< ಯೋಬನು 9 >
1 ೧ ಆ ಮೇಲೆ ಯೋಬನು ಪ್ರತ್ಯುತ್ತರವಾಗಿ ಇಂತೆಂದನು,
ಅದಕ್ಕೆ ಯೋಬನು ಉತ್ತರಿಸುತ್ತಾ ಇಂತೆಂದನು:
2 ೨ “ನೀನು ಹೇಳಿದ್ದು ಸತ್ಯವೇ ಸರಿ. ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ?
“ನಿಜಕ್ಕೂ, ಇದು ಸತ್ಯ ಎಂದು ಬಲ್ಲೆನು; ಆದರೆ ಮನುಷ್ಯರು ದೇವರ ಮುಂದೆ ತಮ್ಮ ಮುಗ್ಧತೆಯನ್ನು ಪ್ರಮಾಣಿಕರಿಸುವುದು ಹೇಗೆ?
3 ೩ ಆತನೊಂದಿಗೆ ವ್ಯಾಜ್ಯಮಾಡಬೇಕೆಂದು ಇಷ್ಟಪಟ್ಟರೂ, ಆತನ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಕೊಡಲಾರನು.
ದೇವರ ಸಂಗಡ ವ್ಯಾಜ್ಯವಾಡಲು ಮನುಷ್ಯನು ಬಯಸಿದರೂ, ದೇವರ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಕೊಡಲಾರನು.
4 ೪ ದೇವರ ಹೃದಯವು ವಿವೇಕವುಳ್ಳದ್ದು, ಆತನ ಶಕ್ತಿಯು ಪ್ರಬಲವಾದದ್ದು. ಆತನ ವಿರುದ್ಧವಾಗಿ ಮನಸ್ಸು ಕಠಿಣಮಾಡಿಕೊಂಡವನು ಸಾರ್ಥಕನಾದದ್ದುಂಟೇ?
ದೇವರ ಜ್ಞಾನವು ಆಳವಾದದ್ದು, ಶಕ್ತಿಯಲ್ಲಿ ದೇವರು ಪ್ರಬಲರೂ ಆಗಿದ್ದಾರೆ; ದೇವರ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?
5 ೫ ಆತನು ಪರ್ವತಗಳನ್ನು ಅರಿಯದಂತೆ ಸರಿಸಿ ಕೋಪದಿಂದ ಅವುಗಳನ್ನು ಉರುಳಿಸುತ್ತಾನೆ.
ದೇವರು ಪರ್ವತಗಳನ್ನು ಅವುಗಳಿಗೆ ತಿಳಿಯದ ಹಾಗೆ ಸರಿಸುತ್ತಾರೆ; ತಮ್ಮ ಎದುರಿನಲ್ಲಿ ಅವುಗಳನ್ನು ತಿರುಗಿಸುತ್ತಾರೆ.
6 ೬ ಭೂಲೋಕವನ್ನು ಕದಲಿಸಿ ಅದರ ಸ್ತಂಭಗಳನ್ನು ನಡುಗಿಸುತ್ತಾನೆ.
ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುತ್ತಾರೆ; ಅದರ ಸ್ತಂಭಗಳು ನಡುಗುತ್ತವೆ.
7 ೭ ಹುಟ್ಟಬೇಡವೆಂದು ಆತನು ಅಪ್ಪಣೆ ಕೊಟ್ಟರೆ ಸೂರ್ಯನು ಹುಟ್ಟುವುದಿಲ್ಲ; ನಕ್ಷತ್ರಗಳನ್ನು ಮುಚ್ಚಿಟ್ಟು ಮುದ್ರೆಹಾಕುತ್ತಾನೆ.
ದೇವರು ಸೂರ್ಯನಿಗೆ ಪ್ರಕಾಶಿಸದಂತೆ ಅಪ್ಪಣೆ ಕೊಟ್ಟರೆ, ಪ್ರಕಾಶಿಸುತ್ತಿರಲಿಲ್ಲ; ನಕ್ಷತ್ರಗಳಿಗೆ ಮುದ್ರೆ ಹಾಕಿದ್ದರೆ, ನಕ್ಷತ್ರವೂ ಮಿನುಗುತ್ತಿರಲಿಲ್ಲ.
