< ಯೋಬನು 5 >
1 ೧ “ನೀನು ಕೂಗಿದರೆ, ನಿನಗೆ ಉತ್ತರಕೊಡುವವರುಂಟೋ? ಪರಿಶುದ್ಧ ದೇವದೂತರಲ್ಲಿ ಯಾರನ್ನು ಆಶ್ರಯಿಸುವಿ?
“ಈಗ ನೀನು ಕರೆದರೆ, ನಿನಗೆ ಉತ್ತರ ಕೊಡುವವರು ಇದ್ದಾರೋ? ಪರಿಶುದ್ಧರಲ್ಲಿ ಯಾರ ಕಡೆಗೆ ನೀನು ತಿರುಗಿಕೊಳ್ಳುವೆ?
2 ೨ ಕೋಪದಿಂದ ಮೂರ್ಖನಿಗೆ ನಾಶವು, ರೋಷದಿಂದ ಮೂಢನಿಗೆ ಮರಣವು ಸಂಭವಿಸುವುದಲ್ಲವೇ.
ಮೂಢನನ್ನು ಅಸಮಾಧಾನವು ಕೊಲ್ಲುವುದು; ಮುಗ್ಧನನ್ನು ಅಸುಹೆ ಸಾಯುವಂತೆ ಮಾಡುವುದು.
3 ೩ ಮೂರ್ಖನು ಬೇರೂರುವುದನ್ನು ನಾನು ನೋಡಿದೆನು. ಕೂಡಲೆ ಅವನ ನಿವಾಸವು ಶಾಪಗ್ರಸ್ತವೆನ್ನುವುದಕ್ಕೆ ಆಸ್ಪದವಾಯಿತು.
ಮೂಢನು ಬೇರೂರುವುದನ್ನು ನಾನು ನೋಡಿದೆನು, ಕೂಡಲೇ ಅವನ ಮನೆ ಶಾಪಕ್ಕಿಡಾಗುವುದನ್ನು ಕಂಡೆನು.
4 ೪ ಅವನ ಮಕ್ಕಳು ಆಶ್ರಯವಿಲ್ಲದೆ ನ್ಯಾಯಸ್ಥಾನದಲ್ಲಿ ಸೋತುಹೋಗುವರು. ಅವರನ್ನು ಬಿಡಿಸತಕ್ಕವರು ಯಾರೂ ಇಲ್ಲ.
ಅವನ ಮಕ್ಕಳು ಭದ್ರತೆಯಿಲ್ಲದವರಾಗುವರು; ಬಿಡಿಸತಕ್ಕವರಿಲ್ಲದೆ ಅವರು ನ್ಯಾಯಸ್ಥಾನದಲ್ಲಿ ಸೋತುಹೋಗುವರು.
5 ೫ ಹಸಿದವನು ಅವರ ಬೆಳೆಯನ್ನು ಮುಳ್ಳುಬೇಲಿಹಾಕಿದ್ದರೂ ತಿಂದುಬಿಡುವನು. ಅವರ ಸೊತ್ತನ್ನು ನುಂಗಲು ಬಾಯಿ ತೆರೆದು ಕಾದಿರುವರು.
ಹಸಿದವರು ಅವನ ಪೈರನ್ನು ತಿಂದುಬಿಡುವರು; ಮುಳ್ಳುಬೇಲಿ ಹಾಕಿದ್ದರೂ ಅದನ್ನು ತೆಗೆದುಕೊಳ್ಳುವರು; ಅವನ ಆಸ್ತಿಯನ್ನು ಬಾಯಾರಿಕೆಯಾದವರು ನುಂಗಿಬಿಡುವರು.
6 ೬ ಕೇಡು ಉದ್ಭವಿಸುವುದು ಮಣ್ಣಿನಿಂದಲ್ಲ; ದುಃಖವು ಭೂಮಿಯಿಂದ ಮೊಳೆಯುವುದಿಲ್ಲ.
ಮಣ್ಣಿನಿಂದ ಕಷ್ಟಗಳು ಹುಟ್ಟುವುದಿಲ್ಲ; ಭೂಮಿಯಿಂದ ತೊಂದರೆ ಮೊಳೆಯುವುದಿಲ್ಲ.
7 ೭ ಜ್ವಾಲೆಗಳು ಮೇಲಕ್ಕೆ ಹಾರುವುದು, ಮನುಷ್ಯರು ಶ್ರಮೆಯನ್ನು ಅನುಭವಿಸುವುದೂ ಸಹಜ.
ಆದರೂ ಕಿಡಿಗಳು ಹಾರುವ ಪ್ರಕಾರವೇ, ಮನುಷ್ಯನು ಶ್ರಮೆಹೊಂದಲು ಹುಟ್ಟುತ್ತಾನೆ.
8 ೮ (ಈ ಸಂದರ್ಭದಲ್ಲಿ) ನಾನಾದರೋ ದೇವರನ್ನೇ ಆಶ್ರಯಿಸುತ್ತಿದ್ದೆನು; ನನ್ನ ಸಂಗತಿಯನ್ನು ದೇವರಿಗೇ ಅರಿಕೆಮಾಡಿಕೊಳ್ಳುತ್ತಿದ್ದೆನು.
“ನಾನು ನೀನಾಗಿದ್ದರೆ ದೇವರಿಗೇ ಬೇಡಿಕೊಳ್ಳುತ್ತಿದ್ದೆ; ನನ್ನ ವಿಷಯವನ್ನು ದೇವರ ಮುಂದೆಯೇ ಇಡುತ್ತಿದ್ದೆ.
9 ೯ ಆತನು ಅಪ್ರಮೇಯ ಮಹಾಕಾರ್ಯಗಳನ್ನೂ, ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.
ದೇವರು ಸಂಶೋಧನೆ ಮಾಡಲಾಗದಷ್ಟು ಮಹಾಕಾರ್ಯಗಳನ್ನೂ, ಅಸಂಖ್ಯವಾದ ಅದ್ಭುತ ಕೃತ್ಯಗಳನ್ನೂ ಮಾಡುತ್ತಾರೆ.
10 ೧೦ ಭೂಮಿಯ ಮೇಲೆ ಮಳೆಸುರಿಸಿ, ಹೊಲಗದ್ದೆಗಳಿಗೆ ನೀರನ್ನು ಒದಗಿಸುತ್ತಾನೆ.
ಭೂಮಿಯ ಮೇಲೆ ಮಳೆಯನ್ನು ಕೊಡುತ್ತಾರೆ; ಹೊಲಗಳ ಮೇಲೆ ನೀರನ್ನು ಸುರಿಸುತ್ತಾರೆ.
11 ೧೧ ಹೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ಏರಿಸಿ, ದುಃಖಿಸುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುತ್ತಾನೆ.
ದೇವರು ತಗ್ಗಿದವರನ್ನು ಉನ್ನತದಲ್ಲಿಡುತ್ತಾರೆ; ದುಃಖವುಳ್ಳವರನ್ನು ಭದ್ರತೆಗೆ ಒಯ್ಯುತ್ತಾರೆ.
12 ೧೨ ಯುಕ್ತಿವಂತರ ಕೈಯಿಂದ ಏನೂ ಆಗದಂತೆ, ಅವರ ಉಪಾಯಗಳನ್ನು ಭಂಗಪಡಿಸುತ್ತಾನೆ.
ದೇವರು ವಂಚಕರ ಯೋಜನೆಗಳನ್ನು ಭಂಗಪಡಿಸುತ್ತಾರೆ. ಕುಯುಕ್ತಿಯುಳ್ಳವರ ಕೈಗಳು ಯಾವುದೇ ಯಶಸ್ಸನ್ನು ಸಾಧಿಸದಂತೆ ಮಾಡುತ್ತಾರೆ.
13 ೧೩ ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡಿದುಕೊಂಡು, ವಕ್ರಬುದ್ಧಿಯುಳ್ಳವರ ಆಲೋಚನೆಯನ್ನು ನಿರರ್ಥಕ ಮಾಡುತ್ತಾನೆ.
ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುತ್ತಾರೆ, ಮತ್ತು ಕುತಂತ್ರಿಯ ಯೋಜನೆಗಳನ್ನು ನಿರರ್ಥಕಮಾಡುತ್ತಾರೆ.
14 ೧೪ ಅವರು ಹಗಲಿನಲ್ಲೇ ಕತ್ತಲೆಯಿಂದ ಸುತ್ತುವರೆದು, ಮಧ್ಯಾಹ್ನದಲ್ಲೇ ರಾತ್ರಿಯವರಂತೆ ತಡಕಾಡುತ್ತಾರೆ.
ಕುತಂತ್ರರು ಹಗಲಿನಲ್ಲಿಯೇ ಕತ್ತಲೆಯನ್ನು ಸಂಧಿಸುತ್ತಾರೆ; ಮಧ್ಯಾಹ್ನದಲ್ಲಿ ರಾತ್ರಿಯಂತೆ ತಡಕಾಡುತ್ತಾರೆ.
15 ೧೫ ಇಂಥವರ ಬಾಯೆಂಬ ಕತ್ತಿಯಿಂದಲೂ, ಬಲಿಷ್ಠರ ಕೈಯಿಂದಲೂ ದಿಕ್ಕಿಲ್ಲದವರನ್ನು ರಕ್ಷಿಸುತ್ತಾನೆ.
ದೇವರು ದಿಕ್ಕಿಲ್ಲದವರನ್ನು ದಬ್ಬಾಳಿಕೆಮಾಡುವವರ ಬಾಯಿಯೆಂಬ ಖಡ್ಗದಿಂದಲೂ, ಬಲಿಷ್ಠರ ಕೈಯೊಳಗಿಂದಲೂ ರಕ್ಷಿಸುತ್ತಾರೆ.
16 ೧೬ ಹೀಗೆ ಬಡವನಿಗೆ ನಿರೀಕ್ಷೆಯುಂಟಾಗುವುದು, ಅನ್ಯಾಯವು ಬಾಯಿ ಮುಚ್ಚಿಕೊಳ್ಳುವುದು.
ಆದ್ದರಿಂದ ಬಡವರಿಗೆ ನಿರೀಕ್ಷೆಯುಂಟಾಗುವುದು; ಅನ್ಯಾಯವು ತನ್ನ ಬಾಯಿ ಮುಚ್ಚಿಕೊಳ್ಳುವುದು.
17 ೧೭ ಇಗೋ, ದೇವರು ಯಾರನ್ನು ಶಿಕ್ಷಿಸುವನೋ ಅವನು ಧನ್ಯನು; ಸರ್ವಶಕ್ತನಾದ ದೇವರ ದಂಡನೆಯನ್ನು ತಾತ್ಸಾರಮಾಡಬೇಡ.
“ಇಗೋ, ದೇವರು ಗದರಿಸುವ ಮನುಷ್ಯನು ಧನ್ಯನು; ಸರ್ವಶಕ್ತರ ಶಿಕ್ಷೆಯನ್ನು ತಿರಸ್ಕರಿಸಬೇಡ.
18 ೧೮ ಗಾಯಮಾಡುವವನೂ ಗಾಯಕಟ್ಟುವವನೂ ಆತನೇ; ಹೊಡೆಯುವ ಕೈಯೇ ವಾಸಿಮಾಡುತ್ತದೆ.
ಗಾಯ ಮಾಡುವವರೂ ಗಾಯ ಕಟ್ಟುವವರೂ ದೇವರೇ; ಹೊಡೆಯುವುದೂ ಗುಣಪಡಿಸುವುದೂ ದೇವರ ಕೈಯೇ.
19 ೧೯ ಆರು ಇಕ್ಕಟ್ಟುಗಳಿಂದ ಆತನು ನಿನ್ನನ್ನು ಬಿಡಿಸುವನು; ಏಳನೆಯ ಇಕ್ಕಟ್ಟು ಉಂಟಾದರೂ ಯಾವ ಕೇಡೂ ನಿನ್ನನ್ನು ಮುಟ್ಟದು.
ದೇವರು ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವರು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು.
20 ೨೦ ಬರಗಾಲದಲ್ಲಿ ಮರಣದಿಂದಲೂ, ಯುದ್ಧದಲ್ಲಿ ಕತ್ತಿಯಿಂದಲೂ ನಿನ್ನನ್ನು ಬಿಡಿಸುವನು.
ಬರದಲ್ಲಿ ನಿನ್ನನ್ನು ಮರಣದೊಳಗಿಂದಲೂ, ಯುದ್ಧದಲ್ಲಿ ಖಡ್ಗದ ಬಲದಿಂದಲೂ ದೇವರು ವಿಮೋಚಿಸುವರು.
21 ೨೧ ನಾಲಿಗೆಯೆಂಬ ಕೊರಡೆಗೆ ನೀನು ಮರೆಯಾಗಿರುವಿ; ವಿನಾಶವುಂಟಾದರೂ ನೀನು ಹೆದರುವುದಿಲ್ಲ.
ನೀನು ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ; ನಾಶ ಬಂದಾಗ ನೀನು ಭಯಪಡುವುದಿಲ್ಲ.
22 ೨೨ ನೀನು ನಾಶಕ್ಕೂ, ಕ್ಷಾಮಕ್ಕೂ ನಗುವಿ; ಕಾಡುಮೃಗಗಳಿಗೆ ಅಂಜಬೇಕಾಗಿಲ್ಲ.
ನೀನು ನಾಶಕ್ಕೂ, ಕ್ಷಾಮಕ್ಕೂ ನಗುವೆ; ಕಾಡುಮೃಗಗಳಿಗೂ ನೀನು ಭಯಪಡುವುದಿಲ್ಲ.
23 ೨೩ ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವಿ; ಕಾಡುಮೃಗಗಳೂ ನಿನ್ನ ಸಂಗಡ ಸಮಾಧಾನವಾಗಿರುವವು.
ಹೊಲದ ಕಲ್ಲುಗಳ ಸಂಗಡ ನಿನಗೆ ಒಪ್ಪಂದ ಇರುವುದು; ಕಾಡು ಮೃಗಗಳೂ ನಿನ್ನೊಂದಿಗೆ ಸಮಾಧಾನವಾಗಿರುವವು.
24 ೨೪ ನಿನ್ನ ಗುಡಾರಕ್ಕೆ ಅಪಾಯವಿಲ್ಲವೆಂದು ನಿನಗೆ ಗೊತ್ತೇ ಇರುವುದು; ನಿನ್ನ ಹಟ್ಟಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
ನಿನ್ನ ಗುಡಾರವು ಕ್ಷೇಮವಾಗಿದೆ ಎಂದು ನೀನು ತಿಳಿದುಕೊಳ್ಳುವೆ, ನಿನ್ನ ಆಸ್ತಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
25 ೨೫ ನಿನ್ನ ಸಂತಾನವು ದೊಡ್ಡದ್ದೆಂದೂ, ನಿನ್ನ ಸಂತತಿಯವರು ಭೂಮಿಯ ಹುಲ್ಲಿನಂತೆ ಲೆಕ್ಕವಿಲ್ಲದವರು ಎಂದೂ ನಂಬಿರುವಿ.
ನಿನ್ನ ಸಂತತಿಯು ಬಹಳವಾಗಿದೆ ಎಂದೂ, ನಿನ್ನ ಸಂತಾನವು ಭೂಮಿಯ ಹುಲ್ಲಿನಂತಿದೆ ಎಂದೂ ತಿಳಿದುಕೊಳ್ಳುವೆ.
26 ೨೬ ಸುಗ್ಗೀಕಾಲದಲ್ಲಿ ತೆನೆಯ ಸಿವುಡು ಮನೆಗೆ ಸೇರುವಂತೆ, ನೀನು ವೃದ್ಧಾಪ್ಯ ಕಳೆದ ಮೇಲೆ ಸಮಾಧಿಗೆ ಸೇರುವಿ.
ಸಿವುಡು ತನ್ನ ಕಾಲದಲ್ಲಿ ಮನೆಗೆ ಸೇರುವಂತೆ ನೀನು ಪೂರ್ಣ ಪ್ರಾಯದವನಾಗಿ ಸಮಾಧಿ ಸೇರುವೆ.
27 ೨೭ ಇಗೋ, ಇದನ್ನು ವಿಚಾರಿಸಿದ್ದೇವೆ, ಯಥಾರ್ಥವಾಗಿಯೇ ಇದೆ; ಇದನ್ನು ಕೇಳು, ನಿನ್ನಷ್ಟಕ್ಕೆ ನೀನೇ ತಿಳಿದುಕೋ.”
“ಇದನ್ನು ನಾವು ಪರಿಶೋಧಿಸಿದ್ದೇವೆ; ಇದು ಸತ್ಯವಾದದ್ದು, ಇದನ್ನು ನೀನು ಕೇಳಿ ತಿಳಿದುಕೋ, ಇದನ್ನು ನೀನು ಅನ್ವಯಿಸು.”