< ಯೆಹೆಜ್ಕೇಲನು 2 >
1 ೧ ಯೆಹೋವನು ನನಗೆ, “ನರಪುತ್ರನೇ, ಎದ್ದು ನಿಂತುಕೋ, ನಿನ್ನ ಸಂಗಡ ಮಾತನಾಡುವೆನು” ಎಂದು ಹೇಳಿದನು.
2 ೨ ಆತನು ಈ ಮಾತನ್ನು ಹೇಳುವಾಗ ದೇವರಾತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತನಾಡಿದಾತನ ನುಡಿಯನ್ನು ಕೇಳಿದೆನು.
3 ೩ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನನ್ನ ವಿರುದ್ಧವಾಗಿ ತಿರುಗಿಬಿದ್ದು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ; ಈ ದಿನದವರೆಗೆ ಅವರೂ, ಅವರ ಪೂರ್ವಿಕರೂ ನನ್ನ ವಿರುದ್ಧವಾಗಿ ಪಾಪಮಾಡುತ್ತಲೇ ಇದ್ದಾರೆ.
4 ೪ “ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ, ಹಟಗಾರರೂ ಆಗಿರುತ್ತಾರೆ; ನೀನು ಅವರಿಗೆ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ.
5 ೫ ಅವರು ಕೇಳಲಿ ಅಥವಾ ಕೇಳದೇ ಇರಲಿ ಏಕೆಂದರೆ ಅವರು ತಿರುಗಿ ಬೀಳುವ ವಂಶದವರು. ಆದರೆ ಒಬ್ಬ ಪ್ರವಾದಿಯು ತಮ್ಮ ಮಧ್ಯದಲ್ಲಿ ಇದ್ದಾನೆಂದು ತಿಳಿದುಕೊಳ್ಳುವರು.”
6 ೬ “ನರಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯದಲ್ಲಿದ್ದರೂ ಅವರಿಗೆ ಭಯಪಡಬೇಡ, ಅವರ ಗದರಿಕೆಗೆ ಹೆದರದಿರು; ಅವರು ತಿರುಗಿ ಬೀಳುವ ವಂಶದವರು; ಅವರ ಬಿರುನುಡಿಗೆ ಭಯಪಡಬೇಡ, ಅವರ ಬಿರುನೋಟಕ್ಕೆ ಹೆದರದಿರು.
7 ೭ ಅವರು ಕೇಳಿದರೂ, ಕೇಳದೆ ಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿ ದ್ರೋಹಿಗಳೇ.”
8 ೮ ಇದಲ್ಲದೆ ಆತನು, “ನರಪುತ್ರನೇ, ನಾನು ನಿನಗೆ ಹೇಳುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿದೆರೆದು ತಿಂದುಬಿಡು” ಅಂದನು.
9 ೯ ಇಗೋ, ನಾನು ನೋಡುತ್ತಿರಲಾಗಿ ಒಂದು ಕೈ ನನ್ನ ಕಡೆಗೆ ಚಾಚಿತ್ತು, ಇಗೋ ಅದರಲ್ಲಿ ಗ್ರಂಥದ ಸುರುಳಿಯು ಕಾಣಿಸಿತು.
10 ೧೦ ಆತನು ಆ ಸುರುಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದನು; ಅದರ ಎರಡು ಪಕ್ಕಗಳಲ್ಲಿಯೂ ಬರೆದಿತ್ತು; ಅದರಲ್ಲಿ ಬರೆದದ್ದು ಪ್ರಲಾಪ, ಗೋಳಾಟ, ಶೋಕ ಇವುಗಳೇ.