< ಹೋಶೇಯನು 7 >

1 ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲನ್ನು ಸ್ವಸ್ಥ ಮಾಡಬೇಕೆಂದಿರುವಾಗ ಎಫ್ರಾಯೀಮಿನ ಅಧರ್ಮವೂ, ಸಮಾರ್ಯದ ದುಷ್ಟತನವೂ ವ್ಯಕ್ತವಾಗುತ್ತವೆ. ಎಲ್ಲರೂ ಮೋಸಮಾಡುತ್ತಾರೆ, ಒಳಗೆ ಕಳ್ಳರು ನುಗ್ಗುತ್ತಾರೆ, ಹೊರಗೆ ಡಕಾಯಿತಿಯವರು ಸುಲಿಯುತ್ತಾರೆ.
ನಾನು ಇಸ್ರಾಯೇಲನ್ನು ಗುಣ ಮಾಡಬೇಕೆಂದಿರುವಾಗ ಎಫ್ರಾಯೀಮಿನ ಪಾಪಗಳನ್ನು ಬಹಿರಂಗಪಡಿಸುತ್ತೇನೆ. ಮತ್ತು ಸಮಾರ್ಯದ ಕೆಟ್ಟತನವನ್ನು ಪ್ರಕಟಪಡಿಸುತ್ತೇನೆ. ಅವರು ಸುಳ್ಳನ್ನು ನಡೆಸುತ್ತಾರೆ. ಕಳ್ಳನು ಒಳಗೆ ಬರುತ್ತಾನೆ ಮತ್ತು ಕಳ್ಳರ ಗುಂಪು ಹೊರಗೆ ಸುಲಿದುಕೊಳ್ಳುತ್ತದೆ.
2 ತಮ್ಮ ದುರ್ಮಾರ್ಗವೆಲ್ಲಾ ಯೆಹೋವನ ಜ್ಞಾಪಕದಲ್ಲಿರುತ್ತದೆ ಎಂದು ಅವರು ಮನದಟ್ಟು ಮಾಡಿಕೊಳ್ಳುವುದಿಲ್ಲ; ಅವರ ದುಷ್ಕೃತ್ಯಗಳು ಈಗ ಅವರನ್ನು ಮುತ್ತಿಕೊಂಡಿವೆ, ನನ್ನ ಕಣ್ಣೆದುರಿಗಿವೆ.
ಆದರೆ ನಾನು ಅವರ ಕೆಟ್ಟತನವನ್ನೆಲ್ಲಾ ಜ್ಞಾಪಕ ಮಾಡುತ್ತೇನೆಂದು ಅವರು ತಮ್ಮ ಹೃದಯಗಳಲ್ಲಿ ನೆನೆಸಿಕೊಳ್ಳುವುದಿಲ್ಲ. ಈಗ ಅವರ ಪಾಪಗಳು ಅವರನ್ನು ಸುತ್ತಿಕೊಂಡಿವೆ. ಅವು ನನ್ನ ಮುಖದ ಮುಂದೆ ಇವೆ.
3 ತಮ್ಮ ಕೆಟ್ಟತನದಿಂದ ರಾಜನನ್ನು ಆನಂದಗೊಳಿಸುತ್ತಾರೆ, ಸುಳ್ಳುಗಳಿಂದ ಮುಖಂಡರನ್ನು ಸಂತೋಷಪಡಿಸುತ್ತಾರೆ.
“ಅವರು ತಮ್ಮ ಕೆಟ್ಟತನದಿಂದ ಅರಸನನ್ನೂ, ಅವರ ಸುಳ್ಳಿನಿಂದ ರಾಜಕುಮಾರನನ್ನೂ ಸಂತೋಷ ಪಡಿಸುತ್ತಾರೆ.
4 ಅವರೆಲ್ಲರೂ ವ್ಯಭಿಚಾರಿಗಳು; ರೊಟ್ಟಿಸುಡುವವನು ಬೆಂಕಿಹೊತ್ತಿಸಿ, ಉರಿಸಿ, ಕಣಕವನ್ನು ನಾದಿದಾಗಿನಿಂದ ಹುಳಿಬರುವ ತನಕ ಮತ್ತಷ್ಟು ಉರಿಸದೆ ಹಾಗೆಯೇ ಬಿಟ್ಟಿರುವ ಒಲೆಗೆ ಸಮಾನರಾಗಿದ್ದಾರೆ.
