< ಯೆರೆಮೀಯನು 14 >

1 ಬರಗಾಲದ ವಿಷಯವಾಗಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ನುಡಿ:
ಕ್ಷಾಮವನ್ನು ಕುರಿತು ಯೆರೆಮೀಯನಿಗೆ ಉಂಟಾದ ಯೆಹೋವ ದೇವರ ವಾಕ್ಯವು:
2 ಯೆಹೂದವು ದುಃಖಿಸುತ್ತದೆ, ಅಲ್ಲಿಯ ಜನರು ಕಂಗೆಟ್ಟು ಕರ್ರಗಾಗಿ ನೆಲದ ಮೇಲೆ ಬಿದ್ದಿದ್ದಾರೆ, ಯೆರೂಸಲೇಮಿನವರ ಗೋಳಾಟವು ಕೇಳಿಸುತ್ತದೆ.
“ಯೆಹೂದವು ದುಃಖಪಡುತ್ತದೆ. ಅವಳ ನಗರಗಳು ಸೊರಗುತ್ತವೆ; ಅವರು ಭೂಮಿಗಾಗಿ ಗೋಳಾಡುತ್ತಾರೆ, ಯೆರೂಸಲೇಮಿನ ಕೂಗು ಏರಿ ಬಂತು.
3 ಅವರಲ್ಲಿನ ಶ್ರೀಮಂತರು ತಮ್ಮ ಕೈಕೆಳಗಿನವರನ್ನು ನೀರು ತರಲು ಕಳುಹಿಸುತ್ತಾರೆ. ಅವರು ಕೊಳಗಳಿಗೆ ಹೋದಾಗ ನೀರು ಕಾಣುವುದಿಲ್ಲ, ಬರೀ ಪಾತ್ರೆಗಳನ್ನು ತೆಗೆದುಕೊಂಡು ಹಿಂದಕ್ಕೆ ಬರುತ್ತಾರೆ. ಆಶೆಗೆಟ್ಟು ನಾಚಿಕೆಪಟ್ಟು ಮುಖವನ್ನು ಮುಚ್ಚಿಕೊಳ್ಳುತ್ತಾರೆ.
ಶ್ರೇಷ್ಠರು ತಮ್ಮ ಚಿಕ್ಕವರನ್ನು ನೀರಿಗೆ ಕಳುಹಿಸುತ್ತಾರೆ. ಇವರು ಬಾವಿಗಳಿಗೆ ಬರುತ್ತಾರೆ. ಆದರೆ ನೀರು ಸಿಕ್ಕಲ್ಲ. ಬರೀ ಪಾತ್ರೆಗಳುಳ್ಳವರಾಗಿ ತಿರುಗಿಕೊಳ್ಳುತ್ತಾರೆ. ಅವರು ನಾಚಿಕೆಪಟ್ಟು ದಿಗ್ಭ್ರಮೆಗೊಂಡವರಾಗಿ, ತಮ್ಮ ತಲೆಗಳನ್ನು ಮುಚ್ಚಿಕೊಳ್ಳುತ್ತಾರೆ.
4 ದೇಶದಲ್ಲಿ ಮಳೆಯಿಲ್ಲದೆ ಭೂಮಿಯು ಬಿರುಕುಬಿಟ್ಟಿರುವುದರಿಂದ ರೈತರು ನಾಚಿಕೆಪಟ್ಟು ಮುಖವನ್ನು ಮುಚ್ಚಿಕೊಳ್ಳುತ್ತಾರೆ.
ದೇಶದಲ್ಲಿ ಮಳೆ ಇಲ್ಲದ ಕಾರಣ ಭೂಮಿಯು ಬಿರುಕುಬಿಟ್ಟಿದೆ. ಒಕ್ಕಲಿಗರು ನಿರಾಶರಾಗಿ ತಮ್ಮ ತಲೆಗಳನ್ನು ಮುಚ್ಚಿಕೊಳ್ಳುತ್ತಾರೆ.
