< ಯೆರೆಮೀಯನು 17 >
1 ೧ ಯೆಹೂದದ ಪಾಪವು ಉಕ್ಕಿನ ಕಂಠದಿಂದಲೂ ಹಾಗೂ ವಜ್ರದ ಮೊನೆಯಿಂದಲೂ ಲಿಖಿತವಾಗಿದೆ. ಅದು ಅವರ ಹೃದಯದ ಹಲಗೆಯಲ್ಲಿಯೂ, ಅವರ ಯಜ್ಞವೇದಿಗಳ ಕೊಂಬುಗಳಲ್ಲಿಯೂ ಕೆತ್ತಿದೆ.
2 ೨ ಅವರ ಮಕ್ಕಳು ಸೊಂಪಾಗಿ ಬೆಳೆದಿರುವ ಮರಗಳನ್ನು ಎತ್ತರವಾದ ಗುಡ್ಡಗಳನ್ನು ಕಂಡಾಗೆಲ್ಲಾ, ಅವರ ಯಜ್ಞವೇದಿಗಳನ್ನು ಮತ್ತು ಅಶೇರ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುವರು.
3 ೩ ಬಯಲಿನ ನನ್ನ ಪರ್ವತದ ಜನರೇ, ನಿಮ್ಮ ಸಕಲ ಪ್ರಾಂತ್ಯಗಳಲ್ಲಿ ನೀವು ಮಾಡಿದ ಪಾಪದ ನಿಮಿತ್ತ, ನಾನು ನಿಮ್ಮ ಎಲ್ಲಾ ಸೊತ್ತು ಸಂಪತ್ತುಗಳನ್ನು ಹಾಗು ಪೂಜಾಸ್ಥಳಗಳನ್ನು ಸೂರೆಗೆ ಈಡು ಮಾಡುವೆನು.
4 ೪ ನಾನು ನಿಮಗೆ ದಯಪಾಲಿಸಿದ ಸ್ವತ್ತನ್ನು ನಿಮ್ಮ ದೋಷದಿಂದಲೇ ಕಳೆದುಕೊಳ್ಳುವಿರಿ. ನೀವು ನೋಡದ ದೇಶದಲ್ಲಿ ನಿಮ್ಮನ್ನು ನಿಮ್ಮ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ನೀವು ನನ್ನ ರೋಷಾಗ್ನಿಯನ್ನು ಹೆಚ್ಚಿಸಿದ್ದೀರಿ, ಅದು ನಿತ್ಯವೂ ಉರಿಯುತ್ತಿರುವುದು.
5 ೫ ಯೆಹೋವನು ಹೀಗೆನ್ನುತ್ತಾನೆ, “ಮಾನವ ಮಾತ್ರದವರಲ್ಲಿ ಭರವಸವಿಟ್ಟು, ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು, ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ಥನು.
6 ೬ ಇವನು ಅಡವಿಯಲ್ಲಿನ ಜಾಲಿಗೆ ಸಮಾನನು; ಶುಭ ಸಂಭವಿಸಿದರೂ ಅವನು ಅದನ್ನು ಕಾಣನು. ಯಾರೂ ವಾಸಿಸದ ಚೌಳು ನೆಲವಾಗಿರುವ ಅರಣ್ಯದ ಬೆಗ್ಗಾಡಿನಲ್ಲಿ ವಾಸಿಸುವ ಸ್ಥಿತಿಯೇ ಅವನದು.
7 ೭ ಯಾರು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾರೋ, ಯಾರಿಗೆ ಯೆಹೋವನು ಭರವಸೆಯಾಗಿದ್ದಾನೋ ಅವರೇ ಧನ್ಯರು.
8 ೮ ನೀರಾವರಿಯಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ, ಧಗೆಗೆ ಭಯಪಡದೆ, ಹಸುರೆಲೆಯನ್ನು ಚಿಗುರಿಸುತ್ತಾ, ಕ್ಷಾಮದ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಅವರು ಸಮಾನವಾಗಿರುವರು.”
9 ೯ ಹೃದಯವು ಎಲ್ಲಾದಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ತಿಳಿದವರು ಯಾರು?
10 ೧೦ ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು, ಹೃದಯವನ್ನು ಪರೀಕ್ಷಿಸುವವನೂ, ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.
