< ಆದಿಕಾಂಡ 47 >
1 ೧ ಆಗ ಯೋಸೇಫನು ಫರೋಹನ ಬಳಿಗೆ ಹೋಗಿ, “ನನ್ನ ತಂದೆಯೂ, ಅಣ್ಣತಮ್ಮಂದಿರೂ, ಕುರಿದನಗಳನ್ನೂ, ಸಮಸ್ತ ಆಸ್ತಿಯನ್ನೂ ತೆಗೆದುಕೊಂಡು ಕಾನಾನ್ ದೇಶದಿಂದ ಬಂದು ಗೋಷೆನ್ ಸೀಮೆಯಲ್ಲಿ ಉಳಿದುಕೊಂಡಿದ್ದಾರೆ” ಎಂದನು.
2 ೨ ಅಲ್ಲದೆ ತನ್ನ ಅಣ್ಣತಮ್ಮಂದಿರಲ್ಲಿ ಐದು ಮಂದಿಯನ್ನು ಕರೆದುಕೊಂಡು ಬಂದು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಿದನು.
3 ೩ ಫರೋಹನು ಯೋಸೇಫನ ಅಣ್ಣತಮ್ಮಂದಿರಿಗೆ, “ನಿಮ್ಮ ಕಸುಬು ಏನು?” ಎಂದು ಅವರನ್ನು ಕೇಳಲು ಅವರು, “ನಿನ್ನ ಸೇವಕರಾದ ನಾವು ನಮ್ಮ ಪೂರ್ವಿಕರ ಹಾಗೆ ಕುರಿಕಾಯುವವರು” ಎಂದು ಹೇಳಿದರು.
4 ೪ ಅದಲ್ಲದೆ ಅವರು ಫರೋಹನಿಗೆ, “ಕಾನಾನ್ ದೇಶದಲ್ಲಿ ಬರಗಾಲವು ಘೋರವಾಗಿರುವುದರಿಂದ ನಿನ್ನ ಸೇವಕರ ಕುರಿದನಗಳಿಗೆ ಮೇವು ಸಿಕ್ಕಲಿಲ್ಲ; ಆದುದರಿಂದ ಈ ದೇಶದಲ್ಲಿ ಸ್ವಲ್ಪಕಾಲ ಇರಬೇಕೆಂದು ಬಂದಿದ್ದೇವೆ. ನಾವು ಗೋಷೆನ್ ಸೀಮೆಯಲ್ಲಿ ವಾಸಮಾಡುವಂತೆ ಅಪ್ಪಣೆಯಾಗಬೇಕು” ಎಂದು ಬೇಡಿಕೊಂಡರು.
5 ೫ ಆಗ ಫರೋಹನು ಯೋಸೇಫನಿಗೆ, “ನಿನ್ನ ತಂದೆಯೂ, ಅಣ್ಣತಮ್ಮಂದಿರೂ ನಿನ್ನ ಬಳಿಗೆ ಬಂದಿದ್ದಾರೆ;
6 ೬ ಐಗುಪ್ತ ದೇಶವು ನಿನ್ನ ಮುಂದೆ ಇದೆ, ಅದರೊಳಗೆ ಉತ್ತಮ ಭಾಗದಲ್ಲಿ ನಿನ್ನ ತಂದೆ, ನಿನ್ನ ಅಣ್ಣತಮ್ಮಂದಿರು ವಾಸಮಾಡುವಂತೆ ಮಾಡು. ಅವರು ಗೋಷೆನ್ ಸೀಮೆಯಲ್ಲಿ ವಾಸಮಾಡಲಿ; ಅವರಲ್ಲಿ ಯಾರಾದರೂ ಸಮರ್ಥರೆಂದು ತಿಳಿದರೆ ಅವರನ್ನು ನನ್ನ ಕುರಿದನ ಮಂದೆಗಳ ಮೇಲ್ವಿಚಾರಣೆಗಾಗಿ ನೇಮಿಸು” ಎಂದು ಹೇಳಿದನು.
