< ಯೋಬನು 38 >
1 ೧ ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,
2 ೨ “ಅಜ್ಞಾನದ ಮಾತುಗಳಿಂದ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು?
3 ೩ ಶೂರನಂತೆ ನಡುಕಟ್ಟಿಕೋ; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.
4 ೪ ನಾನು ಲೋಕಕ್ಕೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು.
5 ೫ ಅದರ ಅಳತೆಗಳನ್ನು ಯಾರು ಗೊತ್ತುಮಾಡಿದರು? ನೀನೇ ಬಲ್ಲೆ. ಅದರ ಮೇಲೆ ನೂಲುಹಿಡಿದವರು ಯಾರು?
6 ೬ ಭೂಲೋಕದ ಅಸ್ತಿವಾರವು ಯಾವುದರ ಮೇಲೆ ನೆಲೆಗೊಂಡವು? ಅದರ ಮೂಲೆಗಲ್ಲನ್ನು ಹಾಕಿದವರು ಯಾರು?
7 ೭ ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹ ಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದ ಘೋಷಮಾಡುತ್ತಾ ಇರಲು,
8 ೮ ಸಮುದ್ರವು ಭೂಗರ್ಭವನ್ನು ಭೇದಿಸಿಕೊಂಡು ಬರಲು, ಅದರ ದ್ವಾರಗಳನ್ನು ಮುಚ್ಚಿದವರು ಯಾರು?
9 ೯ ಆ ಕಾಲದಲ್ಲಿ ನಾನು ಮೋಡಗಳನ್ನು ಅದಕ್ಕೆ ವಸ್ತ್ರವನ್ನಾಗಿಯೂ, ಕಾರ್ಗತ್ತಲನ್ನು ಸುತ್ತುಬಟ್ಟೆಯನ್ನಾಗಿಯೂ ಮಾಡಿದೆನಲ್ಲವೆ?
10 ೧೦ ಇದಲ್ಲದೆ ಸಮುದ್ರಕ್ಕೆ ನನ್ನ ಇಷ್ಟದ ಮೇರೆಯನ್ನು ಕಟ್ಟಿ, ಅದಕ್ಕೆ ಅಗುಳಿ, ಕದಗಳನ್ನು ಹಾಕಿದೆನು
11 ೧೧ ‘ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವುದು’ ಎಂದು ಅಪ್ಪಣೆಕೊಟ್ಟೆನು.
12 ೧೨ ನಿನ್ನ ಜೀವಮಾನದಲ್ಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯೋ? ಮುಂಜಾನೆಯ ಬೆಳಗಿಗೆ ಇರತಕ್ಕ ಸ್ಥಳವನ್ನು ಗೊತ್ತುಮಾಡಿದೆಯಾ?
13 ೧೩ ಭೂಮಿಯ ಅಂಚುಗಳನ್ನು ಹಿಡಿದು ದುಷ್ಟರನ್ನು ಅದರೊಳಗಿಂದ ಒದರಿಬಿಡು ಎಂದು ಉದಯಕ್ಕೆ ಅಪ್ಪಣೆಕೊಟ್ಟೆಯಾ?
14 ೧೪ ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಬೆಳಗಾಗುವಾಗ ಭೂಮಿಯು ರೂಪ ತಾಳುತ್ತದೆ. ಎಲ್ಲಾ ವಸ್ತುಗಳು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುವವು.
15 ೧೫ ಮತ್ತು ದುಷ್ಟರಿಗೆ ಬೆಳಕಿಲ್ಲವಾಗುವುದು, ಎತ್ತಿದ ಕೈ ಮುರಿಯುವುದು.
16 ೧೬ ಎಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಭೂಮಿಯ ಕೆಳಗಣ ಸಾಗರದ ಗುಪ್ತ ಪ್ರದೇಶಗಳಲ್ಲಿ ತಿರುಗಾಡಿದ್ದೀಯೋ?
17 ೧೭ ಮರಣದ ಬಾಗಿಲುಗಳು ನಿನಗೆ ಗೋಚರವಾದವೋ? ಘೋರಾಂಧಕಾರದ ಕದಗಳನ್ನು ಕಂಡೆಯಾ?
18 ೧೮ ಭೂಮಿಯ ವಿಸ್ತಾರವನ್ನು ಗ್ರಹಿಸಿದ್ದೀಯೋ? ಇದೆಲ್ಲಾ ನಿನಗೆ ಗೊತ್ತಿದ್ದರೆ ತಿಳಿಸು.
19 ೧೯ ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ? ಕತ್ತಲಿನ ಸ್ವಸ್ಥಳವು ಎಲ್ಲಿ?
20 ೨೦ ನೀನು ಆ ಒಂದೊಂದನ್ನೂ ಅದರದರ ಪ್ರಾಂತ್ಯಕ್ಕೆ ಕರೆದುಕೊಂಡು ಹೋಗಿ, ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ?
21 ೨೧ ನಿನಗೆ ತಿಳಿದಿರಬೇಕು; ಆಗಲೂ ಹುಟ್ಟಿದ್ದಿಯಲ್ಲವೆ; ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು!
22 ೨೨ ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ, ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ,
23 ೨೩ ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೀಯಾ? ಕಲ್ಮಳೆಯ ಬೊಕ್ಕಸಗಳನ್ನು ನೋಡಿದ್ದೀಯಾ?