ಅವರೆಲ್ಲರು ವ್ಯಭಿಚಾರಿಗಳು, ರೊಟ್ಟಿಸುಡುವವನು ಬೆಂಕಿಹೊತ್ತಿಸಿ, ಉರಿಸುವ ಒಲೆಗೆ ಸಮಾನರಾಗಿದ್ದಾರೆ. ಅವನು ಹಿಟ್ಟು ನಾದಿದ ಮೇಲೆ, ಅದು ಹುಳಿಯಾಗುವ ತನಕ ಉರಿಸದೆ ಬಿಟ್ಟಿರುವ ಕೆಂಡಕ್ಕೆ ಸಮಾನರಾಗಿದ್ದಾರೆ.
5 ನಮ್ಮ ರಾಜನ ದಿನದಲ್ಲಿ ದ್ರಾಕ್ಷಾರಸದ ಉಷ್ಣವು ದೇಶಾಧಿಪತಿಗಳ ತಲೆಗೇರಲು ಆರಂಭವಾಯಿತು; ರಾಜನು ಆ ತುಂಟರ ಕೈಯ ಮೇಲೆ ಕೈ ಹಾಕಿದನು.
ನಮ್ಮ ಅರಸನ ಹಬ್ಬದ ದಿವಸಗಳಲ್ಲಿ ರಾಜಕುಮಾರರು ದ್ರಾಕ್ಷಾರಸವನ್ನು ಕುಡಿದು ಮತ್ತರಾಗುತ್ತಾರೆ. ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.
6 ಅವರು ಹೊಂಚಿಕೊಂಡಿರುವಾಗ ಆಹಾ, ತಮ್ಮ ಹೃದಯವನ್ನು ಒಲೆಯಂತೆ ಸಿದ್ಧಮಾಡಿ ಉರಿಯುತ್ತಿದ್ದಾರೆ; ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ; ಬೆಳಿಗ್ಗೆ ಧಗಧಗನೆ ಉರಿಯುತ್ತದೆ.
ಅವರು ಹೊಂಚುಹಾಕಿಕೊಂಡಿದ್ದಾಗ, ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ. ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ ಬೆಳಿಗ್ಗೆ ಅದು ಪ್ರಜ್ವಲಿಸುವ ಬೆಂಕಿಯ ಹಾಗೆ ಉರಿಯುತ್ತದೆ.
7 ಎಲ್ಲರೂ ಒಲೆಯಂತೆ ಝಳವೇರಿ ತಮ್ಮ ನ್ಯಾಯಾಧೀಶ್ವರರನ್ನು ನುಂಗಿಬಿಡುತ್ತಾರೆ; ಅವರ ಸಕಲ ರಾಜರು ಬಿದ್ದಿರುತ್ತಾರೆ, ಅವರೊಳಗೆ ನನ್ನನ್ನು ಪ್ರಾರ್ಥಿಸುವವರೇ ಇಲ್ಲ.
ಅವರೆಲ್ಲರೂ ಒಲೆಯ ಹಾಗೆ ಬಿಸಿಯಾಗಿದ್ದಾರೆ. ಅವರು ತಮ್ಮ ನ್ಯಾಯಾಧಿಪತಿಗಳನ್ನು ನುಂಗಿಬಿಡುತ್ತಾರೆ. ಅವರ ಅರಸರೆಲ್ಲರು ಬಿದ್ದು ಹೋಗಿದ್ದಾರೆ. ಅವರಲ್ಲಿ ಒಬ್ಬನಾದರೂ ನನ್ನನ್ನು ಕರೆಯುವುದಿಲ್ಲ.
8 ಎಫ್ರಾಯೀಮು ಜನಾಂಗಗಳಲ್ಲಿ ಸೇರಿಕೊಳ್ಳುತ್ತದೆ; ಎಫ್ರಾಯೀಮು ತಿರುವಿಹಾಕದ ರೊಟ್ಟಿಯಂತಿದೆ.
“ಎಫ್ರಾಯೀಮು ಜನಾಂಗಗಳೊಂದಿಗೆ ತನ್ನನ್ನು ಬೆರೆಸಿಕೊಂಡಿದೆ. ಎಫ್ರಾಯೀಮು ತಿರುವಿ ಹಾಕದ ರೊಟ್ಟಿಯಾಗಿದ್ದಾನೆ.