8 ೮ ಆಕಾಶಮಂಡಲವನ್ನು ವಿಶಾಲಪಡಿಸಿದವನು ಆತನೊಬ್ಬನೇ. ಅಲ್ಲಕಲ್ಲೋಲವಾದ ಸಮುದ್ರದ ಮೇಲೆ ನಡೆಯುತ್ತಾನೆ.
ದೇವರೊಬ್ಬರೇ ಆಕಾಶಗಳನ್ನು ಹರಡಿಸುತ್ತಾರೆ; ದೇವರು ಸಮುದ್ರದ ತೆರೆಗಳ ಮೇಲೆ ನಡೆಯುತ್ತಾರೆ.
9 ೯ ನಕ್ಷತ್ರಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ, ದಕ್ಷಿಣ ದಿಕ್ಕಿನ ನಕ್ಷತ್ರಗೃಹಗಳನ್ನೂ ನಿರ್ಮಿಸಿದವನು ಆತನೇ.
ಸಪ್ತರ್ಷಿಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ ದಕ್ಷಿಣ ದಿಕ್ಕಿನ ನಕ್ಷತ್ರಗ್ರಹಗಳನ್ನೂ ನಿರ್ಮಿಸಿದವರು ದೇವರೇ.
10 ೧೦ ಅಪ್ರಮೇಯ ಮಹಾಕಾರ್ಯಗಳನ್ನೂ, ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.
ದೇವರು ಕಂಡು ಹಿಡಿಯಲಾರದಂಥ ಮಹತ್ಕಾರ್ಯಗಳನ್ನೂ, ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾರೆ.
11 ೧೧ ಆಹಾ, ಆತನು ನನ್ನ ಪಕ್ಕದಲ್ಲಿ ದಾಟಿಹೋದರೂ ನಾನು ಕಾಣುವುದಿಲ್ಲ; ಮುಂದಕ್ಕೆ ಹಾದುಹೋದರೂ ನನಗೆ ತಿಳಿಯುವುದಿಲ್ಲ.
ದೇವರು ನನ್ನ ಮುಂದೆ ಹಾದುಹೋದಾಗ, ನನಗೆ ಅವರು ಕಾಣುವುದಿಲ್ಲ; ದೇವರು ದಾಟಿ ಹೋಗುತ್ತಾರೆ; ಆದರೆ ನಾನು ಅವರನ್ನು ಗ್ರಹಿಸಿಕೊಳ್ಳುವುದಿಲ್ಲ.
12 ೧೨ ಇಗೋ ಹಿಡಿದುಕೊಳ್ಳುತ್ತಾನೆ, ಆತನನ್ನು ತಳ್ಳುವವರು ಯಾರು? ‘ನೀನು ಏನು ಮಾಡುತ್ತಿ?’ ಎಂದು ಆತನನ್ನು ಕೇಳುವವರಾರು?
ದೇವರು ತೆಗೆದುಕೊಂಡರೆ, ಅವರಿಗೆ ಅಡ್ಡಿ ಮಾಡುವವರು ಯಾರು? ದೇವರನ್ನು, ‘ನೀವು ಏನು ಮಾಡುತ್ತೀರಿ?’ ಎಂದು ಕೇಳುವವರ್ಯಾರು.
13 ೧೩ ದೇವರು ತನ್ನ ಸಿಟ್ಟನ್ನು ತೊಲಗಿಸಿಬಿಡುವುದಿಲ್ಲ; ರಾಹಾಬನ ಸಹಾಯಕರು ಆತನಿಗೆ ಅಡ್ಡಬಿದ್ದರಲ್ಲಾ.
ದೇವರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ; ರಹಾಬನ ಸಹಾಯಕರು ಸಹ ದೇವರ ಕಾಲಿಗೆ ಅಡ್ಡಬಿದ್ದರಲ್ಲಾ.
