< ಆದಿಕಾಂಡ 48 >
1 ೧ ಕೆಲವು ಕಾಲವಾದ ಮೇಲೆ ಯೋಸೇಫನಿಗೆ, “ಅವನ ತಂದೆಯು ಅಸ್ವಸ್ಥನಾಗಿದ್ದಾನೆ” ಎಂಬ ವಾರ್ತೆಯು ದೊರಕಿತು. ಆಗ ಯೋಸೇಫನು ಮನಸ್ಸೆ ಎಫ್ರಾಯೀಮರೆಂಬ ತನ್ನಿಬ್ಬರು ಮಕ್ಕಳನ್ನು ತನ್ನ ಸಂಗಡ ಕರೆದುಕೊಂಡು ತಂದೆಯ ಬಳಿಗೆ ಬಂದನು.
2 ೨ “ನಿನ್ನ ಮಗನಾದ ಯೋಸೇಫನು ನಿನ್ನ ಬಳಿಗೆ ಬಂದಿದ್ದಾನೆ” ಎಂದು ಯಾಕೋಬನಿಗೆ ತಿಳಿಸಲು, ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಎದ್ದು ಕುಳಿತುಕೊಂಡನು.
3 ೩ ಯಾಕೋಬನು, ಯೋಸೇಫನಿಗೆ, “ಸರ್ವಶಕ್ತನಾದ ದೇವರು ಕಾನಾನ್ ದೇಶದ ಲೂಜ್ ಎಂಬಲ್ಲಿ ನನಗೆ ದರ್ಶನ ಕೊಟ್ಟು ಆಶೀರ್ವದಿಸಿದನು.
4 ೪ ಆತನು ನನಗೆ, ‘ನಿನ್ನನ್ನು ಅಭಿವೃದ್ಧಿಪಡಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು. ಅನೇಕ ಜನಾಂಗಗಳು ನಿನ್ನಿಂದುಟಾಗುವಂತೆ ಮಾಡುವೆನು. ನಿನ್ನ ತರುವಾಯ ನಿನ್ನ ಸಂತತಿಗೆ ಈ ದೇಶವನ್ನು ಶಾಶ್ವತ ಸೊತ್ತನ್ನಾಗಿ ಕೊಡುವೆನು’” ಎಂದು ಹೇಳಿದನು.
5 ೫ ಐಗುಪ್ತ ದೇಶಕ್ಕೆ ನಿನ್ನ ಬಳಿಗೆ ಬರುವುದಕ್ಕಿಂತ ಮೊದಲು ಇಲ್ಲಿ ಹುಟ್ಟಿದ ನಿನ್ನಿಬ್ಬರು ಮಕ್ಕಳು ನನಗೆ ಮಕ್ಕಳಾಗಿರಬೇಕು. ರೂಬೇನ್ ಸಿಮೆಯೋನರು ನನ್ನ ಮಕ್ಕಳಾಗಿರುವಂತೆಯೆ ಎಫ್ರಾಯೀಮ್ ಮನಸ್ಸೆಯರೂ ನನ್ನ ಮಕ್ಕಳಾಗಿರಲಿ.
6 ೬ ಅವರ ತರುವಾಯ ನೀನು ಪಡೆದ ಮಕ್ಕಳು ನಿನ್ನವರಾಗಿರಲಿ. ಅವರು ತಮ್ಮ ಅಣ್ಣಂದಿರ ಸ್ವತ್ತಿನಲ್ಲಿ ಬಾಧ್ಯತೆ ಹೊಂದಿ, ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ.
7 ೭ ನಾನು ಪದ್ದನ್ ಅರಾಮಿನಿಂದ ಬರುವಾಗ ಕಾನಾನ್ ದೇಶದಲ್ಲಿ ಎಫ್ರಾತನ್ನು ಸೇರುವುದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳು ದಾರಿಯಲ್ಲೇ ಸತ್ತುಹೋದಳು. ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಗೆ ಸಮಾಧಿ ಮಾಡಿದೆನು ಎಂದನು.
