< ಯೆಶಾಯನು 41 >
1 ೧ ದ್ವೀಪನಿವಾಸಿಗಳೇ, ನನ್ನ ಕಡೆಗೆ ತಿರುಗಿ ಮೌನದಿಂದಿರಿ. ಜನಾಂಗಗಳು ತಮ್ಮನ್ನು ಬಲಪಡಿಸಿಕೊಳ್ಳಲಿ; ಸಮೀಪಕ್ಕೆ ಬಂದು ಮಾತನಾಡಲಿ. ನ್ಯಾಯಸ್ಥಾನಕ್ಕೆ ಒಟ್ಟಿಗೆ ಹೋಗೋಣ.
2 ೨ ಮೂಡಣದಿಂದ ಒಬ್ಬನನ್ನು ಎಬ್ಬಿಸಿ, ನ್ಯಾಯದ ಸಂಕಲ್ಪಾನುಸಾರವಾಗಿ ತನ್ನ ಪಾದಸನ್ನಿಧಿಗೆ ಕರೆದು, ಜನಾಂಗಗಳನ್ನು ಅವನ ವಶಕ್ಕೆ ಕೊಟ್ಟು, ಅವನನ್ನು ರಾಜರ ಮೇಲೆ ಆಳುವಂತೆ ಮಾಡಿ, ಅವರ ಕತ್ತಿಯನ್ನು ಧೂಳನ್ನಾಗಿಯೂ, ಬಿಲ್ಲನ್ನು ಗಾಳಿ ಬಡಿದುಕೊಂಡು ಹೋಗುವ ಹುಲ್ಲನ್ನಾಗಿಯೂ ಅವರನ್ನು ಮಾಡಿದನು.
3 ೩ ತಾನು ಎಂದೂ ಹೆಜ್ಜೆಯಿಡದ ಮಾರ್ಗದಲ್ಲಿ ಸುರಕ್ಷಿತವಾಗಿ ಮುಂದೆ ಹಾದು ಹೋಗುವಂತೆ ಅವರನ್ನು ಹಿಂದಟ್ಟುತ್ತಾ ಹೋದನು.
4 ೪ ಇದನ್ನೆಲ್ಲಾ ನಡೆಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವನಾದ ಯೆಹೋವನೆಂಬ ನಾನೇ; ಹೌದು, ಆದಿಪುರುಷನೂ, ಅಂತ್ಯಕಾಲದವರ ಸಂಗಡಿಗನೂ ಆಗಿರುವ ನಾನೊಬ್ಬನೇ.
5 ೫ ದ್ವೀಪ ನಿವಾಸಿಗಳು ಕಂಡು ಬೆರಗಾದರು, ಭೂಮಿಯ ಕಟ್ಟ ಕಡೆಯವರು ನಡುಗಿದರು, ಎಲ್ಲರೂ ನೆರೆದು ಬಂದರು.
6 ೬ ಒಬ್ಬರಿಗೊಬ್ಬರು ಸಹಾಯಮಾಡಿದರು, ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರು” ಎಂದು ಹೇಳಿದನು.
7 ೭ ಹಾಗೆಯೇ ಶಿಲ್ಪಿಯು ಎರಕದವನನ್ನೂ, ಸುತ್ತಿಗೆಯಿಂದ ಸಮಮಾಡುವವನು ಅಡಿಗಲ್ಲಿನ ಮೇಲೆ ಕುಟ್ಟುವವನನ್ನೂ ಪ್ರೋತ್ಸಾಹಗೊಳಿಸಿದರು. “ಬೆಸಿಗೆ ಚೆನ್ನಾಗಿದೆ” ಎಂದು ಹೇಳಿ ವಿಗ್ರಹವನ್ನು ಕದಲದಂತೆ ಮೊಳೆಗಳಿಂದ ಜಡಿದರು.
8 ೮ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆರಿಸಿಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ,
9 ೯ ನಾನು ಭೂಮಿಯ ಕಟ್ಟಕಡೆಯಲ್ಲಿ ಹಿಡಿದು ದಿಗಂತಗಳಿಂದ ಕರೆದ ಜನವೇ, “ನೀನು ನನ್ನ ಸೇವಕನು, ನಾನು ನಿನ್ನನ್ನು ಆರಿಸಿಕೊಂಡೆನು, ತಳ್ಳಲಿಲ್ಲ” ಎಂದು ನಾನು ಹೇಳಿ ಸಂಬೋಧಿಸಿದ ಪ್ರಜೆಯೇ,
10 ೧೦ ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ, ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು. ನಾನು ನಿನ್ನನ್ನು ಬಲಪಡಿಸುತ್ತೇನೆ. ಹೌದು, ನಿನಗೆ ಸಹಾಯಮಾಡುತ್ತೇನೆ. ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.