11 ೧೧ ಆಸ್ತಿಪಾಸ್ತಿಗಳನ್ನು ಅನ್ಯಾಯವಾಗಿ ಸಂಪಾದಿಸಿಕೊಂಡವನು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಕೌಜುಗ ಹಕ್ಕಿಗೆ ಸಮಾನನು. ಅವನ ಮಧ್ಯಪ್ರಾಯದಲ್ಲಿ ಅವು ಅವನಿಂದ ತೊಲಗಿಹೋಗುವವು; ಅವನು ತನ್ನ ಅಂತ್ಯಕಾಲದಲ್ಲಿ ಹುಚ್ಚನಾಗಿ ಕಂಡುಬರುವನು.
12 ೧೨ ನಮ್ಮ ಪವಿತ್ರಾಲಯಸ್ಥಾನವು ಆದಿಯಿಂದಲೂ ಉನ್ನತವಾದ ಮಹಿಮೆಯ ಸಿಂಹಾಸನವಾಗಿದೆ.
13 ೧೩ ಯೆಹೋವನೇ, ಇಸ್ರಾಯೇಲರ ನಿರೀಕ್ಷೆಯೇ, ನಿನ್ನನ್ನು ಬಿಟ್ಟುಹೋಗುವವರು ಆಶಾಭಂಗಪಡುವರು. ಯೆಹೋವನಾದ ನಿನ್ನನ್ನು ತೊರೆದವರು ಜೀವಜಲದ ಬುಗ್ಗೆಯನ್ನು ತೊರೆದವರಾಗಿದ್ದಾರೆ; ಅವರ ಹೆಸರು ಧೂಳಿನಲ್ಲಿ ಬರೆಯಲ್ಪಡುವುದು.
14 ೧೪ ಯೆಹೋವನೇ, ನನ್ನನ್ನು ಸ್ವಸ್ಥಪಡಿಸು, ಆಗ ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನಗೆ ಸ್ತುತ್ಯನು.
15 ೧೫ ಆಹಾ, ಜನರು ನನಗೆ, “ಯೆಹೋವನ ಮಾತೆಲ್ಲಿ? ಅದು ಈಗಲೇ ನೆರವೇರಲಿ” ಎಂದು ಹೇಳುತ್ತಾರೆ.
16 ೧೬ ನಾನಾದರೋ ಸಭಾಪಾಲನೆಯಲ್ಲಿ ನಿನ್ನನ್ನು ಹಿಂಬಾಲಿಸುವುದನ್ನು ತಪ್ಪಿಸಲು ಆತುರಪಡಲಿಲ್ಲ. ವಿಪತ್ತಿನ ಅನಿವಾರ್ಯ ದಿನವನ್ನು ಅಪೇಕ್ಷಿಸಲಿಲ್ಲ; ಅದನ್ನು ನೀನೇ ಬಲ್ಲೆ. ನಿನ್ನ ಸಮಕ್ಷಮದಲ್ಲೇ ನನ್ನ ಬಾಯ ಮಾತು ಹೊರಟಿತು.
17 ೧೭ ನನ್ನ ಹೆದರಿಕೆಗೆ ಕಾರಣನಾಗಬೇಡ; ಕೇಡಿನ ಕಾಲದಲ್ಲಿ ನನಗೆ ಆಶ್ರಯವಾಗಿದ್ದಿ.
18 ೧೮ ನನ್ನ ಹಿಂಸಕರಿಗೆ ಅವಮಾನವಾಗಲಿ, ನನಗಾಗದಿರಲಿ. ಭಯಭ್ರಾಂತಿಯು ಅವರನ್ನು ಹಿಡಿಯಲಿ, ನನ್ನನ್ನಲ್ಲ. ಅವರಿಗೆ ಕೇಡುಗಾಲವನ್ನು ಬರಮಾಡಿ ವಿಪರೀತ ಕೇಡಿನಿಂದ ಅವರನ್ನು ನಾಶಪಡಿಸು.
19 ೧೯ ಯೆಹೋವನು ನನಗೆ ಇಂತೆಂದನು, “ನೀನು ಹೊರಟು ಯೆಹೂದದ ಅರಸರು ಹೋಗಿ ಬರುವ ಸಾಮಾನ್ಯ ಜನರ ಬಾಗಿಲಿನಲ್ಲಿಯೂ, ಯೆರೂಸಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು ಅವರಿಗೆ ಹೀಗೆ ಸಾರು,
20 ೨೦ ‘ಈ ಬಾಗಿಲುಗಳಲ್ಲಿ ಸೇರುವ ಯೆಹೂದದ ಅರಸರೇ, ಎಲ್ಲಾ ಯೆಹೂದ್ಯರೇ, ಯೆರೂಸಲೇಮಿನ ಸಕಲ ನಿವಾಸಿಗಳೇ, ಯೆಹೋವನ ಮಾತನ್ನು ಕೇಳಿರಿ.
