< ಯೆಹೋಶುವನು 18 >

1 ದೇಶವೆಲ್ಲಾ ತಮ್ಮ ವಶವಾದ ಮೇಲೆ ಇಸ್ರಾಯೇಲ್ಯ ಸಮೂಹದ ಎಲ್ಲಾ ಜನರೂ ಶೀಲೋವಿನಲ್ಲಿ ಕೂಡಿ ಬಂದು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.
ಇಸ್ರಾಯೇಲರ ಸಮೂಹವೆಲ್ಲಾ ಶೀಲೋವಿನಲ್ಲಿ ಒಟ್ಟು ಕೂಡಿ ಅಲ್ಲಿ ದೇವದರ್ಶನ ಗುಡಾರವನ್ನು ನಿಲ್ಲಿಸಿದರು. ದೇಶವು ಅವರ ವಶವಾಯಿತು.
2 ಇಸ್ರಾಯೇಲ್ಯರಲ್ಲಿ ಇನ್ನೂ ಏಳು ಕುಲದವರಿಗೆ ಪಾಲು ಸಿಕ್ಕಿರಲಿಲ್ಲ.
ಆದರೆ ಇಸ್ರಾಯೇಲರಲ್ಲಿ ತಮ್ಮ ಬಾಧ್ಯತೆಯನ್ನು ಇನ್ನೂ ಹೊಂದಿಕೊಳ್ಳದ ಏಳು ಗೋತ್ರಗಳು ಉಳಿದಿದ್ದವು.
3 ಆಗ ಯೆಹೋಶುವನು ಇಸ್ರಾಯೇಲ್ಯರಿಗೆ “ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವುದರಲ್ಲಿ ಇನ್ನೆಷ್ಟು ತಡಮಾಡುತ್ತೀರಿ?
ಯೆಹೋಶುವನು ಇಸ್ರಾಯೇಲರಿಗೆ, “ನಿಮ್ಮ ತಂದೆಗಳ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ನೀವು ಎಷ್ಟರವರೆಗೆ ಆಲಸ್ಯ ಮಾಡುವಿರಿ?
4 ಪ್ರತಿಯೊಂದು ಕುಲದಿಂದ ಮೂರು ಮೂರು ಜನರನ್ನು ನೇಮಿಸಿರಿ. ನಾನು ಅವರನ್ನು ಕಳುಹಿಸುವೆನು. ಅವರು ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ತಮ್ಮ ತಮ್ಮ ಕುಲಗಳಿಗನುಸಾರವಾಗಿ ಎಲ್ಲಾ ಪ್ರದೇಶಗಳ ಪಟ್ಟಿಯನ್ನು ಬರೆದುಕೊಂಡು ನನ್ನ ಬಳಿಗೆ ಬರಲಿ.
ಒಂದೊಂದು ಗೋತ್ರಕ್ಕೆ ಮೂರು ಮಂದಿಯ ಪ್ರಕಾರ ನಿಮ್ಮೊಳಗಿಂದ ಕರೆದುಕೊಂಡು ಬನ್ನಿರಿ. ನಾನು ಅವರನ್ನು ಕಳುಹಿಸುವೆನು. ಅವರು ಎದ್ದು ದೇಶದಲ್ಲೆಲ್ಲಾ ಹೋಗಿ ತಮ್ಮ ಬಾಧ್ಯತೆಗಳ ಪ್ರಕಾರ ಅದನ್ನು ಅಳತೆಮಾಡಿ ವಿವರವಾಗಿ ಬರೆಯಲಿ. ತರುವಾಯ ನನ್ನ ಬಳಿಗೆ ಅವರು ಬರಲಿ.
5 ತರುವಾಯ ಅವರು ಏಳು ಪಾಲುಗಳನ್ನು ಮಾಡಿ ತಮ್ಮತಮ್ಮೊಳಗೆ ಹಂಚಿಕೊಳ್ಳಲಿ. ದಕ್ಷಿಣದಲ್ಲಿ ಯೆಹೂದ ಕುಲದವರಿಗೂ ಉತ್ತರದಲ್ಲಿ ಯೋಸೇಫನ ಕುಲದವರಿಗೂ ಸ್ವತ್ತು ಸಿಕ್ಕುತ್ತದೆ. ಅದು ಅವರಿಗೇ ಇರಲಿ.
