< ಯೆಶಾಯನು 47 >
1 ೧ ಯುವತಿಯೇ, ಬಾಬೆಲ್ ಪುರಿಯೇ, ಕೆಳಕ್ಕಿಳಿದು ಧೂಳಿನಲ್ಲಿ ಕುಳಿತುಕೋ, ಕಸ್ದೀಯರ ಯುವತಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ! ನಿನ್ನನ್ನು ಇನ್ನು ಕೋಮಲೆ ಮತ್ತು ಸುಕುಮಾರಿ ಎಂದು ಕರೆಯುವುದಿಲ್ಲ.
2 ೨ ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ, ಈಜಾಡುವ ಬಟ್ಟೆಯ ನೆರಿಗೆಯನ್ನು ಹರಿದುಬಿಟ್ಟು, ಬೆತ್ತಲಾಗಿ ನದಿಗಳನ್ನು ಹಾದುಹೋಗು.
3 ೩ ನಿನ್ನ ಬೆತ್ತಲೆತನವು ಬಯಲಿಗೆ ಬಂದು, ನೀನು ನಾಚಿಕೆಗೀಡಾಗುವಿ, ನಾನು ಯಾರನ್ನೂ ಕರುಣಿಸದೆ ಮುಯ್ಯಿತೀರಿಸುವೆನು.
4 ೪ ನಮ್ಮ ವಿಮೋಚಕನಿಗೆ ಸೇನಾಧೀಶ್ವರನಾದ ಯೆಹೋವನೆಂಬ ನಾಮಧೇಯ, ಆತನೇ ಇಸ್ರಾಯೇಲಿನ ಪರಿಶುದ್ಧನು!
5 ೫ ಕಸ್ದೀಯರ ಯುವತಿಯೇ (ನಗರವೇ), ಮೌನವಾಗಿ ಕುಳಿತುಕೋ, ಕತ್ತಲೊಳಗೆ ಹೋಗು. ಏಕೆಂದರೆ ನೀನು ಇನ್ನು ರಾಜ್ಯಗಳ ರಾಣಿ ಎಂದು ಕರೆಯಲ್ಪಡುವುದಿಲ್ಲ.
6 ೬ ನಾನು ನನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವತ್ತನ್ನು ಹೊಲೆಗೆಡಿಸಿದೆನು. ಅವರನ್ನು ನಿನ್ನ ಕೈವಶ ಮಾಡಳು, ನೀನು ಅವರನ್ನು ಕರುಣಿಸದೆ ಬಹುಭಾರವಾದ ನೊಗವನ್ನು ಹೊರಿಸಿದಿ.
7 ೭ “ನಾನು ಶಾಶ್ವತವಾದ ರಾಣಿ” ಎಂದು ನೀನು ಅಂದುಕೊಂಡು ಅವರ ಹಿಂಸೆಗಳನ್ನು ಮನಸ್ಸಿಗೆ ತಾರದೆ, ಅವುಗಳಿಂದ ನಿನಗಾಗುವ ಪರಿಣಾಮವನ್ನು ನೆನಸಿಕೊಳ್ಳಲಿಲ್ಲ.
8 ೮ “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ, ನಾನು ವಿಧವೆಯಾಗಿ ಕುಳಿತುಕೊಳ್ಳುವುದಿಲ್ಲ, ಪುತ್ರಶೋಕವನ್ನು ಅನುಭವಿಸುವುದಿಲ್ಲ” ಎಂದು ಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.
9 ೯ ಒಂದೇ ದಿನದೊಳಗೆ, ಒಂದು ಕ್ಷಣದಲ್ಲಿ, ಪುತ್ರಶೋಕ ಮತ್ತು ವಿಧವೆಯ ಸ್ಥಿತಿ ಇವೆರಡೂ ನಿನಗುಂಟಾಗುವವು. ನೀನು ಎಷ್ಟು ಮಾಟಮಾಡಿದರೂ, ಎಷ್ಟೇ ಮಂತ್ರತಂತ್ರಗಳನ್ನು ನಡೆಸಿದರೂ ಇವುಗಳನ್ನು ಸಂಪೂರ್ಣವಾಗಿ ಅನುಭವಿಸುವಿ.
10 ೧೦ ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆಯಿಟ್ಟು, “ನನ್ನನ್ನು ಯಾರೂ ನೋಡರು?” ಎಂದುಕೊಂಡಿದ್ದಿ. ನನ್ನ ಜ್ಞಾನವಿವೇಕಗಳು ನಿನ್ನನ್ನು ಸೊಟ್ಟಗೆ ತಿರುಗಿಸಿದ್ದರಿಂದ, “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ” ಎಂದು ಯೋಚಿಸಿಕೊಂಡಿದ್ದಿ.
11 ೧೧ ಹೀಗಿರಲು ನೀನು ಮಂತ್ರಿಸಿ ನಿವಾರಿಸಲಾರದ ಕೇಡು ನಿನಗೆ ಸಂಭವಿಸುವುದು, ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವುದು. ನೀನು ತಪ್ಪಿಸಿಕೊಳ್ಳಲಾಗದ ನಾಶನವು ನಿನ್ನ ಮೇಲೆ ಪಕ್ಕನೆ ಬರುವುದು.
12 ೧೨ ನೀನು ಬಾಲ್ಯಾರಭ್ಯ ಪ್ರಯಾಸಪಟ್ಟು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ, ಲೆಕ್ಕವಿಲ್ಲದ ನಿನ್ನ ಮಾಟಮಂತ್ರಗಳನ್ನೂ ಪ್ರಯೋಗಿಸಿ ಎದ್ದು ನಿಲ್ಲು. ಇದರಿಂದ ಒಂದು ವೇಳೆ ನಿನಗೆ ಪ್ರಯೋಜನವಾದೀತು. ಒಂದು ವೇಳೆ ನಿನ್ನ ಶತ್ರುವಿನಲ್ಲಿ ಭಯ ಹುಟ್ಟೀತು.
13 ೧೩ ಮಂತ್ರಾಲೋಚನೆಗಳನ್ನು ಕೇಳಿ ಕೇಳಿ ನಿನಗೆ ಸಾಕಾಯಿತಲ್ಲವೇ. ಖಗೋಳಜ್ಞರು, ಜೋಯಿಸರು, ಪಂಚಾಂಗದವರು ಇವರೆಲ್ಲರೂ, ನಿಂತು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ಉದ್ಧರಿಸಲಿ.
14 ೧೪ ಇಗೋ, ಇವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವುದು; ಜ್ಞಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು; ಅದು ಕಾಯಿಸಿಕೊಳ್ಳುವ ಕೆಂಡವಲ್ಲ, ಮುಂದೆ ಕುಳಿತರೆ ಹಾಯಾಗಿರುವ ಬೆಂಕಿಯೂ ಅಲ್ಲ.
15 ೧೫ ನೀನು ಪ್ರಯಾಸಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು. ನಿನ್ನ ಬಾಲ್ಯದಿಂದ ನಿನ್ನಲ್ಲಿ ವ್ಯಾಪಾರ ಮಾಡಿದವರೆಲ್ಲರೂ; ಚದರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿಬಿಡುವರು. ನಿನ್ನನ್ನು ರಕ್ಷಿಸಲು ಒಬ್ಬನೂ ಇರುವುದಿಲ್ಲ.