7 ೭ ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಕರೆದುಕೊಂಡು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಲು, ಯಾಕೋಬನು ಫರೋಹನನ್ನು ಆಶೀರ್ವದಿಸಿದನು.
8 ೮ ಫರೋಹನು, “ನಿನಗೆ ಈಗ ಎಷ್ಟು ವರ್ಷ?” ಎಂದು ಕೇಳಿದನು.
9 ೯ ಯಾಕೋಬನು ಫರೋಹನಿಗೆ, “ನನ್ನ ಇಹಲೋಕ ಪ್ರಯಾಣದ ಕಾಲವು ನೂರಮೂವತ್ತು ವರ್ಷಗಳು. ನಾನು ಜೀವಿಸಿರುವ ಕಾಲವು ಸ್ವಲ್ಪವಾಗಿಯೂ ಹಾಗೂ ದುಃಖಕರವಾಗಿಯೂ ಇತ್ತು; ಆದರೂ ನನ್ನ ಪೂರ್ವಿಕರು ಜೀವಿಸಿದಷ್ಟು ವರ್ಷಗಳು ನನಗಾಗಿಲ್ಲ” ಎಂದು ಹೇಳಿದನು.
10 ೧೦ ಪುನಃ ಯಾಕೋಬನು ಫರೋಹನನ್ನು ಆಶೀರ್ವದಿಸಿ ಅವನ ಸನ್ನಿಧಿಯಿಂದ ಹೊರಟುಹೋದನು.
11 ೧೧ ಫರೋಹನ ಅಪ್ಪಣೆಯ ಮೇರೆಗೆ ಯೋಸೇಫನು ತನ್ನ ತಂದೆಗೂ ಅಣ್ಣತಮ್ಮಂದಿರಿಗೂ ಐಗುಪ್ತ ದೇಶದಲ್ಲಿ ವಾಸಮಾಡಲು ಉತ್ತಮವಾಗಿದ್ದ ರಮ್ಸೇಸ್ ಪ್ರದೇಶದಲ್ಲಿ ಸ್ವತ್ತು ಕೊಟ್ಟನು.
12 ೧೨ ಯೋಸೇಫನು ತನ್ನ ತಂದೆಗೂ, ಅಣ್ಣತಮ್ಮಂದಿರಿಗೂ, ತಂದೆಯ ಮನೆಯವರೆಲ್ಲರಿಗೂ ಅವರವರ ಕುಟುಂಬಗಳಿಗೆ ಸೇರಿದವರ ಲೆಕ್ಕದ ಪ್ರಕಾರ ಆಹಾರವನ್ನು ಕೊಟ್ಟು ಅವರನ್ನು ಸಂರಕ್ಷಿಸಿದನು.
13 ೧೩ ಬರವು ಬಹು ಘೋರವಾಗಿದ್ದುದರಿಂದ ದೇಶದ ಯಾವ ಭಾಗದಲ್ಲಿಯೂ ಆಹಾರ ಸಿಕ್ಕುತ್ತಿರಲಿಲ್ಲ. ಆ ಬರದ ನಿಮಿತ್ತ ಐಗುಪ್ತ ದೇಶವು ಹಾಗೂ ಕಾನಾನ್ ದೇಶವು ಕ್ಷಾಮದಿಂದ ಬರಡಾದವು.
14 ೧೪ ಯೋಸೇಫನು ಜನರಿಗೆ ಧಾನ್ಯವನ್ನು ಮಾರುತ್ತಾ ಐಗುಪ್ತ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಇದ್ದ ಎಲ್ಲಾ ಹಣವನ್ನು ಕೂಡಿಸಿಕೊಂಡು ಫರೋಹನ ಬೊಕ್ಕಸದೊಳಗೆ ತುಂಬಿದನು.
15 ೧೫ ಐಗುಪ್ತ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಇದ್ದ ಹಣವೆಲ್ಲಾ ಮುಗಿದುಹೋದ ನಂತರ ಐಗುಪ್ತರೆಲ್ಲರೂ ಯೋಸೇಫನ ಬಳಿಗೆ ಬಂದು, “ನಮ್ಮ ಹಣವೆಲ್ಲಾ ಮುಗಿದುಹೋಯಿತು; ನೀನು ನಮಗೆ ಆಹಾರವನ್ನು ಕೊಡಬೇಕು; ನಾವು ನಿನ್ನ ಮುಂದೆ ಸತ್ತರೆ ಪ್ರಯೋಜನವೇನು?” ಎಂದು ಹೇಳಿದರು.
