< ಯೆಶಾಯನು 49 >
1 ೧ ದ್ವೀಪನಿವಾಸಿಗಳೇ, ನನ್ನ ಕಡೆಗೆ ಕಿವಿಗೊಡಿರಿ, ದೂರದ ಜನಾಂಗಗಳೇ, ಆಲಿಸಿರಿ! ನಾನು ಗರ್ಭದಲ್ಲಿದ್ದಾಗಲೇ ಯೆಹೋವನು ನನ್ನನ್ನು ಕರೆದನು, ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.
2 ೨ ನನ್ನ ಬಾಯಿಯನ್ನು ಹದವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈಯ ನೆರಳಿನಲ್ಲಿ ನನ್ನನ್ನು ಹುದುಗಿಸಿದ್ದಾನೆ. ನನ್ನನ್ನು ಚೂಪಾದ ಬಾಣವನ್ನಾಗಿ ರೂಪಿಸಿ, ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.
3 ೩ ಆತನು ನನಗೆ, “ನೀನು ನನ್ನ ಸೇವಕನೂ, ನಾನು ಪ್ರಭಾವಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ” ಎಂದು ಹೇಳಿದನು.
4 ೪ ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ಉಪಯೋಗಮಾಡಿದ್ದು ಹಾಳೇ, ಬರಿ ಗಾಳಿಯೇ. ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ. ನನಗೆ ಲಾಭವು ನನ್ನ ದೇವರಿಂದಲೇ ಆಗುವುದು” ಎಂದು ಅಂದುಕೊಂಡೆನು.
5 ೫ ಆಹಾ, ನಾನು ಯೆಹೋವನ ದೃಷ್ಟಿಯಲ್ಲಿ ಮಾನ್ಯನು, ನನ್ನ ದೇವರೇ ನನಗೆ ಬಲವು. ಯಾಕೋಬ್ಯರನ್ನು ತನ್ನ ಕಡೆಗೆ ಸೇರಿಸಿಕೊಳ್ಳಬೇಕೆಂತಲೂ, ಇಸ್ರಾಯೇಲ್ ತನ್ನ ಕಡೆಗೆ ಕೂಡಿಬರಬೇಕೆಂತಲೂ ಆತನು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನಲ್ಲವೆ.
6 ೬ ಆತನು ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವೇ ಸರಿ. ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.”
7 ೭ ಮನಃಪೂರ್ವಕವಾಗಿ ತಿರಸ್ಕರಿಸಲ್ಪಟ್ಟವನೂ, ಅನ್ಯಜನಾಂಗಕ್ಕೆ ಅಸಹ್ಯನೂ, ಜನದೊಡೆಯರ ಸೇವಕನೂ ಆದವನಿಗೆ ಇಸ್ರಾಯೇಲಿನ ವಿಮೋಚಕನೂ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆ ಹೇಳುತ್ತಾನೆ, “ಯೆಹೋವನ ಪ್ರಾಮಾಣಿಕತೆಯನ್ನೂ ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನನ್ನು ಪರಿಗ್ರಹಿಸಿರುವುದನ್ನೂ ಅರಸರು ನೋಡಿ ಎದ್ದು ನಿಲ್ಲುವರು, ಅಧಿಪತಿಗಳು ಅಡ್ಡಬೀಳುವರು.”
8 ೮ ಇದೇ ಯೆಹೋವನ ನುಡಿ, “ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡುತ್ತಾ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿದ್ದೇನೆ.
9 ೯ ನೀನು ಬಂದಿಸಲ್ಪಟ್ಟವರಿಗೆ ‘ಹೊರಟುಹೋಗಿರಿ’ ಎಂದು, ಕತ್ತಲಲ್ಲಿರುವವರಿಗೆ, ‘ಬೆಳಕಿಗೆ ಹೊರಡಿರಿ’ ಎಂದು ಅಪ್ಪಣೆಕೊಟ್ಟು ಹಾಳಾಗಿದ್ದ ಸ್ವತ್ತುಗಳನ್ನು ಅವರಿಗೆ ಹಂಚಿ ದೇಶವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಜನವೆಂಬ ಹಿಂಡು ದಾರಿಗಳಲ್ಲಿ ಮೇಯುವುದು. ಎಲ್ಲಾ ಬೋಳುಬೆಟ್ಟಗಳೂ ಕೂಡ ಹುಲ್ಲುಗಾವಲಾಗುವವು.
