< ಯೋಬನು 3 >

1 ಆ ಮೇಲೆ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ,
ಆಮೇಲೆ ಯೋಬನು ತನ್ನ ಬಾಯಿತೆರೆದು, ತನ್ನ ಜನ್ಮ ದಿವಸವನ್ನು ಶಪಿಸಿದನು.
2 ಯೋಬನು ಇಂತೆಂದನು,
ಯೋಬನು ಇಂತೆಂದನು:
3 “ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ, ‘ಗರ್ಭದಲ್ಲಿ ಪುರುಷಾಂಕುರವಾಯಿತು’ ಎಂದು ನುಡಿದ ರಾತ್ರಿಯು ನಾಶವಾಗಲಿ
“ನಾನು ಹುಟ್ಟಿದ ದಿವಸವೂ, ‘ಗಂಡು ಮಗುವನ್ನು ಗರ್ಭಧರಿಸಿದೆ!’ ಎಂದು ಹೇಳಿದ ರಾತ್ರಿಯೂ ನಾಶವಾಗಲಿ.
4 ಆ ದಿನವು ಕತ್ತಲೆಯಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.
ಆ ದಿವಸವು ಕತ್ತಲಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.
5 ಕತ್ತಲೆಯೂ, ಘೋರಾಂಧಕಾರವೂ ಅದನ್ನು ವಶಮಾಡಿಕೊಳ್ಳಲಿ. ಮೋಡವು ಅದನ್ನು ಕವಿಯಲಿ, ಹಗಲನ್ನು ಮುಚ್ಚಿಕೊಳ್ಳುವ ಮೊಬ್ಬು ಅದನ್ನು ಹೆದರಿಸಲಿ.
ಕತ್ತಲೂ ಕಾರ್ಗತ್ತಲೂ ಆ ದಿನವನ್ನು ವಶಮಾಡಿಕೊಳ್ಳಲಿ; ಮೋಡವು ಅದರ ಮೇಲೆ ಕವಿಯಲಿ; ಕತ್ತಲೆ ಅದನ್ನು ಭಯಪಡಿಸಲಿ.
6 ಕಾರ್ಗತ್ತಲು ಆ ರಾತ್ರಿಯನ್ನು ಹಿಡಿದುಕೊಳ್ಳಲಿ, ಅದು ಮಾಸಗಳ ಲೆಕ್ಕದಲ್ಲಿ ಸೇರದೆ ಸಂವತ್ಸರದ ದಿನಗಳಲ್ಲಿ ಹರ್ಷಿಸದೆ ಇರಲಿ.
ಆ ರಾತ್ರಿಯನ್ನು ಅಂಧಕಾರವು ಮುತ್ತಲಿ; ವರ್ಷದ ದಿನಗಳಲ್ಲಿ ಆ ದಿನವನ್ನು ಸೇರಿಸದಿರಲಿ. ಅದು ತಿಂಗಳುಗಳನ್ನು ಲೆಕ್ಕಿಸದಿರಲಿ.
7 ಆಹಾ, ರಾತ್ರಿಯು ಬಂಜೆಯಾಗಿ ಅದರಲ್ಲಿ ಉತ್ಸಾಹಧ್ವನಿಯು ಉಂಟಾಗದಿರಲಿ.
ಇಗೋ ಆ ರಾತ್ರಿಯು ಬಂಜೆಯಾಗಲಿ; ಅದರಲ್ಲಿ ಆನಂದ ಧ್ವನಿಯು ಕೇಳದಿರಲಿ.
8 ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ, ದಿನಗಳನ್ನು ಶಪಿಸುವುದರಲ್ಲಿಯೂ ಜಾಣರಾದ (ಮಾಂತ್ರಿಕರು) ಅದಕ್ಕೆ ಶಾಪಕೊಡಲಿ.
ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ ದಿನಗಳನ್ನು ಶಪಿಸುವುದರಲ್ಲಿಯೂ ನಿಪುಣರಾದವರು ಆ ದಿನವನ್ನು ಶಪಿಸಲಿ.
9 ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ಮಿಣುಕದೆ ಹೋಗಲಿ. ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ. ಅರುಣೋದಯವೆಂಬ ರೆಪ್ಪೆ ತೆರೆಯುವುದನ್ನು ಅದು ಕಾಣದಿರಲಿ.
ಅದರ ಮುಂಜಾನೆಯ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದುಕೊಂಡರೂ ಬಾರದಿರಲಿ ಅರುಣೋದಯವು ಆ ದಿನವನ್ನು ನೋಡದಿರಲಿ.
10 ೧೦ ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ, ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲವಲ್ಲಾ.
