< ಮತ್ತಾಯನು 12 >
1 ೧ ಆ ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳ ಮೂಲಕ ಹಾದುಹೋಗುತ್ತಿರುವಾಗ ಆತನ ಶಿಷ್ಯರು ಹಸಿದಿದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
2 ೨ ಆದರೆ ಫರಿಸಾಯರು ಅದನ್ನು ಕಂಡು, “ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಾರೆ” ಎಂದು ಆತನಿಗೆ ಹೇಳಿದರು.
3 ೩ ಆತನು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೋ?
4 ೪ ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಬೇರೆ ಯಾರು ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನು ಅವನು, ಅವನ ಸಂಗಡ ಇದ್ದವರು ತಿಂದನಲ್ಲವೇ.
5 ೫ ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ಹೊಲೆಮಾಡಿದಾಗ್ಯೂ ಅವರು ನಿರಪರಾಧಿಗಳಾಗಿದ್ದಾರೆ. ಇದನ್ನು ನೀವು ಧರ್ಮಶಾಸ್ತ್ರದಲ್ಲಿ ಓದಲಿಲ್ಲವೋ?
6 ೬ ಆದರೆ ಇಲ್ಲಿ ದೇವಾಲಯಕ್ಕಿಂತ ದೊಡ್ಡವನು ಇದ್ದಾನೆಂದು ನಿಮಗೆ ಹೇಳುತ್ತೇನೆ.
7 ೭ ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡುತ್ತಿರಲಿಲ್ಲಾ.
8 ೮ ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಕರ್ತನಾಗಿದ್ದಾನೆಂದು” ಹೇಳಿದನು.
9 ೯ ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರಕ್ಕೆ ಹೋದನು.
10 ೧೦ ಆಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು. ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯವೋ?” ಎಂದು ಕೇಳಿದರು.
11 ೧೧ ಅದಕ್ಕಾತನು, “ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಸಬ್ಬತ್ ದಿನದಲ್ಲಿ ಗುಂಡಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೇ ಇರುವನೇ?
12 ೧೨ ಕುರಿಗಿಂತ ಮನುಷ್ಯನು ಎಷ್ಟೋ ಮೌಲ್ಯವುಳ್ಳವನು. ಆದಕಾರಣ ಸಬ್ಬತ್ ದಿನದಲ್ಲಿ ಒಳ್ಳೆಯ ಕೆಲಸ ಮಾಡುವುದು ನ್ಯಾಯವಾದದ್ದೆ” ಎಂದು ಉತ್ತರ ಕೊಟ್ಟನು.
13 ೧೩ ತರುವಾಯ ಯೇಸು ಆ ಮನುಷ್ಯನಿಗೆ “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ಚಾಚಿದನು. ಅದು ಸಂಪೂರ್ಣವಾಸಿಯಾಗಿ ಮತ್ತೊಂದು ಕೈಯಂತಾಯಿತು.
14 ೧೪ ಆದರೆ ಫರಿಸಾಯರು ಹೊರಕ್ಕೆ ಹೋಗಿ ಇವನನ್ನು ಯಾವ ರೀತಿಯಲ್ಲಿ ಕೊಲ್ಲೋಣ ಎಂದು ಆತನ ವಿರುದ್ಧ ಸಂಚು ಮಾಡತೊಡಗಿದರು.
15 ೧೫ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು.
16 ೧೬ ಅನೇಕರು ಆತನ ಹಿಂದೆ ಹೋದರು. ಆತನು ಅವರೆಲ್ಲರನ್ನು ಸ್ವಸ್ಥಮಾಡಿ ತನ್ನ ಬಗ್ಗೆ ಯಾರಿಗೂ ತಿಳಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು.
17 ೧೭ ಹೀಗೆ ಯೆಶಾಯನೆಂಬ ಪ್ರವಾದಿಯ ಮೂಲಕ ಹೇಳಿಸಿರುವ ಮಾತು ನೆರವೇರಿತು; ಅದೇನೆಂದರೆ,
18 ೧೮ “ಇಗೋ, ನಾನು ಆರಿಸಿಕೊಂಡ ನನ್ನ ಸೇವಕನು. ಈತನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು. ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು.
19 ೧೯ ಈತನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ. ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವುದಿಲ್ಲ.
20 ೨೦ ನ್ಯಾಯಕ್ಕೆ ಜಯ ದೊರೆಯುವವರೆಗೂ ಜಜ್ಜಿದ ದಂಟನ್ನು ಮುರಿದುಹಾಕದೆಯೂ ಆರಿಹೋಗುತ್ತಿರುವ ದೀಪವನ್ನು ನಂದಿಸದೆಯೂ ಇರುವನು.
21 ೨೧ ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು.”