ನೀವು ಅದನ್ನು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೆಹೂದವು, ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲೆಸಬೇಕು.
6 ಅವರು ಪಟ್ಟಿಯಲ್ಲಿ ದೇಶವನ್ನು ಏಳು ಪಾಲು ಮಾಡಿ ನನ್ನ ಬಳಿಗೆ ತೆಗೆದುಕೊಂಡು ಬರಬೇಕು. ನಾನು ನಿಮಗೋಸ್ಕರ ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಚೀಟು ಹಾಕುವೆನು.
ನೀವು ದೇಶವನ್ನು ಏಳು ಪಾಲಾಗಿ ವಿತರಿಸಬೇಕು ಮತ್ತು ಅದರ ವಿವರಗಳನ್ನು ಇಲ್ಲಿ ನನ್ನ ಬಳಿಯಲ್ಲಿ ತರಬೇಕು. ಆಗ ನಾನು ಈ ಸ್ಥಳದಲ್ಲಿ ನಮ್ಮ ದೇವರಾದ ಯೆಹೋವ ದೇವರ ಮುಂದೆ ನಿಮಗಾಗಿ ಚೀಟುಗಳನ್ನು ಹಾಕುವೆನು.
7 ಲೇವಿಯರಿಗೆ ನಿಮ್ಮ ಸಂಗಡ ಪಾಲು ಇರುವುದಿಲ್ಲ. ಯೆಹೋವನಿಗೆ ಸಲ್ಲಿಸುವ ಯಾಜಕ ಸೇವೆಯೇ ಅವರ ಸ್ವತ್ತಾಗಿದೆ. ಗಾದ್ ಹಾಗೂ ರೂಬೇನ್ ಕುಲಗಳಿಗೂ ಮನಸ್ಸೆ ಕುಲದ ಅರ್ಧ ಜನರಿಗೂ ಯೊರ್ದನಿನ ಪೂರ್ವ ದಿಕ್ಕಿನಲ್ಲಿ ಯೆಹೋವನ ಸೇವಕನಾದ ಮೋಶೆಯಿಂದಲೇ ಸ್ವತ್ತು ಸಿಕ್ಕಿದೆ,” ಎಂದನು
ಆದರೆ ಲೇವಿಯರಿಗೆ ನಿಮ್ಮೊಳಗೆ ಪಾಲಿಲ್ಲ. ಏಕೆಂದರೆ ಅವರಿಗೆ ಯೆಹೋವ ದೇವರ ಯಾಜಕತ್ವವೇ ಅವರ ಸೊತ್ತು. ಇದಲ್ಲದೆ ಗಾದನೂ ರೂಬೇನನೂ ಮನಸ್ಸೆಯ ಅರ್ಧ ಗೋತ್ರವೂ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಯೆಹೋವ ದೇವರ ಸೇವಕನಾದ ಮೋಶೆಯಿಂದಲೇ ತಮಗೆ ಸೊತ್ತನ್ನು ತೆಗೆದುಕೊಂಡಿದ್ದಾರೆ,” ಎಂದನು.
8 ದೇಶದ ಪಟ್ಟಿಯನ್ನು ಮಾಡತಕ್ಕ ಜನರು ಹೊರಡುವುದಕ್ಕಿಂತ ಮೊದಲು ಯೆಹೋಶುವನು ಅವರಿಗೆ, “ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ಪಟ್ಟಿಮಾಡಿಕೊಂಡು ಶೀಲೋವಿನಲ್ಲಿರುವ ನನ್ನ ಬಳಿಗೆ ಬನ್ನಿರಿ. ನಾನು ಯೆಹೋವನ ಮುಂದೆ ನಿಮಗೋಸ್ಕರ ಚೀಟು ಹಾಕುವೆನು” ಎಂದು ಹೇಳಿ ಕಳುಹಿಸಿದನು.