ಏಕೆಂದರೆ ಆ ದಿನವು ನನ್ನ ತಾಯಿಯ ಗರ್ಭದ ಬಾಗಿಲನ್ನು ಮುಚ್ಚಲಿಲ್ಲ, ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ.
11 ೧೧ ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ. ಗರ್ಭದಿಂದ ಬಂದಾಗಲೇ ಏಕೆ ಪ್ರಾಣಬಿಡಲಿಲ್ಲ?
“ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ? ನಾನು ಗರ್ಭದಿಂದ ಬಂದಾಗಲೇ ಏಕೆ ಪ್ರಾಣ ಬಿಡಲಿಲ್ಲ?
12 ೧೨ ತಾಯಿಯ ಮಡಿಲು ನನ್ನನ್ನು ಹೊತ್ತದ್ದೇಕೆ? ತಾಯಿಯ ಮೊಲೆಗಳು ನನಗೆ ಕುಡಿಯ ಕೊಟ್ಟದ್ದೇಕೆ?
ತಾಯಿಯ ಮಡಿಲು ನನ್ನನ್ನು ಸ್ವಿಕರಿಸಿದ್ದೇಕೆ? ತಾಯಿಯ ಮೊಲೆಹಾಲು ಕುಡಿಯಮಾಡಿದ್ದೇಕೆ?
13 ೧೩ ಆಗಲೇ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ, ಕಣ್ಣು ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆನು.
ಆಗ ಸತ್ತಿದ್ದರೆ ನಾನು ಶಾಂತವಾಗಿ ಮಲಗಿಕೊಳ್ಳುತ್ತಿದ್ದೆನು; ನಾನು ವಿಶ್ರಾಂತಿಯಲ್ಲಿರುತ್ತಿದ್ದೆನು.
14 ೧೪ ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮ್ಮ ಸಮಾಧಿಗಾಗಿ ಕಟ್ಟಿಸಿಕೊಂಡ ಅರಸರೊಂದಿಗೂ, ಮಂತ್ರಿಗಳೊಡನೆಯೂ ನಾನಿರುತ್ತಿದ್ದೆ.
ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮಗಾಗಿ ಕಟ್ಟಿಸಿಕೊಂಡ ರಾಜರೊಂದಿಗೂ ಮಂತ್ರಿಗಳೊಡನೆಯೂ ನಾನಿರುತ್ತಿದ್ದೆನು.
15 ೧೫ ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡಲೂ ವಿಶ್ರಮಿಸಿಕೊಳ್ಳುತ್ತಿದ್ದೆನು.
ಬಂಗಾರವನ್ನು ಕೂಡಿಸಿಟ್ಟು, ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡ ವಿಶ್ರಮಿಸಿಕೊಳ್ಳುತ್ತಿದ್ದೆನು.
16 ೧೬ ಒಂದು ವೇಳೆ ನಾನು ಗರ್ಭಸ್ರಾವವಾಗಿ ಬಿದ್ದು, ಹೂಳಿಟ್ಟ ಪಿಂಡದಂತೆ, ಬೆಳಕನ್ನೇ ಕಾಣದೆ ಸತ್ತುಹೋದ ಕೂಸುಗಳಂತೆ ಜನ್ಮವಿಲ್ಲದವನಾಗಿ ಇರುತ್ತಿದ್ದೆನು.
ಗರ್ಭಸ್ರಾವವಾಗಿ ಹೂಣಿಟ್ಟ ಪಿಂಡದಂತೆಯೂ ಬೆಳಕನ್ನು ನೋಡದ ಕೂಸುಗಳಂತೆಯೂ ನಾನೇಕೆ ಆಗಲಿಲ್ಲ?
17 ೧೭ ಅಲ್ಲಿ ದುಷ್ಟರ ಆಗ್ರಹವು ಅಣಗಿ ಹೋಗುವುದು, ದಣಿದವರು ದಣಿವಾರಿಸಿಕೊಳ್ಳುವರು.
ಅಲ್ಲಿ ದುಷ್ಟರು ತೊಂದರೆ ಕೊಡುವುದು ಇರುವುದಿಲ್ಲ. ಶಕ್ತಿ ಕುಂದಿದವರು ಅಲ್ಲಿ ವಿಶ್ರಾಂತಿ ಹೊಂದಿರುತ್ತಾರೆ.
18 ೧೮ ಸೆರೆಯಾದವರು ಬಾಧಿಸುವ ಅಧಿಕಾರಿಯ ಧ್ವನಿಯನ್ನೇ ಕೇಳದೆ, ಗುಂಪುಗುಂಪಾಗಿ ವಿಶ್ರಮಿಸಿಕೊಳ್ಳುವರು.
