< ಯೋಬನು 31 >
1 ೧ “ಕನ್ಯೆಯನ್ನು ಕೆಟ್ಟದೃಷ್ಟಿಯಿಂದ ನೋಡುವುದಿಲ್ಲ ಎಂದು ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ,
2 ೨ ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವನು, ಸರ್ವಶಕ್ತನಾದ ದೇವರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?
3 ೩ ಆತನು ಅನ್ಯಾಯಗಾರರಿಗೆ ವಿಪತ್ತನ್ನೂ, ಕೆಡುಕರಿಗೆ ಉಪದ್ರವವನ್ನೂ ಕೊಡುತ್ತಾನಲ್ಲವೆ?
4 ೪ ಆತನೇ ನನ್ನ ನಡತೆಯನ್ನು ನೋಡಿ ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಿದ್ದಾನೆ ಎಂದುಕೊಳ್ಳುತ್ತಿದ್ದೆನು.
5 ೫ ಒಂದು ವೇಳೆ ನಾನು ಕಪಟತನದ ಜೊತೆಯಲ್ಲಿ ನಡೆದು ಮೋಸವನ್ನು ಹಿಂಬಾಲಿಸಿ ಓಡಿದರೆ,
6 ೬ ದೇವರು ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ, ನನ್ನ ಯಥಾರ್ಥತ್ವವನ್ನು ತಿಳಿದುಕೊಳ್ಳಲಿ!
7 ೭ ನನ್ನ ನಡತೆಯಲ್ಲಿ ದಾರಿತಪ್ಪಿದ್ದರೆ, ನನ್ನ ಹೃದಯವು ಕಂಡಕಂಡದ್ದನ್ನು ಹಿಂಬಾಲಿಸಿದ್ದರೆ, ನನ್ನ ಕೈಗಳಲ್ಲಿ ಕಲ್ಮಷವು ಅಂಟಿಕೊಂಡಿದ್ದರೆ,
8 ೮ ನಾನು ಬಿತ್ತಿದ್ದನ್ನು ಮತ್ತೊಬ್ಬನು ಉಣ್ಣಲಿ, ನನ್ನ ಬೆಳೆಯು ನಿರ್ಮೂಲವಾಗಲಿ!
9 ೯ ಒಂದು ವೇಳೆ ನನ್ನ ಹೃದಯವು ಪರಸ್ತ್ರೀಯಲ್ಲಿ ಮೋಹಗೊಂಡು, ನಾನು ನೆರೆಯವನ ಬಾಗಿಲಲ್ಲಿ ಹೊಂಚು ಹಾಕಿದ್ದರೆ,
10 ೧೦ ನನ್ನ ಹೆಂಡತಿಯು ಮತ್ತೊಬ್ಬನಿಗೆ ಧಾನ್ಯ ಬೀಸುವ ದಾಸಿಯಾಗಲಿ, ಇತರರು ಆಕೆಯನ್ನು ಸಂಗಮಿಸಲಿ!
11 ೧೧ ನಾನು ಹೀಗೆ ಮಾಡಿದ್ದರೆ ಅದು ದುಷ್ಕಾರ್ಯವೇ ಸರಿ, ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು.
12 ೧೨ ಅದು ನಾಶ ಲೋಕದವರೆಗೂ ನುಂಗುವ ಬೆಂಕಿಯಾಗಿದ್ದು, ನನ್ನ ಆದಾಯವನ್ನೆಲ್ಲಾ ನಿರ್ಮೂಲಮಾಡುತ್ತಿತ್ತು.
13 ೧೩ ಒಂದು ವೇಳೆ ನನಗೂ, ನನ್ನ ದಾಸನಿಗೂ, ಇಲ್ಲವೆ ದಾಸಿಗೂ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ಅಲಕ್ಷ್ಯಮಾಡಿದ್ದರೆ
14 ೧೪ ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡೆನು? ಆತನು ವಿಚಾರಿಸುವಾಗ ಯಾವ ಉತ್ತರಕೊಟ್ಟೇನು?
15 ೧೫ ನನ್ನನ್ನು ಗರ್ಭದಲ್ಲಿ ನಿರ್ಮಿಸಿದಾತನೇ ಅವನನ್ನೂ ನಿರ್ಮಿಸಲಿಲ್ಲವೋ? ಆತನೊಬ್ಬನೇ ನಮ್ಮಿಬ್ಬರನ್ನೂ ಗರ್ಭದಲ್ಲಿ ರೂಪಿಸಿದನಲ್ಲವೇ.