5 ಇದಲ್ಲದೆ ಹೆಣ್ಣು ಜಿಂಕೆಯು ಕಾಡಿನಲ್ಲಿ ಈದು, ಹುಲ್ಲಿಲ್ಲದ ಕಾರಣ ತನ್ನ ಮರಿಯನ್ನು ಬಿಟ್ಟುಬಿಡುತ್ತದೆ.
ಹೌದು, ಜಿಂಕೆಯು ಸಹ ಹೊಲದಲ್ಲಿ ಹುಲ್ಲು ಇಲ್ಲದ್ದರಿಂದ, ತನ್ನ ಮರಿಯನ್ನು ಹಾಕಿ, ಬಿಟ್ಟು ಬಿಡುತ್ತದೆ.
6 ಕಾಡುಕತ್ತೆಗಳು ಬೋಳುಗುಡ್ಡಗಳಲ್ಲಿ ನಿಂತುಕೊಂಡು ನರಿಗಳಂತೆ ನಿಟ್ಟುಸಿರುಬಿಟ್ಟು ಗಾಳಿಯನ್ನು ಹಾರೈಸುತ್ತವೆ, ಸೊಪ್ಪುಸದೆಯಿಲ್ಲದೆ ಕಂಗೆಡುತ್ತವೆ.
ಕಾಡುಕತ್ತೆಗಳು ಉನ್ನತ ಸ್ಥಳಗಳಲ್ಲಿ ನಿಂತು, ನರಿಗಳ ಹಾಗೆ ಗಾಳಿಯನ್ನು ಹೀರಿಕೊಳ್ಳುತ್ತವೆ. ಹುಲ್ಲು ಇಲ್ಲದ ಕಾರಣ ಅವುಗಳ ಕಣ್ಣುಗಳು ಕ್ಷೀಣವಾಗುತ್ತವೆ.”
7 ಯೆಹೋವನೇ, ನಮ್ಮ ಅಪರಾಧಗಳು ನಮಗೆ ವಿರುದ್ಧವಾಗಿ ಸಾಕ್ಷಿಕೊಟ್ಟರೂ, ನಿನ್ನ ಹೆಸರಿನ ನಿಮಿತ್ತ ಕಾರ್ಯವನ್ನು ಸಾಧಿಸು. ನಮ್ಮ ದ್ರೋಹಗಳು ಬಹಳ, ನಿನ್ನ ವಿರುದ್ಧವಾಗಿ ಪಾಪವನ್ನು ಮಾಡಿದ್ದೇವೆ.
ಯೆಹೋವ ದೇವರೇ, ನಮ್ಮ ಅಕ್ರಮಗಳು ನಮಗೆ ವಿರೋಧವಾಗಿ ಸಾಕ್ಷಿ ಕೊಟ್ಟರೂ, ನೀನೇ ನಿನ್ನ ಹೆಸರಿಗೋಸ್ಕರ ಕಾರ್ಯ ಸಾಧಿಸು. ಏಕೆಂದರೆ, ನಮ್ಮ ಹಿಂಜಾರುವಿಕೆಗಳು ಅನೇಕವಾಗಿವೆ; ನಿಮಗೆ ವಿರೋಧವಾಗಿ ಪಾಪಮಾಡಿದ್ದೇವೆ.
8 ಇಸ್ರಾಯೇಲರ ನಿರೀಕ್ಷೆಯೇ, ಇಕ್ಕಟ್ಟಿನಲ್ಲಿ ಅವರಿಗೆ ರಕ್ಷಕನೇ, ಏಕೆ ಸ್ವದೇಶದಲ್ಲಿ ಪರದೇಶಿಯಂತೆಯೂ, ಇಳಿದುಕೊಳ್ಳುವುದಕ್ಕೆ ಗುಡಾರಹಾಕಿಕೊಳ್ಳುವ ಪ್ರಯಾಣಿಕನ ಹಾಗೂ ಇದ್ದೀ?