16 ೧೬ ಅದಕ್ಕೆ ಯೋಸೇಫನು, “ನಿಮ್ಮ ಕುರಿದನಗಳನ್ನು ತೆಗೆದುಕೊಂಡು ಬನ್ನಿರಿ; ಹಣವಿಲ್ಲದಿದ್ದರೆ ಕುರಿದನಗಳನ್ನು ತೆಗೆದುಕೊಂಡು, ಧಾನ್ಯವನ್ನು ನಿಮಗೆ ಕೊಡುತ್ತೇನೆ” ಎಂದನು.
17 ೧೭ ಅವರು ತಮ್ಮ ಕುರಿದನಗಳನ್ನು ಯೋಸೇಫನ ಬಳಿಗೆ ತೆಗೆದುಕೊಂಡು ಬರಲು, ಅವನು ಅವರ ಕುದುರೆಗಳನ್ನೂ, ಕುರಿದನಗಳನ್ನೂ, ಕತ್ತೆಗಳನ್ನೂ ತೆಗೆದುಕೊಂಡು ಅವರಿಗೆ ಧಾನ್ಯವನ್ನು ಕೊಟ್ಟನು. ಆ ವರ್ಷದಲ್ಲಿ ಅವರ ಕುರಿದನಗಳನ್ನೆಲ್ಲಾ ತೆಗೆದುಕೊಂಡು ಧಾನ್ಯವನ್ನು ಕೊಟ್ಟು ಅವರನ್ನು ಸಂರಕ್ಷಿಸಿದನು.
18 ೧೮ ಆ ವರ್ಷ ಕಳೆದ ನಂತರ ಅವರು ಎರಡನೆಯ ವರ್ಷದಲ್ಲಿ ಅವನ ಬಳಿಗೆ ಬಂದು, “ನಮ್ಮ ಹಣವೆಲ್ಲಾ ಮುಗಿದು ಹೋಗಿದೆ; ನಮ್ಮ ಕುರಿದನಗಳು ಸ್ವಾಮಿಯ ವಶವಾದವು; ಹೀಗಿರುವುದರಿಂದ ನಮ್ಮ ಭೂಮಿಯೂ, ನಮ್ಮ ದೇಹಗಳೂ ಹೊರತು ಬೇರೆ ಇನ್ನೇನೂ ಉಳಿದಿಲ್ಲವೆಂದು ನಮ್ಮ ಸ್ವಾಮಿಗೆ ಮರೆಮಾಡದೆ ತಿಳಿಸುತ್ತೇವೆ” ಎಂದರು.
19 ೧೯ “ನಿನ್ನ ಕಣ್ಣೆದುರಿಗೆ ನಾವು ಏಕೆ ಸಾಯಬೇಕು; ನಮ್ಮ ಭೂಮಿಯು ಏಕೆ ಹಾಳಾಗಬೇಕು; ನಮ್ಮನ್ನೂ ನಮ್ಮ ಭೂಮಿಯನ್ನೂ ತೆಗೆದುಕೊಂಡು ಧಾನ್ಯವನ್ನು ಕೊಡು; ನಾವು ನಮ್ಮ ಭೂಮಿಯನ್ನು ಫರೋಹನಿಗೆ ಕೊಟ್ಟುಬಿಟ್ಟು ಅವನಿಗೆ ಗುಲಾಮರಾಗುವೆವು. ನಾವು ಸಾಯದೆ ಬದುಕಬೇಕಾದರೆ ಮತ್ತು ಭೂಮಿಯು ಹಾಳಾಗದ ಹಾಗೆ ನೀನು ನಮಗೆ ಬಿತ್ತನೆ ಬೀಜವನ್ನು ಕೊಡಬೇಕು” ಎಂದು ಹೇಳಿದರು.
