< ಯೆಹೋಶುವನು 7 >
1 ೧ ಯೆಹೂದ ಕುಲದವನೂ ಜೆರಹನ ಗೋತ್ರದವನೂ, ಜಬ್ದೀಯ ಕುಟುಂಬದವನೂ, ಕರ್ಮೀಯ ಮಗನೂ ಆದ ಆಕಾನನು ಯೆಹೋವನಿಗೆ ಮೀಸಲಾಗಿಟ್ಟ ವಸ್ತುಗಳಲ್ಲಿ ಕೆಲವನ್ನು ಕದ್ದುಕೊಂಡದ್ದರಿಂದ ಇಸ್ರಾಯೇಲ್ಯರೆಲ್ಲರು ದ್ರೋಹಿಗಳಾದರು. ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು.
2 ೨ ಯೆಹೋಶುವನು ಕೆಲವು ಜನರನ್ನು ಕರೆದು “ನೀವು ಗಟ್ಟಾ ಹತ್ತಿ ಬೇತೇಲಿನ ಪೂರ್ವಕ್ಕೂ ಬೇತಾವೆನಿನ ಸಮೀಪದಲ್ಲೂ ಇರುವ ‘ಆಯಿ’ ಎಂಬ ಪ್ರಾಂತ್ಯದಲ್ಲಿ ರಹಸ್ಯವಾಗಿ ಸಂಚರಿಸಿ ನೋಡಿರಿ” ಎಂದು ಹೇಳಿ ಅವರನ್ನು ಯೆರಿಕೋವಿನಿಂದ ಕಳುಹಿಸಿದನು. ಅವರು ಹೋಗಿ ಆಯಿ ಎಂಬ ಊರಲ್ಲಿ ಸಂಚರಿಸಿ ನೋಡಿ,
3 ೩ ಹಿಂದಿರುಗಿ ಬಂದು ಯೆಹೋಶುವನಿಗೆ “ಎಲ್ಲಾ ಜನರು ಹೋಗುವುದು ಅವಶ್ಯವಿಲ್ಲ; ಎರಡು ಅಥವಾ ಮೂರು ಸಾವಿರ ಮಂದಿ ಹೋದರೆ ಸಾಕು. ಅವರೇ ಪಟ್ಟಣವನ್ನು ಜಯಿಸಬಹುದು. ಎಲ್ಲರನ್ನೂ ಕಳುಹಿಸಿ ಸುಮ್ಮನೆ ದಣಿಸುವುದೇತಕೆ? ಅವರು ಕಡಿಮೆ ಜನರಿದ್ದಾರೆ” ಎಂದು ಹೇಳಿದರು.
4 ೪ ಅದರಂತೆ ಸುಮಾರು ಮೂರು ಸಾವಿರ ಮಂದಿ ಯುದ್ಧಕ್ಕೆ ಹೋದರು. ಆದರೆ ಅವರು ಆಯಿ ಊರಿನವರ ಎದುರಿನಿಂದ ಓಡಿ ಹೋಗಬೇಕಾಯಿತು.
5 ೫ ಆಯಿ ಊರಿನವರು ಅವರನ್ನು ಊರ ಬಾಗಿಲಿನಿಂದ ಕಲ್ಲುಗಣಿಗಳವರೆಗೂ ಹಿಂದಟ್ಟಿ ಇಳಿನೆಲದಲ್ಲಿ ಅವರನ್ನು ಸೋಲಿಸಿ ಸುಮಾರು ಮೂವತ್ತಾರು ಮಂದಿಯನ್ನು ಕೊಂದುಹಾಕಿದರು. ಇದರಿಂದ ಇಸ್ರಾಯೇಲರ ಧೈರ್ಯ ಕುಂದಿಹೋಯಿತು.
6 ೬ ಆಗ ಯೆಹೋಶುವನೂ ಮತ್ತು ಇಸ್ರಾಯೇಲ್ಯರ ಹಿರಿಯರೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಭೂದಿಯನ್ನು ಹಾಕಿಕೊಂಡು ಸಾಯಂಕಾಲದವರೆಗೂ ಯೆಹೋವನ ಮಂಜೂಷದ ಮುಂದೆ ಬೋರಲು ಬಿದ್ದರು.