ಓ ಇಸ್ರಾಯೇಲಿನ ನಿರೀಕ್ಷೆಯೇ, ಇಕ್ಕಟ್ಟಿನ ಕಾಲದಲ್ಲಿ ಅವನನ್ನು ರಕ್ಷಿಸುವವರೇ, ನೀನು ಏಕೆ ದೇಶದಲ್ಲಿ ಅನ್ಯನ ಹಾಗೆಯೂ, ರಾತ್ರಿ ಕಳೆಯುವುದಕ್ಕೆ ಇಳಿದುಕೊಳ್ಳುವ ಪ್ರಯಾಣಸ್ಥನ ಹಾಗೆಯೂ ಇರಬೇಕು?
9 ಏಕೆ ಸ್ತಬ್ಧನಂತೆಯೂ, ರಕ್ಷಿಸಲಾರದ ಶೂರನ ಹಾಗೆಯೂ ಇದ್ದೀ? ಆದರೂ ಯೆಹೋವನೇ, ನೀನು ನಮ್ಮ ಮಧ್ಯದಲ್ಲಿರುತ್ತಿ. ನಾವು ನಿನ್ನ ಹೆಸರಿನವರು, ನಮ್ಮನ್ನು ಕೈಬಿಡಬೇಡ.
ಏಕೆ ಸ್ತಬ್ಧನಂತೆಯೂ, ರಕ್ಷಿಸಲಾರದ ಶೂರನ ಹಾಗೆಯೂ ಇದ್ದೀ? ಆದರೂ ಯೆಹೋವ ದೇವರೇ, ನೀವು ನಮ್ಮ ಮಧ್ಯದಲ್ಲಿರುತ್ತೀರಿ, ನಾವು ನಿಮ್ಮ ಹೆಸರನ್ನು ಹೊಂದಿದ್ದೇವೆ, ನಮ್ಮನ್ನು ಕೈಬಿಡಬೇಡಿರಿ.
10 ೧೦ ಯೆಹೋವನು ಈ ಜನರನ್ನು ಕುರಿತು, “ಇವರು ಪ್ರಯಾಣಿಕನ ಹಾಗೆ ಅಲೆಯುವುದಕ್ಕೆ ಇಷ್ಟಪಟ್ಟಿದ್ದಾರೆ, ಕಾಲನ್ನು ಹಿಂದೆಗೆಯಲಿಲ್ಲ. ಆದಕಾರಣ ಯೆಹೋವನಾದ ನಾನು ಇವರನ್ನು ಕಟಾಕ್ಷಿಸೆನು; ಈಗಲೇ ಇವರ ಅಪರಾಧವನ್ನು ಮನಸ್ಸಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು” ಎಂದು ಹೇಳಿದ್ದಾನೆ.
ಯೆಹೋವ ದೇವರು ಈ ಜನರಿಗೆ ಹೀಗೆ ಹೇಳುತ್ತಾರೆ: “ಹೀಗೆ ತಿರುಗಾಡುವುದಕ್ಕೆ ಅವರು ಇಷ್ಟಪಡುತ್ತಾರೆ. ತಮ್ಮ ಕಾಲುಗಳನ್ನು ಹಿಂದೆಗೆಯುವುದಿಲ್ಲ. ಆದ್ದರಿಂದ ಯೆಹೋವ ದೇವರು ಅವರನ್ನು ಅಂಗೀಕರಿಸುವುದಿಲ್ಲ. ಈಗಲೇ ಅವರ ಅಕ್ರಮವನ್ನು ಜ್ಞಾಪಕಮಾಡಿಕೊಳ್ಳುವೆನು. ಅವರ ಪಾಪಗಳಿಗಾಗಿ ಅವರನ್ನು ದಂಡಿಸುವೆನು.”
11 ೧೧ ಮತ್ತು ಯೆಹೋವನು ನನಗೆ, “ಈ ಜನರ ಹಿತವನ್ನು ಬಯಸಿ ಇವರಿಗೋಸ್ಕರ ಪ್ರಾರ್ಥನೆ ಮಾಡಬೇಡ.
