< ಯೆಹೆಜ್ಕೇಲನು 44 >
1 ೧ ತರುವಾಯ ಆ ಪುರುಷನು ನನ್ನನ್ನು ಪವಿತ್ರಾಲಯದ ಪೂರ್ವದಿಕ್ಕಿನ ಹೊರಗಿನ ಹೆಬ್ಬಾಗಿಲಿಗೆ ತಿರುಗಿ ಕರೆದುಕೊಂಡು ಬಂದನು. ಅದು ಮುಚ್ಚಲ್ಪಟ್ಟಿತ್ತು.
2 ೨ ಆಗ ಯೆಹೋವನು ನನಗೆ, “ಈ ಬಾಗಿಲು ಮುಚ್ಚಲ್ಪಟ್ಟಿರಬೇಕು, ಇದನ್ನು ತೆರೆಯಬಾರದು, ಇದರಿಂದ ಯಾರೂ ಪ್ರವೇಶಿಸಬಾರದು. ಇಸ್ರಾಯೇಲಿನ ದೇವರಾದ ಯೆಹೋವನು ಇದರಿಂದ ಪ್ರವೇಶಿಸಿದ್ದಾನೆ. ಆದುದರಿಂದ ಇದು ಮುಚ್ಚಿರಬೇಕು.
3 ೩ ಇಸ್ರಾಯೇಲಿನ ಪ್ರಭುವೋ ಯೆಹೋವನ ಸನ್ನಿಧಿಯಲ್ಲಿ ಊಟ ಮಾಡುವುದಕ್ಕಾಗಿ ಇಲ್ಲಿ ಕುಳಿತುಕೊಳ್ಳಬಹುದು. ಅವನು ಹೆಬ್ಬಾಗಿಲ ಪಡಸಾಲೆಯ ಮಾರ್ಗವಾಗಿ ಪ್ರವೇಶಿಸಿ, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು” ಎಂದು ಹೇಳಿದನು.
4 ೪ ಬಳಿಕ ಆ ಪುರುಷನು ಉತ್ತರದಿಕ್ಕಿನ ಹೆಬ್ಬಾಗಿಲಿನ ಮಾರ್ಗವಾಗಿ ನನ್ನನ್ನು ಆಲಯದ ಮುಂದೆ ಕರೆದುಕೊಂಡು ತಂದನು; ಆಹಾ, ನಾನು ನೋಡಿದ ಯೆಹೋವನ ಮಹಿಮೆಯೂ, ಯೆಹೋವನ ಆಲಯವನ್ನು ತುಂಬಿಕೊಂಡಿತು. ಅದನ್ನು ನೋಡಿ ನಾನು ಬೋರಲು ಬಿದ್ದೆನು.
5 ೫ ಆಗ ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಯೆಹೋವನ ಆಲಯದ ಸಕಲ ನೇಮನಿಷ್ಠೆಗಳ ವಿಷಯವಾಗಿ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು ಮನದಟ್ಟು ಮಾಡಿಕೋ ಮತ್ತು ಪವಿತ್ರಾಲಯದ ಪ್ರವೇಶವನ್ನೂ, ಪರಿಶುದ್ಧ ಸ್ಥಳದ ಪ್ರತಿಯೊಂದು ಹಾಗುಹೋಗುಗಳನ್ನೂ ಗಮನಿಸು.
6 ೬ ಇದಲ್ಲದೆ, ನೀನು ಆ ದ್ರೋಹಿಗಳಾದ ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ,
7 ೭ ‘ಇಸ್ರಾಯೇಲ್ ವಂಶದವರೇ, ನೀವು ನನ್ನ ರೊಟ್ಟಿಯನ್ನೂ, ಕೊಬ್ಬನ್ನೂ, ರಕ್ತವನ್ನೂ ಅರ್ಪಿಸುವಾಗ, ಹೃದಯದಲ್ಲಿಯೂ, ಶರೀರದಲ್ಲಿಯೂ ಸುನ್ನತಿಹೀನರಾದ ಮ್ಲೇಚ್ಛರನ್ನು ನನ್ನ ಪವಿತ್ರಾಲಯದೊಳಗೆ ಬರಮಾಡಿ, ನನ್ನ ಮಂದಿರವನ್ನು ಅಪವಿತ್ರಗೊಳಿಸಿ, ನನ್ನ ಒಡಂಬಡಿಕೆಯನ್ನು ಭಂಗಪಡಿಸಿ, ನಿಮ್ಮ ದುರಾಚಾರಗಳ ಲೆಕ್ಕವನ್ನು ಹೆಚ್ಚಿಸಿದ್ದೀರಿ.
