< ಯೆಹೆಜ್ಕೇಲನು 47 >
1 ೧ ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು.
ಆ ಮನುಷ್ಯನು ನನ್ನನ್ನು ಮತ್ತೆ ಆಲಯದ ಬಾಗಿಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು, ಏಕೆಂದರೆ ಆಲಯದ ಮುಂಭಾಗದಲ್ಲಿ ನೀರು ಇತ್ತು. ಆ ನೀರು ಆಲಯದ ದಕ್ಷಿಣಕ್ಕೆ ಕೆಳಗಡೆ ಹರಿಯಿತು.
2 ೨ ಆಗ ಅವನು ನನ್ನನ್ನು ಉತ್ತರದಿಕ್ಕಿನ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಕೊಂಡು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಕರೆದು ತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲನೆ ಹರಿಯುವ ನೀರು ಕಾಣಿಸಿತು.
ಆಮೇಲೆ ಅವನು ನನ್ನನ್ನು ಬಾಗಿಲಿನ ಮಾರ್ಗವಾಗಿ ಉತ್ತರದ ಕಡೆಗೆ ಕರೆದುಕೊಂಡು ಹೋಗಿ ನನ್ನನ್ನು ಹೊರಗಿನ ಬಾಗಿಲಿನವರೆಗೂ ಹೊರಗಿನ ಮಾರ್ಗವಾದ ಪೂರ್ವಕ್ಕೆ ಅಭಿಮುಖವಾದ ಮಾರ್ಗವನ್ನು ಸುತ್ತುವಂತೆ ಮಾಡಿದನು. ಮತ್ತು ದಕ್ಷಿಣ ಭಾಗದಿಂದ ನೀರು ಜಿನುಗುತ್ತಿತ್ತು.
3 ೩ ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವಕ್ಕೆ ಮುಂದುವರಿದು ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸಿದನು. ಅಲ್ಲಿ ನೀರು ಕಾಲು ಮುಳುಗುವಷ್ಟಿತ್ತು.
ಕೈಯಲ್ಲಿ ಅಳತೆಮಾಡುವ ನೂಲು ಇದ್ದ ಆ ಮನುಷ್ಯನು ಪೂರ್ವದ ಕಡೆಗೆ ಹೊರಟು ಸಾವಿರ ಮೊಳ ಅಳೆದ ಮೇಲೆ, ನನ್ನನ್ನು ನೀರಿನಿಂದ ದಾಟಿಸಿದನು. ಅಲ್ಲಿ ನೀರು ಪಾದ ಮುಳುಗುವಷ್ಟಿತ್ತು.
4 ೪ ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಸೊಂಟದವರೆಗೆ ಇತ್ತು.
ಅವನು ಸಾವಿರಮೊಳಗಳನ್ನು ಅಳೆದ ಮೇಲೆ ನನ್ನನ್ನು ನೀರಿನಿಂದ ದಾಟಿಸಲು, ಆಗ ನೀರು ಮೊಣಕಾಲುಗಳ ತನಕ ಇತ್ತು; ಇನ್ನೂ ಸಾವಿರ ಅಳೆದು ನನ್ನನ್ನು ದಾಟಿಸಲಾಗಿ ನೀರು ಸೊಂಟದವರೆಗೂ ಇತ್ತು.
5 ೫ ಅವನು ಮತ್ತೆ ಸಾವಿರ ಮೊಳ ಅಳೆದನು. ಅದು ನನ್ನಿಂದ ದಾಟಲಾಗದ ನದಿಯಾಗಿತ್ತು; ನೀರು ಆಳವಾಗಿ ಈಜಾಡುವಷ್ಟು ಪ್ರವಾಹವಾಗಿತ್ತು, ದಾಟಲಾಗದ ನದಿಯಾಗಿತ್ತು.
ಇನ್ನೂ ಸಾವಿರ ಅಳೆದ ಮೇಲೆ ಅದು ನಾನು ದಾಟಲಾಗದಂಥ ನದಿಯಾಗಿತ್ತು. ಏಕೆಂದರೆ ನೀರು ಹೆಚ್ಚಿ, ಈಜುವಷ್ಟಾಗಿ ದಾಟಲಾಗದಷ್ಟು ನದಿಯಾಗಿತ್ತು.
6 ೬ ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ನದಿಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು.
