< ಹೋಶೇಯನು 5 >
1 ೧ ಯಾಜಕರೇ, ಇದನ್ನು ಕೇಳಿರಿ, ಇಸ್ರಾಯೇಲ್ ಕುಲದವರೇ, ಆಲಿಸಿರಿ; ರಾಜವಂಶದವರೇ, ಕಿವಿಗೊಡಿರಿ; ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನಲ್ಲಿ ಬಲೆಯಾಗಿಯೂ ಇದ್ದ ಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.
2 ೨ ನನಗೆ ತಿರುಗಿಬಿದ್ದವರು ಅಗಾಧವಾದ ಕೊಲೆಯಲ್ಲಿ ಮಗ್ನರಾಗಿದ್ದಾರೆ; ನಾನೇ ಅವರೆಲ್ಲರನ್ನೂ ಶಿಕ್ಷಿಸುವೆನು.
3 ೩ ಎಫ್ರಾಯೀಮನ್ನು ಬಲ್ಲೆ, ಇಸ್ರಾಯೇಲ್ ನನಗೆ ಮರೆಯಾಗಿಲ್ಲ; ಎಫ್ರಾಯೀಮೇ, ನೀನೀಗ ವ್ಯಭಿಚಾರ ಮಾಡಿದ್ದಿ, ಇಸ್ರಾಯೇಲ್ ಹೊಲೆಯಾಗಿದೆ.
4 ೪ ಅವರು ತಮ್ಮ ದೇವರ ಕಡೆಗೆ ತಿರುಗಿಕೊಳ್ಳಲು ಅವುಗಳ ದುಷ್ಕೃತ್ಯಗಳು ಅವರನ್ನು ಬಿಡುವುದಿಲ್ಲ; ವ್ಯಭಿಚಾರದ ಸ್ವಭಾವವು ಅವುಗಳಲ್ಲಿ ನೆಲೆಗೊಂಡಿದೆ, ಯೆಹೋವನನ್ನು ತಿಳಿದುಕೊಂಡಿಲ್ಲ.
5 ೫ ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇಸ್ರಾಯೇಲೂ ಮತ್ತು ಎಫ್ರಾಯೀಮೂ ತಮ್ಮ ದುರ್ಮಾರ್ಗದಲ್ಲಿ ಎಡವಿ ಬೀಳುವವು; ಯೆಹೂದವೂ ಅವುಗಳೊಂದಿಗೆ ಬೀಳುವುದು.
6 ೬ ಅವು ತಮ್ಮ ದನ ಮತ್ತು ಕುರಿಗಳ ಸಂಗಡ ಯೆಹೋವನಿಗೆ ಶರಣುಹೊಗಲು ಹೊರಡುವವು; ಆತನು ಸಿಕ್ಕುವುದಿಲ್ಲ, ಅವುಗಳಿಂದ ಮರೆಯಾಗಿದ್ದಾನೆ.
7 ೭ ಅವು ಯೆಹೋವನ ಮಕ್ಕಳಲ್ಲದ ಮಕ್ಕಳನ್ನು ಪಡೆದು ಆತನಿಗೆ ದ್ರೋಹಮಾಡಿವೆ; ಅವುಗಳನ್ನೂ, ಅವುಗಳ ಭೂಸ್ವಾಸ್ತ್ಯಗಳನ್ನೂ ಈ ಅಮಾವಾಸ್ಯೆಯು ನುಂಗಿಬಿಡುವುದು.
8 ೮ ಗಿಬ್ಯದಲ್ಲಿ ತುತ್ತೂರಿಯನ್ನು ಊದಿರಿ, ರಾಮದಲ್ಲಿ ಕೊಂಬು ಕೂಗಲಿ, ಬೇತ್ ಅವೆನಿನಲ್ಲಿ ಆರ್ಭಟಿಸಿರಿ, ಬೆನ್ಯಾಮೀನೇ, ಹಿಂದೆ ನೋಡು!
9 ೯ ದಂಡನೆಯ ದಿನದಲ್ಲಿ ಎಫ್ರಾಯೀಮು ಹಾಳಾಗುವುದು; ಇಸ್ರಾಯೇಲ್ ಕುಲಗಳ ಭವಿಷ್ಯತ್ತಿನ ನಿಶ್ಚಯವನ್ನು ತಿಳಿಯಪಡಿಸಿದ್ದೇನೆ.
10 ೧೦ ಯೆಹೂದದ ಮುಖಂಡರು ಮೇರೆಯನ್ನು ಒತ್ತುವವರಂತಿದ್ದಾರೆ; ಅವರ ಮೇಲೆ ನನ್ನ ರೌದ್ರವನ್ನು ನೀರಿನ ಹಾಗೆ ಹೊಯ್ದುಬಿಡುವೆನು.
11 ೧೧ ಎಫ್ರಾಯೀಮು ವ್ಯರ್ಥಾಚಾರಗಳನ್ನು ಅನುಸರಿಸಲು ಮನಸ್ಸುಮಾಡಿದ ಕಾರಣ, ಅದು ದೇವರ ನ್ಯಾಯತೀರ್ಪಿಗೆ ಗುರಿಯಾಗಿ ಹಿಂಸಿಸಲ್ಪಟ್ಟಿದೆ, ಜಜ್ಜಲ್ಪಟ್ಟಿದೆ.
12 ೧೨ ನಾನು ಎಫ್ರಾಯೀಮಿಗೆ ನುಸಿ, ಯೆಹೂದ ಕುಲಕ್ಕೆ ಒಣ ಕುಂಟೆಯಂತಿರುವೆನು.
13 ೧೩ ಹೀಗಿರಲು ಎಫ್ರಾಯೀಮು ತಾನು ರೋಗಿಯೆಂದು ತಿಳುಕೊಂಡಿತು, ಯೆಹೂದವು ತನ್ನ ವ್ರಣವನ್ನು ನೋಡಿಕೊಂಡಿತು; ಆಗ ಎಫ್ರಾಯೀಮು ಅಶ್ಶೂರದ ಕಡೆಗೆ ತಿರುಗಿಕೊಂಡು ಜಗಳಗಂಟ ಮಹಾರಾಜನ ಬಳಿಗೆ ದೂತರನ್ನು ಕಳುಹಿಸಿತು; ಆದರೆ ಅವನು ನಿಮ್ಮನ್ನು ಸ್ವಸ್ಥಮಾಡಲಾರನು, ನಿಮ್ಮ ಗಾಯವನ್ನು ಗುಣಪಡಿಸಲಾರನು.
14 ೧೪ ನಾನು ಎಫ್ರಾಯೀಮಿಗೆ ಸಿಂಹವೂ, ಯೆಹೂದ ಕುಲಕ್ಕೆ ಪ್ರಾಯದ ಸಿಂಹವೂ ಆಗುವೆನು; ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಯಾರೂ ಬಿಡಿಸರು.
15 ೧೫ ನನ್ನ ಜನರು ತಮ್ಮ ದೋಷಫಲವನ್ನು ಅನುಭವಿಸಿ, ನನ್ನ ಪ್ರಸನ್ನತೆಯನ್ನು ಬೇಡಿಕೊಳ್ಳುವ ತನಕ, ನಾನು ನನ್ನ ವಾಸಸ್ಥಾನಕ್ಕೆ ಹಿಂದಿರುಗಿ ಹೋಗುವೆನು; ಅವರು ಇಕ್ಕಟ್ಟಿಗೆ ಸಿಕ್ಕಿದ ಕೂಡಲೆ ನನ್ನನ್ನು ಆಶ್ರಯಿಸುವರು.