11 ೧೧ ಆಹಾ, ನಿನ್ನ ಮೇಲೆ ಕಿಡಿಕಿಡಿಯಾದವರು ಆಶಾಭಂಗಪಟ್ಟು ಅವಮಾನಹೊಂದುವರು, ನಿನ್ನ ಸಂಗಡ ವ್ಯಾಜ್ಯವಾಡಿದವರು ನಾಶವಾಗಿ ಇಲ್ಲದೆ ಹೋಗುವರು.
12 ೧೨ ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು. ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ನಿರ್ನಾಮವಾಗುವರು.
13 ೧೩ ಏಕೆಂದರೆ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನೆ. “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ.
14 ೧೪ ಕ್ರಿಮಿಪ್ರಾಯದವನಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ, ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾಮಿಯು ನಿನಗೆ ವಿಮೋಚಕನು” ಎಂದು ಯೆಹೋವನು ಹೇಳುತ್ತಾನೆ.
15 ೧೫ “ಇಗೋ, ನಾನು ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ, ನೀನು ಬೆಟ್ಟಗಳನ್ನು ಒಡೆದು ಪುಡಿಪುಡಿಮಾಡಿ ಗುಡ್ಡಗಳನ್ನು ಹೊಟ್ಟು ಮಾಡುವಿ.
16 ೧೬ ನೀನು ತೂರಲು ಅವುಗಳನ್ನು ಗಾಳಿಯು ಬಡಿದುಕೊಂಡು ಹೋಗುವುದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವುದು. ನೀನಂತೂ ಯೆಹೋವನಲ್ಲಿ ಆನಂದಿಸುವಿ, ಇಸ್ರಾಯೇಲಿನ ಸದಮಲಸ್ವಾಮಿಯಲ್ಲಿ ಹೆಚ್ಚಳಪಡುವಿ.
17 ೧೭ ಬಾಯಾರಿ ನಾಲಿಗೆ ಒಣಗಿ ನೀರನ್ನು ಹುಡುಕಿ ಹೊಂದದ ದೀನದರಿದ್ರರಿಗೆ ಯೆಹೋವನೆಂಬ ನಾನು ಪ್ರಸನ್ನನಾಗುವೆನು, ಇಸ್ರಾಯೇಲಿನ ದೇವರಾದ ನಾನು ಅವರನ್ನು ಕೈಬಿಡೆನು.
18 ೧೮ ಬೋಳುಗುಡ್ಡಗಳಲ್ಲಿ ನದಿಗಳನ್ನು, ಕಣಿವೆಗಳಲ್ಲಿ ಒರತೆಗಳನ್ನು ಹೊರಡಿಸಿ, ಅರಣ್ಯವನ್ನು ಕೆರೆಯಾಗಿಯೂ, ಮರುಭೂಮಿಯನ್ನು ಬುಗ್ಗೆಗಳನ್ನಾಗಿಯೂ ಮಾಡುವೆನು.
19 ೧೯ ಮರುಭೂಮಿಯಲ್ಲಿ ದೇವದಾರು, ಜಾಲಿಮರ, ಸುಗಂಧ ಒಲೀವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.
20 ೨೦ ಆಗ ಯೆಹೋವನ ಹಸ್ತವು ಇದನ್ನು ಮಾಡಿದೆ, ಹೌದು, ಇಸ್ರಾಯೇಲಿನ ಸದಮಲಸ್ವಾಮಿಯೇ ಸೃಷ್ಟಿಸಿದ್ದಾನೆ” ಎಂದು ಎಲ್ಲರೂ ಕಂಡು ತಿಳಿದು ಮನಸ್ಸಿಗೆ ತಂದು ಗ್ರಹಿಸಿಕೊಳ್ಳುವರು.
