< ಯೋನನು 1 >
1 ೧ ಯೆಹೋವನು ಅಮಿತ್ತೈಯನ ಮಗನಾದ ಯೋನನಿಗೆ ಹೇಳಿದ್ದೇನೆಂದರೆ,
2 ೨ “ನೀನು ಇಲ್ಲಿಂದ ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದನ್ನು ಕಟುವಾಗಿ ಖಂಡಿಸಿ ಹೇಳು, ಏಕೆಂದರೆ ಅಲ್ಲಿರುವ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ” ಎಂದು ಅಪ್ಪಣೆಮಾಡಿದನು.
3 ೩ ಆದರೆ ಯೋನನು ಯೆಹೋವನ ಸನ್ನಿಧಿಯಿಂದ ತಪ್ಪಿಸಿಕೊಳ್ಳಲು ತಾರ್ಷೀಷಿಗೆ ಓಡಿಹೋಗಬೇಕೆಂದು ಯೋಚಿಸಿ ಹೊರಟು ಯೊಪ್ಪ ಎಂಬ ಊರಿಗೆ ಬಂದು ಅಲ್ಲಿ ತಾರ್ಷೀಷಿಗೆ ಹೊರಡುವ ಹಡಗನ್ನು ಕಂಡು ಪ್ರಯಾಣದ ದರವನ್ನು ಕೊಟ್ಟು ತಾರ್ಷೀಷಿಗೆ ಪ್ರಯಾಣಮಾಡುತ್ತಿದ್ದ ಹಡಗಿನವರೊಡನೆ ಅದನ್ನು ಹತ್ತಿದನು.
4 ೪ ಆಗ ಯೆಹೋವನು ದೊಡ್ಡ ಬಿರುಗಾಳಿಯನ್ನು ಸಮುದ್ರದ ಮೇಲೆ ಬರಮಾಡಿದನು. ಸಮುದ್ರದಲ್ಲಿ ದೊಡ್ಡ ತುಫಾನು ಎದ್ದು ಹಡಗು ಒಡೆದುಹೋಗುವ ಹಾಗಾಯಿತು.
5 ೫ ಆಗ ನಾವಿಕರು ಹೆದರಿ ತಮ್ಮತಮ್ಮ ದೇವರುಗಳಿಗೆ ಮೊರೆಯಿಟ್ಟರು. ಹಡಗನ್ನು ಹಗುರ ಮಾಡಲು ಹಡಗಿನಲ್ಲಿರುವ ಸರಕುಗಳನ್ನು ಸಮುದ್ರಕ್ಕೆ ಬಿಸಾಡಿಬಿಟ್ಟರು. ಆದರೆ ಯೋನನು ಹಡಗಿನ ಕೆಳಭಾಗಕ್ಕೆ ಹೋಗಿ ಮಲಗಿ ಗಾಢನಿದ್ರೆ ಮಾಡುತ್ತಿದ್ದನು.
6 ೬ ಹೀಗಿರಲು ಹಡಗಿನ ನೌಕಾಧಿಕಾರಿ ಅವನ ಬಳಿಗೆ ಬಂದು, “ಇದೇನು, ನೀನು ನಿದ್ದೆಮಾಡುತ್ತಿರುವುದು? ಎದ್ದೇಳು, ನಿನ್ನ ದೇವರಿಗೆ ಮೊರೆಯಿಡು; ಒಂದು ವೇಳೆ ನಿನ್ನ ದೇವರು ನಮ್ಮನ್ನು ರಕ್ಷಿಸಾನು, ನಾವೆಲ್ಲರು ನಾಶವಾಗದೆ ಉಳಿದೇವು” ಎಂದು ಹೇಳಿದನು.
7 ೭ ಅನಂತರ ನಾವಿಕರೆಲ್ಲರು “ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣರೆಂದು ನಮಗೆ ತಿಳಿಯುವ ಹಾಗೆ ಚೀಟು ಹಾಕೋಣ ಬನ್ನಿರಿ” ಎಂಬುದಾಗಿ ಮಾತನಾಡಿಕೊಂಡು ಚೀಟುಹಾಕಲು ಚೀಟು ಯೋನನ ಹೆಸರಿಗೆ ಬಂದಿತು.