22 ೨೨ ದೆವ್ವ ಹಿಡಿದ ಕುರುಡನೂ, ಮೂಕನೂ ಆಗಿರುವ ಒಬ್ಬನನ್ನು ಯೇಸುವಿನ ಬಳಿಗೆ ಕರೆತಂದರು. ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಮಾತು ಹಾಗೂ ದೃಷ್ಟಿ ಎರಡೂ ಬಂದವು.
23 ೨೩ ಅದಕ್ಕೆ ಜನರೆಲ್ಲರೂ ಬೆರಗಾಗಿ, “ಈತನು ದಾವೀದನ ಕುಮಾರನೇ ಇರಬಹುದೇನೋ” ಎಂದು ಮಾತನಾಡಿಕೊಳ್ಳುತ್ತಿದ್ದರು.
24 ೨೪ ಆದರೆ ಫರಿಸಾಯರು ಅದನ್ನು ಕೇಳಿ, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಯೇ ಹೊರತು ಬೇರೆ ರೀತಿಯಿಂದ ಅಲ್ಲ” ಅಂದರು.
25 ೨೫ ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನೆಂದರೆ, “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ವಿಭಜನೆಯಾಗಿ ಹಾಳಾಗುವುದು. ತನ್ನಲ್ಲಿ ಭೇದ ಉಂಟಾಗಿ ವಿಭಜನೆಯಾದ ಯಾವ ಪಟ್ಟಣವಾದರೂ ಮನೆಯಾದರೂ ನೆಲೆಯಾಗಿ ನಿಲ್ಲದು.
26 ೨೬ ಅದರಂತೆ ಸೈತಾನನು ಸೈತಾನನನ್ನು ಹೊರಡಿಸಿದರೆ ತನ್ನ ವಿರುದ್ಧವಾಗಿ ಹೋರಾಡಿದ ಹಾಗಾಯಿತು, ಹಾಗಾದರೆ ಅವನ ರಾಜ್ಯವು ಹೇಗೆ ನಿಂತಿತು?
27 ೨೭ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮ ಶಿಷ್ಯರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ಅವರೇ ನಿಮಗೆ ನ್ಯಾಯತೀರಿಸುವರು.
28 ೨೮ ನಾನು ದೇವರ ಆತ್ಮನ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮ ಹತ್ತಿರಕ್ಕೆ ಬಂದಿತಲ್ಲಾ?
29 ೨೯ ಇದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಗೆ ನುಗ್ಗಿ ಅವನ ಸೊತ್ತನ್ನು ಸುಲುಕೊಳ್ಳುವುದು ಹೇಗೆ? ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು.
30 ೩೦ ನನ್ನ ಸಂಗಡ ಇರದವನು ನನಗೆ ವಿರೋಧಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದುರಿಸುವವನಾಗಿದ್ದಾನೆ.
31 ೩೧ ಆದಕಾರಣ ನಿಮಗೆ ಹೇಳುತ್ತೇನೆ ಮನುಷ್ಯರು ಮಾಡುವ ಪ್ರತಿಯೊಂದು ಪಾಪಕ್ಕೂ ದೂಷಣೆಗೂ ಕ್ಷಮಾಪಣೆ ಉಂಟಾಗುವುದು. ಆದರೆ ಪವಿತ್ರಾತ್ಮನಿಗೆ ವಿರುದ್ಧವಾಗಿ ನುಡಿಯುವ ದೂಷಣೆಗೆ ಕ್ಷಮಾಪಣೆಯಿರುವುದಿಲ್ಲ.
32 ೩೨ ಯಾವನಾದರೂ ಮನುಷ್ಯಕುಮಾರನಿಗೆ ವಿರುದ್ಧವಾಗಿ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವುದು, ಪವಿತ್ರಾತ್ಮನಿಗೆ ವಿರುದ್ಧವಾಗಿ ಮಾತನಾಡಿದರೆ ಅದು ಅವನಿಗೆ ಈ ಲೋಕದಲ್ಲಾಗಲಿ ಮುಂಬರುವ ಲೋಕದಲ್ಲಾಗಲಿ ಕ್ಷಮಿಸಲ್ಪಡುವುದಿಲ್ಲ. (aiōn )
33 ೩೩ “ಮರ ಒಳ್ಳೆಯದಾದರೆ ಅದರ ಫಲವು ಒಳ್ಳೆಯದೆನ್ನಿರಿ. ಮರ ಕೆಟ್ಟದಾದರೆ ಅದರ ಫಲವು ಕೆಟ್ಟದು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವುದು.
34 ೩೪ ಸರ್ಪ ಸಂತತಿಯವರೇ ನೀವು ಕೆಟ್ಟವರಾಗಿರಲಾಗಿ ಒಳ್ಳೆಯ ಮಾತುಗಳನ್ನಾಡುವುದಕ್ಕೆ ನಿಮ್ಮಿಂದ ಹೇಗಾದೀತು? ಹೃದಯದಲ್ಲಿ ತುಂಬಿರುವುದೇ ಬಾಯಿಂದ ಹೊರಡುವುದು.