ಆಗ ಯೆಹೋವ ದೇವರು ನನಗೆ, “ಈ ಜನರಿಗೋಸ್ಕರ ಒಳ್ಳೆಯದಕ್ಕಾಗಿ ಪ್ರಾರ್ಥನೆ ಮಾಡಬೇಡ.
12 ೧೨ ಇವರು ಉಪವಾಸಮಾಡುವಾಗ ಇವರ ಮೊರೆಯನ್ನು ಕೇಳೆನು. ಹೋಮನೈವೇದ್ಯಗಳನ್ನು ಅರ್ಪಿಸಲು ಸ್ವೀಕರಿಸೆನು. ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಇವರನ್ನು ನಿರ್ಮೂಲಮಾಡುವೆನು” ಎಂದು ಹೇಳಿದನು.
ಅವರು ಉಪವಾಸ ಮಾಡಿದರೂ, ನಾನು ಅವರ ಮೊರೆಯನ್ನು ಕೇಳುವುದಿಲ್ಲ. ಅವರು ದಹನಬಲಿಗಳನ್ನೂ, ಧಾನ್ಯ ಸಮರ್ಪಣೆಗಳನ್ನೂ ಅರ್ಪಿಸಿದರೂ ನಾನು ಅವರನ್ನು ಅಂಗೀಕರಿಸುವುದಿಲ್ಲ. ಆದರೆ ನಾನು ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಅವರನ್ನು ನಿರ್ಮೂಲ ಮಾಡಿಬಿಡುತ್ತೇನೆ,” ಎಂದು ಹೇಳಿದರು.
13 ೧೩ ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ಇಗೋ ಪ್ರವಾದಿಗಳು ಈ ಜನರಿಗೆ, ‘ಖಡ್ಗವು ನಿಮ್ಮ ಕಣ್ಣಿಗೆ ಕಾಣದು, ಕ್ಷಾಮವು ನಿಮಗೆ ಸಂಭವಿಸದು; ಯೆಹೋವನು ಈ ಸ್ಥಳದಲ್ಲಿ ತಾನು ಪ್ರಮಾಣ ಮಾಡಿದಂತೆ ಸಮಾಧಾನವನ್ನು ನಿಮಗೆ ಕೊಡುವನು ಎಂದು ನುಡಿಯುತ್ತಾರೆ’” ಎಂಬುದಾಗಿ ಹೇಳಿದೆನು.
ಆಗ ನಾನು, “ಹಾ, ಸಾರ್ವಭೌಮ ಯೆಹೋವ ದೇವರೇ, ಇಗೋ, ಪ್ರವಾದಿಗಳು ಅವರಿಗೆ: ‘ನೀವು ಖಡ್ಗವನ್ನು ನೋಡುವುದಿಲ್ಲ. ನಿಮಗೆ ಕ್ಷಾಮವು ಬಾರದು. ಆದರೆ ಯೆಹೋವ ದೇವರು ನಿಮಗೆ ಈ ಸ್ಥಳದಲ್ಲಿ ಸ್ಥಿರಸಮಾಧಾನ ಕೊಡುತ್ತಾರೆ,’ ಎಂದು ಹೇಳುತ್ತಾರೆ,” ಎಂದೆನು.
14 ೧೪ ಆಗ ಯೆಹೋವನು ನನಗೆ ಹೀಗೆ ನುಡಿದನು, “ಈ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ. ಅವರಿಗೆ ಅಪ್ಪಣೆಕೊಡಲಿಲ್ಲ, ಏನೂ ಹೇಳಲಿಲ್ಲ. ಅವರು ಸುಳ್ಳಾದ ದರ್ಶನವನ್ನೂ, ಕಣಿಯನ್ನೂ, ಮಾಯಾತಂತ್ರವನ್ನೂ, ಸ್ವಕಲ್ಪಿತ ಮೋಸವನ್ನೂ ನಿಮಗೆ ಪ್ರಕಟಿಸುತ್ತಾರೆ.