10 ೧೦ ಅವರಿಗೆ ಹಸಿವೆ ಬಾಯಾರಿಕೆಗಳು ಆಗುವುದಿಲ್ಲ, ಝಳವೂ ಬಿಸಿಲೂ ಬಡಿಯುವುದಿಲ್ಲ. ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರು ಸಿಕ್ಕುವ ಒರತೆಗಳ ಬಳಿಯಲ್ಲಿ ನಡೆಸುವನು.
11 ೧೧ ನನ್ನ ಬೆಟ್ಟಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜಮಾರ್ಗಗಳನ್ನು ಎತ್ತರಿಸುವೆನು.
12 ೧೨ ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಲಿಂದ ಮತ್ತು ಪಡವಲಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
13 ೧೩ ಆಕಾಶವೇ, ಹರ್ಷಧ್ವನಿಗೈ! ಭೂಮಿಯೇ, ಉಲ್ಲಾಸಗೊಳ್ಳು! ಪರ್ವತಗಳೇ, ಹರ್ಷಧ್ವನಿಗೈಯಿರಿ! ಏಕೆಂದರೆ ಯೆಹೋವನು ತನ್ನ ಪ್ರಜೆಯನ್ನು ಸಂತೈಸಿ, ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸುವನು.”
14 ೧೪ ಚೀಯೋನ್ ನಗರಿಯಾದರೋ, “ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು ನನ್ನನ್ನು ಮರೆತಿದ್ದಾನೆ” ಎಂದುಕೊಂಡಳು.
15 ೧೫ ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತರು ಮರೆತಾಳು, ಆದರೆ ನಾನು ನಿನ್ನನ್ನು ಮರೆಯುವುದಿಲ್ಲ.
16 ೧೬ ಇಗೋ, ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿಕೊಂಡಿದ್ದೇನೆ. ನಿನ್ನ ಪೌಳಿಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.
17 ೧೭ ನಿನ್ನ ಮಕ್ಕಳು ತ್ವರೆಪಟ್ಟು ಬರುತ್ತಿದ್ದಾರೆ. ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟು ಹೋಗುತ್ತಾರೆ.
18 ೧೮ ಕಣ್ಣೆತ್ತಿ ಸುತ್ತಲು ನೋಡು! ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವನು ಹೀಗೆನ್ನುತ್ತಾನೆ, “ನನ್ನ ಜೀವದಾಣೆ, ನೀನು ಇವರನ್ನೆಲ್ಲಾ ಆಭರಣವನ್ನಾಗಿ ಧರಿಸಿಕೊಳ್ಳುವಿ, ವಧುವು ಒಡ್ಯಾಣವನ್ನು ಕಟ್ಟಿಕೊಳ್ಳುವ ಹಾಗೆ ನೀನು ಇವರನ್ನು ನಿನ್ನ ಎದೆಗೆ ಒರಗಿ ಕಟ್ಟಿಕೊಳ್ಳುವಿ.
19 ೧೯ ನಿನ್ನ ಹಾಳು ಪ್ರದೇಶಗಳು, ನಿನ್ನ ಬೀಳು ಭೂಮಿಯು, ಕೆಟ್ಟುಹೋದ ನಿನ್ನ ಸೀಮೆಯು ಇವುಗಳಿಗೆ ಏನಾಗುವುದೆಂದು ನೋಡುವಿ. ನಿನ್ನನ್ನು ನುಂಗಿದವರು ದೂರವಾಗುವರು, ನಿನ್ನ ನಿವಾಸಿಗಳಿಗೆ ನೀನು ಸಂಕೋಚಸ್ಥಳವಾಗುವಿ.