ಅವರು ನನಗೆ, “ಮನುಷ್ಯಪುತ್ರನೇ, ನೀನು ಇದನ್ನು ನೋಡಿದೆಯಾ?” ಆಗ ಅವನು ನನ್ನನ್ನು ನಡೆಸಿಕೊಂಡು ಮತ್ತೆ ನದಿಯ ತೀರಕ್ಕೆ ಕರೆತಂದನು.
7 ೭ ನಾನು ಹಿಂದಿರುಗಲು ಆಹಾ, ನದಿಯ ಎರಡು ದಡಗಳಲ್ಲಿಯೂ ಅನೇಕ ವೃಕ್ಷಗಳು ಕಾಣಿಸಿದವು.
ನಾನು ತಿರುಗಿ ಬಂದಾಗ ಇಗೋ, ನದಿಯ ತೀರದಲ್ಲಿ ಆ ಕಡೆಯೂ ಈ ಕಡೆಯೂ ಅತಿ ಹೆಚ್ಚು ಮರಗಳಿದ್ದವು.
8 ೮ ಆಗ ಅವನು ನನಗೆ ಹೀಗೆ ಹೇಳಿದನು, “ಈ ಪ್ರವಾಹವು ಪೂರ್ವ ಪ್ರಾಂತ್ಯಕ್ಕೆ ಹೊರಟು, ಅರಾಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು. ಈ ನೀರು ಲವಣ ಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು.
ಆಗ ಅವನು, “ಈ ನೀರು ಪೂರ್ವಸೀಮೆಗೆ ಹೋಗಿ ಅರಾಬಾ ಎಂಬ ಒಣಭೂಮಿಗೆ ಇಳಿದು ಲವಣ ಸಮುದ್ರ ಸೇರುವುದು. ಲವಣ ಸಮುದ್ರ ಸೇರಿದ ಮೇಲೆ ಅಲ್ಲಿಯ ನೀರು ಸಿಹಿಯಾಗುವುದು.
9 ೯ ಈ ನದಿಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲ ವಿಧವಾದ ಜಲಜಂತುಗಳು ಬದುಕಿ ಬಾಳುವವು; ಮೀನುಗಳು ಗುಂಪು ಗುಂಪಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು, ಆ ನೀರೂ ಸಿಹಿಯಾಗುವುದು. ಈ ನದಿಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು.
ಈ ದಿನ ಬರುವ ಎಲ್ಲಾ ಸ್ಥಳಗಳಲ್ಲಿ ಸಂಚರಿಸುವಂಥ ಸಮಸ್ತ ಜೀವಿಗಳು ಬದುಕುವುವು ಮತ್ತು ಮೀನುಗಳ ಬಹುದೊಡ್ಡ ಸಮೂಹವಾಗುವುವು. ಏಕೆಂದರೆ ಈ ನೀರು ಅಲ್ಲಿಗೆ ಬರುವಾಗ ಅವು ಶುದ್ಧವಾಗುವುವು. ಈ ನದಿಗಳು ಎಲ್ಲಿಗೆ ಬರುತ್ತವೋ ಅಲ್ಲಿ ಎಲ್ಲಾ ಬದುಕುವುವು.
10 ೧೦ ಆಗ ಆ ಸಮುದ್ರದ ತೀರದಲ್ಲಿ ಬೆಸ್ತರು ನಿಂತಿರುವರು; ಏನ್ ಗೆದಿಯಿಂದ ಏನ್ ಎಗ್ಲಯಿಮಿನವರೆಗೆ ದಡವೆಲ್ಲಾ ಬಲೆ ಹಾಸುವ ಸ್ಥಳವಾಗುವುದು; ಬಗೆಬಗೆಯ ಮೀನುಗಳು ಮಹಾಸಾಗರದ ಮೀನುಗಳಂತೆ ಅವರಿಗೆ ರಾಶಿ ರಾಶಿಯಾಗಿ ಸಿಕ್ಕುವವು.
ಏನ್ಗೆದಿ ಮೊದಲುಗೊಂಡು ಎನ್ ಎಗ್ಲಯಿಮಿನವರೆಗೂ ಬೆಸ್ತರು ಅದರ ಬಳಿಯಲ್ಲಿ ನಿಲ್ಲುವರು. ಅಲ್ಲಿ ಬಲೆಹಾಸುವ ಸ್ಥಳಗಳಿರುವುವು. ಅದರ ಮೀನುಗಳು ಮಹಾಸಾಗರದ ಮೀನುಗಳಾಗಿ ಜಾತ್ಯಾನುಸಾರವಾಗಿ ಬಹಳವಾಗಿರುವುವು.