8 ೮ ನಂತರ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ನೋಡಿ, “ಇವರು ಯಾರು?” ಎಂದು ಕೇಳಲು,
9 ೯ ಯೋಸೇಫನು ತನ್ನ ತಂದೆಗೆ, “ಇವರು ಈ ದೇಶದಲ್ಲಿ ನನಗೆ ದೇವರು ಅನುಗ್ರಹಿಸಿದ ಮಕ್ಕಳು” ಎಂದು ಹೇಳಿದನು. ಅದಕ್ಕವನು, “ನಾನು ಇವರನ್ನು ಆಶೀರ್ವದಿಸುತ್ತೇನೆ. ನನ್ನ ಹತ್ತಿರ ಕರೆದುಕೊಂಡು ಬಾ” ಎಂದನು.
10 ೧೦ ಇಸ್ರಾಯೇಲನು ವೃದ್ಧಾಪ್ಯದಿಂದ ಮೊಬ್ಬು ಕಣ್ಣುಳ್ಳವನಾಗಿ ನೋಡಲಾರದೆ ಇದ್ದನು. ಯೋಸೇಫನು ಅವರನ್ನು ಅವನ ಬಳಿಗೆ ಕರೆದುಕೊಂಡು ಬರಲು ಅವನು ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.
11 ೧೧ ಆಗ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ತಿರುಗಿ ನೋಡುವೆನೆಂದು ನಾನು ನೆನಸಿರಲಿಲ್ಲ. ಆದರೆ ನಾನು ನಿನ್ನನ್ನು ಮಾತ್ರವಲ್ಲದೆ ನಿನ್ನ ಸಂತಾನವನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾನೆ” ಎಂದನು.
12 ೧೨ ಆಗ ಯೋಸೇಫನು ಅವರನ್ನು ತಂದೆಯ ಮಡಿಲಿನಿಂದ ಎತ್ತಿಕೊಂಡು ತನ್ನ ತಂದೆಗೆ ತಲೆಬಾಗಿ ನಮಸ್ಕರಿಸಿದನು.
13 ೧೩ ತರುವಾಯ ಯೋಸೇಫನು ತನ್ನ ಬಲಗಡೆಯಲ್ಲಿ ಇಸ್ರಾಯೇಲನ ಎಡಗೈಗೆ ಎದುರಾಗಿ ಎಫ್ರಾಯೀಮನನ್ನೂ, ತನ್ನ ಎಡಗಡೆಯಲ್ಲಿ ಇಸ್ರಾಯೇಲನ ಬಲಗೈಗೆ ಎದುರಾಗಿ ಮನಸ್ಸೆಯನ್ನೂ ನಿಲ್ಲಿಸಿ, ಅವರಿಬ್ಬರನ್ನೂ ತನ್ನ ತಂದೆಯ ಬಳಿ ನಿಲ್ಲಿಸಿದನು.
14 ೧೪ ಮನಸ್ಸೆಯು ಚೊಚ್ಚಲ ಮಗನಾಗಿದ್ದರೂ, ಇಸ್ರಾಯೇಲನು ತನ್ನ ಕೈಗಳನ್ನು ಅಡ್ಡವಾಗಿ ಚಾಚಿ ಕಿರಿಯವನಾದ ಎಫ್ರಾಯೀಮನ ತಲೆಯ ಮೇಲೆ ಬಲಗೈಯನ್ನೂ, ಮನಸ್ಸೆಯ ತಲೆಯ ಮೇಲೆ ಎಡಗೈಯನ್ನೂ ಇಟ್ಟನು.
15 ೧೫ ನಂತರ ಅವನು ಯೋಸೇಫನನ್ನು, ಆಶೀರ್ವದಿಸಿ, “ನನ್ನ ಪೂರ್ವಿಕರಾದ ಅಬ್ರಹಾಮ ಇಸಾಕರು ಸೇವಿಸಿದ ದೇವರೇ, ನನ್ನನ್ನು ಚಿಕ್ಕಂದಿನಿಂದ ಈ ದಿನದ ವರೆಗೂ ಪರಾಂಬರಿಸುತ್ತಾ ಬಂದ ದೇವರು,
16 ೧೬ ನನ್ನನ್ನು ಎಲ್ಲಾ ಕೇಡುಗಳಿಂದ ತಪ್ಪಿಸಿ ಕಾಪಾಡುತ್ತಾ ಬಂದ ದೂತನಾಗಿಯೂ ಇರುವಾತನು ಈ ಹುಡುಗರನ್ನು ಆಶೀರ್ವದಿಸಲಿ. ಇವರು ನನ್ನ ಹೆಸರನ್ನು, ನನ್ನ ಪೂರ್ವಿಕರಾದ ಅಬ್ರಹಾಮ ಇಸಾಕರ ಹೆಸರಿನಿಂದ ಇವರ ಹೆಸರುಗಳು ನೆಲೆಗೊಳ್ಳಲಿ, ಇವರು ಭೂಮಿಯ ಮೇಲೆ ಹೆಚ್ಚಿ ಬಹು ಸಂತಾನವನ್ನು ಪಡೆಯಲಿ” ಎಂದನು.