ಆಗ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಪ್ರವಾದಿಗಳು ನನ್ನ ಹೆಸರಿನಲ್ಲಿ ಸುಳ್ಳುಗಳನ್ನು ಪ್ರವಾದಿಸುತ್ತಾರೆ. ನಾನು ಅವರನ್ನು ಕಳುಹಿಸಲಿಲ್ಲ. ಅವರಿಗೆ ಆಜ್ಞೆಕೊಡಲಿಲ್ಲ. ಅವರ ಸಂಗಡ ಮಾತಾಡಲಿಲ್ಲ. ಸುಳ್ಳಿನ ದರ್ಶನವನ್ನೂ, ಶಕುನವನ್ನೂ, ಮಾಯ ಮಂತ್ರವನ್ನೂ, ತಮ್ಮ ಹೃದಯದ ಕಪಟವನ್ನೂ ನಿಮಗೆ ಪ್ರವಾದಿಸುತ್ತಾರೆ.
15 ೧೫ ಆದಕಾರಣ ನನ್ನ ಅಪ್ಪಣೆಯಿಲ್ಲದೆ ನನ್ನ ಹೆಸರಿನಿಂದ ಪ್ರವಾದಿಸುತ್ತಾ ಖಡ್ಗವೂ, ಕ್ಷಾಮವೂ ಈ ದೇಶಕ್ಕೆ ಬಾರವು ಎಂದು ಬೋಧಿಸುವ ಪ್ರವಾದಿಗಳ ವಿಷಯದಲ್ಲಿ ಯೆಹೋವನಾದ ನಾನು, ‘ಖಡ್ಗದಿಂದಲೂ, ಕ್ಷಾಮದಿಂದಲೂ ಈ ಪ್ರವಾದಿಗಳು ನಿರ್ಮೂಲರಾಗುವರು’” ಎಂದು ಹೇಳುತ್ತೇನೆ.
ಆದ್ದರಿಂದ ಯೆಹೋವ ದೇವರು ತಾನು ಕಳುಹಿಸದೆ, ತನ್ನ ಹೆಸರಿನಲ್ಲಿ ಪ್ರವಾದಿಸುವಂಥ ಮತ್ತು, ‘ಈ ದೇಶದಲ್ಲಿ ಖಡ್ಗವೂ ಬರವೂ ಇರುವುದಿಲ್ಲ,’ ಎಂದು ಹೇಳುವಂಥ ಪ್ರವಾದಿಗಳನ್ನು ಕುರಿತು, ಖಡ್ಗದಿಂದಲೂ ಕ್ಷಾಮದಿಂದಲೂ ಆ ಪ್ರವಾದಿಗಳು ತಾವೇ ನಿರ್ಮೂಲವಾಗುತ್ತಾರೆ.
16 ೧೬ ಮತ್ತು ಇವರ ಪ್ರವಾದನೆಯನ್ನು ಕೇಳುವ ಜನರು ಕ್ಷಾಮ ಮತ್ತು ಖಡ್ಗಗಳ ದೆಸೆಯಿಂದ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಅವರ ಹೆಂಡತಿ ಮತ್ತು ಮಕ್ಕಳನ್ನೂ ಹೂಣಿಡುವುದಕ್ಕೆ ಯಾರೂ ಇರುವುದಿಲ್ಲ; ನಾನು ಅವರ ದುಷ್ಟತನವನ್ನೇ ಅವರ ಮೇಲೆ ಹೊಯ್ದುಬಿಡುವೆನು.