11 ೧೧ ಆದರೆ ಅದರ ಸುತ್ತಣ ಕೆಸರಾದ ಸ್ಥಳಗಳು, ಕೊಳಚೆಗಳು ಸಿಹಿಯಾಗುವುದಿಲ್ಲ. ಅವು ಉಪ್ಪಿನ ಗಣಿಯಾಗುವುವು.
ಆದರೆ ಅದರ ಕೆಸರಾದ ಸ್ಥಳಗಳು, ಕೊಳಚೆಗಳು, ಶುದ್ಧವಾಗುವುದಿಲ್ಲ. ಅವು ಉಪ್ಪಿನ ಗಣಿಯಾಗುವುವು.
12 ೧೨ ನದಿಯ ಎರಡು ದಡಗಳ ತನಕ ಸಕಲ ಫಲವೃಕ್ಷಗಳು ಬೆಳೆಯುವವು. ಅವುಗಳ ಎಲೆ ಬಾಡುವುದಿಲ್ಲ, ಹಣ್ಣು ತೀರುವುದಿಲ್ಲ; ನದಿಯ ನೀರು ಪವಿತ್ರಾಲಯದಿಂದ ಹೊರಟು ಬರುವ ಕಾರಣ ಅವು ತಿಂಗಳುಗಳ ಪ್ರಕಾರ ಹೊಸ ಫಲವನ್ನು ಫಲಿಸುವವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಉಪಯೋಗವಾಗುವುದು.”
ನದಿಯ ಎರಡೂ ದಡಗಳಲ್ಲಿ ಆಹಾರಕ್ಕಾಗಿ ಎಲ್ಲಾ ತರಹದ ಮರಗಳು ಬೆಳೆಯುವುವು. ಅವುಗಳ ಎಲೆಗಳು ಬಾಡುವುದಿಲ್ಲ. ಅವುಗಳ ಹಣ್ಣು ಮುಗಿದುಹೋಗುವುದಿಲ್ಲ. ಅವು ತಿಂಗಳುಗಳ ಪ್ರಕಾರ ಹೊಸ ಫಲಗಳನ್ನು ಫಲಿಸುವುವು. ಏಕೆಂದರೆ ಅವುಗಳ ನೀರು ಪರಿಶುದ್ಧ ಸ್ಥಳದಿಂದ ಹೊರಟುಬಂದದ್ದು, ಅವುಗಳ ಹಣ್ಣುಗಳು ಆಹಾರಕ್ಕೂ ಅವುಗಳ ಎಲೆಗಳು ಔಷಧಕ್ಕೂ ಆಗುವುವು.”
13 ೧೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ದೇಶವನ್ನು ಬಾಧ್ಯವಾಗಿ ಹಂಚಿಕೊಡುವಾಗ ಮುಂದಿನ ಮೇರೆಗಳನ್ನು ಅನುಸರಿಸಬೇಕು. ಯೋಸೇಫಿಗೆ ಎರಡು ಪಾಲು ಸೇರಲಿ.
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀವು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಪ್ರಕಾರ ದೇಶವನ್ನು ಬಾಧ್ಯವಾಗಿ ಹೊಂದುವ ಹಾಗೆ ಇದು ಮೇರೆಯಾಗಿದೆ. ಯೋಸೇಫನಿಗೆ ಎರಡು ಪಾಲುಗಳು ಕೊಡಲಾಗಿದೆ.
14 ೧೪ ನಾನು ನಿಮ್ಮ ಪೂರ್ವಿಕರಿಗೆ ಪ್ರಮಾಣವಾಗಿ ವಾಗ್ದಾನ ಮಾಡಿದ ಈ ದೇಶವನ್ನು ನೀವೆಲ್ಲರೂ ಸರಿಸಮಾನವಾಗಿ ಅನುಭವಿಸುವಿರಿ. ಇದು ನಿಮಗೆ ಸ್ವತ್ತಾಗಿಯೇ ಇರುವುದು.