20 ೨೦ ಹೀಗೆ ಯೋಸೇಫನು ಐಗುಪ್ತರಿಂದ ಎಲ್ಲಾ ಸಾಗುವಳಿಯ ಭೂಮಿಯನ್ನು ಫರೋಹನಿಗಾಗಿ ಕೊಂಡುಕೊಂಡನು. ಪ್ರತಿಯೊಬ್ಬ ಐಗುಪ್ತನ್ನು ತನ್ನ ಹೊಲಗದ್ದೆಗಳನ್ನು ಮಾರಿಬಿಟ್ಟನು. ಬರವು ಐಗುಪ್ತದಲ್ಲಿ ಘೋರವಾಗಿದ್ದದರಿಂದ ಅವರೆಲ್ಲರ ಭೂಮಿಯು ಫರೋಹನ ವಶವಾಯಿತು.
21 ೨೧ ಯೋಸೇಫನು ಐಗುಪ್ತ ದೇಶದ ಒಂದು ಮೇರೆಯಿಂದ ಮತ್ತೊಂದು ಮೇರೆಯವರೆಗೂ ಪ್ರಜೆಗಳನ್ನು ದಾಸರನ್ನಾಗಿ ಮಾಡಿದನು.
22 ೨೨ ಪುರೋಹಿತರ ಭೂಮಿಯನ್ನು ಮಾತ್ರ ಅವನು ಕೊಂಡುಕೊಳ್ಳಲಿಲ್ಲ. ಪುರೋಹಿತರು ಫರೋಹನ ಕಡೆಯಿಂದ ಭತ್ಯೆ ಸಿಕ್ಕಿದ್ದರಿಂದ ಅವರು ಫರೋಹನು ಕೊಟ್ಟ ಭತ್ಯೆದಿಂದಲೇ ಜೀವನ ಮಾಡುತ್ತಿದ್ದರು; ಆದುದರಿಂದ ತಮ್ಮ ಭೂಮಿಯನ್ನು ಮಾರಲಿಲ್ಲ.
23 ೨೩ ಯೋಸೇಫನು ಪ್ರಜೆಗಳಿಗೆ, “ನಾನು ಈ ಹೊತ್ತು ನಿಮ್ಮನ್ನೂ ನಿಮ್ಮ ಭೂಮಿಯನ್ನೂ ಫರೋಹನಿಗೋಸ್ಕರ ಕೊಂಡುಕೊಂಡಿದ್ದೇನೆ ಎಂದು ತಿಳಿದುಕೊಳ್ಳಿರಿ. ಇಗೋ, ಬಿತ್ತನೆಗಾಗಿ ನಿಮಗೆ ಬೀಜವನ್ನು ಕೊಟ್ಟಿದ್ದೇನೆ; ಭೂಮಿಯನ್ನು ಬಿತ್ತಿರಿ.
24 ೨೪ ಪೈರು ಕೊಯ್ಯುವ ಕಾಲದಲ್ಲಿ ಐದರಲ್ಲೊಂದು ಪಾಲು ಫರೋಹನಿಗೆ ಸಲ್ಲಬೇಕು; ಮಿಕ್ಕ ನಾಲ್ಕು ಪಾಲು ನಿಮ್ಮದು; ಅದು ಬೀಜಕ್ಕೆ ಆಗುತ್ತದೆ ಮತ್ತು ನಿಮಗೂ ನಿಮ್ಮ ಮನೆಯವರಿಗೂ ನಿಮ್ಮ ಕುಟುಂಬಕ್ಕೆ ಸೇರಿದವರೆಲ್ಲರಿಗೂ ಆಹಾರಕ್ಕಾಗುತ್ತದೆ” ಎಂದು ಹೇಳಿದನು.
25 ೨೫ ಅದಕ್ಕೆ ಅವರು, “ನಮ್ಮ ಪ್ರಾಣಗಳನ್ನು ಉಳಿಸಿದ್ದೀ; ನಮ್ಮ ಸ್ವಾಮಿಯ ದಯೆ ನಿಮ್ಮ ಮೇಲಿರಲಿ; ನಾವು ಫರೋಹನಿಗೆ ಗುಲಾಮರಾಗಿದ್ದೇವೆ” ಎಂದರು.