ಸೆರೆಯವರು ಕೂಡ ಶಾಂತವಾಗಿರುತ್ತಾರೆ; ಬಾಧೆಪಡಿಸುವವನ ಶಬ್ದವನ್ನು ಕೇಳುವುದಿಲ್ಲ.
19 ೧೯ ಅಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲಾ. ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.
ಅಲ್ಲಿ ಕಿರಿಯರು ಹಿರಿಯರು ಎಂಬ ಭೇದ ಇಲ್ಲಾ; ಗುಲಾಮರು ಯಜಮಾನರಿಂದ ಬಿಡುಗಡೆಯಾಗಿರುತ್ತಾರೆ.
20 ೨೦ ಕಷ್ಟದಲ್ಲಿರುವವನಿಗೆ ಬೆಳಕನ್ನು, ಮನನೊಂದವರಿಗೆ ಜೀವವನ್ನು ಕೊಡುವುದೇಕೆ?
“ಕಷ್ಟದಲ್ಲಿ ಇರುವವನಿಗೆ ಬೆಳಕೂ ಕಹಿ ಮನಸ್ಸುಳ್ಳವರಿಗೆ ಜೀವವನ್ನು ಕೊಡುವುದೇಕೆ?
21 ೨೧ ಅವರು ನಿಕ್ಷೇಪಕ್ಕಾಗಿ ಅಗೆಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.
ಅವರು ನಿಕ್ಷೇಪಕ್ಕಾಗಿ ಅಗಿಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.
22 ೨೨ ಸಮಾಧಿಗೆ ಸೇರುವಾಗ ಬಹಳವಾಗಿ ಹರ್ಷಿಸಿ ಉಲ್ಲಾಸಪಡುತ್ತಾರೆ.
ಅವರು ಸಮಾಧಿ ಸೇರಿದ ಮೇಲೆ ಸಂತೋಷ ಸಂಭ್ರಮದಿಂದ ಹರ್ಷಿಸುವರೋ?
23 ೨೩ ದೇವರು ನನ್ನ ಸುತ್ತಲೂ ಬೇಲಿ ಹಾಕಿ, ದಾರಿಕಟ್ಟಿದ ಮೇಲೆ ಅವನಿಗೆ ಏಕೆ ಬೆಳಕನ್ನು ಕೊಡುತ್ತಾನೆ?
ದೇವರು ಸುತ್ತಲೂ ಬೇಲಿಹಾಕಿ, ದಾರಿ ಮುಚ್ಚಿದ ಮೇಲೆ ಅವರಿಗೆ ಬೆಳಕು ಏಕೆ?
24 ೨೪ ನಿಟ್ಟುಸಿರೇ ನನ್ನೆದುರಿಗೆ ಬರುವ ಆಹಾರವಾಗಿದೆ. ನನ್ನ ನರಳಾಟವು ಜಲಧಾರೆಯಂತಿದೆ.
ನಿಟ್ಟುಸಿರೇ ನನ್ನ ದೈನಂದಿನ ಆಹಾರವಾಗಿದೆ; ನನ್ನ ನರಳಾಟವು ಜಲಧಾರೆಯಂತಿದೆ.
25 ೨೫ ನನಗೆ ಭಯವು ಹುಟ್ಟಿದೊಡನೆಯೇ ಆಪತ್ತು ಸಂಭವಿಸುವುದು. ನಾನು ಯಾವುದಕ್ಕೆ ಹೆದರುತ್ತೇನೋ ಅದು ತಪ್ಪದೆ ಬರುವುದು.
ನನಗೆ ಭಯ ಹುಟ್ಟಿದೊಡನೆ ಆಪತ್ತು ಬಂದೊದಗುತ್ತದೆ; ಯಾವುದಕ್ಕೆ ಹೆದರುತ್ತೇನೋ, ಅದೇ ತಪ್ಪದೆ ಸಂಭವಿಸುತ್ತದೆ.
26 ೨೬ ನನಗೆ ಯಾವ ಶಾಂತಿಯೂ, ವಿಶ್ರಾಂತಿಯೂ, ಉಪಶಮನವೂ ಇರುವುದಿಲ್ಲ, ಯಾವಾಗಲೂ ಕಳವಳವೇ.”
ನನಗೆ ಶಾಂತಿ ಇಲ್ಲ, ವಿಶ್ರಾಂತಿಯೂ ಇಲ್ಲ; ನಾನು ಸಮಾಧಾನವಾಗಿಯೂ ಇಲ್ಲ, ಯಾವಾಗಲೂ ಕಳವಳವೇ ಇರುತ್ತದೆ.”

< ಯೋಬನು 3 >