ನೀವು ಒಬ್ಬೊಬ್ಬರೂ ಸರಿಯಾಗಿ ಅದನ್ನು ಬಾಧ್ಯವಾಗಿ ಹೊಂದಬೇಕು. ಏಕೆಂದರೆ ಅದನ್ನು ನಿಮ್ಮ ಪಿತೃಗಳಿಗೆ ಕೊಡುವ ಹಾಗೆ ನಾನು ಕೈಯೆತ್ತಿ ಪ್ರಮಾಣ ಮಾಡಿದ್ದೇನೆ. ಈ ದೇಶವು ನಿಮಗೆ ಬಾಧ್ಯವಾಗಿ ಬರುವುದು.
15 ೧೫ “ನಿಮ್ಮ ದೇಶದ ಮೇರೆಗಳು ಹೀಗಿರಬೇಕು, ಉತ್ತರದ ಮೇರೆಯು ಮಹಾ ಸಮುದ್ರದಿಂದ ಆರಂಭವಾಗಿ ಹೆತ್ಲೋನಿನ ಮಾರ್ಗವಾಗಿ ಚೆದಾದಿಗೆ ಸೇರುವುದು.
“ಇದೇ ದೇಶದ ಮೇರೆಯು: “ಉತ್ತರದ ಕಡೆಗೆ ಮಹಾ ಸಮುದ್ರದಿಂದ ಮೊದಲುಗೊಂಡು ಹೆತ್ಲೋನಿನ ಮಾರ್ಗವಾಗಿ ಲೆಬೊ ಹಮಾತ್ ದಾಟಿ ಚೆದಾದಿಗೆ ಸೇರುವವರೆಗೂ;
16 ೧೬ ಹಮಾತ್, ಬೇರೋತ, ದಮಸ್ಕದವರೆಗೂ ಹಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.
ಹಮಾತೂ ಬೇರೋತವು, ದಮಸ್ಕದವರೆಗೂ ಹಾಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.
17 ೧೭ ಹೀಗೆ ಉತ್ತರ ಮೇರೆಯು ಸಮುದ್ರದಿಂದ ದಮಸ್ಕದ ಮೇರೆಯ ಹಚರ್ ಐನೋನಿನವರೆಗೆ ಹಬ್ಬುವುದು. ಅದರ ಉತ್ತರದಲ್ಲಿ ಹಮಾತಿನ ಪ್ರಾಂತ್ಯವಿರುವುದು.
ಹೀಗೆ ಹಚರ್ ಏನಾನೂ ದಮಸ್ಕದ ಮೇರೆಯೂ ಉತ್ತರದ ಕಡೆಗಿರುವ ಹಮಾತ್ಯರದು ಹಾಮಾತಿನ ಮೇರೆಯೂ ಉತ್ತರದ ಕಡೆಯಾಗಿರುವುದು. ಇದು ಉತ್ತರ ಮೇರೆ.
18 ೧೮ “ಇದು ಪೂರ್ವದಿಕ್ಕಿನ ಮೇರೆಯಾಗಿದೆ: ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯದಲ್ಲಿರುವ ಯೊರ್ದನ್ ಹೊಳೆಯು ಮೇರೆಯಾಗಿರುವುದು. ಉತ್ತರ ಮೇರೆಯಿಂದ ದಕ್ಷಿಣ ಸಮುದ್ರದವರೆಗೆ ನೀವು ಗುರುತು ಹಾಕಿಕೊಳ್ಳಬೇಕು.
ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಲವಣ ಸಮುದ್ರದಿಂದ ಮತ್ತು ತಾಮರ್ ನೀವು ಅಳೆಯಬೇಕು. ಇದೇ ಪೂರ್ವದಿಕ್ಕಿನ ಮೇರೆಯಾಗಿದೆ.
19 ೧೯ ಇದು ದಕ್ಷಿಣದ ಮೇರೆಯಾಗಿದೆ: ದಕ್ಷಿಣದ ಮೇರೆಯು ತಾಮಾರಿನಿಂದ ಹೊರಟು, ಮೆರೀಬೋತ್ ಕಾದೇಶಿನ ಹಳ್ಳದ ಮೇಲೆ ಐಗುಪ್ತದವರೆಗೆ ಮುಂದುವರೆಯುವ ನದಿಯ ಮಾರ್ಗವಾಗಿ ಮಹಾ ಸಮುದ್ರವನ್ನು ಮುಟ್ಟಬೇಕು.
ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್ ಮೊದಲುಗೊಂಡು ಮೆರೀಬಾ ಕಾದೇಶಿನ ಹಳ್ಳದ ಮೇಲೆ ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರದವರೆಗೆ ಇರುವುದು. ಇದೇ ದಕ್ಷಿಣದ ಮೇರೆ.
20 ೨೦ ಇದು ಪಶ್ಚಿಮದ ಮೇರೆಯಾಗಿದೆ. ಹಮಾತಿನ ದಾರಿಗೆ ಎದುರಿನ (ಕರಾವಳಿಯ) ತನಕ ಮಹಾ ಸಮುದ್ರದವರೆಗೂ ಪಶ್ಚಿಮದ ಮೇರೆಯಾಗಿರುವುದು.
ಉತ್ತರದ ಮೇರೆಯಿಂದ ಹಮಾತಿನ ಪ್ರದೇಶದವರೆಗೂ ಇರುವ ದೊಡ್ಡ ಸಮುದ್ರವು ಪಶ್ಚಿಮದ ಕಡೆಗಿದೆ. ಇದೇ ಪಶ್ಚಿಮದ ಮೇರೆ.
21 ೨೧ ಈ ರೀತಿಯಾಗಿ ದೇಶವನ್ನು ನೀವು ಇಸ್ರಾಯೇಲಿನ ಎಲ್ಲಾ ಕುಲಕ್ಕೂ ಹಂಚಿಕೊಳ್ಳಬೇಕು.
“ಹೀಗೆ ನೀವು ಈ ದೇಶವನ್ನು ಇಸ್ರಾಯೇಲನ ಗೋತ್ರಗಳ ಪ್ರಕಾರ ಪಾಲುಮಾಡಿಕೊಳ್ಳಬೇಕು.
22 ೨೨ ನಿಮಗೂ, ನಿಮ್ಮ ಮಧ್ಯದಲ್ಲಿ ಪ್ರವಾಸ ಮಾಡುತ್ತಾ, ಮಕ್ಕಳನ್ನು ಪಡೆದಿರುವ ವಿದೇಶಿಗಳಿಗೂ ದೇಶವನ್ನು ಬಾಧ್ಯವಾಗಿ ಹಂಚಬೇಕು. ಅವರು ಇಸ್ರಾಯೇಲರ ಮಧ್ಯದಲ್ಲಿ ನಿಮಗೆ ಸ್ವದೇಶಿಗಳಂತೆಯೇ ಇರಬೇಕು. ಇಸ್ರಾಯೇಲಿನ ಕುಲಗಳೊಳಗೆ ನಿಮ್ಮೊಂದಿಗೆ ಅವರಿಗೆ ಸ್ವಾಸ್ತ್ಯವಾಗಲಿ.
ನೀವು ಅದನ್ನು ನಿಮಗೂ ನಿಮ್ಮ ಮಧ್ಯದಲ್ಲಿ ತಂಗುವಂಥವರಿಗೂ ನಿಮ್ಮ ಮಧ್ಯದಲ್ಲಿ ಮಕ್ಕಳನ್ನು ಪಡೆದಂತ ವಿದೇಶಿಯರಿಗೂ ಚೀಟುಹಾಕಿ ಬಾಧ್ಯವಾಗಿ ವಿಭಾಗಿಸಿ ಹಂಚಬೇಕು. ಅವರು ನಿಮಗೆ ಇಸ್ರಾಯೇಲಿನ ಮಕ್ಕಳೊಳಗೆ ಹುಟ್ಟಿದವರೆಂದು ಪರಿಗಣಿಸಬೇಕು. ಅವರಿಗೆ ಇಸ್ರಾಯೇಲಿನ ಗೋತ್ರಗಳೊಳಗೆ ಬಾಧ್ಯತೆಯಾಗಬೇಕು.
23 ೨೩ ಯಾವ ಕುಲದಲ್ಲಿ ವಿದೇಶಿಯು ಪ್ರವಾಸವಾಗಿರುತ್ತಾನೋ ಅಲ್ಲಿ ಅವನಿಗೆ ಸ್ವತ್ತನ್ನು ಕೊಡಬೇಕು” ಇದು ಕರ್ತನಾದ ಯೆಹೋವನ ನುಡಿ.
ವಿದೇಶಿಯರು ಯಾವ ಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಅವರಿಗೆ ಸೊತ್ತನ್ನು ಕೊಡಬೇಕು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.