9 ಅನ್ಯರು ಅದರ ಶಕ್ತಿಯನ್ನು ಹೀರಿಬಿಟ್ಟಿದ್ದರೂ ಅದಕ್ಕೆ ತಿಳಿಯದು; ಅದರ ತಲೆಯ ಮೇಲೆ ಅಲ್ಲಲ್ಲಿ ನೆರೆಯು ಕಾಣಿಸಿದರೂ ಅದಕ್ಕೆ ಗೊತ್ತಿಲ್ಲ.
ವಿದೇಶಿಯರು ಅವನ ಶಕ್ತಿಯನ್ನು ಹೀರಿಬಿಟ್ಟಿದ್ದಾರೆ. ಅದು ಅವನಿಗೆ ಗೊತ್ತಿಲ್ಲ. ನರೆಕೂದಲು ಸಹ ಅವನ ಮೇಲೆ ಇದೆ. ಆದರೂ ಅವನು ತಿಳಿಯದೇ ಇದ್ದಾನೆ.
10 ೧೦ ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇದೆಲ್ಲಾ ಸಂಭವಿಸಿದರೂ ಅದು ತನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಲಿಲ್ಲ; ಆತನನ್ನು ಆಶ್ರಯಿಸಲಿಲ್ಲ.
ಇಸ್ರಾಯೇಲಿನ ಗರ್ವವು ಅವನಿಗೆ ವಿರುದ್ಧವಾಗಿ ಸಾಕ್ಷಿಕೊಡುತ್ತದೆ. ಆದರೂ ಅವರು ತಮ್ಮ ಯೆಹೋವ ದೇವರ ಕಡೆಗೆ ತಿರುಗದೆ ಇದ್ದಾರೆ. ಆತನನ್ನು ಹುಡುಕದೇ ಇದ್ದಾರೆ.
11 ೧೧ ಎಫ್ರಾಯೀಮು ಬುದ್ಧಿ ವಿವೇಕಗಳಿಲ್ಲದ ಪಾರಿವಾಳದಂತಿದೆ; ಅದರ ಜನರು ಐಗುಪ್ತವನ್ನು ಕೂಗುತ್ತಾರೆ, ಅಶ್ಶೂರಕ್ಕೆ ಹೊರಡುತ್ತಾರೆ.
“ಎಫ್ರಾಯೀಮು ಸಹ ಸುಲಭವಾಗಿ ಮೋಸಕ್ಕೆ ಒಳಗಾಗುವ ಪಾರಿವಾಳದ ಹಾಗಿದ್ದಾನೆ. ಈಗ ಅವರು ಈಜಿಪ್ಟನ್ನು ಕರೆಯುತ್ತಾರೆ. ಈಗ ಅವರು ಅಸ್ಸೀರಿಯದ ಆಶ್ರಯಕ್ಕೆ ಹೋಗುತ್ತಾರೆ.
12 ೧೨ ಹೊರಟ ಕೂಡಲೆ ಅವರ ಮೇಲೆ ನನ್ನ ಬಲೆಯನ್ನು ಬೀಸಿ, ಆಕಾಶದ ಪಕ್ಷಿಗಳ ಹಾಗೆ ಅವರನ್ನು ಕೆಳಕ್ಕೆ ಎಳೆಯುವೆನು. ಅವರೆಲ್ಲರ ಕಿವಿಗೆ ಬಿದ್ದ ಮಾತಿಗನುಸಾರವಾಗಿ ಅವರನ್ನು ಶಿಕ್ಷಿಸುವೆನು.
ಅವರು ಹೋಗುವಾಗ, ನಾನು ಅವರ ಮೇಲೆ ನನ್ನ ಬಲೆಯನ್ನು ಹಾಸುವೆನು. ಆಕಾಶದ ಪಕ್ಷಿಗಳ ಹಾಗೆ, ಅವರನ್ನು ಕೆಳಗೆ ಇಳಿಸಿ, ಅವರು ಒಟ್ಟಿಗೆ ಸೇರುವುದನ್ನು ನಾನು ಕೇಳಿದಾಗ, ನಾನು ಅವುಗಳನ್ನು ಹಿಡಿಯುತ್ತೇನೆ.
13 ೧೩ ಅವರು ನನ್ನಿಂದ ಅಗಲಿ ಹೋಗಿದ್ದಾರೆ, ಹಾಳಾಗಲಿ! ನನಗೆ ದ್ರೋಹಮಾಡಿದ್ದಾರೆ, ನಾಶವಾಗಲಿ! ನಾನು ಅವರನ್ನು ಉದ್ಧರಿಸಬೇಕೆಂದು ಇರುವಾಗಲೂ ನನ್ನ ವಿಷಯವಾಗಿ ಸುಳ್ಳಾಡಿದ್ದಾರೆ, ಅವರನ್ನು ಹೇಗೆ ಉದ್ಧರಿಸಲಿ!