7 ೭ ಯೆಹೋಶುವನು “ಅಯ್ಯೋ, ಕರ್ತನೇ, ಯೆಹೋವನೇ, ನೀನು ಈ ಜನರನ್ನು ಯೊರ್ದನ್ ಹೊಳೆ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೊಪ್ಪಿಸಿ ನಾಶ ಮಾಡಬೇಕೆಂದಿರುವಿಯಾ? ನಾವು ಇಷ್ಟೇ ಸಾಕೆಂದು ಯೊರ್ದನ್ ನದಿಯ ಆಚೆ ಕಡೆಯಲ್ಲೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು.
8 ೮ ಕರ್ತನೇ, ಇಸ್ರಾಯೇಲ್ಯರು ಶತ್ರುಗಳಿಗೆ ಬೆನ್ನು ತೋರಿಸಬೇಕಾಯಿತಲ್ಲಾ.
9 ೯ ನಾನು ಏನು ತಾನೇ ಹೇಳಲಿ? ಕಾನಾನ್ಯರೂ ಮತ್ತು ದೇಶದ ಬೇರೆ ಎಲ್ಲಾ ನಿವಾಸಿಗಳೂ ಇದನ್ನು ಕೇಳಿ ನಮ್ಮನ್ನು ಸುತ್ತುವರೆದು ಲೋಕದಲ್ಲಿ ನಮ್ಮ ಹೆಸರು ಉಳಿಯದಂತೆ ಮಾಡುವರು. ಆಗ ನಿನ್ನ ಮಹತ್ತಾದ ಹೆಸರನ್ನು ಉಳಿಸಿಕೊಳ್ಳಲು ಏನು ಮಾಡುವಿ?” ಎಂದನು.
10 ೧೦ ಆಗ ಯೆಹೋವನು ಯೆಹೋಶುವನಿಗೆ ಹೇಳಿದ್ದೇನೆಂದರೆ “ಏಳು, ನೀನು ಈ ಪ್ರಕಾರ ಬೋರಲು ಬಿದ್ದಿರುವುದೇಕೆ?
11 ೧೧ ಇಸ್ರಾಯೇಲ್ಯರು ನನ್ನ ನಿಬಂಧನೆಯನ್ನು ಮೀರಿ ಪಾಪಿಷ್ಠರಾಗಿದ್ದಾರೆ. ಕೊಳ್ಳೆಯಲ್ಲಿ ಮೀಸಲಾದ ವಸ್ತುಗಳನ್ನು ಕದ್ದು ತಮ್ಮ ಸಾಮಾನುಗಳಲ್ಲಿ ಅಡಗಿಸಿಟ್ಟು ವಂಚಕರಾಗಿದ್ದಾರೆ.
12 ೧೨ ಆದುದರಿಂದ ಇಸ್ರಾಯೇಲ್ಯರು ಶತ್ರುಗಳ ಮುಂದೆ ನಿಲ್ಲಲಾರದೆ ಅವರಿಗೆ ಬೆನ್ನು ತೋರಿಸಿದ್ದಾರೆ. ಅವರು ಶಾಪಗ್ರಸ್ತರೇ ಸರಿ. ಶಾಪಕ್ಕೆ ಕಾರಣವಾದವರನ್ನು ನಿಮ್ಮ ಮಧ್ಯದಿಂದ ತೆಗೆದುಹಾಕುವ ತನಕ ನಾನು ನಿಮ್ಮ ಸಂಗಡ ಬರುವುದಿಲ್ಲ.
13 ೧೩ ನೀನೆದ್ದು ಜನರನ್ನು ಶುದ್ಧೀಕರಿಸು. ನೀನು ಅವರಿಗೆ ‘ಇಸ್ರಾಯೇಲ್ಯರೇ, ನಾಳೆ ನಿಮ್ಮನ್ನು ಶುದ್ಧಪಡಿಸಿಕೊಳ್ಳಿರಿ; ನಿಮ್ಮ ಮಧ್ಯದಲ್ಲಿ ಶಾಪಕ್ಕೆ ಕಾರಣವಾದ ವಸ್ತುವಿದೆ. ನೀವು ಅದನ್ನು ತೆಗೆದುಹಾಕುವ ತನಕ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ನಿಮ್ಮ ದೇವರಾದ ಯೆಹೋವನು ಹೇಳಿದ್ದಾನೆ.