16 ೧೬ ನಾನು ಬಡವರ ಇಷ್ಟವನ್ನು ಭಂಗಪಡಿಸಿದೆನೋ? ಅಥವಾ ವಿಧವೆಯ ಕಣ್ಣುಗಳನ್ನು ಮಂಕಾಗಿಸಿದೆನೋ?
17 ೧೭ ಅಥವಾ ನನಗಿರುವ ತುತ್ತು ಅನ್ನದಲ್ಲಿ ಅನಾಥರಿಗೆ ಏನೂ ಕೊಡದೆ, ನಾನೊಬ್ಬನೇ ತಿಂದೆನೋ?
18 ೧೮ ಹಾಗಲ್ಲ, ನಾನು ಬಾಲ್ಯದಿಂದಲೂ ತಂದೆಯ ರೀತಿಯಲ್ಲಿ ಅನಾಥನನ್ನು ಸಾಕುತ್ತಾ, ನಾನು ಹುಟ್ಟಿದಂದಿನಿಂದಲು ಅನಾಥಳಿಗೆ ದಾರಿತೋರಿಸುತ್ತಾ ಇದ್ದೇನಷ್ಟೆ.
19 ೧೯ ಬಟ್ಟೆಯಿಲ್ಲದೆ ಅಳಿದುಹೋಗುವವನನ್ನೂ, ಹೊದಿಕೆಯಿಲ್ಲದ ಬಡವನನ್ನೂ ನಾನು ಕಂಡಾಗೆಲ್ಲಾ,
20 ೨೦ ಅವರ ಸೊಂಟವು ನನ್ನ ಕುರಿಗಳ ಉಣ್ಣೆಯಿಂದ ಬೆಚ್ಚಗಾಗಿ, ನಾನು ಅವರಿಂದ ಹರಸಲ್ಪಡಲಿಲ್ಲವೋ?
21 ೨೧ ನ್ಯಾಯಸ್ಥಾನದಲ್ಲಿ ನನಗೆ ಸಹಾಯ ಉಂಟೆಂದು, ಅನಾಥನ ಮೇಲೆ ಕೈಮಾಡಿದೆನೋ?
22 ೨೨ ಹೀಗಿದ್ದರೆ ನನ್ನ ಹೆಗಲಿನ ಕೀಲು ತಪ್ಪಲಿ, ತೋಳು ಸಂದಿನಿಂದ ಮುರಿದು ಬೀಳಲಿ.
23 ೨೩ ದೇವರಿಂದ ಬರುವ ವಿಪತ್ತಿಗೆ ಹೆದರಿಕೊಂಡಿದ್ದೆನಷ್ಟೆ, ಆತನ ಪ್ರಭಾವದ ದೆಸೆಯಿಂದ ನಾನು ಇಂಥ ಕೃತ್ಯವನ್ನು ಮಾಡುವುದಕ್ಕಾಗಲಿಲ್ಲ.
24 ೨೪ ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು, ಅಪರಂಜಿಗೆ, ‘ನಿನ್ನನ್ನೇ ನಂಬಿದ್ದೇನೆ’ ಎಂದು ಹೇಳಿದ್ದರೆ,
25 ೨೫ ನನ್ನ ಆಸ್ತಿ ದೊಡ್ಡದೆಂದೂ, ನನ್ನ ಕೈಯೇ ಬಹು ಸಂಪತ್ತನ್ನು ಪಡೆಯಿತೆಂದೂ ಹೆಚ್ಚಳಪಟ್ಟಿದ್ದರೆ,
26 ೨೬ ಸೂರ್ಯನು ಪ್ರಕಾಶಿಸುವುದನ್ನಾಗಲಿ, ಚಂದ್ರನು ಕಳೆತುಂಬಿದವನಾಗಿ ಚಲಿಸುವುದನ್ನಾಗಲಿ ನಾನು ನೋಡಿದಾಗ,
27 ೨೭ ಹೃದಯವು ಮರುಳುಗೊಂಡು, ಕೈಯನ್ನು ಬಾಯಿ ಮುದ್ದಾಡಿದ್ದರೆ,
28 ೨೮ ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.
29 ೨೯ ನನ್ನನ್ನು ದ್ವೇಷಿಸುವವನಿಗೆ ಕೇಡು ಬಂದಾಗ ಉಬ್ಬಿಕೊಂಡು, ಅವನ ನಾಶನಕ್ಕೆ ಹಿಗ್ಗಿದೆನೋ?
30 ೩೦ ಇಲ್ಲವೇ ಇಲ್ಲ, ನನ್ನ ಬಾಯಿ ಅವನನ್ನು ಶಪಿಸಿ ಅವನ ಪ್ರಾಣ ಹೋಗಲಿ ಎಂದು ಬೇಡಿಕೊಂಡು ಪಾಪವಶವಾಗುವುದಕ್ಕೆ ನಾನು ಒಪ್ಪಲೇ ಇಲ್ಲ.