26 ೨೬ ಬೆಳೆಯಲ್ಲಿ ಐದನೆಯ ಒಂದು ಪಾಲು ಫರೋಹನಿಗೆ ಸಲ್ಲಬೇಕೆಂಬುದನ್ನು ಯೋಸೇಫನು ಐಗುಪ್ತ ದೇಶದಲ್ಲಿ ಕಟ್ಟಳೆಯಾಗಿ ಮಾಡಿದನು. ಈ ದಿನದ ವರೆಗೂ ಅದು ಹಾಗೆಯೇ ಇದೆ. ಪುರೋಹಿತರ ಭೂಮಿ ಮಾತ್ರ ಫರೋಹನಿಗೆ ಸ್ವಾಧೀನವಾಗಲಿಲ್ಲ.
27 ೨೭ ಇಸ್ರಾಯೇಲರು ಐಗುಪ್ತ ದೇಶಕ್ಕೆ ಸೇರಿರುವ ಗೋಷೆನ್ ಸೀಮೆಯಲ್ಲಿ ವಾಸಮಾಡಿದರು. ಅದರಲ್ಲಿ ಅವರು ಆಸ್ತಿಯನ್ನು ಸಂಪಾದಿಸಿ ಬಹುಸಂತಾನವಾಗಿ ಬಹಳವಾಗಿ ಹೆಚ್ಚಿದರು.
28 ೨೮ ಯಾಕೋಬನು ಐಗುಪ್ತ ದೇಶದಲ್ಲಿ ಹದಿನೇಳು ವರ್ಷ ಬದುಕಿದನು. ಅವನ ಜೀವಿತ ಕಾಲದ ದಿನಗಳು ನೂರ ನಲ್ವತ್ತೇಳು ವರ್ಷಗಳು.
29 ೨೯ ಇಸ್ರಾಯೇಲನಿಗೆ ಮರಣಕಾಲ ಸಮೀಪಿಸಿದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರೆಯಿಸಿ, “ಈಗ ನಿನ್ನ ದೃಷ್ಟಿಯಲ್ಲಿ ನಾನು ದಯೆ ಹೊಂದ್ದಿದೆಯಾದ್ದರೆ ಪದ್ದತಿಯ ಪ್ರಕಾರ ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು ನನಗೆ ಉಪಕಾರವನ್ನು ನಂಬಿಗಸ್ತಿಕೆಯಿಂದ ತೋರಿಸು. ನನ್ನನ್ನು ಐಗುಪ್ತದೇಶದಲ್ಲಿ ಸಮಾಧಿ ಮಾಡಬೇಡ.
30 ೩೦ ನಾನು ಮರಣ ಹೊಂದಿ ನನ್ನ ಪೂರ್ವಿಕರ ಬಳಿಗೆ ಸೇರಿದಾಗ ನನ್ನ ಮೃತ ದೇಹವನ್ನು ಐಗುಪ್ತ ದೇಶದಿಂದ ತೆಗೆದುಕೊಂಡು ಹೋಗಿ ಆ ಪೂರ್ವಿಕರ ಸ್ಮಶಾನ ಭೂಮಿಯಲ್ಲಿಯೇ ಸಮಾಧಿ ಮಾಡಬೇಕು. ಹಾಗೆ ಮಾಡುತ್ತೇನೆಂಬುದಾಗಿ ನನಗೆ ಪ್ರಮಾಣ ಮಾಡಬೇಕು” ಎಂದು ಹೇಳಲು, ಅವನು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದನು.
31 ೩೧ ಇಸ್ರಾಯೇಲನು, “ಪ್ರಮಾಣಮಾಡು” ಎನ್ನಲು ಅವನು ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ತನ್ನ ಊರುಕೋಲಿನ ಮೇಲೆ ಬಾಗಿ ದೇವರಿಗೆ ನಮಸ್ಕಾರ ಮಾಡಿದನು.