8 ೮ ನೀವು ನನ್ನ ಪರಿಶುದ್ಧ ವಸ್ತುಗಳನ್ನು ಕಾಯಲಿಲ್ಲ. ಈ ಮ್ಲೇಚ್ಛರನ್ನು ನನ್ನ ಪವಿತ್ರಾಲಯದಲ್ಲಿ ನನ್ನ ವಸ್ತುಗಳನ್ನು ಕಾಯುವುದಕ್ಕಾಗಿ ನೇಮಿಸಿಕೊಂಡಿರಿ; ನಿಮ್ಮ ದುರಾಚಾರಗಳು ಇನ್ನು ಸಾಕು.’
9 ೯ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಇಸ್ರಾಯೇಲರಲ್ಲಿ ಸೇರಿಕೊಂಡಿರುವ ಮ್ಲೇಚ್ಛರೊಳಗೆ ಹೃದಯದಲ್ಲಿಯೂ, ಶರೀರದಲ್ಲಿಯೂ ಸುನ್ನತಿಹೀನನಾದ ಯಾರೂ ನನ್ನ ಪವಿತ್ರಾಲಯವನ್ನು ಪ್ರವೇಶಿಸಬಾರದು.
10 ೧೦ “‘ಇಸ್ರಾಯೇಲರು ನನ್ನನ್ನು ತೊರೆದು, ತಮ್ಮ ವಿಗ್ರಹಗಳ ಕಡೆಗೆ ತಿರುಗಿಕೊಂಡು ನನಗೆ ದೂರವಾಗಿ ಹೋದ ಲೇವಿಯರು ಸಹ ತಮ್ಮ ದೋಷಫಲವನ್ನು ಅನುಭವಿಸುವರು.
11 ೧೧ ಅವರು ನನ್ನ ಪವಿತ್ರಾಲಯದಲ್ಲಿ ಪರಿಚಾರಕರೂ, ಮಂದಿರ ದ್ವಾರಪಾಲಕರೂ ಆಗಿ ಮಂದಿರದಲ್ಲಿ ಸೇವೆಮಾಡಬೇಕು; ಜನರ ಪಕ್ಷವಾಗಿ ಸರ್ವಾಂಗಹೋಮ ಪಶುವನ್ನೂ, ಸಮಾಧಾನಯಜ್ಞ ಪಶುವನ್ನೂ ವಧಿಸಿ ಅವರಿಗೆ ಸೇವೆ ಮಾಡಲು ಸಿದ್ಧರಾಗಿರಬೇಕು.
12 ೧೨ ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆ ಮಾಡಿ ಇಸ್ರಾಯೇಲ್ ವಂಶದವರಿಗೆ ಪಾಪಕಾರಿಯಾದ ವಿಘ್ನವಾದುದರಿಂದ ನಾನು ಅವರ ಮೇಲೆ ಕೈಯೆತ್ತಿದ್ದೇನೆ, ಅವರು ತಮ್ಮ ದೋಷಫಲವನ್ನು ಅನುಭವಿಸಲೇಬೇಕು.’ ಇದು ಕರ್ತನಾದ ಯೆಹೋವನ ನುಡಿ.
13 ೧೩ ‘ಅವರು ನನಗೆ ಯಾಜಕಸೇವೆ ಮಾಡುವುದಕ್ಕೆ ನನ್ನ ಸನ್ನಿಧಿಗೆ ಬರಬಾರದು; ನನ್ನ ಅತಿ ಪವಿತ್ರವಾದ ಪರಿಶುದ್ಧ ವಸ್ತುಗಳಲ್ಲಿ ಯಾವುದನ್ನೂ ಸಮೀಪಿಸಬಾರದು; ತಮಗಾದ ಅವಮಾನವನ್ನೂ, ತಾವು ನಡೆಸಿದ ದುರಾಚಾರಗಳ ಫಲವನ್ನೂ ಅನುಭವಿಸುವರು.