8 ೮ ಆಗ ಅವರು ಯೋನನಿಗೆ ಅಯ್ಯಾ, “ಈ ಕೇಡು ನಮಗೆ ಸಂಭವಿಸಲು ಕಾರಣವೇನು ಎಂಬುದನ್ನು ನೀನೇ ನಮಗೆ ತಿಳಿಸು; ನಿನ್ನ ವೃತ್ತಿ ಏನು? ನೀನು ಎಲ್ಲಿಂದ ಬಂದವನು? ನೀನು ಯಾವ ದೇಶದವನು?, ಯಾವ ಜನಾಂಗದವನು?” ಎಂದು ಅವನನ್ನು ಕೇಳಲು
9 ೯ ಅವನು ಅವರಿಗೆ “ನಾನು ಇಬ್ರಿಯನು; ಕಡಲನ್ನೂ ಒಣನೆಲವನ್ನೂ ಸೃಷ್ಟಿಸಿದ ಪರಲೋಕದ ದೇವರಾದ ಯೆಹೋವನ ಭಕ್ತನು” ಎಂದು ಹೇಳಿ,
10 ೧೦ ನಾನು ಯೆಹೋವನ ಸನ್ನಿಧಿಯಿಂದ ಓಡಿಹೋಗುತ್ತಿದ್ದೇನೆ ಎಂದು ಅವನು ಅವರಿಗೆ ಸೂಚಿಸಿದನು. ಇದನ್ನು ಕೇಳಿ ಅವರು ಬಹಳವಾಗಿ ಹೆದರಿ “ಇದೇನು ನೀನು ಮಾಡಿದ್ದು?” ಎಂದು ಕೇಳಿದರು.
11 ೧೧ ಆಗ ಸಮುದ್ರವು ಮತ್ತಷ್ಟು ಅಲ್ಲೋಲಕಲ್ಲೋಲವಾದ ಕಾರಣ ಅವರು ಯೋನನಿಗೆ “ಸಮುದ್ರವು ಶಾಂತವಾಗುವ ಹಾಗೆ ನಿನ್ನನ್ನು ಏನು ಮಾಡೋಣ?” ಎಂದು ಕೇಳಿದರು.
12 ೧೨ ಯೋನನು ಅವರಿಗೆ “ನನ್ನನ್ನೆತ್ತಿ ಸಮುದ್ರದಲ್ಲಿ ಹಾಕಿರಿ; ಆಗ ಸಮುದ್ರವು ಶಾಂತವಾಗುವುದು; ಈ ಭೀಕರ ಬಿರುಗಾಳಿ ನಿಮಗೆ ಸಂಭವಿಸಿದ್ದು ನನ್ನ ನಿಮಿತ್ತವೇ ಎಂಬುದು ನನಗೆ ಗೊತ್ತು” ಎಂದು ಉತ್ತರಕೊಟ್ಟನು.
13 ೧೩ ನಾವಿಕರು ಅದಕ್ಕೆ ಒಪ್ಪದೆ ದಡಕ್ಕೆ ಹಿಂತಿರುಗಬೇಕೆಂದು ಹುಟ್ಟುಹಾಕುತ್ತಾ ಬಂದರೂ ಸಹ ದಡ ಸೇರಲು ಆಗಲಿಲ್ಲ; ಸಮುದ್ರವು ಇನ್ನೂ ಅಲ್ಲೋಲಕಲ್ಲೋಲವಾಗುತ್ತಲೇ ಇತ್ತು.
14 ೧೪ ಹೀಗಿರಲು, ಅವರು ಸಹ ಯೆಹೋವನಿಗೆ ಮೊರೆಯಿಟ್ಟು, “ಯೆಹೋವನೇ, ಈ ಮನುಷ್ಯನ ಪ್ರಾಣನಷ್ಟದಿಂದ ಆಗುವ ಕೇಡು ನಮ್ಮ ಮೇಲೆ ಬಾರದಿರಲಿ; ನಿರಪರಾಧಿಯನ್ನು ಕೊಂದ ದೋಷಕ್ಕೆ ನಮ್ಮನ್ನು ಗುರಿಮಾಡಬೇಡ; ಯೆಹೋವನೇ, ನೀನೇ ನಿನ್ನ ಚಿತ್ತಾನುಸಾರವಾಗಿ ಇದನ್ನು ಮಾಡಿದ್ದಿಯಲ್ಲಾ” ಎಂದು ಬಿನ್ನವಿಸಿದರು.
15 ೧೫ ಆನಂತರ ಅವರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು; ಕೂಡಲೆ ಸಮುದ್ರವು ಭೋರ್ಗರೆಯುವುದನ್ನು ನಿಲ್ಲಿಸಿ ಶಾಂತವಾಯಿತು.
16 ೧೬ ಇದನ್ನು ನೋಡಿ ಆ ಜನರು ಯೆಹೋವನಿಗೆ ಬಹಳವಾಗಿ ಭಯಪಟ್ಟು, ಆತನಿಗೆ ಯಜ್ಞವನ್ನರ್ಪಿಸಿ ಹರಕೆಗಳನ್ನು ಮಾಡಿಕೊಂಡರು.
17 ೧೭ ಆಗ ಯೆಹೋವನು, ಯೋನನನ್ನು ನುಂಗಲು ಒಂದು ದೊಡ್ಡ ಮೀನಿಗೆ ಅಪ್ಪಣೆ ಮಾಡಿದನು; ಯೋನನು ಮೂರು ದಿನಗಳ ಕಾಲ ಹಗಲಿರುಳು ಆ ಮೀನಿನ ಹೊಟ್ಟೆಯೊಳಗೆ ಇದ್ದನು.