21 ೨೧ ಮನಮುಟ್ಟಿ ಗಮನಿಸಿರಿ, ಸಬ್ಬತ್ ದಿನದಲ್ಲಿ ಯಾವ ಹೊರೆಯನ್ನೂ ಹೊರಬೇಡಿರಿ, ಅದನ್ನು ಯೆರೂಸಲೇಮಿನ ಬಾಗಿಲುಗಳಲ್ಲಿ ತರಲೇಬೇಡಿರಿ.
22 ೨೨ ಆ ದಿನದಲ್ಲಿ ನಿಮ್ಮ ಮನೆಗಳಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ, ಯಾವ ಕೆಲಸವನ್ನೂ ಮಾಡದಿರಿ. ಸಬ್ಬತ್ ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸಿರಿ; ನಿಮ್ಮ ಪೂರ್ವಿಕರಿಗೆ ನಾನು ಹೀಗೆ ಆಜ್ಞೆಮಾಡಿದೆನಲ್ಲಾ.
23 ೨೩ ಅವರಾದರೋ ಕಿವಿಗೊಟ್ಟು ಕೇಳಲಿಲ್ಲ, ಕೇಳಲಿಕ್ಕಾಗಲಿ ಉಪದೇಶ ಹೊಂದಲಿಕ್ಕಾಗಲಿ ಒಪ್ಪಲಿಲ್ಲ.
24 ೨೪ ಯೆಹೋವನಾದ ನನ್ನ ನುಡಿ ಇದೇ, ನೀನು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು, ಸಬ್ಬತ್ ದಿನದಲ್ಲಿ ಈ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನೂ ತಾರದೆ, ಯಾವ ಕೆಲಸವನ್ನೂ ಮಾಡದೆ, ಆ ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸಿದರೆ,
25 ೨೫ ಆಗ ದಾವೀದನ ಸಿಂಹಾಸನಾರೂಢರಾದ ಅರಸರೂ, ಪ್ರಭುಗಳೂ ರಥಾಶ್ವಗಳನ್ನು ಏರಿದವರಾಗಿ ಈ ಪಟ್ಟಣದ ಬಾಗಿಲುಗಳನ್ನು ಪ್ರವೇಶಿಸುವರು. ಇವರು, ಇವರ ಪ್ರಧಾನರು, ಯೆಹೂದದ ಜನರು, ಯೆರೂಸಲೇಮಿನ ನಿವಾಸಿಗಳು, ಎಲ್ಲರೂ ಇಲ್ಲಿ ಸೇರುವರು. ಈ ಪಟ್ಟಣವು ನಿತ್ಯವೂ ನೆಲೆಯಾಗಿರುವುದು.
26 ೨೬ ಯೆಹೂದದ ಪಟ್ಟಣಗಳು, ಯೆರೂಸಲೇಮಿನ ಸುತ್ತಣ ಪ್ರದೇಶಗಳು, ಬೆನ್ಯಾಮೀನ್ ಸೀಮೆ, ಇಳಕಲಿನ ಪ್ರದೇಶ, ಬೆಟ್ಟದ ಮೇಲಣ ಪ್ರದೇಶ, ದಕ್ಷಿಣಪ್ರಾಂತ್ಯ ಈ ಎಲ್ಲಾ ಸ್ಥಳಗಳಿಂದಲೂ ಸರ್ವಾಂಗಹೋಮಪಶು, ಯಜ್ಞಪಶು, ನೈವೇದ್ಯ, ಧೂಪ ಎಂಬ ಕೃತಜ್ಞತಾ ಅರ್ಪಣೆಗಳನ್ನು ಯೆಹೋವನ ಆಲಯಕ್ಕೆ ಜನರು ತೆಗೆದುಕೊಂಡು ಬರುವರು.
27 ೨೭ ಆದರೆ ನೀವು ನನ್ನ ಕಡೆಗೆ ಕಿವಿಗೊಡದೆ, ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತು ಯೆರೂಸಲೇಮಿನ ಬಾಗಿಲುಗಳೊಳಗೆ ಪ್ರವೇಶಿಸಬಾರದೆಂಬ ನಿಯಮವನ್ನು ಕೈಕೊಳ್ಳದೆ, ಆ ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸದೆ ಇದ್ದರೆ ಆಗ ನಾನು ಊರಬಾಗಿಲುಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು, ಅದು ಯೆರೂಸಲೇಮಿನ ಉಪ್ಪರಿಗೆಗಳನ್ನು ದಹಿಸಿಬಿಡುವುದು, ಆರುವುದೇ ಇಲ್ಲ’” ಎಂದು ಹೇಳಿದನು.