14 ೧೪ ದೇವಾಲಯದ ಸಕಲ ಸೇವೆಯಲ್ಲಿಯೂ, ಅಲ್ಲಿ ನಡೆಯುವ ಸಮಸ್ತ ಕಾರ್ಯಗಳಲ್ಲಿಯೂ ಸೇವಕ ವೃತ್ತಿಯನ್ನೇ ಅವರಿಗೆ ಕೊಡುವೆನು.
15 ೧೫ “‘ಆದರೆ ಇಸ್ರಾಯೇಲರು ನನ್ನನ್ನು ತೊರೆದಾಗ, ಲೇವಿಯರೂ, ಚಾದೋಕನ ಸಂತಾನದವರೂ ಆದ ಯಾಜಕರು ನನ್ನ ಪವಿತ್ರಾಲಯದ ಪಾರುಪತ್ಯವನ್ನು ನೆರವೇರಿಸಿದ್ದರಿಂದ ಅವರು ನನ್ನನ್ನು ಸೇವಿಸಲು ನನ್ನ ಸನ್ನಿಧಿಗೆ ಸೇರುವರು, ನನಗೆ ಕೊಬ್ಬನ್ನೂ, ರಕ್ತವನ್ನೂ ಅರ್ಪಿಸಲು ನನ್ನ ಸಮ್ಮುಖದಲ್ಲಿ ನಿಂತುಕೊಳ್ಳುವರು’ ಇದು ಕರ್ತನಾದ ಯೆಹೋವನ ನುಡಿ.
16 ೧೬ ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ, ನನ್ನ ಸೇವೆ ಮಾಡುವುದಕ್ಕೆ ನನ್ನ ಯಜ್ಞವೇದಿಯನ್ನು ಸಮೀಪಿಸಿ, ನನ್ನ ಆಲಯದ ಪಾರುಪತ್ಯವನ್ನು ವಹಿಸುವರು.
17 ೧೭ “ಅವರು ಒಳಗಿನ ಅಂಗಳದ ಬಾಗಿಲುಗಳನ್ನು ಪ್ರವೇಶಿಸುವಾಗ, ನಾರುಬಟ್ಟೆಗಳನ್ನು ಧರಿಸಿರಬೇಕು; ಒಳಗಿನ ಅಂಗಳದ ಬಾಗಿಲುಗಳಲ್ಲಿಯೂ, ದೇವಸ್ಥಾನದಲ್ಲಿಯೂ ಸೇವೆಮಾಡುತ್ತಿರುವಾಗ ಯಾವ ಉಣ್ಣೆಯ ಉಡುಪೂ ಅವರ ಮೇಲೆ ಇರಬಾರದು.
18 ೧೮ ಅವರು ತಲೆಗೆ ನಾರಿನ ಮುಂಡಾಸವನ್ನು, ಸೊಂಟಕ್ಕೆ ನಾರಿನ ಒಳಉಡುಪನ್ನು ಹಾಕಿಕೊಂಡಿರಬೇಕು; ಬೆವರುವ ಯಾವ ಉಡುಪನ್ನೂ ಉಟ್ಟುಕೊಳ್ಳಬಾರದು.
19 ೧೯ ಅವರು ಹೊರಗಿನ ಅಂಗಳಕ್ಕೆ ಜನರ ಬಳಿಗೆ ಹೊರಡುವಾಗ ತಮ್ಮ ದೀಕ್ಷಾವಸ್ತ್ರಗಳನ್ನು ಅವರಿಗೆ ತಗುಲಿಸಿ, ಅವರನ್ನು ಪರಿಶುದ್ಧರನ್ನಾಗಿ ಮಾಡದಂತೆ. ಅವುಗಳನ್ನು ತೆಗೆದು ಪರಿಶುದ್ಧವಾದ ಕೋಣೆಗಳಲ್ಲಿ ಇಟ್ಟು, ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಬೇಕು.
20 ೨೦ “ಅವರು ತಲೆಬೋಳಿಸಿಕೊಳ್ಳದೆ; ಕೂದಲನ್ನು ಬೆಳಸದೆ, ತಮ್ಮ ತಲೆ ಕೂದಲನ್ನು ಕತ್ತರಿಸಬೇಕು.
21 ೨೧ ಒಳಗಿನ ಅಂಗಳವನ್ನು ಪ್ರವೇಶಿಸುವಾಗ, ಯಾವ ಯಾಜಕನೂ ದ್ರಾಕ್ಷಾರಸವನ್ನು ಕುಡಿಯಬಾರದು.