20 ೨೦ ಸಂತಾನವನ್ನು ಕಳೆದುಕೊಂಡವಳಾದ ನಿನ್ನ ಮಕ್ಕಳು, ‘ಸ್ಥಳವು ನನಗೆ ಸಂಕೋಚ, ನಾನು ವಾಸಿಸುವುದಕ್ಕೆ ಸ್ಥಳವಾಗುವಂತೆ ಸರಿದುಕೋ’ ಎಂದು ಆಡಿಕೊಳ್ಳುವ ಮಾತು ಇನ್ನು ಮೇಲೆ ನಿನ್ನ ಕಿವಿಗೆ ಬೀಳುವುದು.
21 ೨೧ ಆಗ ನೀನು ನಿನ್ನ ಮನದೊಳಗೆ, ‘ನನಗೋಸ್ಕರ ಇವರನ್ನು ಯಾರು ಹೆತ್ತರು? ನಾನೋ ಮಕ್ಕಳನ್ನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು. ಇವರನ್ನು ಸಾಕಿದವರು ಯಾರು? ಆಹಾ, ನಾನು ಒಂಟಿಯಾಗಿ ಉಳಿದಿದ್ದೆನಲ್ಲಾ, ಇವರೆಲ್ಲಿದ್ದರು?’” ಎಂದುಕೊಳ್ಳುವಿ.
22 ೨೨ ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನಾನು ಜನಾಂಗಗಳಿಗೆ ಕೈಸನ್ನೆಮಾಡಿ ದೇಶಾಂತರಗಳಿಗೆ ನನ್ನ ಧ್ವಜವನ್ನು ಎತ್ತುವೆನು. ಅವರು ನಿನ್ನ ಕುಮಾರರನ್ನು ಎದೆಗಪ್ಪಿಕೊಂಡು ಬರುವರು. ನಿನ್ನ ಕುಮಾರ್ತೆಯರನ್ನು ಹೆಗಲ ಮೇಲೆ ಕರೆದುತರುವರು.
23 ೨೩ ರಾಜರು ನಿನಗೆ ಸಾಕುತಂದೆಗಳು, ಅವರ ರಾಣಿಯರು ನಿನಗೆ ಸಾಕುತಾಯಿಯರು ಆಗುವರು. ನಿನಗೆ ಸಾಷ್ಟಾಂಗವಾಗಿ ಅಡ್ಡಬಿದ್ದು ನಿನ್ನ ಪಾದಧೂಳನ್ನು ನೆಕ್ಕುವರು. ನಾನೇ ಯೆಹೋವನು. ನನ್ನನ್ನು ನಿರೀಕ್ಷಿಸಿಕೊಂಡವರು ಆಶಾಭಂಗಪಡುವುದಿಲ್ಲ” ಎಂದು ನಿನಗೆ ಗೊತ್ತಾಗುವುದು.
24 ೨೪ ಶೂರನಿಂದ ಕೊಳ್ಳೆಯನ್ನು ತೆಗೆದುಕೊಳ್ಳಬಹುದೋ? ಭಯಂಕರನಿಂದ ಸೆರೆಯಾದವರನ್ನು ಬಿಡಿಸಬಹುದೋ?
25 ೨೫ ಯೆಹೋವನು ಹೀಗೆನ್ನುತ್ತಾನೆ, “ಶೂರನ ಸೆರೆಯವರೂ ಅಪಹರಿಸಲ್ಪಡುವರು. ಭಯಂಕರನ ಕೊಳ್ಳೆಯೂ ತೆಗೆಯಲ್ಪಡುವುದು. ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ಉದ್ಧರಿಸುವೆನು.
26 ೨೬ ನಿನ್ನ ಹಿಂಸಕರು ತಮ್ಮ ಮಾಂಸವನ್ನೇ ತಿನ್ನುವಂತೆ ಮಾಡುವೆನು, ದ್ರಾಕ್ಷಾರಸವನ್ನು ಕುಡಿಯುವ ಹಾಗೆ ಅವರು ಸ್ವಂತ ರಕ್ತವನ್ನು ಕುಡಿದು ಅಮಲೇರುವರು. ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು” ಎಂದು ನರಜನ್ಮದವರೆಲ್ಲರಿಗೂ ಗೊತ್ತಾಗುವುದು.