35 ೩೫ ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನೇ ಹೊರಗೆ ತೆಗೆಯುತ್ತಾನೆ. ಕೆಟ್ಟವನು ತನ್ನ ಹೃದಯವೆಂಬ ಕೆಟ್ಟ ಬೊಕ್ಕಸದೊಳಗಿನಿಂದ ಕೆಟ್ಟವುಗಳನ್ನು ಹೊರಗೆ ತೆಗೆಯುತ್ತಾನೆ.
36 ೩೬ ಇದಲ್ಲದೆ ನಾನು ನಿಮಗೆ ಹೇಳುವುದೇನಂದರೆ, ಮನುಷ್ಯರು ವ್ಯರ್ಥವಾಗಿ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿಯೂ ನ್ಯಾಯವಿಚಾರಣೆಯ ದಿನದಲ್ಲಿ ಲೆಕ್ಕ ಕೊಡಬೇಕು.
37 ೩೭ ನಿನ್ನ ಮಾತುಗಳಿಂದಲೇ ನೀನು ನೀತಿವಂತನೆಂದು ತೀರ್ಪು ಹೊಂದುವಿ. ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ತೀರ್ಪು ಹೊಂದುವಿ” ಅಂದನು.
38 ೩೮ ಆಗ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು, “ಬೋಧಕನೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು” ಯೇಸುವನ್ನು ಕೇಳಿದರು. ಅದಕ್ಕೆ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ,
39 ೩೯ “ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತಾರೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ.
40 ೪೦ ಅಂದರೆ ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು.
41 ೪೧ ನಿನೆವೆ ಪಟ್ಟಣದವರು ಯೋನನು ಸಾರಿದ ವಾಕ್ಯವನ್ನು ಕೇಳಿ ಮಾನಸಾಂತರಪಟ್ಟರು. ಇಗೋ, ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವರು.
42 ೪೨ ದಕ್ಷಿಣ ದೇಶದ ರಾಣಿಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತ ಹೆಚ್ಚಿನವನಿದ್ದಾನೆ. ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವಳು.
43 ೪೩ “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ.
44 ೪೪ ವಿಶ್ರಾಂತಿ ಸಿಕ್ಕದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ತಿರುಗಿ ಹೋಗುತ್ತೇನೆ’ ಅಂದುಕೊಂಡು ಬಂದು ಆ ಮನೆ ಒಕ್ಕಲಿಲ್ಲದ್ದೂ, ಗುಡಿಸಿ, ಅಲಂಕರಿಸಿರುವುದನ್ನು ಕಂಡು,
45 ೪೫ ತರುವಾಯ ಹೊರಟುಹೋಗಿ ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರೆದುಕೊಂಡು ಬರುವುದು. ಅವು ಒಳ ನುಗ್ಗಿ ಅಲ್ಲಿ ವಾಸ ಮಾಡುವವು. ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದಾಗುವುದು. ಇದರಂತೆಯೇ ಈ ದುಷ್ಟ ಸಂತತಿಗೆ ಆಗುವುದು” ಅಂದನು.
46 ೪೬ ಯೇಸು ಜನರ ಗುಂಪುಗಳ ಸಂಗಡ ಇನ್ನೂ ಮಾತನಾಡುತ್ತಿರುವಾಗ ಆತನ ತಾಯಿಯೂ ತಮ್ಮಂದಿರೂ ಆತನನ್ನು ಮಾತನಾಡಿಸಬೇಕೆಂದು ಹೊರಗೆ ಬಂದು ನಿಂತಿದ್ದರು.
47 ೪೭ ಆಗ ಒಬ್ಬನು, “ಇಗೋ ನಿನ್ನ ತಾಯಿಯೂ ತಮ್ಮಂದಿರೂ ನಿನ್ನನ್ನು ಮಾತನಾಡಿಸಬೇಕೆಂದು ಹೊರಗೆ ನಿಂತಿದ್ದಾರೆ” ಅಂದನು.
48 ೪೮ ಅದಕ್ಕಾತನು ಆ ಮಾತು ಹೇಳಿದವನಿಗೆ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ
49 ೪೯ ಶಿಷ್ಯರ ಕಡೆಗೆ ಕೈ ಚಾಚಿ, “ಇಗೋ ನನ್ನ ತಾಯಿ, ನನ್ನ ಸಹೋದರರು.
50 ೫೦ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ನನ್ನ ಸಹೋದರನೂ ಸಹೋದರಿಯೂ ತಾಯಿಯೂ ಆಗಿದ್ದಾರೆ” ಅಂದನು.