< ಯೋಹಾನನು 2 >
1 ೧ ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು.
2 ೨ ಯೇಸುವನ್ನೂ ಆತನ ಶಿಷ್ಯರನ್ನೂ ಸಹ ಮದುವೆಗೆ ಕರೆದಿದ್ದರು.
3 ೩ ಅಲ್ಲಿ ದ್ರಾಕ್ಷಾರಸವು ಸಾಲದೆ ಹೋದಾಗ, ಯೇಸುವಿನ ತಾಯಿಯು ಆತನಿಗೆ “ಅವರಲ್ಲಿ ದ್ರಾಕ್ಷಾರಸವು ಮುಗಿದುಹೋಗಿದೆ” ಎಂದು ತಿಳಿದಳು.
4 ೪ ಯೇಸು ಆಕೆಗೆ “ಅಮ್ಮಾ, ಅದಕ್ಕೆ ನಾನೇನು ಮಾಡಲಿ? ನನ್ನ ಸಮಯವು ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟನು.
5 ೫ ಆತನ ತಾಯಿಯು ಸೇವಕರಿಗೆ “ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದಳು.
6 ೬ ಯೆಹೂದ್ಯರ ಶುದ್ಧಾಚಾರ ಪದ್ಧತಿಯ ಪ್ರಕಾರ ಅಲ್ಲಿ ಆರು ಕಲ್ಲಿನ ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವ ಅಳತೆಯುಳ್ಳದ್ದಾಗಿತ್ತು.
7 ೭ ಯೇಸು ಅವರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ” ಎಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು.
8 ೮ ಅನಂತರ ಆತನು ಸೇವಕರಿಗೆ, “ಈಗ ಇದನ್ನು ತೆಗೆದುಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿರಿ” ಎಂದು ಹೇಳಿದಾಗ, ಅವರು ತೆಗೆದುಕೊಂಡು ಹೋಗಿ ಕೊಟ್ಟರು.
9 ೯ ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂದಿತೆಂದು ಅವನಿಗೆ ತಿಳಿದಿರಲಿಲ್ಲ, ಆದರೆ ನೀರನ್ನು ತೋಡಿಕೊಂಡು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು,
10 ೧೦ “ಎಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಕೊಟ್ಟು ಅಮಲೇರಿದ ಮೇಲೆ ಸಾಧಾರಣವಾದ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿರುವೆ” ಎಂದನು.
11 ೧೧ ಯೇಸು ಈ ಮೊದಲನೆಯ ಸೂಚಕ ಕಾರ್ಯವನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ, ತನ್ನ ಮಹಿಮೆಯನ್ನು ತೋರ್ಪಡಿಸಿದನು. ಇದರಿಂದ ಆತನ ಶಿಷ್ಯರು ಆತನಲ್ಲಿ ನಂಬಿಕೆಯಿಟ್ಟರು.
12 ೧೨ ಇದಾದ ಮೇಲೆ ಯೇಸುವೂ, ಆತನ ತಾಯಿಯೂ, ತಮ್ಮಂದಿರೂ ಮತ್ತು ಆತನ ಶಿಷ್ಯರೂ ಘಟ್ಟಾ ಇಳಿದು ಕಪೆರ್ನೌಮಿಗೆ ಹೋಗಿ ಅಲ್ಲಿ ಅವರು ಕೆಲವು ದಿನ ಇದ್ದರು.
13 ೧೩ ಆಗ ಯೆಹೂದ್ಯರ ಪಸ್ಕ ಹಬ್ಬವು ಹತ್ತಿರ ಬಂದುದರಿಂದ ಯೇಸು ಯೆರೂಸಲೇಮಿಗೆ ಹೋದನು.
14 ೧೪ ಆತನು ದೇವಾಲಯದಲ್ಲಿ ದನ, ಕುರಿ, ಪಾರಿವಾಳಗಳನ್ನು ಮಾರುವವರೂ, ನಾಣ್ಯ ವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿರುವುದನ್ನು ಕಂಡನು.
