿತೆಂದು’ ಹೇಳಿದರೆ, ನಮಗೆ ಜನರ ಭಯವಿದೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಒಪ್ಪಿಕೊಂಡಿದ್ದಾರಲ್ಲಾ” ಎಂಬುದಾಗಿ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
27 ೨೭ ಅನಂತರ ಅವರು, “ನಾವರಿಯೆವು” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಆತನು ಅವರಿಗೆ, “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನು ಸಹ ನಿಮಗೆ ಹೇಳುವುದಿಲ್ಲ.
28 ೨೮ ಆದರೆ ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು, ‘ಮಗನೇ, ನೀನು ಹೋಗಿ ಈ ದಿನ ದ್ರಾಕ್ಷಾತೋಟದಲ್ಲಿ ಕೆಲಸ ಮಾಡು’ ಎಂದು ಹೇಳಲು
29 ೨೯ ಅವನು ಪ್ರತ್ಯುತ್ತರವಾಗಿ, ‘ನಾನು ಹೋಗುವುದಿಲ್ಲವೆಂದು’ ಹೇಳಿದ್ದಾಗ್ಯೂ ತರುವಾಯ ತನ್ನ ಮನಸ್ಸನ್ನು ಬದಲಿಸಿ, ತೋಟಕ್ಕೆ ಹೋದನು.
30 ೩೦ ಆಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು, ‘ನಾನು ಹೋಗುತ್ತೇನಪ್ಪಾ’ ಎಂದು ಹೇಳಿದರೂ ಅವನು ಹೋಗಲೇ ಇಲ್ಲ.
31 ೩೧ ಅವರಿಬ್ಬರಲ್ಲಿ ತಂದೆಯ ಚಿತ್ತದಂತೆ ನಡೆದವನು ಯಾರು? ಎಂದು ಕೇಳಿದ್ದಕ್ಕೆ ಅವರು, ‘ಮೊಲನೆಯವನೇ’” ಅಂದರು. ಆಗ ಯೇಸು ಅವರಿಗೆ, ಸುಂಕದವರೂ, ವೇಶ್ಯೆಯರೂ ನಿಮಗಿಂತ ಮೊದಲು ದೇವರ ರಾಜ್ಯವನ್ನು ಸೇರುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
32 ೩೨ ಯಾಕೆಂದರೆ, ಯೋಹಾನನು ನೀತಿಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ; ಸುಂಕದವರು, ವೇಶ್ಯೆಯರು ಅವನನ್ನು ನಂಬಿದರು; ನೀವು ಇದನ್ನು ನೋಡಿದ್ದಾಗ್ಯೂ ಪಶ್ಚಾತ್ತಾಪ ಪಡಲಿಲ್ಲ, ಅವನನ್ನು ನಂಬಲಿಲ್ಲ.
33 ೩೩ “ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನುಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನುಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು.
34 ೩೪ ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು,
35 ೩೫ ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು.
36 ೩೬ ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು.
37 ೩೭ ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು.
38 ೩೮ ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು
39 ೩೯ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು.
40 ೪೦ ಹಾಗಾದರೆ ದ್ರಾಕ್ಷಾತೋಟದ ಧಣಿಯು ಬಂದಾಗ ಆ ತೋಟಗಾರರಿಗೆ ಏನು ಮಾಡುವನು?” ಅಂದನು.
41 ೪೧ ಅವರು ಆತನಿಗೆ, “ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ತಕ್ಕಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ತೋಟಗಾರರಿಗೆ ತನ್ನ ತೋಟವನ್ನು ಗುತ್ತಿಗೆಗೆ ಕೊಡುವನು” ಎಂದು ಹೇಳಿದರು.
42 ೪೨ ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’
43 ೪೩ ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು.
44 ೪೪ ಈ ಕಲ್ಲಿನ ಮೇಲೆ ಬೀಳುವವನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅದು ಅವನನ್ನು ಪುಡಿಪುಡಿ ಮಾಡುವುದು” ಎಂದು ಹೇಳಿದನು.
45 ೪೫ ಮುಖ್ಯಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮನ್ನೇ ಕುರಿತು ಮಾತನಾಡುತ್ತಿದ್ದಾನೆಂದು ತಿಳಿದುಕೊಂಡು. ಯೇಸುವನ್ನು ಬಂಧಿಸಲು ಸಂದರ್ಭ ನೋಡುತ್ತಿದ್ದರು;
46 ೪೬ ಆದರೆ ಅವರು ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.