14 ೧೪ ನಾನಾದರೋ ದೇವರೊಂದಿಗೆ ವಾದಿಸಿ, ಆತನಿಗೆ ಉತ್ತರಕೊಡುವುದಕ್ಕೆ ಮತ್ತೂ ಅಶಕ್ತನು.
“ದೇವರೊಂದಿಗೆ ವಾದಿಸಲು ನಾನು ಅಶಕ್ತನು; ದೇವರಿಗೆ ತಕ್ಕ ಉತ್ತರ ಕೊಡಲು ನಾನು ಎಷ್ಟರವನು?
15 ೧೫ ನಾನು ನೀತಿವಂತನಾಗಿದ್ದರೂ ಉತ್ತರಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಮೊರೆಯಿಡುವೆನು.
ನಾನು ನೀತಿವಂತನಾಗಿದ್ದರೂ ಉತ್ತರ ಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಕರುಣೆಗೋಸ್ಕರ ಮೊರೆಯಿಡುವೆನು.
16 ೧೬ ನಾನು ಕರೆದಾಗ ಆತನು ನನಗೆ ಕಾಣಿಸಿಕೊಂಡಿದ್ದರೂ, ನನ್ನ ವಿಜ್ಞಾಪನೆಯನ್ನು ಲಾಲಿಸುವನೆಂದು ನಂಬುತ್ತಿರಲಿಲ್ಲ.
ನಾನು ಕರೆಯಲು ದೇವರು ನನಗೆ ಉತ್ತರ ಕೊಟ್ಟರೂ, ನನ್ನ ವಿಜ್ಞಾಪನೆಗೆ ದೇವರು ಕಿವಿಗೊಡುವರೆಂದು ನಾನು ನಂಬುತ್ತಿರಲಿಲ್ಲ.
17 ೧೭ ಆತನು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾ, ಸುಮ್ಮಸುಮ್ಮನೆ ಒಂದರ ಮೇಲೊಂದು ಗಾಯಮಾಡುತ್ತಾ,
ಏಕೆಂದರೆ ದೇವರು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾರೆ; ನನ್ನ ಗಾಯಗಳನ್ನು ಕಾರಣವಿಲ್ಲದೆ ಹೆಚ್ಚಿಸುತ್ತಾರೆ.
18 ೧೮ ಉಸಿರಾಡಗೊಡಿಸದೆ ಕಹಿಯಾದ ಪದಾರ್ಥದಿಂದ ನನ್ನ ಹೊಟ್ಟೆಯನ್ನು ತುಂಬಿಸುತ್ತಾನೆ.
ನಾನು ಉಸಿರಾಡಲು ಕಷ್ಟಪಡುತ್ತಿದ್ದೇನೆ, ದೇವರು ಕಹಿಯಾದವುಗಳಿಂದ ನನ್ನನ್ನು ತುಂಬಿಸುತ್ತಾರೆ.
19 ೧೯ ನಾನು ಬಲಿಷ್ಠನ ಶಕ್ತಿಯನ್ನು ಮೊರೆಹೋಗುವೆನೆಂದರೆ ದೇವರು, ‘ಇಗೋ, ಇದ್ದೇನೆ’ ಎನ್ನುವನು. ನ್ಯಾಯವಿಚಾರಣೆಯು ಆಗಲಿ ಎಂದರೆ ಆತನು ನನಗೆ, ‘ಕಾಲ ನಿಯಾಮಕರು ಯಾರು?’ ಎನ್ನುವನು.
ಶಕ್ತಿಯ ವಿಷಯದಲ್ಲಿ ಹೇಳಬೇಕಾದರೆ, ಇಗೋ ದೇವರು ಬಲಶಾಲಿ! ನ್ಯಾಯದ ವಿಷಯದಲ್ಲಿ ವಾದಿಸಬೇಕಾದರೆ, ದೇವರಿಗೆ ಸವಾಲು ಹಾಕುವವರು ಯಾರು?
20 ೨೦ ನಾನು ನೀತಿವಂತನಾಗಿದ್ದರೂ ನನ್ನ ಬಾಯೇ ನನ್ನನ್ನು ಅಪರಾಧಿಯೆಂದು ತೋರ್ಪಡಿಸುವುದು. ನಾನು ನಿರ್ದೋಷಿಯಾಗಿದ್ದರೂ ಆತನು ನನ್ನನ್ನು ದುರ್ಮಾರ್ಗಿಯೆಂದು ನಿರೂಪಿಸುವನು.
ನಾನು ನೀತಿವಂತನಾಗಿದ್ದರೂ, ನನ್ನ ಸ್ವಂತ ಬಾಯೇ ನನ್ನನ್ನು ಖಂಡಿಸುತ್ತದೆ; ನಾನು ನಿರ್ದೋಷಿಯಾಗಿದ್ದರೂ, ದೇವರು ನನ್ನನ್ನು ಅಪರಾಧಿ ಎಂದು ನಿರೂಪಿಸುವರು.
21 ೨೧ ನಾನು ನಿರ್ದೋಷಿಯೇ ಹೌದು; ನನ್ನ ವಿಷಯದಲ್ಲಿ ನನಗೇನೂ ಚಿಂತೆಯಿಲ್ಲ; ನನ್ನ ಪ್ರಾಣವನ್ನು ತಿರಸ್ಕರಿಸುತ್ತೇನೆ.
“ನಾನು ನಿರ್ದೋಷಿಯೇ ಹೌದು, ನನ್ನ ಬಗ್ಗೆ ನನಗೆ ಚಿಂತೆ ಇಲ್ಲ; ನನ್ನ ಬಾಳನ್ನೇ ತಿರಸ್ಕಾರ ಮಾಡುತ್ತೇನೆ.
22 ೨೨ ಎಲ್ಲಾ ಒಂದೇ. ಆದಕಾರಣ ‘ನಾನು, ನಿರ್ದೋಷಿಯನ್ನೂ, ದೋಷಿಯನ್ನೂ ಆತನು ನಾಶ ಮಾಡುತ್ತೇನೆ’ ಎಂದು ಹೇಳುತ್ತಾನೆ.
ಇದೆಲ್ಲಾ ಒಂದೇ ವಿಷಯ; ಆದ್ದರಿಂದ ನಾನು ಇದನ್ನು ಹೇಳುತ್ತೇನೆ: ‘ನಿರ್ದೋಷಿಯನ್ನೂ, ಕೆಟ್ಟವನನ್ನೂ ದೇವರು ದಂಡಿಸುತ್ತಾರೆ.’
23 ೨೩ ವಿಪತ್ತು ಆಕಸ್ಮಾತ್ತಾಗಿ ಜನರನ್ನು ಸಂಹರಿಸಲು, ನಿರ್ಮಲಚಿತ್ತರು ಮನಗುಂದುವುದನ್ನು ಆತನು ನೋಡಿ ಹಾಸ್ಯಮಾಡುವನು.
ವಿಪತ್ತು ಅಕಸ್ಮಾತ್ತಾಗಿ ಮರಣವನ್ನು ತಂದರೆ, ನಿರಪರಾಧಿಯ ಬುದ್ಧಿಹೀನತೆಗೆ ದೇವರು ನಗುವರು.
24 ೨೪ ಭೂಲೋಕವು ದುಷ್ಟರ ಕೈ ಸೇರಿದೆ; ಲೋಕದ ನ್ಯಾಯಾಧಿಪತಿಗಳ ಮುಖಗಳಿಗೆ ಮುಸುಕು ಹಾಕಿದ್ದಾನೆ. ಇದನ್ನು ಮಾಡಿದವನು ಆತನಲ್ಲದೆ ಮತ್ತೆ ಯಾರು?
ಲೋಕವು ಕೆಟ್ಟವರ ಕೈವಶವಾಗಿದೆ; ನ್ಯಾಯಾಧಿಪತಿಗಳ ಮುಖಕ್ಕೆ ಮುಸುಕುಹಾಕಲಾಗಿದೆ; ಇದನ್ನು ಅನುಮತಿಸಿದವರು ದೇವರಲ್ಲದೆ ಮತ್ತೆ ಯಾರು?
25 ೨೫ ನನ್ನ ದಿನಗಳು ಓಟಗಾರನಿಗಿಂತ ಶೀಘ್ರವಾಗಿರುತ್ತವೆ. ಯಾವ ಸುಖವನ್ನೂ ಕಾಣದೆ ಓಡಿ ಹೋಗುತ್ತವೆ.
“ಆದರೆ ನನ್ನ ದಿನಗಳು ಅಂಚೆಯವನಿಗಿಂತಲೂ ತ್ವರೆಯಾಗಿವೆ; ಆನಂದವನ್ನೂ ನೋಡದೆ ದಿನಗಳು ಓಡಿಹೋಗುತ್ತವೆ.
26 ೨೬ ಬೆಂಡಿನ ದೋಣಿಗಳು ದಾಟಿ ಹೋಗುವಂತೆಯೂ, ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ವೇಗವಾಗಿ ಗತಿಸಿ ಹೋಗುತ್ತವೆ.
ಆಪಿನ ದೋಣಿಗಳು ದಾಟಿ ಹೋಗುವಂತೆಯೂ, ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ದಿನಗಳು ವೇಗವಾಗಿ ಗತಿಸಿಹೋಗುತ್ತವೆ.
27 ೨೭ ನಾನು ನನ್ನ ಪ್ರಲಾಪವನ್ನು ಮರೆತುಬಿಟ್ಟು, ಕಳೆಗುಂದಿದ ನನ್ನ ಮುಖವನ್ನು ಮಾರ್ಪಡಿಸಿಕೊಂಡು ಹರ್ಷಿಸುವೆನೆಂದು ಮನಸ್ಸು ಮಾಡಿದರೆ,
‘ನಾನು ನನ್ನ ದೂರುಗಳನ್ನು ಮರೆತು, ನನ್ನ ಭಾರವನ್ನು ಬಿಟ್ಟು, ಆದರಣೆ ಹೊಂದುವೆನು,’ ಎಂದು ತೀರ್ಮಾನಿಸಿಕೊಂಡರೆ,
28 ೨೮ ನನ್ನ ಎಲ್ಲಾ ಸಂಕಟಗಳಿಂದ ನನಗೆ ಭಯವುಂಟಾಗುತ್ತದೆ; ನೀನು ನನ್ನನ್ನು ನಿರ್ದೋಷಿಯೆಂದು ಎಣಿಸುವುದಿಲ್ಲವೆಂದು ತಿಳಿದುಕೊಳ್ಳುತ್ತೇನೆ.
ನನಗಾದ ವ್ಯಥೆಗಳಿಗೆಲ್ಲಾ ನಾನು ಇನ್ನೂ ಹೆದರುತ್ತಿದ್ದೇನೆ; ದೇವರು ನನ್ನನ್ನು ನಿರಪರಾಧಿ ಎಂದು ಎಣಿಸುವುದಿಲ್ಲವೆಂದು ಸಹ ನನಗೆ ಗೊತ್ತಿದೆ.
29 ೨೯ ನಾನು ಅಪರಾಧಿಯೆಂದು ನಿರ್ಣಯಿಸಲ್ಪಡಬೇಕಷ್ಟೆ. ನಾನು ವ್ಯರ್ಥವಾಗಿ ಪ್ರಯಾಸಪಡುವುದೇಕೆ?
ನಾನು ಈಗಾಗಲೇ ಅಪರಾಧಿ ಎಂದು ನಿರ್ಣಯವಾಗಿರುವಾಗ, ನಾನು ಏಕೆ ವ್ಯರ್ಥವಾಗಿ ಹೋರಾಡಬೇಕು?
30 ೩೦ ನಾನು ಹಿಮದಿಂದ ಸ್ನಾನಮಾಡಿದರೂ, ಚೌಳಿನಿಂದ ನನ್ನ ಕೈಗಳನ್ನು ತೊಳಕೊಂಡರೂ,
ನಾನು ಹಿಮದ ನೀರಿನಲ್ಲಿ ಸ್ನಾನಮಾಡಿ, ಸಾಬೂನಿನಿಂದ ನನ್ನ ಕೈಗಳನ್ನು ತೊಳೆದುಕೊಂಡರೂ,
31 ೩೧ ನೀನು ನನ್ನನ್ನು ಗುಂಡಿಯಲ್ಲಿ ಮುಳುಗಿಸಿ, ನನ್ನ ಬಟ್ಟೆಗಳಿಗೆ ನಾನು ಅಸಹ್ಯನಾಗುವಂತೆ ಮಾಡುವಿ.
ದೇವರು ನನ್ನನ್ನು ಕುಣಿಯಲ್ಲಿ ಮುಳುಗಿಸಿ ಬಿಡುವರು; ನನ್ನ ಸ್ವಂತ ವಸ್ತ್ರಗಳೇ ನನ್ನನ್ನು ಅಸಹ್ಯಪಡಬೇಕಾಗುವುದು.
32 ೩೨ ಆತನು ನನ್ನಂಥವನಲ್ಲ, ಮನುಷ್ಯನಲ್ಲ, ನಾನು ಆತನೊಂದಿಗೆ ವಾದಿಸುವುದು ಹೇಗೆ? ನಾವಿಬ್ಬರೂ ನ್ಯಾಯಾಸನದ ಮುಂದೆ ಕೂಡುವುದು ಹೇಗೆ?
“ದೇವರು ನನ್ನಂಥ ಕೇವಲ ಮನುಷ್ಯನಲ್ಲ, ನಾನು ದೇವರೊಂದಿಗೆ ವಾದಿಸುವುದು ಹೇಗೆ? ನಾವಿಬ್ಬರೂ ನ್ಯಾಯಾಲಯದ ಮುಂದೆ ಕೂಡಿ ವಾದಿಸುವುದು ಹೇಗೆ?
33 ೩೩ ನಮ್ಮಿಬ್ಬರ ಮೇಲೆ ಕೈಯಿಡುವವನಾಗಿಯೂ, ಮಧ್ಯಸ್ಥನಾಗಿಯೂ ಇರುವ ನ್ಯಾಯಾಧಿಪತಿಯು ಯಾರೂ ಇಲ್ಲ.
ನಮ್ಮಿಬ್ಬರನ್ನು ಒಟ್ಟು ಸೇರಿಸುವ ಮಧ್ಯಸ್ಥ ಒಂದು ವೇಳೆ ನಮ್ಮ ನಡುವೆ ಇದ್ದಿದ್ದರೆ,
34 ೩೪ ನನ್ನ ಮೇಲೆ ಎತ್ತಿರುವ ತನ್ನ ದಂಡವನ್ನು ಆತನು ತೆಗೆದುಹಾಕಲಿ, ಆತನಿಂದಾಗುವ ದಿಗಿಲು ನನ್ನನ್ನು ಹೆದರಿಸದಿರಲಿ.
ದೇವರ ಶಿಕ್ಷೆಯಕೋಲನ್ನು ನನ್ನ ಮೇಲಿನಿಂದ ತೊಲಗಿಸುವ ಒಬ್ಬ ಮಧ್ಯಸ್ಥ ಇದ್ದಿದ್ದರೆ, ದೇವರ ಭೀತಿಗೆ ನಾನು ಎಂದಿಗೂ ಹೆದರದೆ ಇರುತ್ತಿದ್ದೆ.
35 ೩೫ ಹೀಗಿದ್ದರೆ ನಾನು ಭಯಪಡದೆ ಮಾತನಾಡುವೆನು; ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.”
ಆಗ ನಾನು ದೇವರೊಂದಿಗೆ ಭಯಪಡದೆ ಮಾತನಾಡುತ್ತಿದ್ದೆ; ನನ್ನ ಸ್ವಂತ ಶಕ್ತಿಯಿಂದ ಈಗ ನಾನು ಅದನ್ನೆಲ್ಲಾ ನನಗೆ ಮಾಡಲು ಸಾಧ್ಯವಿಲ್ಲ.