ಅವರಿಗೆ ಕಷ್ಟ, ಏಕೆಂದರೆ ಅವರು ನನ್ನನ್ನು ಬಿಟ್ಟು ಹೋಗಿದ್ದಾರೆ. ಅವರು ನಾಶವಾಗಲಿ! ಏಕೆಂದರೆ ಅವರು ನನಗೆ ವಿರುದ್ಧವಾಗಿ ದ್ರೋಹ ಮಾಡಿದ್ದಾರೆ. ನಾನು ಅವರಿಗೆ ವಿಮೋಚನೆ ಮಾಡಿದ್ದರೂ, ಅವರು ನನಗೆ ವಿರುದ್ಧವಾಗಿ ಸುಳ್ಳು ಹೇಳಿದ್ದಾರೆ.
14 ೧೪ ಅವರು ಹಾಸಿಗೆಯ ಮೇಲೆ ಬಿದ್ದುಕೊಂಡು ಧಾನ್ಯ ದ್ರಾಕ್ಷಾರಸಗಳಿಗೆ ಅರಚಿಕೊಳ್ಳುತ್ತಾರೆಯೇ ಹೊರತು, ನನ್ನನ್ನು ಮನಃಪೂರ್ವಕವಾಗಿ ಎಂದೂ ಪ್ರಾರ್ಥಿಸಲಿಲ್ಲ; ನನ್ನನ್ನು ತೊರೆದುಬಿಟ್ಟು ತಮ್ಮ ದೇಹಗಳನ್ನು ಗಾಯಮಾಡಿಕೊಳ್ಳುತ್ತಾರೆ.
ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ, ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ. ಧಾನ್ಯ ಮತ್ತು ದ್ರಾಕ್ಷಾರಸಗಳ ನಿಮಿತ್ತ ಅವರು ತಮ್ಮ ದೇವರುಗಳಿಗೆ ಮನವಿ ಮಾಡುವಾಗ ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುತ್ತಾರೆ, ಆದರೆ ಅವರು ನನ್ನಿಂದ ದೂರವಿರುತ್ತಾರೆ.
15 ೧೫ ಅವರಿಗೆ ಯುದ್ಧವನ್ನು ಕಲಿಸಿ, ತೋಳುಗಳನ್ನು ಬಲಪಡಿಸಿದ ನನಗೂ ವಿರುದ್ಧವಾಗಿ ಕೇಡನ್ನು ಕಲ್ಪಿಸುತ್ತಾರೆ.
ನಾನು ಅವರ ತೋಳುಗಳನ್ನು ಬಂಧಿಸಿ ಬಲಪಡಿಸಿದ್ದೇನೆ. ಆದರೂ ಅವರು ನನಗೆ ವಿರುದ್ಧವಾಗಿ ಕೇಡು ಮಾಡಲು ಊಹಿಸಿಕೊಂಡಿದ್ದಾರೆ.
16 ೧೬ ಅತ್ತಿತ್ತ ತಿರುಗಿಕೊಳ್ಳುತ್ತಾರೆ, ದೇವರ ಕಡೆಗೆ ತಿರುಗಿಕೊಳ್ಳುವುದಿಲ್ಲ; ಮೋಸದ ಬಿಲ್ಲಿಗೆ ಸಮಾನರಾಗಿದ್ದಾರೆ. ಅವರ ಮುಖಂಡರು ತಮ್ಮ ನಾಲಿಗೆಯ ಸೊಕ್ಕಿನ ನಿಮಿತ್ತ ಖಡ್ಗದಿಂದ ಹತರಾಗಿ ಬೀಳುವರು; ಅವರ ಸೋಲು ಐಗುಪ್ತದೇಶದ ಹಾಸ್ಯಕ್ಕೆ ಆಸ್ಪದವಾಗುವುದು.
ಅವರು ಮಹೋನ್ನತನಾದಾತನ ಕಡೆಗೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿನ ಹಾಗೆ ಇದ್ದಾರೆ. ಅವರ ನಾಯಕರು ನಾಲಿಗೆಯ ಹುಚ್ಚು ಕೂಗಾಟದಿಂದ, ಖಡ್ಗದಿಂದ ಬೀಳುವರು. ಇದೇ ಈಜಿಪ್ಟ್ ದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.

< ಹೋಶೇಯನು 7 >