ಅವರು ಪ್ರವಾದಿಸುವ ಜನರು ಕ್ಷಾಮದ ಮತ್ತು ಖಡ್ಗದ ನಿಮಿತ್ತ ಯೆರೂಸಲೇಮಿನ ಬೀದಿಪಾಲಾಗುವರು. ಅವರನ್ನೂ, ಅವರ ಹೆಂಡತಿಯರನ್ನೂ, ಅವರ ಪುತ್ರಪುತ್ರಿಯರನ್ನೂ ಹೂಳಿಡುವುದಕ್ಕೆ ಯಾರೂ ಇರುವುದಿಲ್ಲ. ಏಕೆಂದರೆ ಅವರಿಗೆ ಅರ್ಹವಾದ ಆಪತ್ತನ್ನು ನಾನು ಅವರ ಮೇಲೆ ಸುರಿಯುತ್ತೇನೆ.
17 ೧೭ ನೀನು ಅವರಿಗೆ, “ನನ್ನ ಕಣ್ಣೀರು ರಾತ್ರಿ ಹಗಲು ನಿರಂತರ ಸುರಿಯಲಿ; ಏಕೆಂದರೆ ನನ್ನ ಜನವೆಂಬ ಯುವತಿಗೆ ದೊಡ್ಡ ಗಾಯವಾಯಿತು, ಹೌದು ಗಡುಸಾದ ಪೆಟ್ಟು ಬಿತ್ತು.
“ಆದ್ದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು. “‘ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ. ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ಏಟಿನಿಂದಲೂ, ದೊಡ್ಡ ಪೆಟ್ಟಿನಿಂದಲೂ ಗಾಯಗೊಂಡಿದ್ದಾಳೆ.
18 ೧೮ ನಾನು ಊರ ಹೊರಗೆ ಹೋದರೆ ಇಗೋ, ಖಡ್ಗದಿಂದ ಹತರಾದವರು, ಊರೊಳಗೆ ಬಂದರೆ ಇಗೋ, ಕ್ಷಾಮದಿಂದ ಕೊರಗುವವರು! ಪ್ರವಾದಿಗಳೂ ಯಾಜಕರೂ ತಮಗೆ ಗೊತ್ತಿಲ್ಲದ ದೇಶಕ್ಕೆ ಗಡೀಪಾರಾಗಿದ್ದಾರೆ ಎಂಬ ಮಾತುಗಳನ್ನು ಹೇಳು” ಎಂದನು.
ನಾನು ಹೊಲಕ್ಕೆ ಹೋದರೆ ಇಗೋ, ಖಡ್ಗದಿಂದ ಸತ್ತವರು ಕಾಣಿಸುತ್ತಾರೆ. ಪಟ್ಟಣದಲ್ಲಿ ಪ್ರವೇಶಿಸಿದರೆ ಇಗೋ, ಕ್ಷಾಮದಿಂದ ರೋಗದಲ್ಲಿ ಬಿದ್ದವರು ಕಾಣಿಸಿಕೊಳ್ಳುತ್ತಾರೆ. ಹೌದು, ಪ್ರವಾದಿಯೂ, ಯಾಜಕನೂ ತಮಗೆ ತಿಳಿಯದ ದೇಶಕ್ಕೆ ಸಂಚಾರ ಮಾಡುವರು.’”
19 ೧೯ ನೀನು ಯೆಹೂದವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೀಯೋ? ಚೀಯೋನನ್ನು ಮನಃಪೂರ್ವಕವಾಗಿ ಅಸಹ್ಯಪಟ್ಟಿದ್ದಿಯೋ? ನಮಗೆ ಗುಣವಾಗದಂತೆ ಏಕೆ ಪೆಟ್ಟುಹೊಡೆದಿ? ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮ ಕಾಲವನ್ನೂ ಎದುರುನೋಡಿದೆವು, ಹಾ, ಅಂಜಿಕೆಯೇ!
ನೀನು ಯೆಹೂದವನ್ನು ಸಂಪೂರ್ಣವಾಗಿ ತ್ಯಜಿಸಿ ಬಿಟ್ಟಿದ್ದೀಯೋ? ಚೀಯೋನಿನ ಮೇಲೆ ಮನಃಪೂರ್ವಕವಾಗಿ ಅಸಹ್ಯಪಟ್ಟಿದ್ದೀಯೋ? ನಮಗೆ ಗುಣವಾಗದಂತೆ ಏಕೆ ಪೆಟ್ಟು ಹೊಡೆದಿ? ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ. ಕ್ಷೇಮ ಕಾಲವನ್ನು ಎದುರು ನೋಡಿದೆವು, ಹಾ, ಅಂಜಿಕೆಯೇ.