24 ೨೪ ಬೆಳಕನ್ನು ಭಾಗಿಸುವುದಕ್ಕೆ, ಬಿಸಿಗಾಳಿಯನ್ನು ಭೂಮಿಯ ಮೇಲೆ ವಿಸ್ತರಿಸುವುದಕ್ಕೂ ಮಾರ್ಗವೆಲ್ಲಿ?
25 ೨೫ ನಿರ್ಜನ ಪ್ರದೇಶದಲ್ಲಿಯೂ, ಮನುಷ್ಯರೇ ಇಲ್ಲದ ಕಾಡಿನಲ್ಲಿಯೂ ಮಳೆಯನ್ನು ಸುರಿಸಿ,
26 ೨೬ ಹಾಳುಬೀಳಾದ ಭೂಮಿಯನ್ನು ತೃಪ್ತಿಪಡಿಸಿ, ಹಸಿ ಹುಲ್ಲನ್ನು ಬೆಳೆಯಿಸಬೇಕೆಂದು,
27 ೨೭ ಅತಿವೃಷ್ಟಿಯ ಪ್ರವಾಹಕ್ಕೆ ಕಾಲುವೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಯಾರು ಕಡಿದರು?
28 ೨೮ ಮಳೆಗೆ ತಂದೆಯುಂಟೋ? ಮಂಜಿನ ಹನಿಗಳನ್ನು ಪಡೆದವನು ಯಾರು?
29 ೨೯ ಹಿಮದ ಗಡ್ಡೆಯು ಯಾರ ಗರ್ಭದಿಂದ ಹೊರಟಿತು? ಆಕಾಶದ ಇಬ್ಬನಿಯನ್ನು ಯಾರು ಹೆತ್ತರು?
30 ೩೦ ನೀರು ಕಲ್ಲಿನಂತೆ ಗಟ್ಟಿಯಾಗುವುದು; ಸಾಗರದ ಮೇಲ್ಭಾಗವೂ ಹೆಪ್ಪುಗೊಳ್ಳುವುದು.
31 ೩೧ ನೀನು ಕೃತ್ತಿಕೆಯ ಸರಪಣಿಯನ್ನು ಬಿಗಿದು, ಮೃಗಶಿರದ ಸಂಕೋಲೆಯನ್ನು ಬಿಚ್ಚುವೆಯಾ?
32 ೩೨ ಆಯಾ ಸಮಯದಲ್ಲಿ ನಕ್ಷತ್ರ ರಾಶಿಗಳನ್ನು ಬರಮಾಡುವೆಯೋ? ನಕ್ಷತ್ರ ಮಂಡಲ ಪರಿವಾರದೊಡನೆ ನಡೆಸುವೆಯಾ?
33 ೩೩ ಖಗೋಳದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ? ಅದರ ಆಳ್ವಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿದ್ದೀಯಾ?
34 ೩೪ ಮೋಡಗಳನ್ನು ಮುಟ್ಟುವಂತೆ ನೀನು ಧ್ವನಿಯೆತ್ತಿದ ಮಾತ್ರಕ್ಕೆ, ಹೇರಳವಾದ ನೀರು ನಿನ್ನನ್ನು ಆವರಿಸುವುದೋ?
35 ೩೫ ಸಿಡಿಲುಗಳು ನಿನ್ನ ಅಪ್ಪಣೆಯಂತೆ ಹೋಗಿ ಬಂದು, ‘ಇಗೋ, ಬಂದಿದ್ದೇವೆ’ ಎನ್ನುವವೋ?
36 ೩೬ ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು? ಉತ್ಪಾತಗಳಿಗೆ ವಿವೇಕವನ್ನು ಅನುಗ್ರಹಿಸಿದವರು ಯಾರು?
37 ೩೭ ಜ್ಞಾನದಿಂದ ಯಾರು ಮೇಘಗಳನ್ನು ಲೆಕ್ಕಿಸುವರು? ಆಕಾಶದಲ್ಲಿನ ಬುದ್ದಲಿಗಳನ್ನು ಮೊಗಚಿಹಾಕಿ,
38 ೩೮ ಧೂಳು ಹರಿದು ಒತ್ತಟ್ಟಿಗೆ ಸೇರುವಂತೆಯೂ, ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ ಯಾರು ಮಾಡುವರು?
39 ೩೯ ಗವಿಯಲ್ಲಿ ಮಲಗಿರುವ ಸಿಂಹಕ್ಕೆ ಆಹಾರ ಒದಗಿಸಲು ಬೇಟೆಯಾಡುವೆಯಾ?
40 ೪೦ ಅವುಗಳು ಗುಹೆಯಲ್ಲಿ ಕುಳಿತುಕೊಳ್ಳುವಾಗ, ಪೊದೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹಗಳ ಆಶೆಯನ್ನು ತೀರಿಸುವೆಯೋ?
41 ೪೧ ತಮ್ಮ ಮರಿಗಳು, ಗುಟುಕಿಲ್ಲದೆ ಅಲೆಯುತ್ತಾ ದೇವರಿಗೆ ಮೊರೆಯಿಡುವಾಗ, ಕಾಗೆಗಳಿಗೆ ಆಹಾರವನ್ನು ಯಾರು ಒದಗಿಸುವರು?”