14 ೧೪ ನಾಳೆ ಬೆಳಿಗ್ಗೆ ನೀವು ಕುಲ ಕುಲವಾಗಿ ನನ್ನ ಬಳಿಗೆ ಬನ್ನಿರಿ. ಯೆಹೋವನು ಯಾವ ಕುಲವನ್ನು ಸೂಚಿಸುತ್ತಾನೋ ಆ ಕುಲವು ಗೋತ್ರ ಗೋತ್ರವಾಗಿ, ಯಾವ ಗೋತ್ರವನ್ನು ಸೂಚಿಸುತ್ತಾನೋ ಆ ಗೋತ್ರವು ಕುಟುಂಬ ಕುಟುಂಬವಾಗಿ ನನ್ನ ಬಳಿಗೆ ಬರಬೇಕು. ಯಾವ ಕುಟುಂಬನ್ನು ಸೂಚಿಸುತ್ತಾನೋ ಆ ಕುಟುಂಬದವರು ಒಬ್ಬೊಬ್ಬರಾಗಿ ನನ್ನ ಬಳಿಗೆ ಬರಬೇಕು.
15 ೧೫ ಯಾವನು ಮೀಸಲಾದ ವಸ್ತುಗಳನ್ನು ತೆಗೆದುಕೊಂಡವನೆಂದು ಹಿಡಿಯಲ್ಪಡುತ್ತಾನೋ ಅವನು ಯೆಹೋವನ ನಿಬಂಧನೆಯನ್ನು ಮೀರಿ ಇಸ್ರಾಯೇಲರಲ್ಲಿ ಬುದ್ಧಿಹೀನಕಾರ್ಯ ನಡಿಸಿದ್ದರಿಂದ ತನ್ನ ಎಲ್ಲಾ ಆಸ್ತಿ ಸಹಿತವಾಗಿ ಸುಡಲ್ಪಡಬೇಕು’” ಎಂದು ಹೇಳು ಎಂಬುದೇ.
16 ೧೬ ಯೆಹೋಶುವನು ಬೆಳಿಗ್ಗೆ ಎದ್ದು ಇಸ್ರಾಯೇಲರ ಕುಲಗಳನ್ನು ಒಂದೊಂದಾಗಿ ಬರಮಾಡಲು ಯೆಹೂದ ಕುಲವು ಹಿಡಿಯಲ್ಪಟ್ಟಿತು.
17 ೧೭ ಅದರ ಗೋತ್ರಗಳನ್ನು ಕರೆದಾಗ ಜೆರಹನ ಗೋತ್ರವು ಸಿಕ್ಕಿಕೊಂಡಿತು. ಅ ಗೋತ್ರದ ಕುಟುಂಬಗಳನ್ನು ಕರೆದಾಗ ಜಬ್ದೀಯ ಕುಟುಂಬವು ಹಿಡಿಯಲ್ಪಟ್ಟಿತು.
18 ೧೮ ಆ ಕುಟುಂಬದ ಪುರುಷರನ್ನು ಕರೆದಾಗ ಯೆಹೂದ ಕುಲದವನೂ ಜೆರಹನ ಗೋತ್ರದವನೂ ಜಬ್ದೀಯ ಕುಟುಂಬದವನೂ ಕರ್ಮೀಯನ ಮಗನೂ ಆದ ಆಕಾನನು ಹಿಡಿಯಲ್ಪಟ್ಟನು.
19 ೧೯ ಆಗ ಯೆಹೋಶುವನು ಆಕಾನನಿಗೆ “ನನ್ನ ಮಗನೇ, ನೀನು ಇಸ್ರಾಯೇಲರ ದೇವರಾದ ಯೆಹೋವನನ್ನು ಘನಪಡಿಸಿ ಆತನಿಗೆ ಸ್ತೋತ್ರ ಸಲ್ಲಿಸು. ನೀನು ಮಾಡಿದ್ದನ್ನು ನನಗೆ ಹೇಳು, ಯಾವುದನ್ನೂ ಮುಚ್ಚಿಡಬೇಡ” ಅಂದನು.