17 ೧೭ ತನ್ನ ತಂದೆಯು ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲೆ ಇಡುವುದನ್ನು ಯೋಸೇಫನು ಕಂಡು ಅಸಮಾಧಾನಪಟ್ಟು ಅವನ ಕೈಯನ್ನು ಎಫ್ರಾಯೀಮನ ತಲೆಯಿಂದ ಎತ್ತಿ ಮನಸ್ಸೆಯ ತಲೆಯ ಮೇಲೆ ಇಟ್ಟು,
18 ೧೮ ಯೋಸೇಫನು ತಂದೆಗೆ, “ಅಪ್ಪಾ, ಇವನೇ ಚೊಚ್ಚಲ ಮಗನು ಬಲಗೈಯನ್ನು ಇವನ ತಲೆಯ ಮೇಲೆ ಇಡಬೇಕು” ಎಂದು ಹೇಳಿದನು.
19 ೧೯ ಆದರೆ ಅವನ ತಂದೆ ಒಪ್ಪದೆ, “ಮಗನೇ ನಾನು ಬಲ್ಲೆ. ನನಗೆ ಗೊತ್ತು. ಇವನಿಂದಲೂ ಜನಾಂಗವುಂಟಾಗುವುದು. ಇವನು ಬಲಿಷ್ಠನಾಗುವನು. ಆದರೂ ಇವನಿಗಿಂತಲೂ ಇವನ ತಮ್ಮನು ಬಲಿಷ್ಠನಾಗುವನು. ತಮ್ಮನ ಸಂತತಿಯಲ್ಲಿಯೇ ಜನರು ಹೇರಳವಾಗಿ ಹುಟ್ಟುವರು” ಎಂದು ಹೇಳಿದನು.
20 ೨೦ ಆ ದಿನದಲ್ಲಿ ಅವನು ಅವರನ್ನು ಆಶೀರ್ವದಿಸಿ, “ನಿಮ್ಮ ಹೆಸರಿನಲ್ಲಿ ಇಸ್ರಾಯೇಲರು ಆಶೀರ್ವದಿಸಲ್ಪಡುವರು. ಎಫ್ರಾಯೀಮ್ ಹಾಗೂ ಮನಸ್ಸೆಯ ಹಾಗೆ ದೇವರು ನಿಮ್ಮನ್ನೂ ಆಶೀರ್ವದಿಸಲಿ” ಎಂದು ಹೇಳಿ ಎಫ್ರಾಯೀಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.
21 ೨೧ ಇಸ್ರಾಯೇಲನು ಯೋಸೇಫನಿಗೆ, “ನನಗೆ ಮರಣವು ಸಮೀಪಿಸಿದೆ, ಆದರೆ ದೇವರು ನಿಮ್ಮೊಂದಿಗಿದ್ದು, ನಿಮ್ಮನ್ನು ಪೂರ್ವಿಕರ ದೇಶಕ್ಕೆ ಪುನಃ ಬರಮಾಡುವನು.
22 ೨೨ ಇದಲ್ಲದೆ, ನಾನು ನಿನ್ನ ಅಣ್ಣಂದಿರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ನಾನು ಕತ್ತಿ ಬಿಲ್ಲುಗಳಿಂದ ಅಮೋರಿಯರ ವಶದಿಂದ ತಪ್ಪಿಸಿ ಪಡೆದ ಬೆಟ್ಟದ ತಪ್ಪಲನ್ನು ನಿನಗೆ ಕೊಟ್ಟಿದ್ದೇನೆ” ಎಂದು ಹೇಳಿದನು.