ಆ ಮನುಷ್ಯರು ನಾಡನ್ನು ಅಳತೆ ಮಾಡುವುದಕ್ಕಾಗಿ ಹೊರಟು ಹೋಗುವುದಕ್ಕೆ ಮುಂಚೆ ಯೆಹೋಶುವನು ಅವರಿಗೆ, “ನೀವು ಹೋಗಿ ದೇಶವೆಲ್ಲಾ ಸಂಚರಿಸಿ, ಅದನ್ನು ಅಳತೆಮಾಡಿ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. ನಾನು ಇಲ್ಲಿ ಶೀಲೋವಿನಲ್ಲಿ ಯೆಹೋವ ದೇವರ ಮುಂದೆ ನಿಮಗೆ ಚೀಟುಗಳನ್ನು ಹಾಕುವಂತೆ ನನ್ನ ಬಳಿಗೆ ಬನ್ನಿರಿ,” ಎಂದು ಅಪ್ಪಣೆಕೊಟ್ಟನು.
9 ಆ ಜನರು ಹೊರಟು ದೇಶದಲ್ಲೆಲ್ಲಾ ಸಂಚರಿಸಿ ಒಂದು ಪುಸ್ತಕದಲ್ಲಿ ಅದರ ಗ್ರಾಮ ನಗರಗಳನ್ನೆಲ್ಲಾ ಬರೆದು ಏಳು ಭಾಗಗಳನ್ನಾಗಿ ಮಾಡಿ ಶೀಲೋವಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಹಿಂತಿರುಗಿ ಬಂದರು.
ಆ ಮನುಷ್ಯರು ಆ ನಾಡಿಗೆ ಹೋಗಿ, ಅದರ ಪಟ್ಟಣಗಳ ಪ್ರಕಾರ ಏಳು ಪಾಲಾಗಿ ಒಂದು ಗ್ರಂಥದಲ್ಲಿ ಬರೆದುಕೊಂಡು ಶೀಲೋವಿನಲ್ಲಿರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ತಿರುಗಿ ಬಂದರು.
10 ೧೦ ಯೆಹೋಶುವನು ಶೀಲೋವಿನಲ್ಲಿಯೇ ಯೆಹೋವನ ಮುಂದೆ ಅವರಿಗೋಸ್ಕರ ಚೀಟು ಹಾಕಿ ದೇಶವನ್ನು ಅವರ ಕುಲಗಳಿಗೆ ಹಂಚಿಕೊಟ್ಟನು.
ಆಗ ಯೆಹೋಶುವನು ಅವರಿಗೆ ಶೀಲೋವಿನಲ್ಲಿ ಯೆಹೋವ ದೇವರ ಮುಂದೆ ಚೀಟುಗಳನ್ನು ಹಾಕಿದನು. ಅಲ್ಲಿ ಯೆಹೋಶುವನು ಇಸ್ರಾಯೇಲರಿಗೆ ನಾಡನ್ನು ಅವರ ಗೋತ್ರಗಳ ಪ್ರಕಾರ ಪಾಲುಗಳನ್ನು ಹಂಚಿಕೊಟ್ಟನು.
11 ೧೧ ಚೀಟು ಮೊದಲು ಬೆನ್ಯಾಮೀನ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಯೆಹೂದ್ಯರ ಮತ್ತು ಯೋಸೇಫರ ಪ್ರಾಂತ್ಯಗಳ ಮಧ್ಯದಲ್ಲಿರುತ್ತದೆ.
ಬೆನ್ಯಾಮೀನನ ಸಂತತಿಯವರಿಗೆ ಅವರ ಕುಟುಂಬಗಳ ಪ್ರಕಾರ ಅವರ ಗೋತ್ರಕ್ಕೆ ಚೀಟು ಬಿದ್ದಿತು. ಅವರ ಸೊತ್ತು ಯೆಹೂದ ಮತ್ತು ಯೋಸೇಫನ ಗೋತ್ರದವರ ಪ್ರಾಂತಗಳಿಗೆ ನಡುವೆಯಿತ್ತು.
12 ೧೨ ಅದರ ಉತ್ತರದಿಕ್ಕಿನ ಮೇರೆಯು ಯೊರ್ದನ್ ನದಿಯಿಂದ ಯೆರಿಕೋವಿನ ಉತ್ತರದಲ್ಲಿರುವ ಗುಡ್ಡದ ಮೇಲಿನಿಂದ ಪಶ್ಚಿಮಕ್ಕೆ ಹೋಗಿ ಗಟ್ಟಾಹತ್ತಿ ಬೇತಾವೆನಿನ ಬಯಲಿನಲ್ಲಿ ಕೊನೆಗೊಳ್ಳುತ್ತದೆ.
ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನಿನಿಂದ ಹೊರಟು ಯೆರಿಕೋವಿನ ಉತ್ತರದ ಕಡೆಯಿಂದ ಬೆಟ್ಟಗಳಲ್ಲಿ ಪಶ್ಚಿಮದ ಕಡೆಗೆ ಏರಿ ಬೇತಾವೆನ ಮರುಭೂಮಿಗೆ ಮುಗಿಯುವುದು.
13 ೧೩ ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಎನ್ನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗುತ್ತದೆ.
ಆ ಮೇರೆಯು ಅಲ್ಲಿಂದ ಬೇತೇಲೆಂಬ ಲೂಜಿಗೆ ಹಾದು, ಲೂಜಿನ ದಕ್ಷಿಣದ ಕಡೆಗೆ ಹೋಗಿ, ಅಟಾರೋತ್ ಅದ್ದಾರಿನ ಕೆಳಗಿನ ಬೇತ್ ಹೋರೋನಿಗೆ ದಕ್ಷಿಣದಲ್ಲಿರುವ ಬೆಟ್ಟಕ್ಕೆ ಹೋಗುವುದು.
14 ೧೪ ಅದರ ಮೇರೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು ಕಿರ್ಯಾತ್ ಬಾಳ್ ಎನ್ನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯಾತ್ಯಾರೀಮ್ ಎಂಬ ಪಟ್ಟಣದಲ್ಲಿ ಕೊನೆಗೊಳ್ಳುತ್ತದೆ. ಇದೇ ಅವರ ಪಡುವಣ ಮೇರೆ.
ಇದಲ್ಲದೆ ಆ ಮೇರೆಯು ದಕ್ಷಿಣ ಎಲ್ಲೆಗೆ ಎದುರಾಗಿರುವ ಬೇತ್ ಹೋರೋನಿಗೆ ಎದುರಾಗಿ ಬೆಟ್ಟವನ್ನು ಹಿಡಿದು, ದಕ್ಷಿಣವಾಗಿ ಸುತ್ತಿಕೊಂಡು ಕಿರ್ಯತ್ ಯಾರೀಮ್ ಎಂಬ ಯೆಹೂದ ಗೋತ್ರದ ಪಟ್ಟಣವಾದ ಕಿರ್ಯತ್ ಬಾಳದ ಬಳಿಗೆ ಹೋಗಿ ಮುಗಿಯುವುದು. ಇದು ಪಶ್ಚಿಮ ಎಲ್ಲೆಯಾಗಿತ್ತು.
15 ೧೫ ದಕ್ಷಿಣ ದಿಕ್ಕಿನ ಮೇರೆಯು ಪಡುವಣ ಮೂಲೆಯಾಗಿರುವ ಕಿರ್ಯಾತ್ಯಾರೀಮಿನ ಪ್ರಾಂತ್ಯದಿಂದ
ಆ ದಕ್ಷಿಣ ಎಲ್ಲೆಯೂ ಕಿರ್ಯತ್ ಯಾರೀಮ್ ತುದಿಯಿಂದ ಹೊರಟು, ಪಶ್ಚಿಮಕ್ಕೆ ಹೋಗಿ, ನೆಫ್ತೋಹದ ಜಲಬುಗ್ಗೆಯ ಬಳಿ ಮುಗಿಯುತ್ತದೆ.