15 ೧೫ ಆತನು ಹಗ್ಗದಿಂದ ಚಾವಟಿ ಮಾಡಿ ಕುರಿ, ದನ ಸಹಿತ ಎಲ್ಲವನ್ನೂ, ದೇವಾಲಯದ ಹೊರಕ್ಕೆ ಅಟ್ಟಿ, ನಾಣ್ಯವಿನಿಮಯ ಮಾಡುವವರ ಮೇಜುಗಳನ್ನು ಉರುಳಿಸಿ, ನಾಣ್ಯಗಳನೆಲ್ಲ ಚೆಲ್ಲಿದನು.
16 ೧೬ ಪಾರಿವಾಳ ಮಾರುವವರಿಗೆ ಸಿಟ್ಟಿನಿಂದ “ಇವುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಿರಿ. ನನ್ನ ತಂದೆಯ ಮನೆಯನ್ನು ವ್ಯಾಪಾರದ ಸ್ಥಳವನ್ನಾಗಿ ಮಾಡುವುದನ್ನು ನಿಲ್ಲಿಸಿರಿ” ಎಂದು ಗದರಿಸಿದನು.
17 ೧೭ ಆಗ “ನಿನ್ನ ಆಲಯದ ಮೇಲಿನ ಅಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತಿದೆ” ಎಂದು ಬರೆದಿರುವುದನ್ನು ಆತನ ಶಿಷ್ಯರು ನೆನಪುಮಾಡಿಕೊಂಡರು.
18 ೧೮ ಆಗ ಅಲ್ಲಿದ್ದ ಯೆಹೂದ್ಯರು ಆತನಿಗೆ “ಇದನ್ನೆಲ್ಲಾ ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.
19 ೧೯ ಅದಕ್ಕೆ ಯೇಸು “ಈ ದೇವಾಲಯವನ್ನು ಕೆಡವಿರಿ, ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು” ಎಂದು ಉತ್ತರಕೊಟ್ಟನು.
20 ೨೦ ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳು ಹಿಡಿದವು. ನೀನು ಮೂರು ದಿನಗಳಲ್ಲಿ ಇದನ್ನು ಎಬ್ಬಿಸುವಿಯೋ?” ಎಂದರು.
21 ೨೧ ಆದರೆ ಆತನು ತನ್ನ ದೇಹವೆಂಬ ದೇವಾಲಯದ ಕುರಿತು ಆ ಮಾತನ್ನು ಹೇಳಿದನು.
22 ೨೨ ಆದುದರಿಂದ ಆತನು ಸತ್ತವರೊಳಗಿಂದ ಎದ್ದ ಮೇಲೆ ಈ ಮಾತು ಆತನ ಶಿಷ್ಯರ ನೆನಪಿಗೆ ಬಂದು ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನೂ, ಮತ್ತು ಯೇಸು ತಮಗೆ ಹೇಳಿದ ಮಾತನ್ನೂ ಅವರು ನಂಬಿದರು.
23 ೨೩ ಆತನು ಪಸ್ಕಹಬ್ಬದ ಜಾತ್ರೆಯಲ್ಲಿ ಯೆರೂಸಲೇಮಿನಲ್ಲಿ ಇದ್ದಾಗ ಬಹು ಜನರು ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು.
24 ೨೪ ಆದರೆ ಯೇಸು ಎಲ್ಲವನ್ನೂ ಬಲ್ಲವನಾದುದರಿಂದ ಅವರಿಗೆ ವಶವಾಗಲಿಲ್ಲ,
25 ೨೫ ಆತನು ಪ್ರತಿ ಮನುಷ್ಯನ ಆಂತರ್ಯವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿ ಕೊಡಬೇಕಾದ ಅಗತ್ಯವಿರಲಿಲ್ಲ.