22 ೨೨ ಯಾಜಕರು ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಾಯೇಲ್ ವಂಶದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆ ಮಾಡಿಕೊಳ್ಳಬಹುದು.
23 ೨೩ ಅವರು ನನ್ನ ಜನರಿಗೆ ಪವಿತ್ರವಾದದ್ದಕ್ಕೂ ಮತ್ತು ಅಪವಿತ್ರವಾದದ್ದಕ್ಕೂ ಇರುವ ವ್ಯತ್ಯಾಸವನ್ನು ಬೋಧಿಸಿ, ಅವರಿಗೆ ಶುದ್ಧ ಹಾಗೂ ಅಶುದ್ಧಗಳ ಭೇದವನ್ನು ತಿಳಿಸಲಿ.
24 ೨೪ ವ್ಯಾಜ್ಯವಾಡುವಾಗ ಅವರ ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಬೇಕು. ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್ತುಗಳನ್ನು ಪರಿಶುದ್ಧ ದಿನವೆಂದು ಆಚರಿಸಬೇಕು.
25 ೨೫ “ಸತ್ತವರ ಹೆಣವನ್ನು ಸಮೀಪಿಸಿ, ತಮ್ಮನ್ನು ಅಪವಿತ್ರ ಮಾಡಿಕೊಳ್ಳಬಾರದು; ಆದರೆ ಸತ್ತ ತಂದೆ, ತಾಯಿ, ಮಗನು, ಮಗಳು, ತಮ್ಮ, ಮದುವೆಯಿಲ್ಲದ ತಂಗಿ, ಇವರಿಗೋಸ್ಕರ ಒಬ್ಬನು ತನ್ನನ್ನು ಅಪವಿತ್ರ ಮಾಡಿಕೊಳ್ಳಬಹುದು.
26 ೨೬ ಅಂಥವನನ್ನು ಶುದ್ಧನಾದ ಮೇಲೂ, ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು.
27 ೨೭ ಅವನು ಸೇವೆಮಾಡಲು ಪವಿತ್ರಾಲಯವನ್ನು ಪ್ರವೇಶಿಸಿ, ಒಳಗಿನ ಅಂಗಳಕ್ಕೆ ಸೇರುವ ದಿನದಲ್ಲಿ ತನ್ನ ದೋಷಪರಿಹಾರಕ್ಕಾಗಿ ಬಲಿಯನ್ನು ಅರ್ಪಿಸಬೇಕು.” ಇದು ಕರ್ತನಾದ ಯೆಹೋವನ ನುಡಿ.
28 ೨೮ “ಅವರಿಗೆ ಇದು ಸ್ವಾಸ್ತ್ಯವಾಗುವುದು, ನಾನೇ ಅವರ ಸ್ವತ್ತು; ಇಸ್ರಾಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು; ನಾನೇ ಅವರಿಗೆ ಆಸ್ತಿ.
29 ೨೯ ಅವರು ಧಾನ್ಯನೈವೇದ್ಯವನ್ನೂ ದೋಷಪರಿಹಾರಕ ಯಜ್ಞದ್ರವ್ಯವನ್ನೂ, ಪ್ರಾಯಶ್ಚಿತ್ತ ಯಜ್ಞದ್ರವ್ಯವನ್ನೂ ಅನುಭವಿಸಲಿ; ಕೇವಲ ಯೆಹೋವನದಾಗಿಯೇ ಇರಲೆಂದು ಇಸ್ರಾಯೇಲರಲ್ಲಿ ಹರಕೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.
30 ೩೦ “ಎಲ್ಲಾ ಪ್ರಥಮಫಲಗಳಲ್ಲಿ ಉತ್ಕೃಷ್ಟವಾದದ್ದನ್ನು ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸುವ ಎಲ್ಲಾ ಪದಾರ್ಥಗಳೂ ಅವರಿಗಾಗಬೇಕು. ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ಯಾಜಕರಿಗೆ ಕೊಡತಕ್ಕದ್ದು.
31 ೩೧ ಯಾಜಕರು ತಾನಾಗಿ ಸತ್ತು ಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲ್ಪಟ್ಟ ಪಕ್ಷಿಯನ್ನಾಗಲಿ ಅಥವಾ ಪಶುವನ್ನಾಗಲಿ ತಿನ್ನಬಾರದು.”