< ಗಲಾತ್ಯದವರಿಗೆ ಬರೆದ ಪತ್ರಿಕೆ 5 >
1 ೧ ಕ್ರಿಸ್ತನು ನಮ್ಮನ್ನು ಸ್ವತಂತ್ರರಾಗಿರಿಸಬೇಕೆಂದೇ ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ, ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ.
2 ೨ ನೋಡಿರಿ, ಪೌಲನೆಂಬ ನಾನು ನಿಮಗೆ ಹೇಳುತ್ತೇನೆ, ನೀವು ಸುನ್ನತಿಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನೂ ಪ್ರಯೋಜನವಿಲ್ಲ.
3 ೩ ಸುನ್ನತಿ ಮಾಡಿಸಿಕೊಳ್ಳುವ ಪ್ರತಿಯೊಬ್ಬನಿಗೆ, ನೀನು ಧರ್ಮಶಾಸ್ತ್ರದಲ್ಲಿ ಹೇಳಿರುವುದನ್ನೆಲ್ಲಾ ಮಾಡುವ ಹಂಗಿನಲ್ಲಿದ್ದೀ ಎಂದು ತಿರುಗಿ ಪ್ರಮಾಣವಾಗಿ ಹೇಳುತ್ತೇನೆ.
4 ೪ ನಿಮ್ಮಲ್ಲಿ ಯಾರಾರು ಧರ್ಮಶಾಸ್ತ್ರದಿಂದ ನೀತಿವಂತರಾಗಬೇಕೆಂದು ಬಯಸಿದ್ದೀರೋ ಅವರು ಕ್ರಿಸ್ತನಿಂದ ಅಗಲಿಹೋದವರಾಗಿದ್ದೀರಿ. ಕೃಪೆಯಿಂದ ಬಿದ್ದಹೋದವರಾಗಿದ್ದೀರಿ.
5 ೫ ನಾವಾದರೋ ದೇವರಾತ್ಮನ ಮೂಲಕ ನಂಬಿಕೆಯಿಂದ ನೀತಿವಂತರಾಗುತ್ತೇವೆಂಬುವ ನಿರೀಕ್ಷೆ ಸಫಲವಾಗುವುದೆಂದು ಎದುರುನೋಡುವವರಾಗಿದ್ದೇವೆ.
6 ೬ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಆಗದಿದ್ದರೂ ಪ್ರಯೋಜನವಿಲ್ಲ, ಆದರೆ ಅವರಲ್ಲಿ ಪ್ರೀತಿಯಿಂದ ಹೊರಹೊಮ್ಮುವ ನಂಬಿಕೆಯೇ ಪ್ರಯೋಜನವಾಗಿದೆ.
7 ೭ ಚೆನ್ನಾಗಿ ಓಡುತ್ತಾ ಇದ್ದೀರಿ. ಆದರೆ ನೀವು ಸತ್ಯವನ್ನು ಅನುಸರಿಸದಂತೆ ನಿಮ್ಮನ್ನು ತಡೆದವರು ಯಾರು?
8 ೮ ಈ ಮನವೊಲಿಕೆಯು ನಿಮ್ಮನ್ನು ಕರೆದಾತನಿಂದ ಹುಟ್ಟಿದ್ದಲ್ಲ.
9 ೯ ಸ್ವಲ್ಪ ಹುಳಿಯಿಂದ ಕಣಕವೆಲ್ಲಾ ಹುಳಿಯಾಗುವುದು.
10 ೧೦ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತಾಗಿ ನನಗೆ ಭರವಸೆ ಉಂಟು. ನಿಮ್ಮಲ್ಲಿ ಬೇಧವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ, ಅವನು ದಂಡನೆಯನ್ನು ಅನುಭವಿಸುವನು.
11 ೧೧ ಸಹೋದರರೇ, ನಾನಾದರೋ ಸುನ್ನತಿಯಾಗಬೇಕೆಂದು ಇನ್ನೂ ಸಾರುವವನಾಗಿದ್ದರೆ ನನಗೆ ಹಿಂಸೆಯಾಗುವುದಾದರೂ ಯಾಕೆ? ಹಾಗಿದ್ದ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾಗುವ ತೊಂದರೆಗಳು ನೀಗಿ ಹೋಯಿತಲ್ಲಾ?
12 ೧೨ ನಿಮ್ಮನ್ನು ಕಳವಳಪಡಿಸುವವರು ತಮ್ಮನೇ ತಾವು ಅಂಗಚ್ಛೇದನೆಯನ್ನಾದರೂ ಮಾಡಿಕೊಂಡರೆ ಚೆನ್ನಾಗಿತ್ತು.
13 ೧೩ ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ ಬಳಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.
14 ೧೪ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂಬ ಒಂದೇ ಮಾತಿನಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಗಿದೆ.
15 ೧೫ ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಾಡಿ, ಹರಕೊಂಡು, ತಿನ್ನುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.
16 ೧೬ ನಾನು ಹೇಳುವುದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ, ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ.
17 ೧೭ ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.
18 ೧೮ ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ಧರ್ಮಶಾಸ್ತ್ರಕ್ಕೆ ಅಧೀನರಲ್ಲ.
19 ೧೯ ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ,
20 ೨೦ ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, ಭಿನ್ನಮತ,
21 ೨೧ ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.
22 ೨೨ ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಪರೋಪಕಾರ, ನಂಬಿಕೆ,
23 ೨೩ ಸಾಧುತ್ವ, ಶಮೆದಮೆ ಇಂಥವುಗಳೇ. ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ.
24 ೨೪ ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.
25 ೨೫ ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ.
26 ೨೬ ಅಹಂಕಾರಿಗಳೂ, ಒಬ್ಬರನ್ನೊಬ್ಬರು ಕೆಣಕುವವರೂ, ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.