20 ೨೦ ಆಕಾನನು, “ನಾನು ಇಂಥ ಕಾರ್ಯವನ್ನು ಮಾಡಿ ಇಸ್ರಾಯೇಲಿನ ದೇವರಾದ ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡ್ದಿದು ನಿಜ. ನಾನು ಕೊಳ್ಳೆಯಲ್ಲಿ ಶಿನಾರ್ ದೇಶದ ಒಂದು ಉತ್ತಮವಾದ ನಿಲುವಂಗಿಯನ್ನೂ ಇನ್ನೂರು ರೂಪಾಯಿ ತೂಕದ ಬೆಳ್ಳಿಯನ್ನೂ ಐವತ್ತು ರೂಪಾಯಿ ತೂಕದ ಬಂಗಾರದ ಗಟ್ಟಿಯನ್ನೂ ಕಂಡು ಅದನ್ನು ಮೋಹಿಸಿ ಆಸೆಯಿಂದ ತೆಗೆದುಕೊಂಡೆನು. ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ಹೂತಿಟ್ಟಿದ್ದೇನೆ; ಬೆಳ್ಳಿಯು ಅಂಗಿಯ ಕೆಳಗಿರುತ್ತದೆ” ಎಂದನು.
21 ೨೧
22 ೨೨ ಆಗ ಯೆಹೋಶುವನು ಆಳುಗಳನ್ನು ಕಳುಹಿಸಲು ಅವರು ಓಡಿಹೋಗಿ ಹುಡುಕಲಾಗಿ ಆ ನಿಲುವಂಗಿಯು ಗುಡಾರದಲ್ಲಿ ಹೂತಿಡಲಾಗಿತ್ತು. ಬೆಳ್ಳಿಯು ಅದರ ಕೆಳಗೆ ಇತ್ತು.
23 ೨೩ ಆಳುಗಳು ಅವುಗಳನ್ನು ಗುಡಾರದೊಳಗಿನಿಂದ ತೆಗೆದುಕೊಂಡು ಯೆಹೋಶುವನೂ ಇಸ್ರಾಯೇಲ್ಯರೂ ಇದ್ದಲ್ಲಿಗೆ ಬಂದು ಯೆಹೋವನ ಮುಂದಿಟ್ಟರು.
24 ೨೪ ಯೆಹೋಶುವನೂ ಮತ್ತು ಎಲ್ಲಾ ಇಸ್ರಾಯೇಲ್ಯರೂ, ಜೆರಹನ ಮಗನಾದ ಆಕಾನನನ್ನು ಹಿಡಿದು ಬೆಳ್ಳಿ, ನಿಲುವಂಗಿ, ಬಂಗಾರದ ಗಟ್ಟಿ, ಅವನ ಗಂಡುಹೆಣ್ಣು ಮಕ್ಕಳನ್ನು, ದನ ಕರು, ಕತ್ತೆ, ಆಡುಕುರಿಗಳನ್ನು ಮತ್ತು ಗುಡಾರದ ಸಹಿತವಾಗಿ ಹಿಡಿದು ಆಕೋರಿನ ತಗ್ಗಿಗೆ ಒಯ್ದರು.
25 ೨೫ ಆಗ ಯೆಹೋಶುವನು ಆಕಾನನಿಗೆ “ನೀನು ನಮ್ಮನ್ನು ಆಪತ್ತಿಗೆ ಗುರಿಮಾಡಿದ್ದೇಕೆ? ಈ ಹೊತ್ತು ಯೆಹೋವನು ನಿನ್ನ ಮೇಲೆ ಆಪತ್ತನ್ನು ಬರಮಾಡುವನು” ಎಂದು ಹೇಳಿದ ಕೂಡಲೆ ಇಸ್ರಾಯೇಲ್ಯರೆಲ್ಲರೂ ಅವನನ್ನು ಕಲ್ಲೆಸೆದು ಕೊಂದರು. ಅವನಿಗಿದ್ದದ್ದೆಲ್ಲವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
26 ೨೬ ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ರಾಶಿಯು ನಿರ್ಮಾಣವಾಯಿತು. ಅದು ಇಂದಿನ ವರೆಗೂ ಇದೆ. ಆಗ ಯೆಹೋವನ ಕೋಪಾಗ್ನಿ ತಣ್ಣಗಾಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ.