< ಯೋಬನು 4 >
1 ೧ ಅದಕ್ಕೆ ತೇಮಾನ್ಯನಾದ ಎಲೀಫಜನು ಹೀಗೆ ಉತ್ತರಕೊಟ್ಟನು,
2 ೨ “ಒಬ್ಬನು ನಿನ್ನ ಸಂಗಡ ಮಾತನಾಡ ತೊಡಗಿದರೆ ನಿನಗೆ ಬೇಸರಿಕೆ ಉಂಟಾಗುವುದೋ? ಮಾತನಾಡದೆ ಸುಮ್ಮನೆ ಇರುವುದಕ್ಕೆ ಯಾರಿಂದಾದೀತು?
3 ೩ ಇಗೋ, ನೀನು ಅನೇಕರನ್ನು ಶಿಕ್ಷಿಸಿ, ಜೋಲು ಬಿದ್ದ ಕೈಗಳನ್ನು ಬಲಗೊಳಿಸಿದ್ದಿ.
4 ೪ ಎಡವಿ ಬೀಳುವವರನ್ನು ನಿನ್ನ ಮಾತುಗಳಿಂದ ಉದ್ಧರಿಸಿ, ಕುಸಿಯುವ ಮೊಣಕಾಲುಗಳನ್ನು ದೃಢಪಡಿಸಿದ್ದಿ.
5 ೫ ಈಗಲಾದರೋ ನಿನಗೆ ಶ್ರಮೆ ಬಂತು, ಆದುದರಿಂದ ನೀನು ಬೇಸರಗೊಂಡಿರುವಿ. ಅದು ನಿನ್ನನ್ನೇ ತಗಲಿರುವ ಕಾರಣ ನಿನಗೆ ಭ್ರಮೆಯುಂಟಾಗಿದೆ.
6 ೬ ನಿನ್ನ ನಂಬಿಕೆಗೆ ನಿನ್ನ ಭಯಭಕ್ತಿಯೂ, ನಿನ್ನ ನಿರೀಕ್ಷೆಗೆ ನಿನ್ನ ಸನ್ಮಾರ್ಗವೂ ಆಧಾರವಲ್ಲವೋ?
7 ೭ ನೀನೇ ಆಲೋಚನೆಮಾಡು, ನಿರಪರಾಧಿಯು ಎಂದಾದರೂ ನಾಶವಾದದ್ದುಂಟೇ? ಯಥಾರ್ಥರು ಅಳಿದು ಹೋದದ್ದೆಲ್ಲಿ?
8 ೮ ನಾನು ನೋಡಿರುವ ಮಟ್ಟಿಗೆ ಅಧರ್ಮವನ್ನು ಉತ್ತು, ಕೇಡನ್ನು ಬಿತ್ತುವವರು ಕೇಡನ್ನೇ ಕೊಯ್ಯುವರು.
9 ೯ ದೇವರ ಶ್ವಾಸದಿಂದ ನಾಶವಾಗುತ್ತಾರೆ. ಆತನ ಸಿಟ್ಟೆಂಬ ಗಾಳಿಯಿಂದ ಹಾಳಾಗುತ್ತಾರೆ.
10 ೧೦ ಸಿಂಹ ಗರ್ಜನೆಯೂ ಆರ್ಭಟಿಸುವ ಸಿಂಹದ ಧ್ವನಿಯೂ, ಅಡಗಿ ಪ್ರಾಯದ ಸಿಂಹಗಳ ಕೋರೆಗಳು ಮುರಿಯಲ್ಪಡುವವು.
11 ೧೧ ಮೃಗೇಂದ್ರನು ಆಹಾರವಿಲ್ಲದೆ ಸಾಯುವನು. ಸಿಂಹದ ಮರಿಗಳು ಚದರಿಹೋಗುವವು.
12 ೧೨ ಒಂದು ಸಂಗತಿಯು ನನಗೆ ರಹಸ್ಯವಾಗಿ ತಿಳಿದುಬಂತು. ಅದು ಪಿಸುಮಾತಿನ ಸದ್ದಾಗಿ ನನ್ನ ಕಿವಿಗೆ ಬಿತ್ತು.
13 ೧೩ ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ, ರಾತ್ರಿಯ ಕನಸುಗಳಿಂದ ಯೋಚನೆಗಳಲ್ಲಿರುವಾಗ
14 ೧೪ ನನಗೆ ಎಲುಬುಗಳೆಲ್ಲಾ ನಡುಗುವಷ್ಟು, ಭಯಂಕರವಾದ ದಿಗಿಲು ಉಂಟಾಯಿತು.
15 ೧೫ ಆಗ ಆತ್ಮವೊಂದು ನನ್ನ ಮುಖದ ಮುಂದೆ ಸುಳಿಯಲು, ಮೈಯೆಲ್ಲಾ ರೋಮಾಂಚನವಾಯಿತು.
16 ೧೬ ನನ್ನ ಕಣ್ಣ ಮುಂದೆ ಒಂದು ಆತ್ಮವು ಇತ್ತು, ನಿಂತಿದ್ದರೂ ಅದು ಏನೆಂಬುದು ಗೊತ್ತಾಗಲಿಲ್ಲ. ಒಂದು ಸೂಕ್ಷ್ಮ ಧ್ವನಿಯು ಕೇಳಬಂತು.”
17 ೧೭ ಅದೇನೆಂದರೆ, “ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾದಾನೇ? ಮಾನವನು ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಬಹುದೇ?
18 ೧೮ ಆಹಾ, ಆತನು ತನ್ನ ಸೇವಕರಲ್ಲಿಯೂ ನಂಬಿಕೆಯನ್ನಿಡುವುದಿಲ್ಲ, ತನ್ನ ದೂತರ ಮೇಲೆ ತಪ್ಪುಹೊರಿಸುತ್ತಾನೆ.
19 ೧೯ ಧೂಳಿನಲ್ಲಿರುವ ಅಸ್ತಿವಾರದ ಮೇಲೆ, ಮಣ್ಣಿನಿಂದಾದ ಶರೀರಗಳೆಂಬ ಮನೆಗಳೊಳಗೆ ವಾಸಿಸುವವರಲ್ಲಿ ಇನ್ನೆಷ್ಟೋ ಹೆಚ್ಚಾಗಿ ತಪ್ಪು ಕಂಡುಹಿಡಿಯಬಹುದು. ಅವರು ದೀಪದ ಹುಳದಂತೆ ಅಳಿದು ಹೋಗುತ್ತಾರೆ.
20 ೨೦ ಉದಯಾಸ್ತಮಾನಗಳ ಮಧ್ಯದಲ್ಲಿ (ಜೀವಿಸಿ) ಜಜ್ಜಲ್ಪಡುತ್ತಾರೆ. ಹೀಗೆ ನಿತ್ಯನಾಶ ಹೊಂದುವುದನ್ನು ಯಾರೂ ಲಕ್ಷಿಸುವುದಿಲ್ಲ.
21 ೨೧ ಅವರ ಗುಡಾರದ ಹಗ್ಗವು ಬಿಚ್ಚಿಹೋಗುವುದಷ್ಟೆ. ಅವರು ಜ್ಞಾನವಿಲ್ಲದವರಾಗಿ ಸಾಯುವರು” ಎಂಬುದೇ.