16 ೧೬ ನೆಫ್ತೋಹ ಬುಗ್ಗೆಯ ಮೇಲೆ ಬೆನ್ ಹಿನ್ನೋಮ್ ಕಣಿವೆಯ ಈಚೆಗೂ ರೆಫಾಯೀಮ್ ಕಣಿವೆಯ ಉತ್ತರದಲ್ಲಿಯೂ ಇರುವ ಬೆಟ್ಟದ ಅಂಚಿಗೆ ಹೋಗಿ ಅಲ್ಲಿಂದ ಯೆಬೂಸಿಯರ ಬೆಟ್ಟದ ದಕ್ಷಿಣದಲ್ಲಿದ್ದ ಬೆನ್ ಹಿನ್ನೋಮ್ ಕಣಿವೆಯ ಮಾರ್ಗವಾಗಿ ಏನರೋಗೆಲಿಗೆ ಬರುತ್ತದೆ.
ನೆಫ್ತೋಹ ಬುಗ್ಗೆಯ ಮೇಲೆ ಬೆನ್ ಹಿನ್ನೋಮ್ ತಗ್ಗಿನ ಈಚೆಗೂ ರೆಫಾಯಿಮ್ ತಗ್ಗಿನ ಉತ್ತರದಲ್ಲಿಯೂ ಇರುವ ಬೆಟ್ಟದ ಅಂಚಿಗೆ ಹೋಗಿ, ಅಲ್ಲಿಂದ ದಕ್ಷಿಣದಲ್ಲಿ ಯೆಬೂಸಿಯರ ಮೇರೆಯಾದ ಬೆನ್ ಹಿನ್ನೋಮಿನ ಹಳ್ಳದ ಕಣಿವೆ ಮಾರ್ಗವಾಗಿ ಏನ್ ರೋಗೆಲಿಗೆ ಬರುತ್ತದೆ.
17 ೧೭ ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಇಳಿಯುತ್ತಾ ಏನ್ ಷೆಮೆಷಿಗೂ, ಅದುಮೀಮಿನ ದಾರಿಯ ಎದುರಿನಲ್ಲಿರುವ ಗೆಲೀಲೋತಕ್ಕೆ ತಲುಪಿ ರೂಬೇನನ ಮಗನಾದ ಬೋಹನನ ಬಂಡೆಯ ತನಕ ಇಳಿದು,
ಅಲ್ಲಿಂದ ಏನ್ ಷೆಮೆಷ್, ಅಲ್ಲಿಂದ ಅದುಮೀಮ್ ಎಂಬ ದಿಬ್ಬೆಗೆ ಎದುರಾಗಿ ಗೆಲೀಲೋತಿಗೂ, ಅಲ್ಲಿಂದ ರೂಬೇನನ ಪುತ್ರನಾದ ಬೋಹನನ ಕಲ್ಲಿಗೆ ಏರಿಹೋಗಿ,
18 ೧೮ ಅರಾಬದ ಉತ್ತರದಲ್ಲಿರುವ ಬೆಟ್ಟ ಇವುಗಳ ಮೇಲೆ ಅರಾಬಾ ಎಂಬ ಕಣಿವೆ ಪ್ರದೇಶಕ್ಕೆ ಹೋಗುತ್ತದೆ.
ಅಲ್ಲಿಂದ ಬೇತ್ ಅರಾಬಾದ ಎದುರಾಗಿ ಉತ್ತರ ಭಾಗಕ್ಕೆ ಹೊರಟು, ಅರಾಬಾ ತಗ್ಗಿಗೆ ಇಳಿದು ಬರುತ್ತದೆ.
19 ೧೯ ಅಲ್ಲಿಂದ ಮೇರೆಯು ಬೇತ್ ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಬಡಗಣ ಮೂಲೆಗೆ ಹೋಗಿ ಯೊರ್ದನ್ ನದಿಯು ಸಮುದ್ರಕ್ಕೆ ಬಂದು ಸೇರುವ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. ಇದೇ ದಕ್ಷಿಣ ದಿಕ್ಕಿನ ಮೇರೆಯು.