31 ೩೧ ನನ್ನ ಗುಡಾರದ ಆಳುಗಳು, ‘ನಮ್ಮ ಯಜಮಾನ ಬಡಿಸಿದ ಮಾಂಸದಿಂದ ತೃಪ್ತರಾಗದವರು ಎಲ್ಲಿಯೂ ಸಿಕ್ಕಲಾರರು’ ಎಂದು ಹೇಳಿಕೊಳ್ಳುತ್ತಿರಲಿಲ್ಲವೋ?
32 ೩೨ ಪರಸ್ಥಳದವನು ಬಯಲಿನಲ್ಲಿ ಇಳಿದುಕೊಳ್ಳಲಿಲ್ಲವಲ್ಲಾ, ದಾರಿಗೆ ನನ್ನ ಮನೆಯ ಬಾಗಿಲುಗಳನ್ನು ತೆರೆದಿದ್ದೆನಷ್ಟೆ.
33 ೩೩ ಮನುಷ್ಯನು ಜನ ಸಮುದಾಯಕ್ಕೆ ಹೆದರಿದ್ದರಿಂದಾಗಲಿ, ಕುಲೀನರ ತಿರಸ್ಕಾರವು ನನಗೆ ಭಯ ಹುಟ್ಟಿಸಿದ್ದರಿಂದಾಗಲಿ,
34 ೩೪ ನಾನು ಬಾಗಿಲು ದಾಟದೆ ಮೌನವಾಗಿದ್ದು, ಸಾಮಾನ್ಯ ಜನರ ಹಾಗೆ ನನ್ನ ದ್ರೋಹಗಳನ್ನು ಮರೆಮಾಡಿ, ಎದೆಯಲ್ಲಿ ನನ್ನ ಪಾಪವನ್ನು ಬಚ್ಚಿಟ್ಟುಕೊಂಡಿದ್ದರೆ,
35 ೩೫ ಅಯ್ಯೋ, ನನ್ನ ಕಡೆಗೆ ಕಿವಿಗೊಡತಕ್ಕವನು ಇದ್ದರೆ ಎಷ್ಟೋ ಲೇಸು! ಇದೇ ನನ್ನ ಕೈಗುರುತು ನೋಡಿರಿ, ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ! ನನ್ನ ವಿರೋಧಿಯು ಬರೆದುಕೊಂಡ ಅಪಾದನೆಯ ಪತ್ರವು ನನಗೆ ಸಿಕ್ಕಿದರೆ ಎಷ್ಟೋ ಸಂತೋಷ!
36 ೩೬ ಅದನ್ನು ಹೆಗಲ ಮೇಲೆ ಇಟ್ಟುಕೊಳ್ಳುತ್ತಿದ್ದೆನು, ಕಿರೀಟವನ್ನಾಗಿ ಧರಿಸುತ್ತಿದ್ದೆನು.
37 ೩೭ ಪ್ರಭುವಿನಂತೆ ಆತನ ಸಾನ್ನಿಧ್ಯದಲ್ಲಿ ಪ್ರವೇಶಿಸಿ ನನ್ನ ಹೆಜ್ಜೆಗಳ ಲೆಕ್ಕವನ್ನು, ಆತನಿಗೆ ಅರಿಕೆಮಾಡಿಕೊಳ್ಳುತ್ತಿದ್ದೆನು.
38 ೩೮ ನನ್ನ ಭೂಮಿಯು ನನ್ನ ಮೇಲೆ ಕೂಗಿಕೊಂಡರೆ ಅದರ ನೇಗಿಲ ಗೆರೆಗಳೆಲ್ಲಾ ಅತ್ತರೆ,
39 ೩೯ ನಾನು ಹಣಕೊಡದೆ ಅದರ ಸಾರವನ್ನು ಅನುಭವಿಸಿ, ಅದರ ದಣಿಗಳ ಪ್ರಾಣ ಹಾನಿಗೆ ಕಾರಣನಾಗಿದ್ದರೆ,
40 ೪೦ ಗೋದಿಗೆ ಬದಲಾಗಿ ಮುಳ್ಳುಗಳೂ, ಜವೆಗೋದಿಗೆ ಪ್ರತಿಯಾಗಿ ಕೆಟ್ಟ ಕಳೆಗಳೂ ಬೆಳೆಯಲಿ.” ಎಂದನು. ಹೀಗೆ ಯೋಬನ ಮಾತುಗಳು ಮುಗಿದವು.