< ಯೆರೆಮೀಯನು 37 >
1 ೧ ಯೋಷೀಯನ ಮಗನಾದ ಚಿದ್ಕೀಯನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಪಟ್ಟಕ್ಕೆ ತರಲ್ಪಟ್ಟು ಯೆಹೋಯಾಕೀಮನ ಮಗನಾದ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು.
ಯೋಷೀಯನ ಮಗ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಅರಸನನ್ನಾಗಿ ಮಾಡಿದನು. ಅವನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ, ಅರಸನಾಗಿ ಆಳಿದನು.
2 ೨ ಆಗ ಅವನಾಗಲಿ, ಅವನ ಸೇವಕರಾಗಲಿ ಅಥವಾ ದೇಶದ ಜನರಾಗಲಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಂದ ನುಡಿಸಿದ ಮಾತುಗಳನ್ನು ಕೇಳದೆ ಹೋದರು.
ಆದರೆ ಅವನೂ ಅವನ ಸೇವಕರೂ ದೇಶದ ಜನರೂ ಯೆಹೋವ ದೇವರ ಪ್ರವಾದಿಯಾದ ಯೆರೆಮೀಯನಿಂದ ಹೇಳಿಸಿದ ವಾಕ್ಯಗಳಿಗೆ ಕಿವಿಗೊಡಲಿಲ್ಲ.
3 ೩ ಹೀಗಿರುವಲ್ಲಿ ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲ, ಯಾಜಕ ಮಾಸೇಯನ ಮಗನಾದ ಚೆಫನ್ಯ ಇವರ ಮೂಲಕ, “ದಯಮಾಡಿ ನಮಗಾಗಿ ನಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸು” ಎಂದು ಪ್ರವಾದಿಯಾದ ಯೆರೆಮೀಯನಿಗೆ ಹೇಳಿಕಳುಹಿಸಿದನು.
ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ, ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ, ಪ್ರವಾದಿಯಾದ ಯೆರೆಮೀಯನ ಬಳಿಗೆ ಕಳುಹಿಸಿ, “ನಮಗೋಸ್ಕರ ನಮ್ಮ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸು,” ಎಂದು ಹೇಳಿಸಿದನು.
4 ೪ ಆ ಕಾಲದಲ್ಲಿ ಯೆರೆಮೀಯನು ಇನ್ನೂ ಸೆರೆಯಾಗಿರಲಿಲ್ಲ; ಜನರಲ್ಲಿ ಹೋಗುತ್ತಾ ಬರುತ್ತಾ ಇದ್ದನು.
ಆಗ ಯೆರೆಮೀಯನು ಜನರೊಳಗೆ ಬರುತ್ತಾ ಹೋಗುತ್ತಾ ಇದ್ದನು. ಏಕೆಂದರೆ ಅವರು ಅವನನ್ನು ಸೆರೆಮನೆಯಲ್ಲಿ ಇಡಲಿಲ್ಲ.
5 ೫ ಆಗ ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತ್ತು; ಇದನ್ನು ಕೇಳಿ ಯೆರೂಸಲೇಮನ್ನು ಮುತ್ತಿದ್ದ ಕಸ್ದೀಯರು ಬಿಟ್ಟು ಹೋಗಿದ್ದರು.
ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ, ಯೆರೂಸಲೇಮನ್ನು ಬಿಟ್ಟುಹೋದರು.
6 ೬ ಹೀಗಿರಲು ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು.
ಆಗ ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಯೆರೆಮೀಯನಿಗೆ ಬಂದಿತು:
7 ೭ “ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ನನ್ನನ್ನು ವಿಚಾರಿಸುವುದಕ್ಕೆ ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದ ಯೆಹೂದದ ಅರಸನಿಗೆ ಹೀಗೆ ಹೇಳಿರಿ, ‘ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶವಾದ ಐಗುಪ್ತಕ್ಕೆ ಹಿಂದಿರುಗುವುದು.
“ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನೆಂದರೆ, ಇಗೋ, ನಿಮ್ಮ ಸಹಾಯಕ್ಕೆ ಹೊರಟ, ‘ಫರೋಹನ ಸೈನ್ಯವು, ಅದರ ಸ್ವದೇಶವಾದ ಈಜಿಪ್ಟಿಗೆ ಹಿಂದಿರುಗುವುದು.