21 ೨೧ ಯಾಕೋಬ್ಯರ ಅರಸನಾದ ಯೆಹೋವನು ಹೀಗೆನ್ನುತ್ತಾನೆ, “ನಿಮ್ಮ ವ್ಯಾಜ್ಯವು ಈಚೆಗೆ ಬರಲಿ, ನಿಮ್ಮ ವಿಗ್ರಹಗಳಿಗಾಗಿ ನಿಮ್ಮ ಬಲವಾದ ನ್ಯಾಯಗಳನ್ನು ತೋರ್ಪಡಿಸಿರಿ”
22 ೨೨ ತಮ್ಮ ನ್ಯಾಯಗಳನ್ನು ಮುಂದಕ್ಕೆ ತರಲಿ, ಭವಿಷ್ಯತ್ತನ್ನು ನಮಗೆ ತಿಳಿಸಲಿ; ನಡೆದ ಸಂಗತಿಗಳ ವಿಶೇಷವನ್ನು ಸೂಚಿಸಿರಿ, ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಇಲ್ಲವೇ ಭವಿಷ್ಯತ್ತನ್ನು ತಿಳಿಸಿದರೆ ಗ್ರಹಿಸುವೆವು.
23 ೨೩ ನೀವು ದೇವರುಗಳೆಂದು ನಮಗೆ ಅರಿವು ಹುಟ್ಟುವಂತೆ ಮುಂದೆ ಆಗುವವುಗಳನ್ನು ತಿಳಿಸಿರಿ. ನಾವು ಒಟ್ಟಿಗೆ ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ.
24 ೨೪ ಆಹಾ, ನೀವು ಶೂನ್ಯವೇ! ನಿಮ್ಮ ಕಾರ್ಯವು ಮಟ್ಟಮಾಯವೇ! ನಿಮ್ಮನ್ನು ಮೊರೆಹೋಗುವವರು ತುಚ್ಛರೇ ಸರಿ!
25 ೨೫ ನಾನು ಉತ್ತರ ದಿಕ್ಕಿನಿಂದ ಒಬ್ಬನನ್ನು ಎಬ್ಬಿಸಿ ಕರೆದು ತಂದಿದ್ದೇನೆ, ನನ್ನ ನಾಮವನ್ನು ಪ್ರಚುರಪಡಿಸತಕ್ಕವನು ಮೂಡಲಿನಿಂದ ಬಂದಿದ್ದಾನೆ. ಅವನು ಉಪರಾಜರನ್ನು ಮಣ್ಣೇ ಎಂದು ಭಾವಿಸಿ ಅವರ ಮೇಲೆ ಬಿದ್ದು ಕುಂಬಾರನು ಜೇಡಿಮಣ್ಣನ್ನು ತುಳಿಯುವ ಹಾಗೆ ತುಳಿಯುವನು.
26 ೨೬ ಕಾರ್ಯವು ನಡೆಯುವುದಕ್ಕೆ ಮೊದಲು ಇವರಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಸಮಯಕ್ಕೆ ಮೊದಲೇ “ಅವನು ಸತ್ಯವಂತನು” ಎಂದು ಯಾರು ಮುಂತಿಳಿಸಿದ್ದಾರೆ? ಯಾರೂ ಏನನ್ನೂ ತಿಳಿಸಬಲ್ಲವರಲ್ಲ, ಏನನ್ನೂ ಹೇಳತಕ್ಕವರಲ್ಲ, ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ.
27 ೨೭ ನಾನು ಮೊದಲನೆಯವನಾಗಿ ಚೀಯೋನಿಗೆ, “ಇಗೋ, ಅವರನ್ನು ನೋಡು” ಎಂದು ಹೇಳಿ ಶುಭಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು.
28 ೨೮ ನಾನು ನೋಡಿದಾಗ ಇವರಲ್ಲಿ ಸಮರ್ಥರು ಯಾರೂ ಇಲ್ಲ. ನಾನು ಪ್ರಶ್ನೆ ಮಾಡಿದರೆ ಒಂದು ಮಾತನ್ನಾದರೂ ಹೇಳಬಲ್ಲ ಆಲೋಚಕನು ಇಲ್ಲವೇ ಇಲ್ಲ.
29 ೨೯ ಆಹಾ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ವ್ಯರ್ಥವೇ, ಅವರ ಎರಕದ ಬೊಂಬೆಗಳು ಗಾಳಿ ಮತ್ತು ಶೂನ್ಯವೇ.