ಅಲ್ಲಿಂದ ಆ ಮೇರೆ ಬೇತ್ ಹೊಗ್ಲಾಕ್ಕೆ ಉತ್ತರ ಕಡೆಯಾಗಿ ಹೊರಟು, ಯೊರ್ದನ್ ನದಿ ಮುಖ ದ್ವಾರಕ್ಕೆ ಉತ್ತರವಾದ ಲವಣ ಸಮುದ್ರ ಎಂಬ ಲವಣ ಸಮುದ್ರದ ಉತ್ತರ ಮೂಲೆಯಲ್ಲಿ ಮುಗಿಯುತ್ತದೆ. ಇದೇ ದಕ್ಷಿಣ ಭಾಗದ ಮೇರೆ.
20 ೨೦ ಯೊರ್ದನ್ ನದಿಯೇ ಅವರ ಪೂರ್ವ ದಿಕ್ಕಿನ ಮೇರೆಯು.
ಪೂರ್ವದಿಕ್ಕಿನಲ್ಲಿ ಯೊರ್ದನ್ ನದಿಯೇ ಅದರ ಮೇರೆಯಾಗಿತ್ತು. ಇದು ಬೆನ್ಯಾಮೀನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಸುತ್ತಲಿರುವ ಮೇರೆಗಳ ಸೊತ್ತಾಗಿತ್ತು.
21 ೨೧ ಬೆನ್ಯಾಮೀನ್ ಗೋತ್ರಗಳ ಸ್ವತ್ತಿನ ಸುತ್ತಣ ಮೇರೆಯು ಇದೇ ಬೆನ್ಯಾಮೀನನ ಗೋತ್ರಗಳಿಗೆ ದೊರಕಿದ ಪಟ್ಟಣಗಳು ಯಾವುವೆಂದರೆ: ಯೆರಿಕೋ, ಬೇತ್‌ಹೊಗ್ಲಾ, ಏಮೆಕ್ಕೆಚ್ಚೀಚ್,
ಬೆನ್ಯಾಮೀನನ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರಕಿರುವ ಪಟ್ಟಣಗಳ ವಿವರ: ಯೆರಿಕೋ, ಬೇತ್ ಹೊಗ್ಲಾ, ಏಮೆಕ್ ಕೆಚ್ಚೀಚ್ ತಗ್ಗು,
22 ೨೨ ಬೇತ್ ಅರಾಬಾ, ಚೆಮಾರಯಿಮ್, ಬೇತೇಲ್,
ಬೇತ್ ಅರಾಬಾ, ಚೆಮಾರಯಿಮ್, ಬೇತೇಲ್,
23 ೨೩ ಅವ್ವೀಮ್, ಪಾರಾ, ಒಫ್ರಾ, ಅಮ್ಮೋನ್ಯ,
ಅವ್ವೀಮ್, ಪಾರಾ, ಒಫ್ರಾ,
24 ೨೪ ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು;
ಕೆಫೆರ್ ಅಮ್ಮೋನಿ, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ ಆಗಿರುತ್ತವೆ.
25 ೨೫ ಗಿಬ್ಯೋನ್, ರಾಮಾ, ಬೇರೋತ್,
ಇದಲ್ಲದೆ ಗಿಬ್ಯೋನ್, ರಾಮಾ, ಬೇರೋತ್,
26 ೨೬ ಮಿಚ್ಪೆ, ಕೆಫೀರಾ, ಮೋಚಾ,
ಮಿಚ್ಪೆ, ಕೆಫೀರಾ, ಮೋಚಾ,
27 ೨೭ ರೆಕೆಮ್, ಇರ್ಪೇಲ್, ತರಲಾ,
ರೆಕೆಮ್, ಇರ್ಪೇಲ್, ತರಲಾ,
28 ೨೮ ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು ಇವೇ. ಬೆನ್ಯಾಮೀನ ಗೋತ್ರಗಳಿಗೆ ದೊರಕಿದ ಸ್ವತ್ತು ಇವೇ.
ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯ, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿರುತ್ತವೆ. ಇವೇ ಬೆನ್ಯಾಮೀನ್ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆತ ಸೊತ್ತು.

< ಯೆಹೋಶುವನು 18 >