8 ೮ ಕಸ್ದೀಯರು ಪುನಃ ಬಂದು ಈ ಪಟ್ಟಣದ ವಿರುದ್ಧವಾಗಿ ಹೋರಾಡಿ, ಆಕ್ರಮಿಸಿ ಅದನ್ನು ಬೆಂಕಿಯಿಂದ ಸುಟ್ಟುಬಿಡುವರು’” ಎಂಬುದು.
ಕಸ್ದೀಯರು ತಿರುಗಿಕೊಂಡು, ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡಿ, ಅದನ್ನು ಹಿಡಿದು ಬೆಂಕಿಯಿಂದ ಸುಡುವರು.’
9 ೯ ಯೆಹೋವನು ಇಂತೆನ್ನುತ್ತಾನೆ, “ಕಸ್ದೀಯರು ನಮ್ಮಿಂದ ತೊಲಗಿ ಹೋಗುವುದು ಖಂಡಿತ ಎಂದು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವುದೇ ಇಲ್ಲ.
“ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಕಸ್ದೀಯರು ನಿಜವಾಗಿ ನಮ್ಮನ್ನು ಬಿಟ್ಟು ಹೋಗುವರು,’ ಎಂದುಕೊಂಡು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ; ಏಕೆಂದರೆ ಅವರು ತೊಲಗುವುದೇ ಇಲ್ಲ.
10 ೧೦ ನಿಮ್ಮನ್ನು ಪ್ರತಿಭಟಿಸುವ ಕಸ್ದೀಯರಲ್ಲಿ ಗಾಯಪಟ್ಟವರು ಮಾತ್ರ ಉಳಿಯುವಂತೆ ನೀವು ಆ ಸೈನ್ಯವನ್ನೆಲ್ಲಾ ಒಂದು ವೇಳೆ ಹೊಡೆದಿದ್ದರೂ ಆ ಗಾಯಪಟ್ಟವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದು ಬಂದು ಈ ಪಟ್ಟಣವನ್ನು ಬೆಂಕಿಯಿಂದ ಸುಟ್ಟು ಬಿಡುತ್ತಿದ್ದರು.”
ನಿಮ್ಮ ಸಂಗಡ ಯುದ್ಧಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿದ್ದಾಗ್ಯೂ, ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು, ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು.”
11 ೧೧ ಕಸ್ದೀಯರ ಸೈನ್ಯವು ಫರೋಹನ ಸೈನ್ಯಕ್ಕೆ ಭಯಪಟ್ಟು ಯೆರೂಸಲೇಮನ್ನು ಬಿಟ್ಟುಹೋದರು.
ಕಸ್ದೀಯರ ದಂಡು ಫರೋಹನ ದಂಡಿನ ಭಯದ ನಿಮಿತ್ತ, ಯೆರೂಸಲೇಮನ್ನು ಬಿಟ್ಟುಹೋದ ಮೇಲೆ,
12 ೧೨ ಆಮೇಲೆ ಯೆರೆಮೀಯನು ಬೆನ್ಯಾಮೀನ್ ಸೀಮೆಯಲ್ಲಿ ತನಗೆ ಬರಬೇಕಾದ ಸ್ವತ್ತನ್ನು ಜನರ ಸಮಕ್ಷಮದಲ್ಲಿ ತೆಗೆದುಕೊಳ್ಳಲು ಯೆರೂಸಲೇಮಿನಿಂದ ಹೊರಟನು.
ಯೆರೆಮೀಯನು ಬೆನ್ಯಾಮೀನನ ದೇಶಕ್ಕೆ ಹೋಗುವುದಕ್ಕೂ, ಜನರ ಮಧ್ಯದಿಂದ ತನ್ನ ಪಾಲನ್ನು ತೆಗೆದುಕೊಳ್ಳುವುದಕ್ಕೂ ಯೆರೂಸಲೇಮಿನಿಂದ ಹೊರಟನು.
13 ೧೩ ಅವನು ಬೆನ್ಯಾಮೀನಿನ ಬಾಗಿಲನ್ನು ಹಾದುಹೋಗುತ್ತಿರುವಾಗ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನೂ ಆದ ಇರೀಯನು ಅಲ್ಲಿ ಪಹರೆಯ ವಿಚಾರಕನಾಗಿದ್ದು ಪ್ರವಾದಿಯಾದ ಯೆರೆಮೀಯನನ್ನು ಹಿಡಿದು, “ನೀನು ಕಸ್ದೀಯರಲ್ಲಿ ಮೊರೆಹೋಗಲು ಹೋಗುತ್ತಿದ್ದಿ” ಎಂದು ಹೇಳಿದನು.