20 ೨೦ ಯೆಹೋವನೇ, ನಮ್ಮ ದುಷ್ಟತನವನ್ನೂ ಒಪ್ಪಿಕೊಳ್ಳುತ್ತೇವೆ, ನಮ್ಮ ಪೂರ್ವಿಕರ ದುರಾಚಾರವನ್ನೂ ತಿಳಿದುಕೊಂಡಿದ್ದೇವೆ; ನಾವು ನಿನಗೇ ಪಾಪಮಾಡಿದ್ದೇವೆ.
ಯೆಹೋವ ದೇವರೇ, ನಮ್ಮ ದುಷ್ಟತನವನ್ನೂ, ನಮ್ಮ ಪಿತೃಗಳ ದುರಾಚಾರವನ್ನೂ ತಿಳಿದುಕೊಂಡಿದ್ದೇವೆ, ನಿಮಗೆ ವಿರುದ್ಧವಾಗಿ ಪಾಪಮಾಡಿದ್ದೇವಲ್ಲಾ.
21 ೨೧ ನಿನ್ನ ನಾಮದ ಮೇಲೆ ದೃಷ್ಟಿಯಿಡು, ನಿನ್ನ ಮಹಿಮೆಯ ಸಿಂಹಾಸನವನ್ನು ಅಸಡ್ಡೆಮಾಡಬೇಡ. ಅವಮಾನಪಡಿಸಬೇಡ; ನೀನು ನಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕಕ್ಕೆ ತಂದುಕೋ, ಅದನ್ನು ಭಂಗಪಡಿಸದಿರು.
ನಿಮ್ಮ ನಾಮದ ಮೇಲೆ ದೃಷ್ಟಿಯಿಡಿ, ನಿಮ್ಮ ಮಹಿಮೆಯ ಸಿಂಹಾಸನವನ್ನು ಅಸಡ್ಡೆ ಮಾಡಬೇಡಿ, ಅವಮಾನಪಡಿಸಬೇಡಿ. ನೀವು ನಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕಕ್ಕೆ ತಂದುಕೋ, ಅದನ್ನು ಭಂಗಪಡಿಸದಿರಿ.
22 ೨೨ ಜನಾಂಗಗಳ ವ್ಯರ್ಥವಾದ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದಮಳೆಗಳನ್ನು ಕೊಟ್ಟೀತೇ? ನಮ್ಮ ದೇವರಾದ ಯೆಹೋವನೇ, ನೀನೇ ವೃಷ್ಟಿಪ್ರದನು; ನಾವು ನಿನ್ನನ್ನೇ ನಿರೀಕ್ಷಿಸುವೆವು. ನೀನು ಇವುಗಳನ್ನೆಲ್ಲಾ ನಡೆಸುವವನಾಗಿದ್ದೀಯಷ್ಟೆ.
ಜನಾಂಗಗಳ ವ್ಯರ್ಥ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದ ಮಳೆಗಳನ್ನು ಕೊಟ್ಟೀತೇ? ಅಲ್ಲ, ನೀವೇ, ನಮ್ಮ ದೇವರಾದ ಯೆಹೋವ ದೇವರು, ನೀವೇ ವೃಷ್ಟಿದಾತರು, ನಾವು ನಿಮ್ಮನ್ನೇ ನಿರೀಕ್ಷಿಸುವೆವು, ನೀವು ಇವುಗಳನ್ನೆಲ್ಲಾ ನಡಿಸುವವರಾಗಿದ್ದೀರಷ್ಟೆ.

< ಯೆರೆಮೀಯನು 14 >