ಆಗ ಅವನು ಬೆನ್ಯಾಮೀನನ ಬಾಗಿಲಲ್ಲಿ ಇರುವಾಗ, ಅಲ್ಲಿ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನಾದ ಇರೀಯನೆಂಬ ಪಹರೆಯ ನಾಯಕನು ಇದ್ದನು. ಇವನು ಪ್ರವಾದಿಯಾದ ಯೆರೆಮೀಯನನ್ನು, “ನೀನು ಕಸ್ದೀಯರ ಪಕ್ಷಕ್ಕೆ ಸೇರುತ್ತೀ,” ಎಂದು ಹೇಳಿ ಹಿಡಿದನು.
14 ೧೪ ಅದಕ್ಕೆ ಯೆರೆಮೀಯನು, “ಅದು ಸುಳ್ಳು, ನಾನು ಕಸ್ದೀಯರಲ್ಲಿ ಮೊರೆಹೋಗುವವನಲ್ಲ” ಎನ್ನಲು ಇರೀಯನು ಅವನ ಮಾತನ್ನು ಕೇಳದೆ ಅವನನ್ನು ಹಿಡಿದು ಪ್ರಧಾನರ ಬಳಿಗೆ ಕರೆತಂದನು.
ಆದರೆ ಯೆರೆಮೀಯನು ಹೇಳಿದ್ದೇನೆಂದರೆ, ಸುಳ್ಳು; ನಾನು ಕಸ್ದೀಯರ ಕಡೆಗೆ ಸೇರುವವನಲ್ಲ. ಆದರೆ ಇರೀಯನು ಅವನಿಗೆ ಕಿವಿಗೊಡದೆ ಯೆರೆಮೀಯನನ್ನು ಹಿಡಿದು ಪ್ರಧಾನರ ಬಳಿಗೆ ತಂದನು.
15 ೧೫ ಆ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು ಅವನನ್ನು ಹೊಡೆಯಿಸಿ, ತಾವು ಬಂದಿಖಾನೆಯನ್ನಾಗಿ ಮಾಡಿದ್ದ ಲೇಖಕನಾದ ಯೆಹೋನಾಥಾನನ ಮನೆಯಲ್ಲಿ ಸೆರೆಹಾಕಿಸಿದರು.
ಆಗ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು, ಅವನನ್ನು ಹೊಡೆದು, ಲೇಖಕನಾದ ಯೋನಾತಾನನ ಮನೆಯಲ್ಲಿ ಬಂಧನದಲ್ಲಿ ಇಟ್ಟರು. ಏಕೆಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು.
16 ೧೬ ಯೆರೆಮೀಯನು ಆ ಬಂದಿಖಾನೆಯ ನೆಲಮನೆಗಳಲ್ಲಿ ಕೆಲವು ದಿನಗಳು ಇದ್ದನು.
ಯೆರೆಮೀಯನು ಆ ಬಂಧಿಖಾನೆಯ ನೆಲಮನೆಗಳಲ್ಲಿ ಕೆಲವು ದಿವಸ ಇದ್ದನು.
17 ೧೭ ಆಮೇಲೆ ಅರಸನಾದ ಚಿದ್ಕೀಯನು ಅವನನ್ನು ಕರೆಕಳುಹಿಸಿ, “ಯೆಹೋವನಿಂದ ದೈವೋಕ್ತಿಯು ದೊರೆಯಿತೋ?” ಎಂದು ತನ್ನ ಮನೆಯಲ್ಲಿ ರಹಸ್ಯವಾಗಿ ವಿಚಾರಿಸಲು ಯೆರೆಮೀಯನು, “ಹೌದು, ದೊರೆಯಿತು, ನೀನು ಬಾಬೆಲಿನ ಅರಸನ ಕೈಯಲ್ಲಿ ಸಿಕ್ಕಿಬೀಳುವಿ” ಅಂದನು.
ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, ಅರಮನೆಗೆ ಕರೆತಂದನು, “ಯೆಹೋವ ದೇವರಿಂದ ಮಾತು ಉಂಟೋ,” ಎಂದು ಹೇಳಿದನು. ಯೆರೆಮೀಯನು, “ಹೌದು, ಉಂಟು. ನೀನು ಬಾಬಿಲೋನಿನ ಅರಸನ ಕೈಗೆಸಿಕ್ಕಿಬೀಳುವೆ,” ಎಂದನು.
18 ೧೮ ಅಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ, “ನೀವು ನನ್ನನ್ನು ಸೆರೆಯಲ್ಲಿ ಹಾಕಿಸಿದ್ದಕ್ಕೆ ನಾನು ನಿನಗಾಗಲಿ, ನಿನ್ನ ಸೇವಕರಿಗಾಗಲಿ ಅಥವಾ ಈ ಜನರಿಗಾಗಲಿ ಯಾವ ಅಪರಾಧವನ್ನು ಮಾಡಿದೆನು?
ಇದಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ ಹೇಳಿದ್ದೇನೆಂದರೆ: “ನೀವು ನನ್ನನ್ನು ಸೆರೆಮನೆಯಲ್ಲಿ ಹಾಕುವ ಹಾಗೆ ನಾನು ನಿನಗೂ, ನಿನ್ನ ಸೇವಕರಿಗೂ, ಈ ಜನರಿಗೂ ವಿರೋಧವಾಗಿ ಏನು ಅಪರಾಧ ಮಾಡಿದ್ದೇನೆ?
19 ೧೯ ಬಾಬೆಲಿನ ಅರಸನು ನಿಮಗೂ ಈ ದೇಶಕ್ಕೂ ವಿರುದ್ಧವಾಗಿ ಬರುವುದಿಲ್ಲ ಎಂದು ನಿಮಗೆ ಸಾರಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ?
ಬಾಬಿಲೋನಿನ ಅರಸನು ನಿಮ್ಮ ಮೇಲೆಯೂ, ಈ ದೇಶದ ಮೇಲೆಯೂ ಬರುವುದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ?
20 ೨೦ ಎನ್ನೊಡೆಯನೇ, ಅರಸನೇ, ಈಗ ದಯಮಾಡಿ ಲಾಲಿಸು; ಲೇಖಕನಾದ ಯೆಹೋನಾಥಾನನ ಮನೆಗೆ ನನ್ನನ್ನು ತಿರುಗಿ ಸೇರಿಸಬೇಡ, ಅಲ್ಲೇ ಸತ್ತೇನು, ನನ್ನ ಬಿನ್ನಹವು ನಿನಗೆ ಮುಟ್ಟಲಿ” ಎಂದು ಅರಿಕೆಮಾಡಿದನು.
ಆದ್ದರಿಂದ ಈಗ ಕಿವಿಗೊಡು. ನನ್ನ ಒಡೆಯನಾದ ಅರಸನೇ, ನನ್ನ ವಿಜ್ಞಾಪನೆ ನಿನ್ನ ಮುಂದೆ ಅಂಗೀಕಾರವಾಗಲಿ. ಲೇಖಕನಾದ ಯೋನಾತಾನನ ಮನೆಗೆ ನಾನು ಅಲ್ಲಿ ಸಾಯದ ಹಾಗೆ ನನ್ನನ್ನು ತಿರುಗಿ ಕಳುಹಿಸಬೇಡ,” ಎಂದನು.
21 ೨೧ ಅರಸನಾದ ಚಿದ್ಕೀಯನು ಇದನ್ನು ಕೇಳಿ ಅಪ್ಪಣೆ ಕೊಡಲು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಟ್ಟು, ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ ರೊಟ್ಟಿಯ ಪೇಟೆಯಿಂದ ಪ್ರತಿದಿನ ಒಂದೊಂದು ರೊಟ್ಟಿಯನ್ನು ಅವನಿಗೆ ತಂದು ಕೊಡುತ್ತಿದ್ದರು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.
ಆಗ ಅರಸನಾದ ಚಿದ್ಕೀಯನು ಯೆರೆಮೀಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ, ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವವರೆಗೆ, ಅವನಿಗೆ ರೊಟ್ಟಿಗಾರರ ಬೀದಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿ ಕೊಡಬೇಕೆಂದು ಆಜ್ಞಾಪಿಸಿದನು; ಹಾಗೆಯೇ ಯೆರೆಮೀಯನು ಸೆರೆಮನೆಯ ಅಂಗಳದಲ್ಲಿ ನಿಂತನು.